ನವದೆಹಲಿ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿವೆ.
ಬುಧವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಸಂಘಟನೆಗಳು, ಚುನಾವಣಾ ಆಯೋಗ (ಇ.ಸಿ) ವಿರುದ್ಧದ ತಮ್ಮ ಅಭಿಯಾನ ವಿಶಾಲ ರಾಜಕೀಯ ನೆಲೆಗಟ್ಟಿನಲ್ಲಿ ನಡೆಯಲಿದೆ ಎಂದು ಮಂಡಿಸಲು ಪ್ರಯತ್ನಿಸಿದವು. ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಮಂಗಳವಾರ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಬೆಂಬಲಿಸಿದವು.
ಸಿಜೆಪಿ ನೇತೃತ್ವದಲ್ಲಿ ಜುಲೈನಲ್ಲಿ ನಡೆದಿದ್ದ ಆಂದೋಲನದಿಂದ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದೀಗ ಮತ್ತೆ ಬೀದಿಗಿಳಿದು, ಜ್ಞಾನೇಶ್ ಕುಮಾರ್ ವಿರುದ್ಧವೂ ಅದೇ ರೀತಿಯಲ್ಲಿ ಒತ್ತಡ ಹೇರಲು ಪ್ರಯತ್ನಿಸುತ್ತಿವೆ.
ಪತ್ರಿಕಾಗೋಷ್ಠಿಯಲ್ಲಿ ಸಿಜೆಪಿ, ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ), ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‌ಎಫ್), ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ), ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಸಂಘಟನೆ ಮತ್ತು ಪರ್ಯಾಯ ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಸಂಘದ (ಎಎಸ್‌ಎಪಿ) ಪ್ರತಿನಿಧಿಗಳು ಪಾಲ್ಗೊಂಡರು.
ದೇಶದ ವಿವಿಧ ರಾಜ್ಯಗಳ ಜನರಿಗೆ ದೆಹಲಿಗೆ ಬರುವಂತೆ ಮತ್ತು ದೀರ್ಘಕಾಲದ ಪ್ರತಿಭಟನೆಗೆ ಸಿದ್ಧರಾಗುವಂತೆ ಸಿಜೆಪಿ ಸಹ ಸಂಚಾಲಕ ಸೌರವ್ ದಾಸ್ ಕರೆ ನೀಡಿದರು.
'ಈ ಹೋರಾಟ ಸುಲಭವಾಗಿರುವುದಿಲ್ಲ. ದೇಶದಾದ್ಯಂತ ಇರುವ ಪ್ರತಿಯೊಬ್ಬರೂ ನಮ್ಮೊಂದಿಗೆ ಕೈಜೋಡಿಸಬೇಕು. ದೆಹಲಿಗೆ ಬರಲು ರೈಲು ಮತ್ತು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ' ಎಂದು ಹೇಳಿದರು.
'ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದರೂ ಪ್ರತಿಭಟನೆ ನಿಲ್ಲದು. ಏಕೆಂದರೆ, ಇಡೀ ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಅಗತ್ಯವಿದೆ' ಎಂದರು. 'ನಮ್ಮ ಹೋರಾಟಕ್ಕೆ ಬಿಜೆಪಿಯು ವ್ಯಕ್ತಪಡಿಸುತ್ತಿರುವ ವಿರೋಧವು ಅವರ ಶಾಶ್ವತ ಅಧಿಕಾರ ದಾಹವನ್ನು ತೋರಿಸುತ್ತದೆ' ಎಂದು ಆರೋಪಿಸಿದರು.
ಭಿನ್ನತೆಯಿಲ್ಲ: 'ವಿದ್ಯಾರ್ಥಿಗಳ ನೇತೃತ್ವದ ಚಳವಳಿ ಮತ್ತು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳು ಭಿನ್ನವಾಗಿಯೇನೂ ಇಲ್ಲ' ಎಂದು ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ಹೇಳಿದರು.
'ಸಾಮಾನ್ಯ ಜನರು, ನಾಗರಿಕ ಸಮಾಜ, ವಿರೋಧ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಒಂದು ಕಡೆ ಇದ್ದರೆ, ಚುನಾವಣಾ ಆಯೋಗ ಮತ್ತು ಬಿಜೆಪಿ ಇನ್ನೊಂದು ಕಡೆ ನಿಂತಿವೆ' ಎಂದರು.
ಬೇಡಿಕೆಗಳೇನು?
ಸೌರವ್ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಹಲವು ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಜ್ಞಾನೇಶ್ ಕುಮಾರ್ ರಾಜೀನಾಮೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವುದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ತಡೆಹಿಡಿಯುವುದು, ಮುಂಬರುವ ಚುನಾವಣೆಗಳನ್ನು ಸ್ಥಗಿತಗೊಳಿಸುವುದು, 2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿಯನ್ನೇ ಮತ್ತೆ ಚಾಲ್ತಿಗೆ ತರುವುದು, ಎಸ್‌ಐಆರ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸುವುದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ಕಾನೂನು ರದ್ದುಗೊಳಿಸಬೇಕೆಂಬ ಬೇಡಿಕೆಗಳು ಅದರಲ್ಲಿ ಸೇರಿವೆ.
'10 ದಿನ ಮೊದಲೇ ಅನುಮತಿ ಅಗತ್ಯ'
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು 10 ದಿನ ಮುಂಚಿತವಾಗಿಯೇ ಅನುಮತಿ ಪಡೆಯಬೇಕು ಮತ್ತು ಈ ತಾಣದಲ್ಲಿ 1,000ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ದೆಹಲಿ ಪೊಲೀಸರು ಬುಧವಾರ ಪುನರುಚ್ಚರಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ 'ಇಂಡಿಯಾ' ಮೈತ್ರಿಕೂಟದ ನಾಯಕರು ಜಂತರ್ ಮಂತರ್‌ನತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿರುವ ಮತ್ತು ಸಿಜೆಪಿಯು ಅಕ್ಟೋಬರ್ 10ರಂದು ಪ್ರತಿಭಟನೆಗೆ ಯೋಜನೆ ರೂಪಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಸ್ಪಷ್ಟನೆ ನೀಡಿದ್ದಾರೆ.
'ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ವರ್ಸಸ್ ಭಾರತ ಸರ್ಕಾರ' ಪ್ರಕರಣದಲ್ಲಿ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ದೆಹಲಿ ಪೊಲೀಸರು ಹೊರಡಿಸಿರುವ ಆದೇಶದ ಪ್ರಕಾರ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಸಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
1,000 ದವರೆಗೆ ಜನರು ಸೇರುವ ಪ್ರತಿಭಟನೆ, ಸಭೆಗಳಿಗೆ ಜಂತರ್ ಮಂತರ್ ಅನ್ನು ನಿಗದಿಪಡಿಸಲಾಗಿದೆ. ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಇತರ ನಿಗದಿತ ಸ್ಥಳದಲ್ಲಿ ನಡೆಸಬೇಕಾಗುತ್ತದೆ. 1,000ದಿಂದ 50 ಸಾವಿರದವರೆಗೆ ಜನರು ಸೇರುವ ಪ್ರತಿಭಟನೆಗಳಿಗೆ ದೆಹಲಿ ಪೊಲೀಸರು ರಾಮ್‌ಲೀಲಾ ಮೈದಾನವನ್ನು ನಿಗದಿಪಡಿಸಿದ್ದಾರೆ. 50 ಸಾವಿರಕ್ಕಿಂತ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ಬುರಾರಿಯಲ್ಲಿ ನಡೆಸಬೇಕಾಗುತ್ತದೆ.
ನೇಹಾ ಬೋರಾ, ಎಐಎಸ್‌ಎ ಅಧ್ಯಕ್ಷೆಇದು ದೇಶದ ಜನರು ಮತ್ತು ಬಿಜೆಪಿ ನಡುವಿನ ಹೋರಾಟ. ನಾವು ಈ ಹೋರಾಟವನ್ನು ಒಗ್ಗಟ್ಟಿನಿಂದ ಮುನ್ನಡೆಸಿದರೆ, ತಕ್ಕ ಫಲಿತಾಂಶವನ್ನು ಪಡೆಯಬಲ್ಲೆವು 261008-51-1442231046

