ಆ ಬಿಸಿರಕ್ತದ ಯುವಕನಿಗೆ ಒಂದೇ ಹುಚ್ಚು; ಎಲ್ಲಾದರೂ ಸುತ್ತಮುತ್ತ ಓಟದ ಸ್ಪರ್ಧೆ ನಡೆದರೆ ಸಾಕು, ಭಾವಹಿಸೋದು, ಗೆಲ್ಲೋದು ಅಷ್ಟೇ. ಊರಿನ ಜನಕ್ಕೂ ಖಾತರಿ; ಅವನು ಭಾಗವಹಿಸಿದ ಎಂದರೆ ಸಾಕು, ಗೆಲುವು ಖಚಿತ. ಅಪ್ಪ, ಅಮ್ಮ, ಅಜ್ಜಿ, ತಾತ, ಅಕ್ಕ, ತಮ್ಮ ಎಲ್ಲ ಇರುವ ಅವನಿಗೆ ಓಡುವುದು ಮಾತ್ರ ಮುಖ್ಯ.
ಹೀಗೊಮ್ಮೆ ಅವನದೇ ಗ್ರಾಮದಲ್ಲಿ ಮತ್ತೊಂದು ಸ್ಪರ್ಧೆ ನಡೆಯಿತು. ಎಲ್ಲದರಲ್ಲೂ ಅವನದ್ದೇ ಗೆಲುವು ಎಂಬುದನ್ನು ನೋಡಲು ಅನೇಕರು ನಿಂತಿದ್ದರು. ಪಂದ್ಯವನ್ನು ವೀಕ್ಷಿಸಲು ಆ ಗ್ರಾಮದ ಹಿರಿಯ ವ್ಯಕ್ತಿಯನ್ನು ಆಹ್ವಾನಿಸಲಾಗಿತ್ತು.
ಪ್ರತಿ ಪಂದ್ಯದಲ್ಲೂ ಯುವಕನೇ ಗೆದ್ದಾಗ ಜನರೆಲ್ಲ ಸಂಭ್ರಮದಿಂದ ಉದ್ಘೋಷ ಮಾಡುತ್ತಿದ್ದರು. ಯುವಕನಿಗೆ ಎಲ್ಲಿಲ್ಲದ ಸಡಗರ. ಮೂರೂ ಪಂದ್ಯಗಳಲ್ಲಿ ಗೆದ್ದವ; ಅಷ್ಟು ಬಾರಿ ಗೆದ್ದರೂ ಊರೇ ಸಂಭ್ರಮಪಟ್ಟರೂ ಆ ಗ್ರಾಮದ ಹಿರಿಯ ವ್ಯಕ್ತಿ ಮಾತ್ರ ಒಮ್ಮೆಯೂ ಪ್ರಶಂಸೆ ಮಾಡಲಿಲ್ಲ, ಚಪ್ಪಾಳೆ ತಟ್ಟಲಿಲ್ಲ. ಯುವಕನಿಗೆ ಆಶ್ಚರ್ಯ. ಇನ್ನೊಂದು ಪಂದ್ಯಕ್ಕಾಗಿ ಸಿದ್ಧನಾದ. ಜನರಿಗೆ ಎಲ್ಲಿಲ್ಲದ ಆಶ್ಚರ್ಯ. ಸರಿ, ಹಾಗಾದರೆ ಸ್ಪರ್ಧಿಗಳು ಯಾರು? ಆ ಹಿರಿಯ ವ್ಯಕ್ತಿಯು ಓಟದ ಜಾಗದಲ್ಲಿ ಸ್ಪರ್ಧಾಳುಗಳನ್ನಾಗಿ ವೃದ್ಧ ದಂಪತಿಯನ್ನು ನಿಲ್ಲಿಸಿದರು. ಪಂದ್ಯ ಆರಂಭವಾಯಿತು. ಮತ್ತೆ ಯುವಕನೇ ಗೆದ್ದನು.
ನಮ್ಮ ಮೂಗಿನ ನೇರದ ಸ್ವಾರ್ಥಪರ ಬಯಕೆಗಳ ಬೆನ್ನು ಹತ್ತಿ ಸುತ್ತಮುತ್ತಲಿನ ಅಸಹಾಯಕ ಬಂಧು ಬಾಂಧವ ಸ್ನೇಹಿತರನ್ನೇ ಮರೆಯುತ್ತೇವೆ ಎಂಬ ಮಾತನ್ನು ಊರಿನ ಹಿರಿಯ ಸಾಬೀತು ಮಾಡಬೇಕಿತ್ತು. ತಾನು ತನ್ನದು ಎಂಬ ಸ್ವಸಂಭ್ರಮಗಳಲ್ಲಿ ತನ್ನ ಸುತ್ತಲಿನವರನ್ನೇ ಕಡೆಗಣಿಸುವ ಪರಿ ಅದು. ಕರ್ನಾಟಕ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ ಅವರ ನಾಟಕ 'ಟೊಳ್ಳು ಗಟ್ಟಿ' (ಮಕ್ಕಳಿಸ್ಕೂಲ್ ಮನೇಲಲ್ವೆ?) ನಾಟಕವೂ ಕೂಡ ಇಂಥದ್ದನೇ ಬಿಂಬಿಸುತ್ತದೆ. ಸ್ವಾರ್ಥ ಮತ್ತು ವ್ಯವಹಾರಪರ ಪುಟ್ಟು ಮತ್ತು ಜೀವನಪ್ರೀತಿ ಪರವಾದ ಮಾಧುವಿನ ಕತೆ ಕೂಡಾ ಇದು.
ಬಾಳಿನ ಚಲನೆಯಲ್ಲಿ ಇಂತಹ ಅದೆಷ್ಟೋ ಚಿತ್ರಗಳನ್ನು ಕಾಣುತ್ತೇವೆ. ಮನೆಯಲ್ಲಿ ವಯಸ್ಸಾದ ಹಿರಿಯರು ಇದ್ದರೂ ಒಮ್ಮೆಯೂ ಅವರ ಕಡೆಗೆ ಗಮನ ಕೊಡದೆ ಏದುಸಿರು ಬಿಡುತ್ತಾ ಹಣ, ದುಡಿಮೆ, ಓದು, ವ್ಯಾಪಾರ ಎಂಬ ಭರಾಟೆಯಲ್ಲಿ ಓಡುವ ನಾವೆಲ್ಲ ನಿಜವಾದ ಸ್ಪರ್ಧೆಗಳಲ್ಲಿ ಸೋತು ಭ್ರಮೆಗಳನ್ನು ಗೆಲ್ಲುತ್ತಿದ್ದೇವೆ ಎಂದು ಒಮ್ಮೆಯಾದರೂ ಅನಿಸಬೇಕಲ್ಲವೆ?

