ಬೆಂಗಳೂರು: ನಗರದ 74 ವರ್ಷದ ಮಹಿಳೆಯನ್ನು 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು ₹24 ಕೋಟಿ ಸುಲಿಗೆ ಮಾಡಿದ್ದಾರೆ.
ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ನೀಡಿದ ದೂರು ಆಧರಿಸಿ 'ರಾಜ್ಯ ಸೈಬರ್ ಕಮಾಂಡ್ ಘಟಕ'ದ (ಸಿಸಿಯು) ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈರೋಡ್‌ನ ಎನ್.ಶಿವಗ್ನಾನಂ, ಮುಂಬೈನ ಅಕ್ಕಚ್ ಮಲ್ಲಿಕ್, ಅಹಮದಾಬಾದ್‌ನ ಪಲಕ್ ಭಾಯಿ ಪಟೇಲ್, ಅಮಿತ್ ನರೇಂದ್ರ ಪಟೇಲ್, ನವದೆಹಲಿಯ ಓಂ ಪ್ರಕಾಶ್ ರಜಪುತ್, ಬಿಹಾರದ ಗೌರವ್ ಕುಮಾರ್ ಎಂಬವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಆರು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
'ಎನ್‌ಸಿಆರ್‌ಪಿ ಪೋರ್ಟಲ್ ಸಹಾಯದಿಂದ ಅನೇಕ ಮ್ಯೂಲ್ ಖಾತೆಗಳನ್ನು (ನಕಲಿ ಖಾತೆ) ಫ್ರೀಜ್ ಮಾಡಿ, ₹4 ಕೋಟಿ ಉಳಿಸಿದ್ದೇವೆ. ಈ ಪೈಕಿ ನ್ಯಾಯಾಲಯದ ಆದೇಶ ಪಡೆದು ₹1.46 ಕೋಟಿ ವಾಪಸ್ ಪಡೆಯಲಾಗಿದೆ' ಎಂದು ಸೈಬರ್ ಕಮಾಂಡ್ ಘಟಕದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ತಿಳಿಸಿದ್ದಾರೆ.
ಲಕ್ಷ್ಮೀ ರಾಮಮೂರ್ತಿ ಅವರು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದು ನಿವೃತ್ತಿ ಬಳಿಕ ಶಿವಾಜಿನಗರದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿ ವಾಸವಾಗಿದ್ದರು. ಬೆಂಗಳೂರು ಹಾಗೂ ಮುಂಬೈನಲ್ಲಿದ್ದ ಆಸ್ತಿಗಳನ್ನು ಮಾರಾಟ ಮಾಡಿ ಅಮೆರಿಕದಲ್ಲಿರುವ ಇಬ್ಬರು ಮಕ್ಕಳ ಜೊತೆ ನೆಲೆಸಲು ಸಿದ್ಧತೆ ನಡೆಸುತ್ತಿದ್ದರು. ಗ್ರೀನ್ ಕಾರ್ಡ್ ಹೊಂದಿರುವ ಮಕ್ಕಳು ಅಮೆರಿಕದಲ್ಲಿ ಸ್ಟಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದಾರೆ.
ಸಂತ್ರಸ್ತೆ ಬಳಿ ಹಣವಿರುವ ಮಾಹಿತಿ ಸಂಗ್ರಹಿಸಿದ್ದ ಆರೋಪಿಗಳು, ಫೆಬ್ರುವರಿ 10ರಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ಸೋಗಿನಲ್ಲಿ ವಿಡಿಯೊ ಕರೆ ಮಾಡಿದ್ದಾರೆ. 'ನೀವು ಹಣ ಅಕ್ರಮ ವರ್ಗಾವಣೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಹಾಗಾಗಿ ನಿಮ್ಮನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಯಾರ ಜೊತೆಯೂ ಮಾತನಾಡಬಾರದು. ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಸರ್ಕಾರದ ಖಾತೆಗೆ ವರ್ಗಾವಣೆ ಮಾಡಬೇಕು' ಎಂದು ಬೆದರಿಸಿದ್ದಾರೆ.
ತಿಂಗಳುಗಟ್ಟಲೆ ಮಾನಸಿಕ ಒತ್ತಡ ಹಾಕಿರುವ ಸೈಬರ್ ವಂಚಕರು ದೇಶದ ಹತ್ತು ಬ್ಯಾಂಕ್‌ಗಳಲ್ಲಿರುವ 23 ನಕಲಿ ಖಾತೆಗಳಿಗೆ ಫೆಬ್ರುವರಿ 10ರಿಂದ ಏಪ್ರಿಲ್ 24ರವರೆಗಿನ ಅವಧಿಯಲ್ಲಿ, ಸಂತ್ರಸ್ತೆಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ ₹24 ಕೋಟಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ನಂತರ ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ ವಂಚಕರು, ಚಿನ್ನಾಭರಣ ಅಡಮಾನ ಇಡುವಂತೆ ಸೂಚನೆ ನೀಡಿದ್ದಾರೆ. ವಂಚಕರ ಸೂಚನೆಯಂತೆ ಮನೆಯಲ್ಲಿದ್ದ 1 ಕೆ.ಜಿ. 300 ಗ್ರಾಂ ಚಿನ್ನವನ್ನು ಅಡಮಾನ ಇಡಲು ನಗರದ ಐಸಿಐಸಿಐ ಬ್ಯಾಂಕ್ ಶಾಖೆಗೆ ವೃದ್ಧೆ ತೆರಳಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಅಷ್ಟೊಂದು ಪ್ರಮಾಣದ ಚಿನ್ನಾಭರಣ ಗಮನಿಸಿ, ತಕ್ಷಣ ಸಿಸಿಬಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಬ್ಯಾಂಕ್‌ಗೆ ಧಾವಿಸಿದ ಪೊಲೀಸರು, ಲಕ್ಷ್ಮೀ ಅವರನ್ನು ಪ್ರಶ್ನಿಸಿದಾಗ 'ಡಿಜಿಟಲ್ ಅರೆಸ್ಟ್' ವಿಚಾರ ಗೊತ್ತಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ಮುಟ್ಟಿಸಿದರು. ಈ ಮೂಲಕ ₹3 ಕೋಟಿ ವಂಚಕರ ಖಾತೆಗೆ ವರ್ಗಾವಣೆ ಆಗುವುದನ್ನು ತಡೆದಿದ್ದಾರೆ.
ತಕ್ಷಣ ಪೊಲೀಸರು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿರುವ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ವೃದ್ಧೆ ಮತ್ತಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ.
ಆರು ತಂಡ ರಚನೆ
ವಂಚಕರ ಪತ್ತೆಗಾಗಿ ಆರು ತಂಡಗಳನ್ನು ರಚಿಸಲಾಯಿತು. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ತಂಡವು ಮೊಬೈಲ್ ಗೋಪುರಗಳ ಲೊಕೇಷನ್ ಆಧರಿಸಿ ವಿವಿಧ ರಾಜ್ಯಗಳಲ್ಲಿ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ.

