Dailyhunt Logo
  • Light mode
    Follow system
    Dark mode
    • Play Story
    • App Story
ನುಡಿ ಬೆಳಗು: ಸಾಧಕಿಯರಿಗೆ ನಮಸ್ಕಾರ

ನುಡಿ ಬೆಳಗು: ಸಾಧಕಿಯರಿಗೆ ನಮಸ್ಕಾರ

ಮೊನ್ನೆ, ಅಕ್ಟೋಬರ್‌ ಮೂವತ್ತೊಂದರಂದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ಈ ಬಾರಿಯ ಏಷ್ಯನ್‌ ಕ್ರೀಡೆಗಳಲ್ಲಿ ಬಂಗಾರದ ಪದಕ ಗಳಿಸಿದ ಪೂವಮ್ಮ ಮತ್ತು ಕಂಚಿನ ಪದಕ ಗಳಿಸಿದ ಅದೇ ತಾಲೂಕಿನ ಸ್ನೇಹಾ ಎಸ್‌.ಎಸ್‌. ಇಬ್ಬರನ್ನೂ ಬಹಳ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ವಿಶೇಷವೆಂದರೆ, ಅದನ್ನು ಸಾಕ್ಷೀಕರಿಸಿದವರು ಕೊಪ್ಪ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು. ಈ ಇಬ್ಬರು ಚಾಂಪಿಯನ್‌ಗಳು ಹೇಗೆ ಕಡುಕಷ್ಟದ ಹಾದಿಯಿಂದ ಬಂದು ಈ ಎತ್ತರಕ್ಕೆ ಏರಿದ್ದೆಂಬುದನ್ನು ಅವರ ಸಾಧನೆಯ ವಿಡಿಯೊ ಮೂಲಕ, ಅವರ ಮಾತುಗಳ ಮೂಲಕ ತಿಳಿದುಕೊಳ್ಳುವಾಗ ಕುಳಿತವರು ಭಾವುಕರಾಗುತ್ತಿದ್ದರು.

ಸಾಮಾನ್ಯವಾಗಿ ಕ್ರೀಡೆ ಎಂದರೆ ಓದಿನ ಶತ್ರು ಎಂಬ ಭಾವನೆ ಭಾರತೀಯ ಪಾಲಕರಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಾಮಾನ್ಯ ಹಿನ್ನೆಲೆಯಿಂದ ಬಂದ ಈ ಇಬ್ಬರು ಓಟಗಾರ್ತಿಯರು ಭಾರತದ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಳೆಯುವಂತೆ ಮಾಡಿದ ಪರಿ ನಿಜಕ್ಕೂ ಶ್ಲಾಘನೀಯ. ಅವರ ಬೆನ್ನಿಗೆ ನಿಂತಿದ್ದಕ್ಕೆ ಅವರ ಕುಟುಂಬವರ್ಗದವರನ್ನು ಅಭಿನಂದಿಸಲೇಬೇಕು.

ಪೂವಮ್ಮ ಮೊನ್ನೆ ಜಪಾನ್‌ನಲ್ಲಿ ರಿಲೇಯಲ್ಲಿ ಚಿನ್ನ ಗೆದ್ದಾಗ ಅವರಿಗೆ ಮೂವತ್ತಾರು ವರ್ಷ ವಯಸ್ಸು. ದೃಢ ಸಂಕಲ್ಪ, ಗುರಿಯಲ್ಲಿನ ಖಚಿತತೆ, ಸತತ ಪರಿಶ್ರಮ ಈ ಮೂರೂ ಸೇರಿದರೆ ಯಾವ ಅಡೆತಡೆಯೂ ಸಾಧಕರನ್ನು ತಡೆಯಲಾಗದು ಎಂಬುದಕ್ಕೆ ಸಾಕ್ಷಿ ಇದು. ಕಳೆದ ಇಪ್ಪತ್ಮೂರು ವರ್ಷಗಳಿಂದ ದಿನಂಪ್ರತಿ ತರಬೇತಿ, ಅಭ್ಯಾಸವನ್ನು ನಿರಂತರವಾಗಿ ನಡೆಸಿದವರು ಪೂವಮ್ಮ. ಯಶಸ್ಸಿನ ಹಂಬಲ ಮತ್ತು ಅದಕ್ಕೆ ಅವರು ಮಾಡಿದ ತ್ಯಾಗ ಯಾವ ಮಟ್ಟದ್ದು ಎಂದರೆ, ಪೂವಮ್ಮ ಸ್ವತಃ ತಮ್ಮದೇ ಮದುವೆಯ ದಿನವೂ ಜಿಮ್‌ನಲ್ಲಿ ಬೆವರು ಹರಿಸಿ ಮದುವೆ ಮಂಟಪಕ್ಕೆ ಬಂದಿದ್ದರು. ಅಂದರೆ ಬದುಕಿನಲ್ಲಿ ತಮ್ಮ ಆದ್ಯತೆಗಳೇನು ಎಂಬುದರ ಬಗ್ಗೆ ಅಪ್ರತಿಮ ಖಚಿತತೆ ಇದ್ದಾಗ ಮತ್ತು ತಾವು ಪ್ರತಿನಿಧಿಸುವ ಕ್ರೀಡೆಯ ಬಗ್ಗೆ ಅಪರಿಮಿತ ಪ್ರೀತಿ ಇದ್ದಾಗ ಮಾತ್ರ ಈ ರೀತಿಯ ಸಮರ್ಪಣಾ ಮನೋಭಾವ ಸಾಧ್ಯ.

ಸ್ನೇಹಾ ಮಲೆನಾಡಿನ ಪುಟ್ಟ ಗ್ರಾಮವೊಂದರ ಹುಡುಗಿ. 1990ನೇ ಇಸವಿಯಲ್ಲಿ ಕೊಪ್ಪ ತಾಲೂಕಿನ ಎಸ್‌.ಡಿ.ಈಶನ್‌, ಶಾಟ್‌ ಪುಟ್‌ನಲ್ಲಿ ಏಷ್ಯಾಡ್‌ ಕಂಚು ಗೆದ್ದ ಮೂವತ್ತಾರು ವರ್ಷಗಳ ನಂತರ ಸ್ನೇಹಾರಿಗೆ ಪದಕ ಬಂದಿರುವುದನ್ನು ಊರಿನವರು ಸಂಭ್ರಮಿಸಿದರು. ಯಾವ ಆಧುನಿಕ ಸೌಕರ್ಯ ಇಲ್ಲದೇ ಇದ್ದರೂ ಸ್ನೇಹಾ ತಮ್ಮ ಮಿತಿಗಳನ್ನು ನೆಪವಾಗಿಸಿಕೊಳ್ಳದೇ ತಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಏಷ್ಯಾಡ್‌ ಪದಕ ಗೆದ್ದಿದ್ದಾರೆ. ಇದೇ ಕನಸು ಹೊತ್ತು ಅಲ್ಲಿ ಕುಳಿತ ಅದೆಷ್ಟೋ ಹಳ್ಳಿಯ ಪ್ರತಿಭಾವಂತ ಹುಡುಗ ಹುಡುಗಿಯರಿಗೆ ಅವರು ಸ್ಫೂರ್ತಿಯ ಸೆಲೆಯಾಗಿದ್ದಂತೂ ಹೌದು.

ಸಾಧನೆ ಎನ್ನುವುದು ಸಾಧಕರ ಸೊತ್ತೇ ಹೊರತು ಸೋಮಾರಿಯದ್ದಲ್ಲ. ಜಗತ್ತಿಗೆ ಕಾಣುವುದು ಗೆದ್ದ ನಂತರದ ಸನ್ಮಾನ ಸಂಭ್ರಮ ಮಾತ್ರ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗುವುದು ವರ್ಷವರ್ಷಗಳ ಕಡು ತಪಸ್ಸಿನ ಫಲ. ಗೆಲುವಿನ ಕನಸು ಕಾಣುತ್ತ ಕುಳಿತರೆ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ. ಕಂಡ ಕನಸಿಗೆ ತಕ್ಕಂತೆ ಶ್ರಮ ಪಡಬೇಕು. ಹಗಲೂ ರಾತ್ರಿ ಶ್ರಮಿಸಬೇಕು, ಆ ಹಾದಿಯಲ್ಲಿ ಎದುರಾಗುವ ಸಂಕಟ, ಅವಮಾನಗಳನ್ನು ನುಂಗಿಕೊಳ್ಳಬೇಕು. ಶ್ರಮದ ನಂತರವೂ ಸೋಲು ಹಿಂಬಾಲಿಸಿದಾಗ ತಾಳ್ಮೆಯಿಂದ ಕಾಯಬೇಕು, ಪ್ರಯತ್ನ ಮುಂದುವರಿಸಬೇಕು. ದೊಡ್ಡ ಯಶಸ್ಸು ದೊಡ್ಡ ತ್ಯಾಗವನ್ನು ಬೇಡುತ್ತದೆ. ಅಂದಾಗ ಮಾತ್ರ ಸಾಧನೆ ಸಾಧ್ಯ. ಛಲದಿಂದ ಗುರಿ ತಲುಪಿದ ಈ ಸಾಧಕಿಯರಿಗೆ ನಮಸ್ಕಾರ.

Dailyhunt
Disclaimer: This content has not been generated, created or edited by Dailyhunt. Publisher: Prajavani