Dailyhunt Logo
  • Light mode
    Follow system
    Dark mode
    • Play Story
    • App Story
ಒಳನೋಟ: ಅಂತರ್ಜಲದಲ್ಲೂ ಪ್ಲಾಸ್ಟಿಕ್ ಕಣ

ಒಳನೋಟ: ಅಂತರ್ಜಲದಲ್ಲೂ ಪ್ಲಾಸ್ಟಿಕ್ ಕಣ

ಳೆದ ವರ್ಷ 'ಇಕೋಟಾಕ್ಸಿಕಾಲಜಿ ಆಯಂಡ್ ಎನ್ವಿರಾನ್‌ಮೆಂಟಲ್ ಸೇಫ್ಟಿ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ, ಮೈಕ್ರೊಪ್ಲಾಸ್ಟಿಕ್‌ ಕಣಗಳಿಗೆ ಸಂಬಂಧಿಸಿದ ಸಂಶೋಧನಾ ವರದಿ ಆಘಾತಕಾರಿ ಅಂಶದ ಮೇಲೆ ಬೆಳಕು ಚೆಲ್ಲಿತ್ತು. ಮಹಿಳೆಯರ ಅಂಡಾಶಯದ ಫಾಲಿಕ್ಯುಲರ್ ದ್ರವದಲ್ಲಿ ಮೊದಲ ಬಾರಿಗೆ ಮೈಕ್ರೊಪ್ಲಾಸ್ಟಿಕ್‌ ಕಣಗಳು ಕಂಡುಬಂದಿದ್ದವು.

ಅವು ಅಂಡಾಣುಗಳ ಮೇಲೆ ಪರಿಣಾಮ ಬೀರಿ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದರು.

ಇದೀಗ ಕರ್ನಾಟಕದಲ್ಲಿ ನಡೆದ ಅಧ್ಯಯನವೊಂದು ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳಿಗೆ ಸಂಬಂಧಿಸಿದ ಮತ್ತೊಂದು ಮಾಹಿತಿ ಹೊರಗೆಡವಿದೆ. ಮೈಕ್ರೊಪ್ಲಾಸ್ಟಿಕ್ ಕಣಗಳು ಈಗ ಭೂಗರ್ಭದಲ್ಲೂ ಪತ್ತೆಯಾಗಿವೆ. ಕರ್ನಾಟಕದ ಪೂರ್ವ ಭಾಗದ ಹಲವು ಜಿಲ್ಲೆಗಳಲ್ಲಿ ಕುಡಿಯಲು ಬಳಸುತ್ತಿರುವ ಕೊಳವೆ ಬಾವಿಗಳ ನೀರಿನಲ್ಲಿಯೂ ಮೈಕ್ರೊಪ್ಲಾಸ್ಟಿಕ್ ಕಣಗಳು ಕಂಡು ಬಂದಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಅಧ್ಯಯನ ನಡೆಸಿ, ವರದಿ ಬಿಡುಗಡೆ ಮಾಡಿವೆ.

ಭಾರತದಲ್ಲಿ ಭೂಮಿಯ ಮೇಲಿನ ನೀರಿನಲ್ಲಿ ಮತ್ತು ಕರಾವಳಿಯ ತೀರ ಪ್ರದೇಶಗಳಲ್ಲಿ ಮೈಕ್ರೊಪ್ಲಾಸ್ಟಿಕ್ ಕಣಗಳು ಇರುವುದು ಈಗಾಗಲೇ ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಆದರೆ, ಭೂಮಿಯೊಳಗಿನ ಗಡಸು ಕಲ್ಲಿನ ಪ್ರದೇಶದಲ್ಲಿ, ರೂಪಾಂತರ ಶಿಲೆಗಳಷ್ಟು ಆಳದಲ್ಲಿನ ನೀರಿನಲ್ಲಿ ಮೈಕ್ರೊಪ್ಲಾಸ್ಟಿಕ್ ಕಣಗಳು ಪತ್ತೆಯಾಗಿರುವುದು ಇದೇ ಮೊದಲು. ಈ ಸಂಬಂಧ ನಡೆದ ಮೊದಲ ಅಧ್ಯಯನವೂ ಇದಾಗಿದೆ.

'ಕರೆಂಟ್ ಸೈನ್ಸ್' ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯು 60ರಿಂದ 100 ಮೀಟರ್ ಆಳದಿಂದ ಕೊಳವೆ ಬಾವಿಗಳ ಮೂಲಕ ಹೊರತೆಗೆಯಲಾಗುತ್ತಿರುವ ನೀರಿನಲ್ಲಿ ಮೈಕ್ರೊಪ್ಲಾಸ್ಟಿಕ್ ಇರುವುದನ್ನು ದೃಢಪಡಿಸಿದೆ. ಭೂಮಿ ಮೇಲಿನ ನೀರು ಹಲವು ರೀತಿಗಳಲ್ಲಿ ಮಲಿನಗೊಂಡಿ ದ್ದರೂ ಭೂಗರ್ಭದಲ್ಲಿನ ಅತ್ಯಂತ ಹಳೆಯ ಶಿಲಾಪದರಗಳ ನಡುವಿನ ನೀರು ಮಾಲಿನ್ಯ ಮುಕ್ತ ಎಂದೇ ಇದುವರೆಗೂ ಪರಿಗಣಿಸಲಾಗಿತ್ತು. ಈ ನಂಬಿಕೆಯನ್ನು ಐಐಎಸ್‌ಸಿ ಮತ್ತು ವಿಐಟಿಯ ಸಂಶೋಧನಾ ತಂಡವು ಹುಸಿಗೊಳಿಸಿದೆ.

ಸಂಶೋಧಕರು ಪೂರ್ವ ಕರ್ನಾಟಕದ 18 ಗ್ರಾಮೀಣ ‍ಪ್ರದೇಶಗಳ 25 ಕೊಳವೆ ಬಾವಿಗಳಿಂದ ಎರಡು ಹಂತ ಗಳಲ್ಲಿ (ನವೆಂಬರ್ 2024 ಮತ್ತು ಫೆಬ್ರುವರಿ 2025) ಅಂತರ್ಜಲದ ಮಾದರಿಗಳನ್ನು ಸಂಗ್ರಹಿಸಿದ್ದರು. ಹೆಚ್ಚಿನ ಮಾದರಿಗಳಲ್ಲಿ ಮೈಕ್ರೊಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. ಒಂದು ಲೀಟರ್‌ ನೀರಿನಲ್ಲಿ ಮೂರು ಕಣಗಳ ಸಾಂದ್ರತೆ ಇದೆ ಎಂದು ವರದಿ ಹೇಳಿದೆ. ಪತ್ತೆಯಾದ ಶೇ 94ರಷ್ಟು ಕಣಗಳು 20 ಮೈಕ್ರೊಮೀಟರ್‌ನಿಂದ 1,000 ಮೈಕ್ರೊಮೀಟರ್‌ವರೆಗಿನ ಗಾತ್ರದಿಂದ ಕೂಡಿದೆ.

ಇವು ಕಲ್ಲಿನ ಸೂಕ್ಷ್ಮ ಬಿರುಕುಗಳಲ್ಲಿ ನುಸುಳಬಲ್ಲವಾಗಿವೆ. ಹೀಗೆ ನುಸುಳುತ್ತಲೇ ಭೂಗರ್ಭದ ನೀರನ್ನು ಸೇರುತ್ತಿವೆ.

ದೆಹಲಿಯಲ್ಲಿ ಯಮುನಾ ನದಿಯ ತಟದಲ್ಲಿನ ಅಂತರ್ಜಲದಲ್ಲಿ ಮೈಕ್ರೊಪ್ಲಾಸ್ಟಿಕ್ ಕಣಗಳು ಇರುವುದು ಕಳೆದ ವರ್ಷ ಪತ್ತೆಯಾಗಿತ್ತು. ಆದರೆ, ಕರಾವಳಿಯಿಂದ ದೂರದಲ್ಲಿರುವ ರಾಜ್ಯದ ಬಯಲುಸೀಮೆಯ ಗಟ್ಟಿ ಶಿಲೆಯ ಭೂಪದರಗಳಲ್ಲಿ ಹರಿಯುವ ಅಂತರ್ಜಲದಲ್ಲಿಯೂ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿರುವುದು ಇದೇ ಪ್ರಥಮ.

14 ಗ್ರಾಮಗಳಲ್ಲಿ ಅಧ್ಯಯನ: ಹೈಡೆನ್ಸಿಟಿ ಪಾಲಿ ಎಥಿಲೀನ್ (ಎಚ್‌ಡಿಪಿಇ), ಲೋಡೆನ್ಸಿಟಿ ಪಾಲಿ ಎಥಿಲೀನ್ ಎಲ್‌ಡಿಪಿಇ), ಪಾಲಿ ಎಥಿಲೀನ್ (ಪಿಇ), ಪಾಲಿಪ್ರೊಪೈಲೀನ್ (ಪಿಪಿ), ಪಾಲಿಸ್ಟ್ರೈಲೀನ್ (ಪಿಎಸ್), ಪಾಲಿಎಥಿಲೀನ್ ಟೆರಫ್ತಲೇಟ್ (ಪಿಇಟಿ) ಪಾಲಿಅಮೈಡ್ (ಪಿಎ) ಮುಂತಾದ ಮೈಕ್ರೊಪ್ಲಾಸ್ಟಿಕ್ ಕಣಗಳು ಅಂತರ್ಜಲದಲ್ಲಿ ಪತ್ತೆಯಾಗಿವೆ. ಮೊದಲ ಬಾರಿಗೆ ಪರೀಕ್ಷಿಸಿದಾಗ (2024ರ ನವೆಂಬರ್‌ನಲ್ಲಿ) ಕೆಲವು ಗ್ರಾಮಗಳಲ್ಲಿ ಕೆಲವು ರೀತಿಯ ಮೈಕ್ರೊಪ್ಲಾಸ್ಟಿಕ್‌ನ ಒಂದು, ಎರಡು ಕಣಗಳು ಪತ್ತೆಯಾಗಿವೆ. ಎರಡನೇ ಬಾರಿ ಒಟ್ಟು 14 ಗ್ರಾಮಗಳಲ್ಲಿ (ಮೊದಲು ಮಾದರಿ ಸಂಗ್ರಹಿಸಿದ್ದ ಏಳು ಗ್ರಾಮಗಳು ಸೇರಿ) ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಎರಡನೇ ಬಾರಿ ಪರೀಕ್ಷೆ ಮಾಡಿದಾಗ (2025ರ ಫೆಬ್ರುವರಿ) ಎರಡು ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ಮೈಕ್ರೊಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆಯಲ್ಲಿ ಎಚ್‌ಡಿಪಿಇ, ಎಲ್‌ಡಿಪಿಇ, ಪಿಪಿ, ಪಿಇಟಿ, ಪಿಇ, ಪಿಎಸ್ ಮೈಕ್ರೊಪ್ಲಾಸ್ಟಿಕ್‌ನ 11 ಕಣಗಳು ಕಂಡುಬಂದಿದ್ದರೆ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಎಚ್‌ಡಿಪಿಇ, ಎಲ್‌ಡಿಪಿಇ, ಪಿಪಿ, ಪಿಎ, ಪಿಇಟಿ, ಪಿಇ, ಪಿಎಸ್ ಮೈಕ್ರೊಪ್ಲಾಸ್ಟಿಕ್‌ನ 14 ಕಣಗಳು ಕಂಡುಬಂದಿರುವುದು ಆತಂತ ಮೂಡಿಸಿದೆ.

ಅಧ್ಯಯನದಲ್ಲಿ ಕಂಡುಬಂದ ಮತ್ತೊಂದು ಪ್ರಮುಖ ವಿಚಾರವೆಂದರೆ, ಪ್ರದೇಶ ಮತ್ತು ಮಾದರಿ ಸಂಗ್ರಹದ ಕಾಲ ಬದಲಾದಂತೆ, ಅವುಗಳಲ್ಲಿ ಭಿನ್ನ ಪ್ರಮಾಣದಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳು ಕಂಡುಬಂದಿವೆ. ಉದಾಹರಣೆಗೆ, ಕೆಲವು ಬೋರ್‌ವೆಲ್‌ಗಳಲ್ಲಿ ಮೊದಲ ಬಾರಿ ಮಾದರಿ ಸಂಗ್ರಹಿಸಿದಾಗ ಮೈಕ್ರೊಪ್ಲಾಸ್ಟಿಕ್‌ಗಳು ಕಂಡುಬಂದಿರಲಿಲ್ಲ. ಆದರೆ, ಕೆಲವು ಪ್ರಕರಣಗಳಲ್ಲಿ ಮಾದರಿ ಸಂಗ್ರಹದ ಕಾಲ ಮತ್ತು ಪ್ರದೇಶ ಬದಲಾದಂತೆ ಕಣಗಳ ಪ್ರಮಾಣ ಮತ್ತು ಅವುಗಳ ಸಂಯೋಜನೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ.

ಕಡಿಮೆ ಮಾದರಿ ಸಂಗ್ರಹದಲ್ಲಿ ಕಡಿಮೆ ಕಣಗಳು ಕಂಡುಬಂದಿದ್ದು, ಹೆಚ್ಚಿನ ಮಾದರಿ ಸಂಗ್ರಹದಲ್ಲಿ ಹೆಚ್ಚು ಪ್ರಮಾಣದ ಕಣಗಳು ಕಂಡುಬಂದಿವೆ. 20 ಲೀಟರ್ ಮಾದರಿಯಲ್ಲಿ ಹೆಚ್ಚು ಪ್ರಮಾಣದ, ವೈವಿಧ್ಯಮಯವಾದ ಕಣಗಳು ಪತ್ತೆಯಾಗಿವೆ. ಮಾದರಿಯ ಕಡಿಮೆ ಸಂಗ್ರಹದಿಂದ ಅಂತರ್ಜಲದ ಮಾಲಿನ್ಯವನ್ನು ಕಡಿಮೆ ಅಂದಾಜು ಮಾಡಿದಂತಾಗಿರುವ ಸಾಧ್ಯತೆಯೂ ಇದೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಕಾರ, ವಾರ್ಷಿಕವಾಗಿ 39 ಸಾವಿರದಿಂದ 52 ಸಾವಿರದವರೆಗೆ ಮೈಕ್ರೊಪ್ಲಾಸ್ಟಿಕ್ ಮತ್ತು ನ್ಯಾನೊಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹವನ್ನು ಸೇರುತ್ತಿವೆ. ಉಸಿರಾಟ ಮತ್ತು ಆಹಾರ ಸೇವನೆಯ ಮೂಲಕ ಈ ಕಣಗಳು ಮನುಷ್ಯರ ದೇಹ ಪ್ರವೇಶಿಸುತ್ತಿವೆ. ಕುಡಿಯುವ ನೀರಿನ ಮೂಲಕ ಎಷ್ಟು ಕಣಗಳು ಸೇರುತ್ತಿವೆ ಎನ್ನುವುದು ಸ್ಪಷ್ಟವಿಲ್ಲ. ಲಭ್ಯ ಮಾಹಿತಿಯ ಪ್ರಕಾರ, ಪೂರ್ವ ಕರ್ನಾಟಕದ ಹಳ್ಳಿಗಳಲ್ಲಿ ವಾರ್ಷಿಕವಾಗಿ 1,100 ಮೈಕ್ರೊಪ್ಲಾಸ್ಟಿಕ್ ಕಣಗಳು ಜನರ ಹೊಟ್ಟೆ ಸೇರುತ್ತಿವೆ. ಈ ಪ್ರಮಾಣವು ತಕ್ಷಣಕ್ಕೆ ಅಪಾಯಕಾರಿಯೇನಲ್ಲ. ಜತೆಗೆ, ಹೆಚ್ಚಿನ ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕದ (ಆರ್‌ಒ ಘಟಕ) ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳು ಫಿಲ್ಟರ್ ಆಗುತ್ತವೆ.

ಪ್ರಸ್ತುತ ಅಂತರ್ಜಲದಲ್ಲಿ ಕಡಿಮೆ ಪ್ರಮಾಣದ ಮೈಕ್ರೊಪ್ಲಾಸ್ಟಿಕ್‌ಗಳು ಕಂಡುಬಂದಿವೆ. ತಕ್ಷಣಕ್ಕೆ ಇದು ಅಪಾಯಕಾರಿಯಲ್ಲದಿದ್ದರೂ ಜಾಗ್ರತೆ ವಹಿಸಬೇಕಾದ ವಿಚಾರವಾಗಿದೆ ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ. ಏಕೆಂದರೆ, ಆಳದ ಭೂಗರ್ಭದಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳು ಕಂಡುಬಂದಿರುವುದು ಮಾಲಿನ್ಯದ ತೀವ್ರ ಸ್ವರೂಪವನ್ನು ಸೂಚಿಸುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕ ನಿರ್ವಹಣೆ ಇಲ್ಲದಿದ್ದರೆ, ಅಂತರ್ಜಲದಲ್ಲಿ ಮೈಕ್ರೊಪ್ಲಾಸ್ಟಿಕ್ ಮತ್ತಷ್ಟು ಹೆಚ್ಚಾಗಲಿವೆ. ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಜನರು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ. ಜಾಗ್ರತೆ ವಹಿಸದಿದ್ದರೆ, ಮುಂದೆ ಇದು ಗಂಭೀರ ಆರೋಗ್ಯ ಹಾಗೂ ಪರಿಸರ ಸಮಸ್ಯೆಯಾಗಲಿದೆ ಎನ್ನುತ್ತಾರೆ ವೈದ್ಯರೂ ಎನ್‌ಎಬಿಎಲ್ ವೈದ್ಯಕೀಯ ಪ್ರಯೋಗಾಲಯಗಳ ಮುಖ್ಯ ಮೌಲ್ಯಮಾಪಕರೂ ಆದ ಡಾ. ಶಾಂತಕುಮಾರ ಮುರುಡ.

ಸರ್ವಾಂತರ್ಯಾಮಿ ಮೈಕ್ರೊಪ್ಲಾಸ್ಟಿಕ್: ಅತಿ ಸೂಕ್ಷ್ಮ ಪ್ಲಾಸ್ಟಿಕ್ (ಐದು ಮಿಲಿಮೀಟರ್‌ ಗಾತ್ರಕ್ಕಿಂತ ಕಡಿಮೆ; ಕೆಲವೊಮ್ಮೆ ಒಂದು ಮೈಕ್ರೊಮೀಟರ್) ಕಣಗಳನ್ನು ಮೈಕ್ರೊಪ್ಲಾಸ್ಟಿಕ್‌ ಎನ್ನಲಾಗುತ್ತದೆ. ಮೈಕ್ರೊಪ್ಲಾಸ್ಟಿಕ್ ಅನ್ನು ಉತ್ಪಾದಿಸಲಾಗುವುದಿಲ್ಲ. ಪ್ಲಾಸ್ಟಿಕ್ ಚೀಲ, ಬಾಟಲ್‌, ಮೀನು ಹಿಡಿಯುವ ಬಲೆ, ಸಿಂಥೆಟಿಕ್ ಬಟ್ಟೆಗಳು ಸೂರ್ಯನ ಕಿರಣ ಮತ್ತು ನೀರಿಗೆ ಒಡ್ಡಿದಾಗ ಮೈಕ್ರೊಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗುತ್ತವೆ. ಒಂದು ಪಾಲಿಸ್ಟರ್ ಅಂಗಿಯನ್ನು ಒಗೆದಾಗ ಸಾವಿರಾರು ಮೈಕ್ರೊಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗುವ ಸಂಭವ ಇದೆ. ಈ ಕಣಗಳು ಚರಂಡಿಗಳ ಮೂಲಕ ನದಿ ಸೇರಿ, ಅಲ್ಲಿಂದ ಸಮುದ್ರದ ಪಾಲಾಗುತ್ತವೆ. ಪ್ಲಾಸ್ಟಿಕ್ ಕಣಗಳು ಮಣ್ಣಿನಲ್ಲಿ ಕರಗುವುದಿಲ್ಲ. ಅವು ಸೂಕ್ಷ್ಮದಿಂದ ಅತಿಸೂಕ್ಷ್ಮ ಕಣಗಳಾಗಿ ಒಡೆಯುತ್ತಲೇ ಹೋಗುತ್ತವೆ. ಹಾಗೆ ಅವು ಮೀನು, ಏಡಿ, ಆಮೆ ಮುಂತಾದ ಜಲಚರಗಳು, ಪ್ರಾಣಿ ಪಕ್ಷಿಗಳ ಹೊಟ್ಟೆ ಸೇರುತ್ತವೆ.

ಮೈಕ್ರೊಪ್ಲಾಸ್ಟಿಕ್‌ಗಳು ಇಂದು ಸರ್ವಂತರ್ಯಾಮಿ ಎನ್ನುವಂತಾಗಿವೆ. ವಾತಾವರಣದಲ್ಲಿ, ಸಾಗರದಲ್ಲಿ, ನದಿ, ಕೆರೆ, ಕುಂಟೆಗಳಲ್ಲಿ, ಹಿಮಪದರಗಳಲ್ಲಿ, ಕೊನೆಗೆ ನೀರ್ಗಲ್ಲು ನದಿಗಳಲ್ಲೂ ಮೈಕ್ರೊಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. ಪ್ರಾಣಿಗಳಲ್ಲಿಯೂ ಕಂಡುಬಂದಿವೆ. ತರಕಾರಿಗಳಲ್ಲಿ, ಆಹಾರ, ನೀರು, ಗಾಳಿಯಲ್ಲಿ, ಮನುಷ್ಯರ ದೇಹದಲ್ಲೂ ಮೈಕ್ರೊಪ್ಲಾಸ್ಟಿಕ್ ಇರುವುದರ ಬಗ್ಗೆ ವರದಿಗಳು ಬಂದಿವೆ. ಸಮುದ್ರದ ತೀರ ಪ್ರದೇಶಗಳಲ್ಲಿ, ನದಿ ಪ್ರವಾಹದ ಪ್ರದೇಶದಲ್ಲಿ, ನದಿ ದಂಡೆಗಳಲ್ಲಿ, ಕೆರೆಗಳಲ್ಲಿ ಪ್ಲಾಸ್ಟಿಕ್‌ ಕಣಗಳು ಪತ್ತೆಯಾಗಿವೆ. ಆಕಾಶದಲ್ಲಿ, ಭೂಮಿಯಲ್ಲಿ, ಕೊನೆಗೆ ಪಾತಾಳದಲ್ಲೂ ಅದರ ಅಸ್ತಿತ್ವ ಕಂಡುಬಂದಿದೆ.

ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಪೆಡಂಭೂತ ವೇಗವಾಗಿ ವ್ಯಾಪಿಸುತ್ತಿದೆ. ಭೂಮಿ ಮೇಲೆ ಪ್ಲಾಸ್ಟಿಕ್ ಇಲ್ಲದ ಜಾಗವೇ ಇಲ್ಲ ಎನ್ನುವಂತಾಗಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಕಾರ, ಜಾಗತಿಕ ಮಟ್ಟದಲ್ಲಿ ವಾರ್ಷಿಕವಾಗಿ 40 ಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಹೆಚ್ಚಿನ ಪಾಲು ಪರಿಸರವನ್ನು ಸೇರುತ್ತಿದೆ. ಮಣ್ಣು ಮತ್ತು ನೀರಿನ ಮೂಲಕ ಆಹಾರ ಸರಪಳಿ ಪ್ರವೇಶಿಸಿ, ಮಾನವನ ದೇಹ ಸೇರುತ್ತಿವೆ; ಹಲವು ರೀತಿಯ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿವೆ ಎನ್ನುತ್ತಾರೆ ಭೂಗರ್ಭಶಾಸ್ತ್ರಜ್ಞರಾದ ಜಿ.ವಿ.ಶ್ರೀನಿವಾಸರೆಡ್ಡಿ.

ನ್ಯಾನೋಪ್ಲಾಸ್ಟಿಕ್‌ ಕಣಗಳು ಮೈಕ್ರೊಪ್ಲಾಸ್ಟಿಕ್‌ಗಿಂತಲೂ ಚಿಕ್ಕವು. ಪ್ಯಾಕೇಜಿಂಗ್ ಮೂಲಕ ಪ್ರತಿ ವರ್ಷ 1,000 ಟನ್ ಮೈಕ್ರೊಪ್ಲಾಸ್ಟಿಕ್ ಮತ್ತು ನ್ಯಾನೊಪ್ಲಾಸ್ಟಿಕ್ ಕಣಗಳು ಆಹಾರ ಪದಾರ್ಥಗಳು ಮತ್ತು ಪಾನೀಯಗಳನ್ನು ಸೇರುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ; ಹಾಲು ಕುಡಿಸಲು ಬಳಸುವ ಬಾಟಲಿಗಳ ಮೂಲಕ ಹಸುಗೂಸುಗಳ ದೇಹ ಸೇರುತ್ತಿವೆ.

ಮನುಷ್ಯ ಗರ್ಭದಿಂದ ಭೂಗರ್ಭದವರೆಗೆ ಮೈಕ್ರೊಪ್ಲಾಸ್ಟಿಕ್‌ ಕಣಗಳು ಹರಡಿರುವುದು ಮಾನವ ಕುಲಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಇದರಿಂದ ಘಟಿಸಬಹುದಾದ ಅಪಾಯದಿಂದ ಪಾರಾಗಬೇಕಿದೆ. ಬಯಲುಸೀಮೆಯ ಜಿಲ್ಲೆಗಳಲ್ಲಿ ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗುವುದು ದುಸ್ತರವಾಗಿದೆ. ಅಪರೂಪಕ್ಕೆ ನೀರು ಸಿಕ್ಕರೂ ಅದರಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳಿಂದ ಕೂಡಿ ಕಲುಷಿತವಾಗಿದ್ದರೆ ಅದು ಜನರ ಮತ್ತು ಪರಿಸರದ ಆರೋಗ್ಯಕ್ಕೆ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

'ಆರೋಗ್ಯಕ್ಕೆ ಹೊಸ ಸವಾಲು'

ಭೂಗರ್ಭದ ಜಲದಲ್ಲಿಯೂ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಮೈಕ್ರೊಪ್ಲಾಸ್ಟಿಕ್‌ಗಳು ಮಾನವನ ರಕ್ತ, ಶ್ವಾಸಕೋಶ, ಗರ್ಭನಾಳ, ತಾಯಿಯ ಹಾಲು, ಯಕೃತ್ತು ಹಾಗೂ ರಕ್ತನಾಳಗಳ ಪ್ಲಾಕ್‌ಗಳಲ್ಲಿಯೂ ಕಂಡುಬಂದಿವೆ. ಅತ್ಯಂತ ಗಂಭೀರ ಸಂಗತಿಯೆಂದರೆ, ನವಜಾತ ಶಿಶುಗಳ ದೇಹದಲ್ಲಿಯೂ ಈ ಕಣಗಳು ಪತ್ತೆಯಾಗಿವೆ. ಇದು ಮಾನವ ಜೀವವು ಜನನಕ್ಕೂ ಮುನ್ನವೇ, ಅಂದರೆ ಗರ್ಭಾವಸ್ಥೆಯಲ್ಲಿಯೇ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಒಳಗಾಗುತ್ತಿರುವುದನ್ನು ಸೂಚಿಸುತ್ತದೆ. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.

ಸಂತಾನೋತ್ಪತ್ತಿ ಸಮಸ್ಯೆ, ವೀರ್ಯಾಣು ಗುಣಮಟ್ಟ ಕುಸಿತ, ಗರ್ಭಧಾರಣೆಯ ತೊಡಕುಗಳು, ಭ್ರೂಣದ ಬೆಳವಣಿಗೆಯ ಮೇಲಿನ ದುಷ್ಪರಿಣಾಮಗಳು, ಹೃದ್ರೋಗ ಹಾಗೂ ಕೆಲವು ವಿಧದ ಕ್ಯಾನ್ಸರ್‌ಗಳ ಅಪಾಯವನ್ನು ಇವು ಹೆಚ್ಚಿಸಬಹುದೆಂದು ಸಂಶೋಧನೆಗಳು ಸೂಚಿಸುತ್ತಿವೆ. ಇಂದು ನಾವು ಬ್ಯಾಕ್ಟೀರಿಯಾ, ಫ್ಲೋರೈಡ್, ನೈಟ್ರೇಟ್ ಮತ್ತು ಭಾರ ಲೋಹಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ; ಆದರೆ ಮುಂದಿನ ದಿನಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಮೇಲ್ವಿಚಾರಣೆಯೂ ನೀರಿನ ಗುಣಮಟ್ಟ ಮೌಲ್ಯಮಾಪನದ ಅವಿಭಾಜ್ಯ ಭಾಗವಾಗುವ ಅವಶ್ಯಕತೆ ಇದೆ.

ಕುಡಿಯುವ ನೀರಿನ ಮೂಲಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳ ನಿರಂತರ ಮೇಲ್ವಿಚಾರಣೆ, ನಿಯಮಿತ ಪರೀಕ್ಷೆಗಳು, ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಭವಿಷ್ಯದ ಪೀಳಿಗೆಯ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಆದ್ಯತೆಯಾಗಬೇಕಿದೆ.

- ಡಾ. ಶಾಂತಕುಮಾರ ಮುರುಡ, ರೋಗನಿರ್ಣಯ ತಜ್ಞ, ಎನ್‌ಎಬಿಎಲ್ ವೈದ್ಯಕೀಯ ಪ್ರಯೋಗಾಲಯಗಳ ಮುಖ್ಯ ಮೌಲ್ಯಮಾಪಕರು

ಪ್ಲಾಸ್ಟಿಕ್ ಅಂತರ್ಜಲ ಸೇರಿದ್ದು ಹೇಗೆ?

ಏಕಬಳಕೆಯ ಪ್ಲಾಸ್ಟಿಕ್ ಅನ್ನು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ನಿರ್ಬಂಧ ಇಲ್ಲದೇ ಬಳಕೆ ಮಾಡಲಾಗುತ್ತಿದೆ. ಗೃಹಬಳಕೆಯ ಪ್ಲಾಸ್ಟಿಕ್ ಅನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಅಂತರ್ಜಲಕ್ಕೆ ನ್ಯಾನೋಪ್ಲಾಸ್ಟಿಕ್ ಕಣಗಳು ಸೇರಲು ಕಾರಣ ಎಂದು ಅಧ್ಯಯನ ಹೇಳಿದೆ.

  • ಹಳ್ಳಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರವಲಯದಲ್ಲಿ ಎಸೆಯಲಾಗುತ್ತಿದೆ

  • ಕೃಷಿ ಚಟುವಟಿಕೆಗಳಿಗೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವುದು

  • ಕೆರೆ-ಕುಂಟೆಗಳಲ್ಲಿ ಮೀನು ಸಾಕಲು ಪ್ಲಾಸ್ಟಿಕ್ ಬಳಸುತ್ತಿರುವುದು

  • ಬಟ್ಟೆ ಒಗೆಯುವುದು ಮತ್ತು ಪ್ರಾಣಿಗಳನ್ನು ತೊಳೆಯುವುದು

  • ಪ್ಲಾಸ್ಟಿಕ್ ಚೀಲಗಳು, ಬಿಸ್ಕತ್ತು, ಚಾಕೊಲೆಟ್, ಎಣ್ಣೆ, ಹಾಲು, ಹೊಗೆಸೊಪ್ಪು ಪೊಟ್ಟಣಗಳು (ಎಲ್‌ಡಿಪಿಇ, ಎಚ್‌ಡಿಪಿಇ)

  • ನೀರು ಮತ್ತು ತಂಪು ಪಾನೀಯದ ಪಿಇಟಿ ಬಾಟಲಿಗಳು

  • ಪಿಪಿ ಮತ್ತು ಪಿಎಸ್‌ನಿಂದ ಮಾಡಿದ ಏಕಬಳಕೆಯ ತಟ್ಟೆ, ಚಮಚಗಳು

  • ಕುಂಟೆಗಳ ಸುತ್ತ ಹೊದಿಕೆಯಾಗಿ ಬಳಸಲಾಗುವ ಪಿಇ ಮತ್ತು ಇವಿಎ (ಈಥೈಲ್-ವಿನೈಲ್ ಅಸಿಟೇಟ್)

  • ಮಣ್ಣಿನ ತೇವಾಂಶ ಕಾಪಾಡಲು ಬಳಸಲಾಗುವ ಪಿಇ ಫಿಲಂಗಳು

  • ಪಿಇ, ಪಿಪಿಯಿಂದ ಮಾಡಿದ ಬೀಜದ ಚೀಲಗಳು

ಅಂತರ್ಜಲ ಅತಿ ಬಳಕೆ

ಭಾರತವು ಜಗತ್ತಿನಲ್ಲಿಯೇ ಅಂರ್ತಜಲವನ್ನು ಅತಿ ಹೆಚ್ಚು ಬಳಸುವ ದೇಶವಾಗಿದೆ. ಅಮೆರಿಕ ಮತ್ತು ಚೀನಾ ಎರಡೂ ಒಟ್ಟಾರೆ ಬಳಸುವುದಕ್ಕಿಂತಲೂ ಹೆಚ್ಚಿನ ಅಂತರ್ಜಲವನ್ನು ಭಾರತದಲ್ಲಿ ಬಳಸಲಾಗುತ್ತಿದೆ. ಅಂತರ್ಜಲದ ಮೂಲಕ ದೇಶದ ಗ್ರಾಮೀಣ ಪ್ರದೇಶದ ಶೇ 85ರಷ್ಟು ಮಂದಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ; ಶೇ 60 ಮಂದಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

ಅಂತರ್ಜಲದ ಬಳಕೆಯಲ್ಲಿ ಕರ್ನಾಟಕವು ದೇಶದಲ್ಲಿ 10ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ವ್ಯವಸಾಯಕ್ಕೆ ಶೇ 60ರಷ್ಟು ಅಂತರ್ಜಲ ಬಳಕೆಯಾಗುತ್ತಿದ್ದರೆ, ರಾಜ್ಯದ ಕೋಲಾರ
(ಶೇ 193.35), ಬೆಂಗಳೂರು ನಗರ (ಶೇ 186.7), ಚಿಕ್ಕಬಳ್ಳಾಪುರ (ಶೇ 164.33) ಬೆಂಗಳೂರು ಗ್ರಾಮಾಂತರ (ಶೇ 147.05) ಮತ್ತು ಚಿತ್ರದುರ್ಗ (ಶೇ 144.44) ಜಿಲ್ಲೆಗಳಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಲಾಗುತ್ತಿದೆ.

ಭಾರತದ ಅನೇಕ ರಾಜ್ಯಗಳಲ್ಲಿ ನೀರಿನ ಸಮಸ್ಯೆಯು ನಿಧಾನಕ್ಕೆ ಗಂಭೀರವಾಗುತ್ತಾ ಸಾಗುತ್ತಿದೆ. ದೇಶದಲ್ಲಿ ನೀರಿಗೆ ಸಂಬಂಧಿಸಿದಂತೆ ವಿಚಿತ್ರವಾದ ಸನ್ನಿವೇಶಗಳು ಕಾಣಸಿಗುತ್ತಿವೆ. ಅನೇಕ ರಾಜ್ಯಗಳಲ್ಲಿ ಅಂತರ್ಜಲ ಮಟ್ಟವು ನಿರಂತರವಾಗಿ ಕುಸಿಯುತ್ತಾ ಸಾಗುತ್ತಿದೆ. ಅದೇ ಸಂದರ್ಭದಲ್ಲಿ ಒಂದು ದೊಡ್ಡ ಮಳೆಗೆ ಬೆಂಗಳೂರಿನಂಥ ನಗರದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಡುತ್ತದೆ. ಇದರ ಹಿಂದೆ ಹಲವು ಸಂಕೀರ್ಣ ಕಾರಣಗಳು ಇದ್ದು, ಈ ದಿಕ್ಕಿನಲ್ಲಿ ಸರ್ಕಾರಗಳು ಮತ್ತು ಜನ ಒಟ್ಟಾಗಿ ಸವಾಲು ಎದುರಿಸಬೇಕಿದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ.

'ಮಣ್ಣು, ನೀರು, ಜೀವಿಗಳಿಗೆ ಅಪಾಯಕಾರಿ'

ಕರ್ನಾಟಕದ ಕೊಳವೆ ಬಾವಿಗಳಲ್ಲಿ ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್ ಕಣಗಳು ಕಂಡುಬಂದಿರುವುದು ಆತಂಕಕಾರಿ ವಿಚಾರ. ಈ ಸೂಕ್ಷ್ಮ ಕಣಗಳು ಮಣ್ಣು, ನೀರು ಮತ್ತು ಗಾಳಿಯಲ್ಲಿ ಸೇರಿ ಕೃಷಿ ಮತ್ತು ಜೀವಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಪ್ಲಾಸ್ಟಿಕ್ ಕಣಗಳು ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಲಕ್ಷಣಗಳು, ಮಣ್ಣಿನ ರಚನೆಯನ್ನು ಬದಲಾಯಿಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಆಮ್ಲೀಯತೆಯನ್ನು ಹೆಚ್ಚಿಸುತ್ತವೆ ಹಾಗೂ ಮಣ್ಣಿನ ಸಾಂದ್ರತೆಯನ್ನು ಕಡಿಮೆ ಮಾಡುತ್ತವೆ. ಪ್ಲಾಸ್ಟಿಕ್ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುವುದಲ್ಲದೇ, ಸಸ್ಯಗಳ ಬೇರುಗಳಿಗೆ ಆಮ್ಲಜನಕ, ಪೋಷಕಾಂಶ ಮತ್ತು ನೀರಿನ ಪೂರೈಕೆಯನ್ನು ತಡೆಯುತ್ತವೆ. ಜತೆಗೆ, ಸಸ್ಯಗಳ ಜೀವಕೋಶಗಳನ್ನು ಸೇರಿಕೊಂಡು ಅವುಗಳ ಬೆಳೆವಣಿಗೆ ಹಾಗೂ ಉತ್ಪಾದನೆಯನ್ನು ಕುಂಠಿತಗೊಳಿಸುತ್ತವೆ.

ಕೃಷಿ ತ್ಯಾಜ್ಯ, ಪ್ಲಾಸ್ಟಿಕ್ ಹೊದಿಕೆಗಳು, ತ್ಯಾಜ್ಯ ವಿಲೇವಾರಿ ಕೇಂದ್ರಗಳು, ರಾಸಾಯನಿಕ ಗೊಬ್ಬರದಿಂದ ಉಂಟಾಗುವ ಕಲುಷಿತ ನೀರಿನಿಂದ ಉತ್ಪತ್ತಿಯಾಗುವ ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್ ಕಣಗಳು, ಮಣ್ಣಿನ ಹಾಗೂ ಗಡಸು ಕಲ್ಲಿನ ಬಿರುಕುಗಳ ಮೂಲಕ, ಅಂತರ್ಜಲವನ್ನು ಸೇರಿ, ಅದರ ಗುಣಮಟ್ಟವನ್ನು ಕಲುಷಿತಗೊಳಿಸುತ್ತವೆ. ಈ ಕಣಗಳು ಭಾರಿ ಲೋಹಗಳಾದ ಆರ್ಸೆನಿಕ್, ಕ್ಯಾಡ್ಮಿಯಂ, ಪಾದರಸ ಮತ್ತು ಸೀಸದಂಥ ವಿಷಕಾರಿ ರಾಸಾಯನಿಕಗಳನ್ನು ಆಕರ್ಷಿಸುತ್ತವೆ. ನೀರಿನಲ್ಲಿ ಕರಗುವ ಈ ವಿಷಕಾರಿ ಅಂಶಗಳು, ಅಂತರ್ಜಲವನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತವೆ.

ಮೈಕ್ರೊಪ್ಲಾಸ್ಟಿಕ್‌ನಿಂದಾಗುವ ಅಪಾಯವನ್ನು ತಪ್ಪಿಸಬೇಕಾದರೆ, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು. ಮುಖ್ಯವಾಗಿ, ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಬಿಡಬೇಕು. ಪ್ಲಾಸ್ಟಿಕ್ ಉತ್ಪಾದನೆಗೆ ಕಡಿವಾಣ ಹಾಕಿ, ಮರುಬಳಕೆ ಮಾಡಬಹುದಾದ ಜೈವಿಕ ಪ್ಲಾಸ್ಟಿಕ್ ಬಳಕೆಯನ್ನು ಉತ್ತೇಜಿಸಬೇಕು. ಪ್ಲಾಸ್ಟಿಕ್ ತಟ್ಟೆ, ಲೋಟಗಳಲ್ಲಿ ಬಿಸಿ ಆಹಾರ, ಪಾನೀಯ ಸೇವಿಸಬಾರದು. ಮನೆಯಲ್ಲಿ ಉತ್ತಮ ಗುಣಮಟ್ಟದ ನೀರಿನ ಫಿಲ್ಟರ್ ಅಳವಡಿಸಿಕೊಂಡು, ಕುಡಿಯುವ ನೀರಿನಲ್ಲಿ ಸೇರಿರಬಹುದಾದ ಮೈಕ್ರೊಪ್ಲಾಸ್ಟಿಕ್ ಕಣಗಳ ಸೇವನೆಯನ್ನು ತಪ್ಪಿಸಬೇಕು. ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ಮಾತ್ರ ನಾವು ಪರಿಸರವನ್ನು ಮತ್ತು ಮುಂದಿನ ತಲೆಮಾರುಗಳನ್ನು ಪ್ಲಾಸ್ಟಿಕ್‌ನ ಅಪಾಯಗಳಿಂದ ರಕ್ಷಿಸಬಹುದು.

- ಜಿ.ವಿ.ಶ್ರೀನಿವಾಸರೆಡ್ಡಿ, ಭೂಗರ್ಭಶಾಸ್ತ್ರಜ್ಞ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ

ಡಾ. ಶಾಂತಕುಮಾರ ಮುರುಡ, ಜಿ.ಎಸ್‌.ಶ್ರೀನಿವಾಸ ರೆಡ್ಡಿ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ.
Dailyhunt
Disclaimer: This content has not been generated, created or edited by Dailyhunt. Publisher: Prajavani