Dailyhunt Logo
  • Light mode
    Follow system
    Dark mode
    • Play Story
    • App Story
ನೀಟ್‌: ಪ್ರವೇಶಪತ್ರ ಡೌನ್‌ಲೋಡ್‌ಗೆ ತಾಂತ್ರಿಕ ಅಡ್ಡಿ

ನೀಟ್‌: ಪ್ರವೇಶಪತ್ರ ಡೌನ್‌ಲೋಡ್‌ಗೆ ತಾಂತ್ರಿಕ ಅಡ್ಡಿ

ವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ನೀಟ್‌-ಯುಜಿ ಪರೀಕ್ಷೆಯನ್ನು ಮರುನಿಗದಿಪಡಿಸಲಾಗಿದ್ದು, ಸೋಮವಾರ ಮಧ್ಯಾಹ್ನದವರೆಗೆ 4 ಲಕ್ಷ ವಿದ್ಯಾರ್ಥಿಗಳು ಪ್ರವೇಶಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ತಿಳಿಸಿದೆ.

ಈ ಮಧ್ಯೆ, ತಾಂತ್ರಿಕ ಸಮಸ್ಯೆಯಿಂದಾಗಿ ಪ್ರವೇಶಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಮುಂಚಿನ ಪರೀಕ್ಷೆಯನ್ನು ರದ್ದುಪಡಿಸಿದ ನಂತರ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಹಣ ಮರುಪಾವತಿಯಾಗಿಲ್ಲ ಎಂದೂ ಹಲವರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಟಿಎ, 'ಪೋರ್ಟಲ್‌ ಹ್ಯಾಕ್ ಮಾಡುವ ಯತ್ನ ನಡೆದಿದ್ದು, 19 ವರ್ಷದ ಬಿಹಾರ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆರೋಪಿಯು 150 ಅಭ್ಯರ್ಥಿಗಳ ಅಕೌಂಟ್‌ಗಳನ್ನು ಹ್ಯಾಕ್‌ ಮಾಡಿ, ಮರುಪಾವತಿ ಹಣವು ತನ್ನ ಬ್ಯಾಂಕ್‌ ಖಾತೆಗೆ ಬರುವಂತೆ ಮಾಡಿಕೊಂಡಿದ್ದ' ಎಂದು ತಿಳಿಸಿದೆ.

'ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗಿರುವುದು ಗಮನಕ್ಕೆ ಬಂದಿದೆ. ನಮ್ಮ ತಂಡವು ಸಮಸ್ಯೆಯನ್ನು ಪರಿಹರಿಸುವಲ್ಲಿ ಕಾರ್ಯನಿರತವಾಗಿದೆ' ಎಂದು ಎನ್‌ಟಿಎ 'ಎಕ್ಸ್‌'ನಲ್ಲಿ ತಿಳಿಸಿದೆ.

'ಪರೀಕ್ಷಾ ಶುಲ್ಕ ಮರುಪಾವತಿಗಾಗಿ ಬ್ಯಾಂಕ್ ವಿವರವನ್ನು ಸಲ್ಲಿಸಲು ಸಮಸ್ಯೆ ಎದುರಾದವರಿಗೆ ಅಥವಾ ತಪ್ಪು ವಿವರ ಸಲ್ಲಿಸಿದವರಿಗೆ ಮತ್ತೊಮ್ಮೆ ವಿವರ ಸಲ್ಲಿಸಲು ಅವಕಾಶ ನೀಡಲಾಗುವುದು' ಎಂದು ತಿಳಿಸಿದೆ.

ಬಂಧಿತ ನವೀನ್‌ ಕುಮಾರ್‌ ಶಂಕರ್‌ ಪ್ರಸಾದ್‌ ಯಾದವ್ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಹಮದಾಬಾದ್‌ ಸೈಬರ್ ಅಪರಾಧ ವಿಭಾಗ ಮಾಹಿತಿ ನೀಡಿದೆ.

'ಆರೋಪಿ ಸುಮಾರು 300 ಅಭ್ಯರ್ಥಿಗಳ ಅಕೌಂಟ್‌ ಗುರಿಯಾಗಿಸಿ ಹ್ಯಾಕ್‌ ಮಾಡಲು ಯತ್ನಿಸಿದ್ದ, ದುರ್ಬಲ ಪಾಸ್‌ವರ್ಡ್‌ ನೀಡಿದ್ದ 150 ಅಕೌಂಟ್‌ಗಳನ್ನು ಹ್ಯಾಕ್‌ ಮಾಡಿದ್ದ' ಎಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani