Dailyhunt Logo
  • Light mode
    Follow system
    Dark mode
    • Play Story
    • App Story
ನಿವೃತ್ತಿ ತಳ್ಳಿಹಾಕಿದ ರೊನಾಲ್ಡೊ: ಹತ್ತಿರದಲ್ಲಿವೆ ಫುಟ್ಬಾಲ್ ಪಯಣದ ಅಂತಿಮ ದಿನಗಳು

ನಿವೃತ್ತಿ ತಳ್ಳಿಹಾಕಿದ ರೊನಾಲ್ಡೊ: ಹತ್ತಿರದಲ್ಲಿವೆ ಫುಟ್ಬಾಲ್ ಪಯಣದ ಅಂತಿಮ ದಿನಗಳು

ಟೊರಾಂಟೊ (ಕೆನಡಾ): ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್ ಮುಕ್ತಾಯದ ನಂತರ, ಪೋರ್ಚುಗಲ್‌ನ ಖ್ಯಾತ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಸುದೀರ್ಘ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂದು ಅವರ ಸಹೋದರಿ ತಿಳಿಸಿದ್ದಾರೆ.

ಸಹೋದರಿ ಕಟಿಯಾ ಅಲ್ವೇರೊ ನೀಡಿರುವ ಈ ಹೇಳಿಕೆಯು ರೊನಾಲ್ಡೊ ಅವರ ಅಂತರರಾಷ್ಟ್ರೀಯ ನಿವೃತ್ತಿ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.

ಇಂತಹ ಮಾತುಕತೆಗಳ ನಡುವೆ 41 ವರ್ಷದ ರೊನಾಲ್ಡೊ, ವಿಶ್ವಕಪ್‌ನ ನಾಕೌಟ್ ಹಂತದ ಪಂದ್ಯವೊಂದರಲ್ಲಿ ಕಣಕ್ಕಿಳಿದು ಗೋಲು ಗಳಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕ್ರೊಯೇಷಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ 'ಸ್ಪೋರ್ಟ್ ಟಿವಿ' ವಾಹಿನಿಯೊಂದಿಗೆ ಮಾತನಾಡಿದ ರೊನಾಲ್ಡೊ ಕಟಿಯಾ, ಈ ವಿಶ್ವಕಪ್‌ನಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ರೊನಾಲ್ಡೊ ಆಡುತ್ತಿರುವುದು ಕೊನೆ ಪಂದ್ಯವಾಗಿರಲಿದೆ ಎಂದು ಹೇಳಿದ್ದಾರೆ.

ಅವರ ಆಟವನ್ನು ಕಣ್ಣೆದುರಿಗಿರುವಾಗಲೇ ಆನಂದಿಸಿ. ಏಕೆಂದರೆ ಈ ಆಟ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಅತ್ಯಂತ ನಂಬಿಕಸ್ಥ ಮೂಲಗಳಿಂದ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಇದು ಅವರ ಕೊನೆಯ ವಿಶ್ವಕಪ್. ಅವರು ಇಂದೇ ವಿದಾಯ ಹೇಳುತ್ತಿಲ್ಲ ನಿಜ, ಆದರೆ ಆ ಕ್ಷಣ ಬಹಳ ಹತ್ತಿರದಲ್ಲಿದೆ. ಇದು ಅವರ ವಿದಾಯದ ಪಂದ್ಯಾವಳಿ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಕಟಿಯಾ ಭಾವುಕರಾಗಿ ನುಡಿದಿದ್ದಾರೆ.

ನಾಕೌಟ್ ಪಂದ್ಯ ಮುಗಿದ ತಕ್ಷಣವೇ ರೊನಾಲ್ಡೊ ವಿದಾಯ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ನನ್ನ ಸುದೀರ್ಘ ಪಯಣದ ಅಂತ್ಯ ದಿನಗಳು ಹತ್ತಿರದಲ್ಲಿವೆ ಎಂದು ಮಾರ್ಮಿಕವಾಗಿ ನುಡಿದರು.

ವಿಶ್ವಕಪ್ ಇತಿಹಾಸದ ದಂತಕಥೆ ರೊನಾಲ್ಡೊ ಅವರು ಇಲ್ಲಿಯವರೆಗೂ 232 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ ತಮ್ಮ ಗೋಲುಗಳ ಸಂಖ್ಯೆಯನ್ನು 146ಕ್ಕೆ ಏರಿಸಿಕೊಂಡಿದ್ದಾರೆ. ಅಂತಿಮವಾಗಿ ಕ್ರೊಯೇಷಿಯಾ ವಿರುದ್ಧ 2-1 ಗೋಲುಗಳ ಮುನ್ನಡೆ ಸಾಧಿಸಿದ ಪೋರ್ಚುಗಲ್ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದ್ದು, ರೊನಾಲ್ಡೊ ಅವರ ವಿಶ್ವಕಪ್ ಕನಸಿನ ವಿಜಯಯಾತ್ರೆ ಮುಂದುವರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani