ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್-ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಕಾರಣದಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಆ ಪರೀಕ್ಷೆಯನ್ನು ಮಂಗಳವಾರ ರದ್ದುಗೊಳಿಸಿದೆ.
ಅಲ್ಲದೆ, 'ನೀಟ್-ಯುಜಿ' ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಏಜೆನ್ಸಿಯು ಸಿಬಿಐ ಅನ್ನು ಕೋರಿದೆ. ಅದರ ಬೆನ್ನಲ್ಲೇ ಸಿಬಿಐ ಮಂಗಳವಾರ ಈ ಕುರಿತು ಎಫ್‌ಐಆರ್ ದಾಖಲಿಸಿದೆ. ಈ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಮತ್ತು ಅದರ ದಿನಾಂಕಗಳನ್ನು ಹೊಸದಾಗಿ ಪ್ರಕಟಿಸಲಾಗುವುದು ಎಂದೂ ಏಜೆನ್ಸಿ ಹೇಳಿದೆ.
ಈ ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಸುತ್ತಿರುವ ರಾಜಸ್ಥಾನದ ವಿಶೇಷ ಕಾರ್ಯಪಡೆಯು (ಎಸ್‌ಒಜಿ) ರಾಜಸ್ಥಾನದ ಸಿಕರ್, ಜುನ್‌ಜುನು ಮತ್ತು ಉತ್ತರಾಖಂಡದ ಡೆಹ್ರಾಡೂನ್ ಹಾಗೂ ಕೇರಳದ ವ್ಯಕ್ತಿಗಳು ಸೇರಿದಂತೆ 15 ಜನರನ್ನು ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ರಾಜಸ್ಥಾನದ ಪೊಲೀಸರ ಮನವಿ ಮೇರೆಗೆ ಮಹಾರಾಷ್ಟ್ರದ ಪೊಲೀಸರು ನಾಸಿಕ್‌ನಲ್ಲಿ ಮಂಗಳವಾರ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ವಿದ್ಯಾರ್ಥಿಗಳ ಹಿತಕ್ಕಾಗಿ ಈ ನಿರ್ಧಾರ'
'ವಿದ್ಯಾರ್ಥಿಗಳ ಹಿತದೃಷ್ಟಿ, ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎನ್‌ಟಿಎ 'ಎಕ್ಸ್'ನಲ್ಲಿ ತಿಳಿಸಿದೆ.
'ಕಾನೂನು ಜಾರಿ ಸಂಸ್ಥೆಗಳು ಹಂಚಿಕೊಂಡ ತನಿಖಾ ವರದಿಗಳ ಆಧಾರದ ಮೇಲೆ, ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಈ ತೀರ್ಮಾನ ತೆಗೆದುಕೊಂಡಿದೆ' ಎಂದು ಅದು ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.
ಮೇ 3ರಂದು ದೇಶದ 551 ನಗರಗಳಲ್ಲಿ ಮತ್ತು ವಿದೇಶಗಳ 14 ನಗರಗಳಲ್ಲಿ 'ನೀಟ್-ಯುಜಿ' ಪರೀಕ್ಷೆ ನಡೆದಿತ್ತು. ಸುಮಾರು 23 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು.
ಮರು ಪರೀಕ್ಷೆಗೆ ಶುಲ್ಕವಿಲ್ಲ
'ಮರು ಪರೀಕ್ಷೆಯನ್ನು ನ್ಯಾಯಸಮ್ಮತ ರೀತಿಯಲ್ಲಿ ನಡೆಸುತ್ತೇವೆ. ಅದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಅಲ್ಲದೆ ಮೊದಲ ಪರೀಕ್ಷೆಯಲ್ಲಿ ವಿಧಿಸಿದ್ದ ಶುಲ್ಕವನ್ನೂ ಮರುಪಾವತಿಸುತ್ತೇವೆ' ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2026ರ ಮೇ 3ರಂದು ನಡೆದ ಪರೀಕ್ಷೆಗೆ ನೋಂದಾಯಿಸಿದ್ದ ಅಭ್ಯರ್ಥಿಗಳು, ಅವರ ದತ್ತಾಂಶ, ಪರೀಕ್ಷಾ ಕೇಂದ್ರಗಳನ್ನು ಮರು ಪರೀಕ್ಷೆಗೂ ಪರಿಗಣಿಸಲಾಗುತ್ತದೆ. ಎನ್‌ಟಿಎ ತನ್ನ ಆಂತರಿಕ ಸಂಪನ್ಮೂಲ ಬಳಸಿಕೊಂಡು ಮರು ಪರೀಕ್ಷೆ ನಡೆಸುತ್ತದೆ ಎಂದು ಅವರು ವಿವರಿಸಿದರು.
ಮರು ಪರೀಕ್ಷೆಯ ವೇಳಾಪಟ್ಟಿಯನ್ನು ಏಳರಿಂದ 10 ದಿನಗಳಲ್ಲಿ ಪ್ರಕಟಿಸುತ್ತೇವೆ. ವೈದ್ಯಕೀಯ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಮತ್ತು ಪ್ರವೇಶ ಪ್ರಕ್ರಿಯೆಗೆ ಅಡ್ಡಿಯಾಗದಂತೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪರೀಕ್ಷೆ ನಡೆಸಲು ಸರ್ವ ಪ್ರಯತ್ನ ಮಾಡುತ್ತೇವೆ ಎಂದರು.
ಮರು ಪರೀಕ್ಷೆ ನಡೆಸುವುದರಿಂದ ಅಭ್ಯರ್ಥಿಗಳು ಮತ್ತು ಅವರ ಕುಟುಂಬಕ್ಕೆ ತೊಂದರೆ ಆಗುತ್ತದೆ ಎಂಬುದು ಗೊತ್ತಿದೆ. ಆದರೆ ಪರೀಕ್ಷಾ ವ್ಯವಸ್ಥೆ ಮೇಲಿನ ವಿಶ್ವಾಸಕ್ಕೆ ಹೆಚ್ಚಿನ ಹಾನಿ ಆಗುವುದನ್ನು ತಡೆಗಟ್ಟಲು ಈ ನಿರ್ಧಾರ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ದುಷ್ಕೃತ್ಯದ ಮಾಹಿತಿ
'ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಆಪಾದಿತ ದುಷ್ಕೃತ್ಯ ಚಟುವಟಿಕೆ ಕುರಿತ ಮಾಹಿತಿಯು ಪರೀಕ್ಷೆ ನಡೆದ ನಾಲ್ಕು ದಿನಗಳ ಬಳಿಕ, ಅಂದರೆ ಮೇ 7ರ ರಾತ್ರಿ ತಲುಪಿತು. ಅದನ್ನು ನಾವು ಪರಿಶೀಲಿಸಿದೆವು. ಆರಂಭಿಕ ತನಿಖೆಯ ಪ್ರಕಾರ, ಕೆಲವು ಪ್ರಶ್ನೆಗಳು ಅಧಿಕೃತ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಹೊಂದಿಕೆಯಾಗುತ್ತಿದ್ದವು. ಅಲ್ಲದೆ, ಪರೀಕ್ಷೆಗೂ ಹಿಂದಿನ ದಿನಗಳಾದ ಮೇ 1 ಮತ್ತು 2ರಂದು ಕೆಲ ವ್ಯಕ್ತಿಗಳ ಫೋನ್‌ಗಳಲ್ಲಿ ಈ ಪ್ರಶ್ನೆಗಳು ಕಂಡುಬಂದಿವೆ ಎಂಬುದನ್ನು ನಮ್ಮ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹೀಗಾಗಿ ಈ ಕುರಿತು ಸ್ವತಂತ್ರ ಪರಿಶೀಲನೆ ಮತ್ತು ಅಗತ್ಯ ಕ್ರಮಕ್ಕಾಗಿ ಮೇ 8ರ ಬೆಳಿಗ್ಗೆ ಕೇಂದ್ರ ಸಂಸ್ಥೆಗಳಿಗೆ ಮಾಹಿತಿ ರವಾನಿಸಲಾಯಿತು' ಎಂದು ಅಭಿಷೇಕ್ ಸಿಂಗ್ ಮಾಹಿತಿ ನೀಡಿದರು.
ಸಿಬಿಐ ತನಿಖೆಗೆ ಪೂರ್ಣ ಸಹಕಾರ
'ನೀಟ್-ಯುಜಿಯಲ್ಲಿ ನಡೆದಿರುವ ಪರೀಕ್ಷಾ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ಸಿಬಿಐಗೆ ತಿಳಿಸಲಾಗಿದೆ. ಸಿಬಿಐಗೆ ಪೂರ್ಣ ಸಹಕಾರವನ್ನು ಏಜೆನ್ಸಿ ನೀಡಲಿದೆ. ಅಲ್ಲದೆ ತನಿಖೆಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳು, ದಾಖಲೆ, ದತ್ತಾಂಶಗಳು ಸೇರಿದಂತೆ ಇತರ ನೆರವನ್ನು ಏಜೆನ್ಸಿ ಒದಗಿಸಲಿದೆ' ಎಂದರು.
'ಸಂಭಾವ್ಯ ಪ್ರಶ್ನೆಪತ್ರಿಕೆ' ಹೆಸರಲ್ಲಿ ಸೋರಿಕೆ
'ಸಂಭಾವ್ಯ ಪ್ರಶ್ನೆಪತ್ರಿಕೆ' ಹೆಸರಿನಲ್ಲಿ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದನ್ನು ರಾಜಸ್ಥಾನದ ಪೊಲೀಸರು ಕಂಡುಕೊಂಡಿದ್ದಾರೆ. ಈ ಸಂಭಾವ್ಯ ಪಶ್ನೆಪತ್ರಿಕೆಯನ್ನು ಕೇಂದ್ರೀಕರಿಸಿಯೇ ತನಿಖೆ ನಡೆಸಲಾಗುತ್ತಿದೆ ಎಂದು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಪಡೆಯ (ಎಸ್‌ಒಜಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಶಾಲ್ ಬನ್ಸಲ್ ತಿಳಿಸಿದರು.
'ಸುಮಾರು 410 ಪ್ರಶ್ನೆಗಳನ್ನು ಹೊಂದಿರುವ ಒಂದು 'ಸಂಭಾವ್ಯ' ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳಲ್ಲಿ ಹಂಚಿಕೆಯಾಗಿದೆ. ಅದರಲ್ಲಿನ ಪ್ರಶ್ನೆಗಳ ಪೈಕಿ ಸುಮಾರು ರಸಾಯನ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ 120 ಪ್ರಶ್ನೆಗಳು ಕಾಣಿಸಿಕೊಂಡಿವೆ ಎಂಬ ಆರೋಪವಿದೆ' ಎಂದು ಅವರು ವಿವರಿಸಿದರು.
ಆದಾಗ್ಯೂ ಪ್ರಶ್ನೆಪತ್ರಿಕೆಯು ರಸಾಯನ ವಿಜ್ಞಾನ, ಜೀವವಿಜ್ಞಾನ, ಸಸ್ಯವಿಜ್ಞಾನ, ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ತಲಾ 45 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
'ಈ ಸಂಭಾವ್ಯ ಪತ್ರಿಕೆಯು ಪರೀಕ್ಷೆಗೂ 15ರಿಂದ 30 ದಿನಗಳ ಮೊದಲೇ ಕೆಲ ಅಭ್ಯರ್ಥಿಗಳಿಗೆ ತಲುಪಿವೆ. ನಮ್ಮ ತನಿಖೆಯು ಈ ಸಂಭಾವ್ಯ ಪತ್ರಿಕೆಯನ್ನೇ ಕೇಂದ್ರೀಕರಿಸಿದೆ' ಎಂದು ಬನ್ಸಲ್ ಪ್ರತಿಕ್ರಿಯಿಸಿದರು.
ಕೈಬರಹದಲ್ಲಿದ್ದ ಪ್ರಶ್ನೆಗಳು
ಕೈಬರಹದಲ್ಲಿದ್ದ 'ಸಂಭಾವ್ಯ ಪ್ರಶ್ನೆಪತ್ರಿಕೆ'ಯನ್ನು ರಾಜಸ್ಥಾನದ ಸಿಕರ್‌ನ ವೃತ್ತಿ ಸಲಹೆಗಾರ ರಾಕೇಶ್ ಮಾಂಡವರಿಯಾ ಎಂಬುವರು ಹಂಚಿಕೆ ಮಾಡುತ್ತಿದ್ದರು ಮತ್ತು ಅದನ್ನು ಅವರು ಕೇರಳದಲ್ಲಿ ವೈದ್ಯಕೀಯ ತರಬೇತಿ ಪಡೆಯುತ್ತಿದ್ದ ವ್ಯಕ್ತಿಗಳಿಂದ ಪಡೆದಿದ್ದರು' ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ರಾಜಸ್ಥಾನದ ಪೊಲೀಸರು ಹೇಳಿದ್ದಾರೆ.
ವಾಟ್ಸ್‌ಆಯಪ್ ಗುಂಪುಗಳು, ಪಿ.ಜಿಗಳು ಮತ್ತು ತರಬೇತುದಾರರ ಮೂಲಕ ಈ ಸಂಭಾವ್ಯ ಪತ್ರಿಕೆ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಆರಂಭದಲ್ಲಿ ಈ ಪತ್ರಿಕೆಯು ₹5 ಲಕ್ಷಕ್ಕೆ ಮಾರಾಟವಾಗಿದ್ದರೆ, ಕ್ರಮೇಣ ಅದು ₹30,000ಕ್ಕೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಭಾವ್ಯ ಪ್ರಶ್ನೆಪತ್ರಿಕೆ ಮತ್ತು ಅಧಿಕೃತ ಪ್ರಶ್ನೆಪತ್ರಿಕೆಯಲ್ಲಿದ್ದ ಹಲವು ಆಯ್ಕೆಗಳು ಸಾಮ್ಯತೆ ಹೊಂದಿದ್ದವು ಎಂಬುದೂ ಗೊತ್ತಾಗಿದೆ.
ಹಿಂದಿನ ಪ್ರಕರಣಗಳು:
ಈ ಹಿಂದೆಯೂ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಅಕ್ರಮಗಳ ಕುರಿತು ಪ್ರಕರಣಗಳು ದಾಖಲಾಗಿದ್ದಿದೆ. 2024ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, 1563 ವಿದ್ಯಾರ್ಥಿಗಳಿಗೆ ತಪ್ಪಾಗಿ 'ಗ್ರೇಸ್ ಅಂಕ'ಗಳನ್ನು ನೀಡಿದ ಆರೋಪ ವ್ಯಕ್ತವಾಗಿತ್ತು. ಅಲ್ಲದೆ ನಿರ್ದಿಷ್ಟ ಕೇಂದ್ರವೊಂದರ ಕೊಠಡಿಯಲ್ಲಿನ ಕೆಲವು ಅಭ್ಯರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆದಿದ್ದರು. ಇದು ವಿದ್ಯಾರ್ಥಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಲಾಗಿತ್ತು. 2020 ಮತ್ತು 2021ರ ನೀಟ್ ಯುಜಿ ಪರೀಕ್ಷೆಗಳಲ್ಲೂ ಹಲವು ದೋಷಗಳು ಕಂಡು ಬಂದಿದ್ದವು.
---
ವೈದ್ಯಕೀಯ ಶಿಕ್ಷಣದಲ್ಲಿ ಅರ್ಹತೆ ಪಾರದರ್ಶಕತೆ ನ್ಯಾಯಸಮ್ಮತತೆಯಲ್ಲಿ ರಾಜಿ ಮಾಡಿಕೊಳ್ಳಬಾರದು. ಈ ಪ್ರಕರಣ ಕುರಿತು ಕಾಲಮಿತಿಯ ತನಿಖೆ ಮತ್ತು ಕಠಿಣ ಹೊಣೆಗಾರಿಕೆ ನಿಗದಿಯಾಗಬೇಕು
- ಡಾ. ಜೈದೀಪ್ ಕುಮಾರ್ ಚೌಧರಿ ಅಧ್ಯಕ್ಷ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ
ಜವಾಬ್ದಾರಿ ಹೊರುತ್ತೇವೆ- ಸಿಂಗ್
'ಅಧಿಕೃತ ಪ್ರಶ್ನೆ ಪತ್ರಿಕೆಯಲ್ಲಿನ ಒಂದೇ ಒಂದು ಪ್ರಶ್ನೆ ಸೋರಿಕೆಯಾಗಿದ್ದರೂ ಅದು ಶೂನ್ಯ ಸಹಿಷ್ಣುತೆ ಮತ್ತು ಶೂನ್ಯ ದೋಷಕ್ಕೆ ಸಂಬಂಧಿಸಿದಂತೆ ನಮ್ಮ ಬದ್ಧತೆಯನ್ನು ಉಲ್ಲಂಘಿಸುತ್ತದೆ. ಅದು ನಮ್ಮ ಸಂಪೂರ್ಣ ಪ್ರಕ್ರಿಯೆ ರಾಜಿ ಮಾಡಿಕೊಂಡಿದೆ ಎಂಬುದಾಗಿಯೇ ಭಾವಿಸುತ್ತೇವೆ ಮತ್ತು ಅದರ ಜವಾಬ್ದಾರಿಯನ್ನು ಹೊರುತ್ತೇವೆ. ಅದಕ್ಕೆ ಅನುಗುಣವಾಗಿ ಕಠಿಣ ಕ್ರಮಗಳನ್ನೂ ಕೈಗೊಳ್ಳುತ್ತೇವೆ' ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 'ಇಡೀ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಖಚಿತವಾಗಿ ಎಷ್ಟು ಪ್ರಶ್ನೆಗಳು ಸೋರಿಕೆ ಆಗಿವೆ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ತಪ್ಪಿತಸ್ಥರನ್ನು ಬಂಧಿಸಲು ಕಠಿಣ ಕ್ರಮ ತೆಗೆದುಕೊಳ್ಳಲು ಸಿಬಿಐ ಅನ್ನು ಕೋರುತ್ತೇವೆ' ಎಂದು ಅವರು ವಿವರಿಸಿದರು. 'ಮೇ 3ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯು ನಾಲ್ಕು ಕೋಡ್ ಆವೃತ್ತಿಗಳನ್ನು ಹೊಂದಿತ್ತು. ಇವ್ಯಾವೂ ಸೋರಿಕೆಯಾಗಿಲ್ಲ. ಆದರೆ ಕೆಲವರಲ್ಲಿ ಹಂಚಿಕೆಯಾಗಿರುವ ಪಿಡಿಎಫ್ ಪ್ರತಿಯಲ್ಲಿನ ಕೆಲವು ಪ್ರಶ್ನೆಗಳು ಅಧಿಕೃತ ಪ್ರಶ್ನೆ ಪತ್ರಿಕೆಯಲ್ಲೂ ಕಂಡುಬಂದಿವೆ' ಎಂದು ಅವರು ಮಾಹಿತಿ ನೀಡಿದರು.
ದುಃಖಕರ ಘಟನೆ
'ಇದು ಅತ್ಯಂತ ದುಃಖಕರ ಘಟನೆ. ನಾವು ಈ ಹಂತಕ್ಕೆ ಬಂದು ನಿಂತಿರುವುದು ದುರದೃಷ್ಟಕರ ಮತ್ತು ಕಳವಳಕಾರಿ. ಪ್ರಶ್ನೆ ಪತ್ರಿಕೆ ಸೋರಿಕೆ ತಕ್ಷಣದಿಂದಲೇ ಕೊನೆಗೊಳ್ಳಬೇಕು' ಎಂದು ಅವರು ಹೇಳಿದರು. 'ಪರೀಕ್ಷೆ ನಿರ್ವಹಿಸುವಲ್ಲಿ ಭಾಗಿಯಾಗಿರುವ ಎಲ್ಲರಿಗೂ ಈ ಘಟನೆ ಬೇಸರ ತರಿಸಿದೆ. ತಪ್ಪು ನಡೆದಿದ್ದು ಅದಕ್ಕಾಗಿ ನಾವು ಜವಾಬ್ದಾರರಾಗಿದ್ದೇವೆ. ಅಂತಹ ಘಟನೆಗಳು ಪುನರಾವರ್ತನೆ ಆಗುವುದಿಲ್ಲ ಎಂಬ ಭರವಸೆಯೊಂದಿಗೆ ಮತ್ತೆ ತಯಾರಿ ನಡೆಸುತ್ತೇವೆ' ಎಂದು ಅವರು ಪ್ರತಿಕ್ರಿಯಿಸಿದರು. ನೀಟ್-ಯುಜಿ ರದ್ದುಗೊಳಿಸಿದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿರಾಕರಿಸಿದರು.
ಅಮೃತ ಕಾಲವಲ್ಲ ವಿಷ ಕಾಲ: ರಾಹುಲ್ ಟೀಕೆ
ನವದೆಹಲಿ: ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಿದ ಕ್ರಮವನ್ನು ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರ 'ಅಮೃತ ಕಾಲ'ವು ದೇಶಕ್ಕೆ 'ವಿಷ ಕಾಲ'ವಾಗಿ ಮಾರ್ಪಟ್ಟಿದೆ' ಎಂದು ರಾಹುಲ್ 'ಎಕ್ಸ್'ನಲ್ಲಿ ಟೀಕಿಸಿದ್ದಾರೆ. ದೇಶದ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ತ್ಯಾಗ ಮತ್ತು ಕನಸುಗಳನ್ನು ಭ್ರಷ್ಟ ಬಿಜೆಪಿ ಆಡಳಿತವು ಪುಡಿ ಮಾಡಿದೆ ಎಂದು ಅವರು ದೂರಿದ್ದಾರೆ. 'ಈ ಪರೀಕ್ಷೆಗಾಗಿ ಹಲವು ಮಕ್ಕಳ ತಂದೆಯರು ಸಾಲ ಮಾಡಿದ್ದಾರೆ ತಾಯಂದಿರು ತಮ್ಮ ಆಭರಣಗಳನ್ನು ಮಾರಿದ್ದಾರೆ ಲಕ್ಷಾಂತರ ಮಕ್ಕಳು ರಾತ್ರಿಯಿಡೀ ಅಧ್ಯಯನ ನಡೆಸಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಅವರು ಪ್ರಶ್ನೆ ಪತ್ರಿಕೆ ಸೋರಿಕೆ ಸರ್ಕಾರದ ನಿರ್ಲಕ್ಷ್ಯ ಮತ್ತು ಶಿಕ್ಷಣದಲ್ಲಿ ಸಂಘಟಿತ ಭ್ರಷ್ಟಾಚಾರವನ್ನು ಪಡೆಯುತ್ತಿದ್ದಾರೆ' ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ. 'ಇದು ಕೇವಲ ವೈಫಲ್ಯವಲ್ಲ ದೇಶದ ಯುವ ಜನರ ಭವಿಷ್ಯದ ವಿರುದ್ಧ ಎಸಗಿದ ಅಪರಾಧ' ಎಂದು ಅವರು ಆರೋಪಿಸಿದ್ದಾರೆ. 'ಪ್ರತೀ ಬಾರಿಯೂ ಈ ಮಾಫಿಯಾ ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುತ್ತಿದೆ. ಆದರೆ ಪರೀಕ್ಷೆಗಾಗಿ ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ಮತ್ತೊಮ್ಮೆ ಲಕ್ಷಾಂತರ ವಿದ್ಯಾರ್ಥಿಗಳು ಪುನಃ ಮಾನಸಿಕ ಒತ್ತಡ ಆರ್ಥಿಕ ಹೊರೆ ಅನಿಶ್ಚಿತತೆಯನ್ನು ಸಹಿಸಿಕೊಳ್ಳಬೇಕಾಗಿದೆ' ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬೀದಿಗಿಳಿದು ಹೋರಾಡಿ: ಕೇಜ್ರಿವಾಲ್ ಕರೆ
ನವದೆಹಲಿ: ನೀಟ್ ಪರೀಕ್ಷೆ ರದ್ದುಗೊಳಿಸಿದ ಎನ್‌ಟಿಎ ಕ್ರಮದ ವಿರುದ್ಧ ಕಿಡಿ ಕಾರಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು 'ಇದರಿಂದ ಬಾಧಿತರಾದ ವಿದ್ಯಾರ್ಥಿಗಳು ಸಾಮೂಹಿಕವಾಗಿ ರಸ್ತೆಗಿಳಿದು ಹೋರಾಟ ನಡೆಸಬೇಕು. ಏಕೆಂದರೆ ಸರ್ಕಾರ ಪ್ರತಿಭಟನೆ ಆಂದೋಲನದ ಭಾಷೆಗಳನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ' ಎಂದು ಹೇಳಿದರು. 'ಬಿಜೆಪಿ ಆಡಳಿತಾವಧಿಯಲ್ಲಿ 9 ವರ್ಷಗಳಲ್ಲಿ ನಾಲ್ಕು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ' ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ದೂರಿದರು. 'ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳಿಗೆ ಮಾಡಿದ ದೊಡ್ಡ ದ್ರೋಹ. ಅದನ್ನು ತಡೆಯಲು ಸಾಧ್ಯವಾಗದವರು ಹೇಗೆ ಸರ್ಕಾರವನ್ನು ನಡೆಸುತ್ತಾರೆ. ಇದು ಪೂರ್ಣ ಪಿತೂರಿಯ ಪ್ರಕರಣವಾಗಿದೆ' ಎಂದು ಅವರು ಟೀಕಿಸಿದರು. 'ಪ್ರಶ್ನೆ ಪತ್ರಿಕೆ ಸೋರಿಕೆಯು ಆಕಸ್ಮಿಕವಾಗಿ ಸಂಭವಿಸಿಲ್ಲ. ಅದಕ್ಕೆ ಉನ್ನತ ಅಧಿಕಾರಿಗಳೇ ಕಾರಣ' ಎಂದು ಕೇಜ್ರಿವಾಲ್ ಆರೋಪಿಸಿದರು.
ಅಕ್ರಮ ಮುಚ್ಚಿಡಲು ಯತ್ನಿಸಿದ್ದ ಸರ್ಕಾರ: ಗೆಹಲೋತ್
ಆರೋಪ ಜೈಪುರ (ಪಿಟಿಐ): ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಡಲು ರಾಜಸ್ಥಾನದ ಬಿಜೆಪಿ ಸರ್ಕಾರ ಎರಡು ವಾರಗಳ ಕಾಲ ಪ್ರಯತ್ನಿಸಿತ್ತು ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ. ಆರಂಭದಲ್ಲಿ ಈ ಕುರಿತು ಯಾವುದೇ ಎಫ್‌ಐಆರ್ ದಾಖಲಿಸದೇ ವಿಳಂಬ ನೀತಿ ಅನುಸರಿಸಿದ ಇಲ್ಲಿನ ಬಿಜೆಪಿ ಸರ್ಕಾರ ಯುವ ಜನರ ಭವಿಷ್ಯದ ಜತೆಗೆ ಆಟವಾಡಿದೆ ಎಂದು ಅವರು ದೂರಿದ್ದಾರೆ. ಇದೀಗ ಎನ್‌ಟಿಎ ಈ ಪರೀಕ್ಷೆಯನ್ನು ರದ್ದುಗೊಳಿಸಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ತೆಗೆದುಕೊಂಡಿರುವ ನಿರ್ಧಾರವು ವಿದ್ಯಾರ್ಥಿಗಳ ಹಿತದಿಂದ ಸೂಕ್ತವಾದದ್ದು ಎಂದು ಅವರು ತಿಳಿಸಿದ್ದಾರೆ. ಗೆಹಲೋತ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ 'ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಕೇರಳದಲ್ಲಿ. ಅದು ನಂತರ ರಾಜಸ್ಥಾನಕ್ಕೆ ತಲುಪಿದೆ' ಎಂದಿದೆ.
ಎನ್‌ಟಿಎ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯೇ: ಕಾಂಗ್ರೆಸ್
ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರ ಪರೀಕ್ಷೆಯನ್ನು ರದ್ದುಗೊಳಿಸಿದ ಎನ್‌ಟಿಎ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯೇ ಎನ್ನುವ ಪ್ರಶ್ನೆಗಳು ಕಾಡುತ್ತಿವೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಮೋದಿ ಸರ್ಕಾರದ ಭ್ರಷ್ಟ ಅಧಿಕಾರಿಗಳಿಂದ ಎನ್‌ಟಿಎ ಅನ್ನು ದೂರವಿಟ್ಟು ಪೂರ್ಣ ಪ್ರಮಾಣದಲ್ಲಿ ಪುನರ್ ರಚಿಸಬೇಕಿದೆ ಎಂದು ಅದು ಪ್ರತಿಪಾದಿಸಿದೆ. 'ದಶಕಗಳಷ್ಟ ಹಳೆಯದಾದ ಪ್ರವೇಶ ಪ್ರಕ್ರಿಯೆಯನ್ನು ಭ್ರಷ್ಟಾಚಾರದಿಂದ ತುಂಬಿರುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಅಲ್ಲದೆ ಎನ್‌ಟಿಎ ಸಂಸತ್ತಿಗೆ ವಾರ್ಷಿಕ ವರದಿಗಳನ್ನು ಸಲ್ಲಿಸಲು ನಿರಂತರವಾಗಿ ವಿಫಲವಾಗಿದೆ. ಅದು ಕೇವಲ ಲೆಕ್ಕಪರಿಶೋಧಕರ ಹೇಳಿಕೆಗಳನ್ನು ಮಾತ್ರ ನೀಡುತ್ತಿದೆ ಎಂದು ಅವರು ದೂರಿದ್ದಾರೆ. 'ಶಿಕ್ಷಣ ಮಹಿಳೆಯರು ಮಕ್ಕಳು ಯುವಕರು ಮತ್ತು ಕ್ರೀಡೆಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯು ತನ್ನ 371ನೇ ವರದಿಯಲ್ಲಿ ಎನ್‌ಟಿಎ ನಡೆಸಿದ 14 ರಾಷ್ಟ್ರೀಯ ಪರೀಕ್ಷೆಗಳಲ್ಲಿ ಐದರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದಿವೆ ಎಂದು ಹೇಳಿದೆ. ಅಲ್ಲದೆ 2025ರ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಕೀ ಉತ್ತರಗಳಲ್ಲಿನ ದೋಷಗಳಿಂದಾಗಿ ಪ್ರಶ್ನೆಪತ್ರಿಕೆಯಲ್ಲಿನ 12 ಪ್ರಶ್ನೆಗಳನ್ನು ಹಿಂತೆಗೆದುಕೊಂಡಿತ್ತು' ಎಂದು ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ನಡೆಯುವ ಸಿಯುಇಟಿ ಪರೀಕ್ಷಾ ಪ್ರಕ್ರಿಯೆ ಫಲಿತಾಂಶಗಳ ಬಿಡುಗಡೆಯನ್ನು ಕೇಂದ್ರ ಸರ್ಕಾರ ನಿಯಮಿತವಾಗಿ ವಿಳಂಬಗೊಳಿಸುತ್ತಾ ಬಂದಿದೆ. ಇದರಿಂದ ಶೈಕ್ಷಣಿಕ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿದೆ ಎಂದು ಅವರು ವಿವರಿಸಿದ್ದಾರೆ. ತೇಜಸ್ವಿ ಯಾದವ್ ಕಿಡಿ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಕ್ರಮಬದ್ಧವಾಗಿ ಪರೀಕ್ಷೆಗಳನ್ನು ನಡೆಸುವ ಆಡಳಿತಾತ್ಮಕ ಸಾಮರ್ಥ್ಯ ಇಚ್ಛಾಶಕ್ತಿ ಇಲ್ಲವಾಗಿದೆ. ಅದು ಮತ್ತೊಮ್ಮೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜತೆ ಆಟವಾಡುತ್ತಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
---

