ಚಿಕ್ಕಬಳ್ಳಾಪುರ: '25ರಿಂದ 30 ವರ್ಷ ನೂಲು ಬಿಚ್ಚಾಣಿಕೆ (ರೀಲರ್ಸ್) ಉದ್ದಿಮೆ ನಡೆಸಿದೆ. ಕೆಲಸಗಾರರ ಕೊರತೆಯ ನಡುವೆಯೇ ತೀರಾ ನಷ್ಟವೂ ಅಲ್ಲ, ತೀರಾ ಲಾಭವೂ ಅಲ್ಲ ಎನ್ನುವ ಸ್ಥಿತಿಯಲ್ಲಿ ವೃತ್ತಿ ನಡೆಯುತ್ತಿತ್ತು. ಆದರೆ 2020ರ ಕೋವಿಡ್ ಸಮಯದಲ್ಲಿ ಬಿದ್ದ ಪೆಟ್ಟು ಇದರ ಸಹವಾಸ ಬೇಡ ಎನಿಸಿತು.
ರೀಲರ್ಸ್ ಕೆಲಸವನ್ನೇ ಕೈ ಬಿಟ್ಟೆ. ನಷ್ಟದ ಕಾರಣದಿಂದ ನನ್ನಂತೆಯೇ ನೂರಾರು ರೀಲರ್ಸ್ಗಳು ಉದ್ದಿಮೆ ತೊರೆದಿದ್ದಾರೆ. ರೀಲರ್ಸ್ ಕಷ್ಟಗಳು ಒಂದೇ ಎರಡೇ' ಎಂದು ಶಿಡ್ಲಘಟ್ಟದ ನಾರಾಯಣಸ್ವಾಮಿ ಹೇಳಿ ಮೌನವಾದರು.
'ರೀಲಿಂಗ್ ಉದ್ಯಮ ಮುಂಚಿನಂತಿಲ್ಲ. ಕಾರ್ಮಿಕರನ್ನು ಹೊಂದಿಸು ವುದೇ ದೊಡ್ಡ ಸವಾಲು. ಏನೇ ತಿಪ್ಪರಲಾಗ ಹಾಕಿದರೂ ಬದುಕು ನಡೆಸುವಷ್ಟು ಲಾಭ ಗಿಟ್ಟುತ್ತಿಲ್ಲ. ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ಇಲ್ಲ. ವಿಧಿ ಇಲ್ಲದೆ ಇದನ್ನು ಬಿಟ್ಟು ಬೇರೆ ಕೆಲಸ ಮಾಡಿಕೊಂಡಿ ದ್ದೇವೆ'- ಇದು ರಾಮನಗರದ ನಾಲಬಂದವಾಡಿಯ ಮುನೀರ್ ಅಹಮದ್ ಬೇಸರದ ನುಡಿ.
ಮನೀರ್ ಅಹಮದ್ ಅವರ ಮನೆ ಎದುರಿನ ನೂಲು ಬಿಚ್ಚಾಣಿಕೆ ಘಟಕದಲ್ಲಿದ್ದ ತುಕ್ಕು ಹಿಡಿದ ರೀಲಿಂಗ್ ಯಂತ್ರಗಳು, ಬಲೆ ಕಟ್ಟಿದ್ದ ಆವರಣ, ದೂಳು ಆವರಿಸಿದ ಪರಿಕರಗಳು ರೀಲರ್ಸ್ ಉದ್ದಿಮೆಯ ಸ್ಥಿತಿಗತಿಗೆ ರೂಪಕದಂತೆ ಕಾಣುತ್ತಿದ್ದವು.
ರೇಷ್ಮೆ ಬೆಳೆಗಾರರು, ನೂಲು ಬಿಚ್ಚಾಣಿಕೆದಾರರು (ರೀಲರ್ಸ್), ನೇಯ್ಗೆಯವರು ರೇಷ್ಮೆ ಉದ್ದಿಮೆಯ ಆಧಾರ ಸ್ತಂಭಗಳು. ಈ ಸ್ತಂಭಗಳಲ್ಲಿ ಪ್ರಮುಖ ಎನಿಸಿರುವ ರೀಲರ್ಸ್ಗಳ ಬದುಕು ರೇಷ್ಮೆಗೂಡು ಬೇಯಿಸುವ ಬಾಣಲೆಯಲ್ಲಿ ಬೇಯುತ್ತಿದೆ. ರೇಷ್ಮೆ ಗೂಡೊಳಗಿನ ಹುಳುಗಳು ವಿಲವಿಲನೆ ಒದ್ದಾಡುವಂತೆ ರೀಲರ್ಸ್ಗಳು ಸಹ ಸಂಕಷ್ಟಗಳ ಸುಳಿಯಲ್ಲಿ ಬಳಲುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ) ಹಾಗೂ ಚಾಮರಾಜನಗರ ಜಿಲ್ಲೆಯ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ರೀಲರ್ಸ್ಗಳು ವಹಿವಾಟು ನಡೆಸುತ್ತಾರೆ. ಮಾರುಕಟ್ಟೆಗಳಲ್ಲಿ ಇ-ಹರಾಜಿನ ಮೂಲಕ ರೈತರಿಂದ ರೇಷ್ಮೆಗೂಡು ಖರೀದಿಸಿ, ಗೂಡುಗಳನ್ನು ಬೇಯಿಸಿ ನೂಲು ತೆಗೆಯುತ್ತಾರೆ. ಕುಟುಂಬದ ಸದಸ್ಯರ ಸಹಕಾರದಲ್ಲಿಯೇ ಬಹಳಷ್ಟು ರೀಲರ್ಸ್ಗಳು ನೂಲು ಬಿಚ್ಚುವ ಕೆಲಸ ಮಾಡಿದರೆ, ಮತ್ತಷ್ಟು ಮಂದಿ ಸಣ್ಣ ಕೂಲಿಯಾಳುಗಳಿಂದ ಉದ್ದಿಮೆ ನಡೆಸುತ್ತಿದ್ದಾರೆ.
ರೇಷ್ಮೆಗೂಡು ಮಾರುಕಟ್ಟೆಗೆ ₹2 ಸಾವಿರ ಪಾವತಿಸಿ ಗೂಡು ಖರೀದಿಗೆ ರೀಲರ್ಸ್ಗಳು ಸದಸ್ಯತ್ವ ಪಡೆದುಕೊಳ್ಳುತ್ತಾರೆ. ಮೂರು ವರ್ಷಗಳಿಗೆ ಒಮ್ಮೆ ರೀಲರ್ಸ್ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಆದರೆ ವರ್ಷದಿಂದ ವರ್ಷಕ್ಕೆ ಸದಸ್ಯತ್ವ ನವೀಕರಣ ಮಾಡುವವರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ 7 ವರ್ಷಗಳ ಹಿಂದೆ 20 ಸಾವಿರದಷ್ಟಿದ್ದ ರೀಲರ್ಸ್ಗಳು ಈಗ ಆರೇಳು ಸಾವಿರಕ್ಕೆ ಇಳಿದಿದ್ದಾರೆ. ಆ ಆರೇಳು ಸಾವಿರದಲ್ಲಿ ಸಕ್ರಿಯವಾಗಿ ವಹಿವಾಟಿನಲ್ಲಿ ಭಾಗವಹಿಸುವವರು ಮತ್ತಷ್ಟು ಕಡಿಮೆಯಾಗಿದ್ದಾರೆ.
ರೇಷ್ಮೆಗೂಡಿನ ಬೆಲೆ ಏರಿಳಿತ, ಕಾರ್ಮಿಕರ ಕೊರತೆ, ಮಾರಾಟವಾದ ರೇಷ್ಮೆನೂಲಿನ ಹಣ ಸಮಯಕ್ಕೆ ಸರಿಯಾಗಿ ದೊರೆಯದಿರುವುದು, ಮಾರುಕಟ್ಟೆ ಸಮಸ್ಯೆಯಿಂದಾಗಿ ವೃತ್ತಿಯಿಂದ ವಿಮುಖರಾಗಲು ಮುಖ್ಯ ಕಾರಣ. ರೀಲರ್ಸ್ ವೃತ್ತಿ ತೊರೆದ ಒಬ್ಬೊರದ್ದು ಒಂದೊಂದು ರೀತಿಯ ನಷ್ಟ, ಕಷ್ಟದ ಕಥೆಗಳಿವೆ. ಈಗ ವೃತ್ತಿಯಲ್ಲಿ ಸಕ್ರಿಯವಾಗಿರುವವರನ್ನು ಕೇಳಿದರೆ, ಅವರು ಮತ್ತಷ್ಟು ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ.
'ಮುಂಚೆ ಕಾರ್ಮಿಕರು ಕೆಲಸಕ್ಕಾಗಿ ಹುಡುಕಿಕೊಂಡು ಬರುತ್ತಿದ್ದರು. ರೇಷ್ಮೆಗೂಡು ತಂದು ನೂಲು ತೆಗೆದು ಮಾರಾಟ ಮಾಡಿದರೆ ನಮಗೂ ಒಂದಿಷ್ಟು ಹಣ ಉಳಿಯುತ್ತಿತ್ತು. ಯಾವಾಗ ಆಟೊಮ್ಯಾಟಿಕ್ ರೀಲಿಂಗ್ ಯಂತ್ರಗಳು (ಎಆರ್ಎಂ) ಬಂದವೊ ಅಲ್ಲಿಗೆ ನಮ್ಮಂತಹ ಸಣ್ಣ ಪ್ರಮಾಣದ ಬಿಚ್ಚಾಣಿಕೆದಾರರು ಬೀದಿಗೆ ಬಂದೆವು. ಲಕ್ಷ-ಕೋಟಿ ಬಂಡವಾಳ ಹಾಕುವವರಿಗೆ ಮಾತ್ರ ಇಲ್ಲಿ ಲಾಭ. ನಮ್ಮಂತಹವರಿಗೆ ಅಲ್ಲಿಂದ ಅಲ್ಲಿಗೇ ಸರಿ ಹೋಗುತ್ತದೆ' ಎಂದು ರೀಲರ್ಸ್ ಕೆಲಸದ ಆಳ ಅಗಲ ವಿವರಿಸುತ್ತಾರೆ ರಾಮನಗರದ ಮನೀರ್ ಅಹಮದ್. ಏಳು ವರ್ಷದ ಹಿಂದೆ ರೀಲರ್ಸ್ ವಹಿವಾಟು ತೊರೆದಿರುವ ಅವರು, ಸದ್ಯ ಪೀಠೋಪಕರಣ ಮಾರಾಟದಲ್ಲಿ ತೊಡಗಿದ್ದಾರೆ.

ಶಿಡ್ಲಘಟ್ಟದಲ್ಲಿ ರೇಷ್ಮೆ ನೂಲು ತೆಗೆಯುತ್ತಿರುವು ಬಿಚ್ಚಾಣಿಕೆದಾರರು
ತಲೆಮಾರುಗಳ ಉದ್ಯಮ ಸ್ಥಗಿತ: 'ನಮ್ಮ ತಾತ, ಮುತ್ತಾತನ ಕಾಲದಿಂದಲೂ ರೀಲಿಂಗ್ ಕೆಲಸ ಮಾಡುತ್ತಿದ್ದೇವೆ. ಮನೆಗೆ ಹೊಂದಿಕೊಂಡಂತೆ 8 ಬೇಸಿನ್ಗಳನ್ನು ಹಾಕಿದ್ದೆವು. ಹತ್ತಾರು ಮಂದಿ ಕೆಲಸಕ್ಕೆ ಬರುತ್ತಿದ್ದರು. ಹೊರಗಿನವರ ಜೊತೆಗೆ ಮನೆಯವರು ಸಹ ಚಿಕ್ಕಂದಿನಿಂದಲೇ ಈ ಕೆಲಸ ಕಲಿತು ತೊಡಗಿಸಿಕೊಳ್ಳುತ್ತಿದ್ದೆವು. ನಾನು 25 ವರ್ಷ ಹೆಣಗಾಡಿದೆ. ಆಟೊಮ್ಯಾಟಿಕ್ ಯಂತ್ರಗಳ ಎದುರು ನಾವು ಪೈಪೋಟಿ ಕೊಡಲಾಗಲಿಲ್ಲ' ಎಂದು ಐದು ವರ್ಷದ ಹಿಂದೆ ತಮ್ಮ ಘಟಕ ಮುಚ್ಚಿರುವ ರಾಮನಗರದ ಫಯಾಜ್ ಪಾಷ ಪರಿಸ್ಥಿತಿ ವಿವರಿಸಿದರು.
'ದೊಡ್ಡ ಬಿಚ್ಚಾಣಿಕೆ ಘಟಕಗಳಲ್ಲಿ ಕಾರ್ಮಿಕರಿಗೆ ದಿನಕ್ಕೆ ₹600ರಿಂದ ₹700 ಸಂಬಳ ನೀಡಲಾಗುತ್ತದೆ. ನಮ್ಮ ಸಾಮರ್ಥ್ಯಕ್ಕೆ ನಾವು ₹300ರಿಂದ ₹400 ಕೊಡುತ್ತಿದ್ದೆವು. ನಮ್ಮಲ್ಲಿಗೆ ಬರುವವರು ಕಡಿಮೆಯಾದರು. ಮಾರುಕಟ್ಟೆಯಿಂದ ಗೂಡು ಖರೀದಿ, ಸೌದೆ ಖರೀದಿ, ವಿದ್ಯುತ್ ಬಿಲ್, ಕೂಲಿ ಹಾಗೂ ಇತರ ನಿರ್ವಹಣೆ ವೆಚ್ಚ ಕಳೆದರೆ ನಮಗೆ ದಿನಕ್ಕೆ ಕನಿಷ್ಠ ₹1 ಸಾವಿರ ಉಳಿಯುವುದೂ ಕಷ್ಟವಾ ಗುತ್ತಿತ್ತು' ಎಂದು ವಹಿವಾಟು ಬಗ್ಗೆ ವಿವರಿಸಿದರು. ಶಿಡ್ಲಘಟ್ಟದ ರೆಹಮಾನ್, ರಾಮಕೃಷ್ಣಪ್ಪ, ಹೊಸಕೋಟೆಯ ಮಹಮ್ಮದ್ ರಫಿ ಸೇರಿದಂತೆ ಹಲವರು ಉದ್ದಿಮೆಯ ಸಂಕಷ್ಟಗಳನ್ನು ಇದೇ ರೀತಿ ತೆರೆದಿಡುತ್ತಾರೆ.
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ, ಎನ್.ಹೊಸಹಳ್ಳಿ, ಇಂಡಿಗನಹಾಳ, ಬೈಲನರಸಾಪುರ ಮೊದಲಾದ ಗ್ರಾಮಗಳಲ್ಲಿ ಒಂದು ಸಮಯದಲ್ಲಿ ಉಚ್ಛ್ರಾಯವಾಗಿ ನಡೆಯುತ್ತಿದ್ದ ರೀಲರ್ಸ್ ಉದ್ದಿಮೆ ಈಗ ನೆಲಕಚ್ಚಿದೆ. ಕೆಲವರು ಕಷ್ಟದಿಂದ ಉದ್ಯಮ ನಡೆಸುತ್ತಿದ್ದಾರೆ. ಕೋಲಾರ, ಕ್ಯಾಲನೂರು, ಶ್ರೀನಿವಾಸಪುರ ಭಾಗದಲ್ಲೂ ಇದೇ ಸ್ಥಿತಿ.
ಖರೀದಿಗೆ ಸಂಸ್ಥೆಯಿಲ್ಲ: ರೈತರು ಉತ್ಪಾದಿಸುವ ರೇಷ್ಮೆಗೂಡು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಇದೆ. ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಸಿಲ್ಕ್ ಪಾರ್ಕ್ಗಳ ನಿರ್ಮಾಣಕ್ಕೂ ಸರ್ಕಾರ ಮನಸ್ಸು ಮಾಡಿದೆ. ಆದರೆ ರೀಲರ್ಸ್ಗಳು ಉತ್ಪಾದಿಸುವ ರೇಷ್ಮೆ ನೂಲು ಖರೀದಿಗೆ ನಿರ್ದಿಷ್ಟ ವ್ಯವಸ್ಥೆ, ಸಂಸ್ಥೆ ಇಲ್ಲ.
ಈ ಹಿಂದೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್ಎಂಬಿ) ರೇಷ್ಮೆ ಖರೀದಿಸುತ್ತಿತ್ತು. ಇದರಿಂದ ರೀಲರ್ಸ್ಗಳಿಗೆ ಆರ್ಥಿಕ ಅನುಕೂಲವೂ ಇತ್ತು. ಮಂಡಳಿ ಖರೀದಿ ನಿಲ್ಲಿಸಿ ಹಲವು ವರ್ಷಗಳೇ ಆಗಿವೆ. ಕೆಎಸ್ಎಂಬಿ ಖರೀದಿ ನಿಲ್ಲಿಸಿದ್ದೇ ರೀಲರ್ಸ್ಗಳ ಬದುಕಿಗೆ ಮೊದಲ ಪೆಟ್ಟು. ಕೋವಿಡ್ ಸಂದರ್ಭದಲ್ಲಿ ಮಾತ್ರ ಕೆಎಸ್ಎಂಬಿ ತಾತ್ಕಾಲಿಕವಾಗಿ ರೇಷ್ಮೆ ಖರೀದಿಸಿತು. ಇದು ಸಾಯುತ್ತಿದ್ದವರಿಗೆ ಗುಟುಕು ನೀರಿನ ಆಶ್ರಯ ಎನಿಸಿತು. ಆದರೆ ಕೋವಿಡ್ ನಂತರ ಮತ್ತೆ ಖರೀದಿ ನಿಲ್ಲಿಸಿದೆ. 'ರೇಷ್ಮೆ ಖರೀದಿಸಿ' ಎಂದು ರೇಷ್ಮೆ ಇಲಾಖೆ ಸಚಿವರಿಗೆ, ಮಂಡಳಿಯ ಅಧಿಕಾರಿಗಳಿಗೆ ರೀಲರ್ಸ್ಗಳು ನೀಡಿರುವ ಮನವಿಗಳು ಕಸದ ಬುಟ್ಟಿ ಸೇರಿವೆ.
'ರೇಷ್ಮೆಗೂಡು, ಟೊಮೆಟೊ, ತರಕಾರಿ, ಹೂವು ಹೀಗೆ ರೈತರ ಉತ್ಪನ್ನಗಳ ಖರೀದಿಗೆ ಎಪಿಎಂಸಿ ಸೇರಿದಂತೆ ಮಾರುಕಟ್ಟೆಗಳಿವೆ. ಆದರೆ ನಾವು ತೆಗೆದ ನೂಲನ್ನು ಯಾರಿಗೆ ಮಾರಾಟ ಮಾಡುವುದು? ಖಾಸಗಿ ಸಂಸ್ಥೆಗಳು ಬೇಕಾಬಿಟ್ಟಿ ದರಕ್ಕೆ ಖರೀದಿಸುತ್ತವೆ. ಅವರು ಹೇಳಿದ್ದೇ ದರ. ದೊಡ್ಡಬಳ್ಳಾಪುರ, ಬೆಂಗಳೂರು, ತಮಿಳುನಾಡು ಹೀಗೆ ಬೇರೆ ಬೇರೆ ಕಡೆಗಳಿಗೆ ಸೀರೆ ನೇಯ್ಗೆ ಮಾಡುವವರಿಗೆ ನೂಲು ಮಾರಾಟ ಮಾಡುತ್ತೇವೆ. ಅವರಿಂದ ಹಣ ಸರಿಯಾದ ಸಮಯಕ್ಕೆ ಬರುವುದಿಲ್ಲ. ನಮ್ಮ ಸಮಸ್ಯೆ ಗಳನ್ನು ಪರಿಹರಿಸುವಂತೆ ಶಿಡ್ಲಘಟ್ಟ ಮಾರುಕಟ್ಟೆಗೆ ಬಂದ ಮೇಲಧಿಕಾರಿಗಳಿಗೆ ಮತ್ತು ಜನಪ್ರತಿ ನಿಧಿಗಳಿಗೆ ಮನವಿ ಮಾಡಿದ್ದೇವೆ. ಎಷ್ಟೇ ಮನವಿ ಮಾಡಿದರೂ ಉಪಯೋಗವಾಗಿಲ್ಲ' ಎನ್ನುತ್ತಾರೆ ಶಿಡ್ಲಘಟ್ಟ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್.
ಘೋಷಣೆಯಾಗಿಯೇ ಉಳಿದ ಸಾಲ: ಶೂನ್ಯ ಬಡ್ಡಿ ದರದಲ್ಲಿ ರೀಲರ್ಸ್ಗಳಿಗೆ ₹5 ಲಕ್ಷದವರೆಗೆ ಸಾಲ ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಆದರೆ ಎಷ್ಟು ಮಂದಿ ಸಾಲ ಪಡೆದಿದ್ದಾರೆ ಎಂದು ನೋಡಿದರೆ ನಿರಾಸೆ ಎದ್ದು ಕಾಣುತ್ತದೆ. ಇಂದಿಗೂ ಈ ಸೌಲಭ್ಯ ಕನಿಷ್ಠ ಮಟ್ಟದಲ್ಲಿಯೂ ರೀಲರ್ಸ್ಗಳಿಗೆ ದೊರೆಯುತ್ತಿಲ್ಲ.
ವಹಿವಾಟಿಗೆ ನಿತ್ಯವೂ ಹಣಕಾಸು ಅಗತ್ಯ. ನಮ್ಮ ಬಳಿ ಇರುವ ರೇಷ್ಮೆಯನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯು ಅಡವಿಟ್ಟುಕೊಂಡು 'ಗಿರವಿ ಸಾಲ' ನೀಡಬೇಕು ಎಂದು ರೀಲರ್ಸ್ಗಳು ಕೋರಿದರೂ ಮನ್ನಣೆ ದೊರೆತಿಲ್ಲ. ಖರೀದಿ, ಅಡಮಾನದ ವಿಚಾರವಾಗಿ ನಮ್ಮ ಕೂಗು ಸರ್ಕಾರವನ್ನು ಕೊಂಚವೂ ಅಲುಗಾಡಿ
ಸುತ್ತಿಲ್ಲ ಎಂಬುದು ರೀಲರ್ಸ್ಗಳಲ್ಲಿ ಅಸಮಾಧಾನ ಮಡುಗಟ್ಟುವಂತೆ ಮಾಡಿದೆ.
ಮಧ್ಯಮ ವರ್ಗದವರು ನಡೆಸುವ ಸಣ್ಣ ಉದ್ಯಮಗಳನ್ನು ಉಳಿಸಲು ಸರ್ಕಾರ ಯಾವುದೇ ಸೌಲಭ್ಯಗಳನ್ನು ಕೊಡುವುದಿಲ್ಲ. ಸಾಲ ಸೌಲಭ್ಯ, ಸಹಾಯಧನ ಸೇರಿದಂತೆ ಏನೂ ಸಿಗದು. ಮಾರುಕಟ್ಟೆಯಲ್ಲಿ ರೇಷ್ಮೆ ಮಾರಾಟ ಹಾಗೂ ಖರೀದಿ ಸಂಪೂರ್ಣ ಆನ್ಲೈನ್ ಮೂಲಕ ನಡೆಯುತ್ತಿದ್ದರೂ ಬಹಳಷ್ಟು ಮಾರುಕಟ್ಟೆ ಪ್ರಾಂಗಣದಲ್ಲಿ ಬ್ಯಾಂಕ್ ಹಾಗೂ ಎಟಿಎಂ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
'ರಾಮನಗರ ಮಾರುಕಟ್ಟೆಗೆ ಹೊರರಾಜ್ಯ ಗಳಿಂದಲೂ ರೈತರು ಗೂಡು ತರುತ್ತಾರೆ. ರೀಲರ್ಸ್ಗಳು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಗೂಡುಗಳನ್ನು ಖರೀದಿಸುತ್ತಾರೆ' ಎಂದು ರೇಷ್ಮೆ ಮಾರುಕಟ್ಟೆ ಅಧಿಕಾರಿಗಳು ಹೇಳುತ್ತಾರೆ. ಆದರೆ ರೀಲರ್ಸ್ಗಳ ಸಮಸ್ಯೆ ಪರಿಹಾರದ ಬಗ್ಗೆ ಮಾತನ್ನಾಡುವುದಿಲ್ಲ.

ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಯಲ್ಲಿನ ವಹಿವಾಟು
ಕಾರ್ಮಿಕರ ಸಮಸ್ಯೆ: ಈ ಹಿಂದೆ ರಾಜ್ಯದ ರೀಲರ್ಸ್ ಉದ್ದಿಮೆಯಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಈಗ ಕಾರ್ಮಿಕರ ಕೊರತೆ ತೀವ್ರವಾಗಿದೆ. ಇದರಿಂದ ಉದ್ದಿಮೆಗಳು ಬಾಗಿಲು ಹಾಕುತ್ತಿವೆ. ಇದರಿಂದ ಹೊರಬರಲು ಕೆಲವೇ ಮಂದಿ ಸ್ವಯಂಚಾಲಿತ ಯಂತ್ರಗಳಿಗೆ ದೊಡ್ಡ ಬಂಡವಾಳ ಹಾಕಿ ನಡೆಸುತ್ತಿದ್ದಾರೆ.
ಬೆಂಕಿ, ಸುಡುವ ಬಿಸಿನೀರು, ಹೊಗೆ, ರೇಷ್ಮೆ ಗೂಡಿನ ವಾಸನೆಯಿಂದ ಉರಿಯೂತ, ಚರ್ಮ, ಕಣ್ಣು ಉರಿ, ಎದೆ ಉರಿ, ಕೈಕಾಲು ನೋವು, ಶ್ವಾಸಕೋಶ ಮತ್ತಿತರ ಕಾಯಿಲೆಗಳಿಗೆ ಕಾರ್ಮಿಕರು ತುತ್ತಾಗುವ ಸಾಧ್ಯತೆ ಇದೆ. ಇಂತಹ ಆರೋಗ್ಯ ಸಮಸ್ಯೆಯಿಂದಾಗಿ ಬೇಸಿಗೆಯ ದಿನಗಳಲ್ಲಿ ನೂಲು ಬಿಚ್ಚಾಣಿಕೆ ಕೆಲಸದಲ್ಲಿ ತೊಡಗಲು ಭಯಪಟ್ಟು ಹಿಂದೇಟು ಹಾಕುತ್ತಿದ್ದಾರೆ. ಉದ್ದಿಮೆ ಕಷ್ಟದಲ್ಲಿರುವುದರಿಂದ ಕೌಶಲವುಳ್ಳ ಕಾರ್ಮಿಕರ ಕೊರತೆಯೂ ಬೆನ್ನೇರಿದೆ.
ಹೊರ ರಾಜ್ಯಗಳ ಕಾರ್ಮಿಕರನ್ನು ಕರೆ ತಂದು ಮುಂಗಡವಾಗಿ ಲಕ್ಷಾಂತರ ರೂಪಾಯಿ ಹಣ ನೀಡಿ ಕೆಲಸ ಮಾಡಿಸುತ್ತಿದ್ದೆವು. ಆದರೆ ಕೆಲವರು ಇವರಿಗೆ 'ಜೀತದಾಳು'ಗಳು ಎನ್ನುವ ಹಣೆಪಟ್ಟಿ ಕಟ್ಟಿದರು. ಇದರಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ರೀಲರ್ಸ್ಗಳು ಹೇಳುತ್ತಾರೆ.
'ನನ್ನ ಘಟಕದಲ್ಲಿ 6 ಬೇಸಿನ್ಗಳಿದ್ದು ಕಾರ್ಮಿಕರ ಕೊರತೆಯ ಕಾರಣ 3 ಮಾತ್ರ ಚಾಲನೆಯಲ್ಲಿವೆ. ಅವರಿಗೆ ಪ್ರತಿ ವರ್ಷ ₹50 ಸಾವಿರದಿಂದ ₹1 ಲಕ್ಷದಷ್ಟು ಮುಂಗಡ ಹಣ ಕೊಟ್ಟು ನಿತ್ಯ ₹400 ಕೂಲಿ ಕೊಡುತ್ತೇವೆ. ಮೇಲ್ವಿಚಾರಕನಿಗೆ ₹500 ಕೂಲಿ ಇದೆ. ಆದರೂ ಕಾರ್ಮಿಕರು ಸಿಗುತ್ತಿಲ್ಲ. ಯುವಜನರು ಈ ಕೆಲಸದತ್ತ ಸುಳಿಯುತ್ತಿಲ್ಲ. ಉದ್ಯಮ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿದ್ದೇವೆ' ಎಂದು ಬಿಚ್ಚಾಣಿಕೆ ಉದ್ಯಮ ನಡೆಸುತ್ತಿರುವ ಹಾಗೂ ರಾಮನಗರದ ಹಿಂದೂ ನೂಲು ಬಿಚ್ಚಣಿ ಕೆದಾರರ ಸಹಕಾರ ಸಂಘದ ನಿರ್ದೇಶಕರಾದ ವಿ.ಎಸ್.ಶ್ರೀನಿವಾಸ್, ರಮೇಶ್ ತಿಳಿಸಿದರು.
'ಮುಂಚೆ ಬೇರೆ ಊರುಗಳಿಂದ ಬಿಚ್ಚಣಿಕೆ ಘಟಕಗಳಲ್ಲಿ ಕೆಲಸ ಮಾಡಲು ವಲಸೆ ಬರುತ್ತಿದ್ದರು. ಮನೆ ಮಂದಿಯೆಲ್ಲಾ ಕೆಲಸ ಮಾಡುತ್ತಿದ್ದರು. ಮಕ್ಕಳು ಸಹ ಹುಳು ಆಯುವುದರಿಂದ ಕೆಲಸ ಶುರು ಮಾಡಿ ನೂಲು ತೆಗೆಯುವಷ್ಟರ ಮಟ್ಟಿಗೆ ಪಳಗುತ್ತಿದ್ದರು. ಬಾಲ ಕಾರ್ಮಿಕ ಪದ್ಧತಿ ನಿಷೇಧ ಜಾರಿಯಾದ ಬಳಿಕ ಮಕ್ಕಳು ಕೆಲಸ ಮಾಡಿದರೆ ಅಧಿಕಾರಿಗಳು ಕೆಂಗಣ್ಣು ಬೀರುತ್ತಾರೆ. ಆಗ ಹಬ್ಬಗಳು ಬಂದರೆ ಬಿಡುವಿಲ್ಲದ ಕೆಲಸ ಇರುತ್ತಿತ್ತು. ಈಗ ಆ ಸ್ಥಿತಿ ಇಲ್ಲ' ಎಂದು ನೆನಪಿಸಿಕೊಂಡರು.
'ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮೂಲಕ ರೇಷ್ಮೆ ಖರೀದಿಸಬೇಕು, ಗಿರವಿ ಸಾಲ ನೀಡಬೇಕು- ಇವು ರೀಲರ್ಸ್ಗಳ ಪ್ರಮುಖ ಮನವಿಗಳು. ಈ ಕೂಗು ತಣಿಸಲು ಆಗೊಮ್ಮೆ ಈಗೊಮ್ಮೆ ರೇಷ್ಮೆ ಇಲಾಖೆ ಸಚಿವರು ರೀಲರ್ಸ್ ಅಸೋಸಿಯೇಷನ್ ಸಭೆ ನಡೆಸುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ.

ರಾಮನಗರದ ಮದೀನಾ ಮಸೀದಿ ಎಕ್ಸ್ಟೆನ್ಷನ್ ಮೊಹಲ್ಲಾದ ಫಯಾಜ್ ಪಾಷ ಅವರ ನೂಲು ಬಿಚ್ಚಣಿಕೆ ಘಟಕದ ಸ್ಥಿತಿ
ಮೂರು ವರ್ಷಗಳಲ್ಲಿ ₹ 2 ಸಾವಿರ ಕೋಟಿ ನೆರವು: ಕರ್ನಾಟಕದಲ್ಲಿ ರೇಷ್ಮೆ ಉದ್ಯಮ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ 'ಸಿಲ್ಕ್ ಸಮಗ್ರ-2' ಯೋಜನೆಯಡಿ ₹ 2,235.86 ಕೋಟಿ ನೆರವು ನೀಡಿದೆ. ಈ ನೆರವು ಚಾಕಿ ಕೇಂದ್ರಗಳು, ರೀಲಿಂಗ್, ನೇಯ್ಗೆ ಘಟಕಗಳು, ಸಾಮಾನ್ಯ ಸೌಲಭ್ಯ ಕೇಂದ್ರಗಳು ಹಾಗೂ ರೇಷ್ಮೆ ಕ್ಷೇತ್ರದ ವಿವಿಧ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಕೇಂದ್ರ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಲೋಕಸಭೆಯಲ್ಲಿ 'ಸಿಲ್ಕ್ ಸಮಗ್ರ-2' ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾದ ಪಬಿತ್ರ ಮಾರ್ಗರಿಟಾ ಉತ್ತರಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ 28,500 ಫಲಾನುಭವಿಗಳಿಗೆ ರೀಲಿಂಗ್, ನೇಯ್ಗೆ, ಕೈಮಗ್ಗ, ಆಧುನಿಕ ಯಂತ್ರೋಪಕರಣಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ₹ 352.64 ಕೋಟಿ ನೆರವು ಒದಗಿಸಲಾಗಿದೆ. 12,789 ಮಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 1,23,263 ಹೆಕ್ಟೇರ್ನಲ್ಲಿ ಹಿಪ್ಪು ನೇರಳೆ (ರೇಷ್ಮೆ ಸೊಪ್ಪು) ಬೆಳೆಯಲಾಗುತ್ತಿದೆ. 1,48,704 ರೈತರು ರೇಷ್ಮೆ ಕೃಷಿಯಲ್ಲಿ ನಿರತರಾಗಿದ್ದಾರೆ. 2009-10ರಲ್ಲಿ ಮಲ್ಬೆರಿ ರೇಷ್ಮೆ ಉತ್ಪಾದನೆ ರಾಜ್ಯದಲ್ಲಿ 7,360 ಟನ್ ಇತ್ತು. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಈಗ 1,32,76 ಟನ್ ತಲುಪಿದೆ. ಬೈವೋಲ್ಟಿನ್ ರೇಷ್ಮೆ 2009-10ರಲ್ಲಿ ರಾಜ್ಯದಲ್ಲಿ 335 ಟನ್ ಉತ್ಪಾದನೆ ಆಗುತ್ತಿತ್ತು. ಈಗ ಅದು 2,959 ಟನ್ಗೆ ತಲುಪಿದೆ.
ಒಂದೆಡೆ ರೇಷ್ಮೆ ಉತ್ಪಾದನೆ ಹೆಚ್ಚುತ್ತಿದೆ. ಮತ್ತೊಂದು ಕಡೆ ಹಲವು ಸಂಕಷ್ಟಗಳು, ಬೆಲೆ ಏರಿಳಿತಗಳಲ್ಲಿ ಸಾಗುತ್ತಿರುವ ರೀಲರ್ಸ್ಗಳು ಸರ್ಕಾರದ ಆಸರೆ ಎದುರು ನೋಡುತ್ತಿದ್ದಾರೆ
'ಶೇ 1ರಷ್ಟೂ ಪರಿಹಾರವಿಲ್ಲ'
'ನಾನು ಮೂರು ವರ್ಷ ಅಸೋಸಿಯೇಷನ್ಗೆ ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಈಗ ನಾಲ್ಕು ವರ್ಷದಿಂದ ಅಧ್ಯಕ್ಷನಾಗಿದ್ದೇನೆ. ಹತ್ತಾರು ಬಾರಿ ಸರ್ಕಾರಕ್ಕೆ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಶೇ 1ರಷ್ಟೂ ಸಮಸ್ಯೆಗಳು ಪರಿಹಾರವಾಗಿಲ್ಲ' ಎಂದು ರೀಲರ್ಸ್ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಜಬೀವುಲ್ಲಾ ಘೋರಿ ಅಸಮಾಧಾನ ವ್ಯಕ್ತಪಡಿಸುವರು.
ಸರ್ಕಾರ ನಮ್ಮ ಸಮಸ್ಯೆಗಳನ್ನು ಗಮನಿಸುತ್ತಲೇ ಇಲ್ಲ. ರೇಷ್ಮೆ ನೂಲಿಗೆ ಖಾಸಗಿಯವರು ನಿಗದಿಗೊಳಿಸಿದ್ದೇ ದರವಾಗಿದೆ. ರೇಷ್ಮೆ ಮಾರಾಟ ಮಂಡಳಿಯವರು 'ಸಭೆ ಕರೆಯುತ್ತೇವೆ, ನಿಮ್ಮ ಸಮಸ್ಯೆ ಹೇಳಿ' ಎನ್ನುತ್ತಾರೆ. ಸರ್ಕಾರ ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತೇವೆ ಎಂದಿತು. ಆದರೆ ಆ ಸಾಲ ಪಡೆಯಲು ಆಸ್ತಿ ಅಡವಿಡಬೇಕು. ಇದರಿಂದ ಸಾಲ ಸೌಲಭ್ಯವೂ ದೊರೆಯುತ್ತಿಲ್ಲ ಎನ್ನುತ್ತಾರೆ.
ರೀಲರ್ಸ್ ಸೊಸೈಟಿಗಳಿಗೆ ಸಾಲನೀಡಿ ಎಂದು ಕೋರಿದರೂ ಉಪಯೋಗವಾಗಿಲ್ಲ. ಮುಂದಿನ ದಿನಗಳಲ್ಲಿ ಇದೇ ಸ್ಥಿತಿ ಮುಂದುವರಿದರೆ ಮತ್ತಷ್ಟು ಮಂದಿ ವೃತ್ತಿಯಿಂದ ದೂರವಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸುವರು.

ರಾಟೆಯಿಂದ ತೆಗೆದಿರುವ ರೇಷ್ಮೆನೂಲು
ಧರ್ಮ ಆಧಾರಿತ ಒಡಕು
ರಾಜ್ಯದಲ್ಲಿ ರೀಲರ್ಸ್ ವೃತ್ತಿಯಲ್ಲಿ ತೊಡಗಿರುವವರಲ್ಲಿ ಬಹುತೇಕರು ಮುಸ್ಲಿಮರು. ರಾಜಕೀಯ ಮತ್ತು ಧರ್ಮ ಈ ಉದ್ದಿಮೆಯನ್ನೂ ಪ್ರವೇಶಿಸಿದೆ.
1992ರಲ್ಲಿ ದೇಶದಲ್ಲಿ ರಾಮ ಮಂದಿರ ಹೋರಾಟ ಉಚ್ಚ್ರಾಯ ಸ್ಥಿತಿ ತಲುಪಿದಾಗ ರಾಮನಗರದ ಬಿಚ್ಚಣಿಕೆದಾರರ ಸಂಘದಲ್ಲಿ ಧರ್ಮ ಆಧಾರಿತ ಒಡಕು ಮೂಡಿತು. ಉದ್ಯಮದಲ್ಲಿ ಮುಸ್ಲಿಮರ ಪ್ರಾಬಲ್ಯ ವಿರೋಧಿಸಿ, ಮೂಲ ಸಂಘಟನೆ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ಗೆ ಪರ್ಯಾಯವಾಗಿ ಹಿಂದೂ ನೂಲು ಬಿಚ್ಚಣಿಕೆದಾರರ ಸಹಕಾರ ಸಂಘ ಜನ್ಮ ತಾಳಿತು. ಇದೀಗ ಅಸೋಸಿಯೇಷನ್ ಮತ್ತೆರಡು ಹೋಳಾಗಿದೆ.
ರಾಜ್ಯದಲ್ಲಿ ಹಿಜಾಬ್ ವಿಚಾರ ಮುನ್ನಲೆಗೆ ಬಂದಾಗ ಇದನ್ನು ವಿರೋಧಿಸಿ ರೀಲರ್ಸ್ ಅಸೋಸಿಯೇಷನ್ಗಳು ವಿವಿಧ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ವಹಿವಾಟು ಸ್ಥಗಿತಗೊಳಿಸಿದ ನಿದರ್ಶನಗಳಿವೆ.
'ಆರೋಗ್ಯಕ್ಕಾಗಿ ಸ್ಮಾರ್ಟ್ ಕಾರ್ಡ್'
ನೂಲು ಬಿಚ್ಚಾಣಿಕೆ ಕೆಲಸದಲ್ಲಿ ತೊಡಗಿರುವವರ ಆರೋಗ್ಯದ ಹಿತಕ್ಕಾಗಿ 'ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್' ನೀಡುತ್ತಿದ್ದೇವೆ ಎಂದು ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಉಮೇಶ್ ಹೇಳುತ್ತಾರೆ.
ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೆ ₹50 ಸಾವಿರ ವರೆಗೆ ಹಣ ಮರು ಪಾವತಿ ಆಗಲಿದೆ. ನಿಧನರಾದರೆ ₹2 ಲಕ್ಷ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಬಡ್ಡಿ ರಹಿತ ಸಾಲ ನೀಡಬೇಕು ಎನ್ನುವುದು ರೀಲರ್ಸ್ಗಳ ಮುಖ್ಯ ಬೇಡಿಕೆ. ಶೇ 50ರಷ್ಟು ಬಡ್ಡಿಯನ್ನು ಸರ್ಕಾರ ಮತ್ತು ಶೇ 50ರಷ್ಟನ್ನು ಸಾಲ ಪಡೆಯುವವರು ಭರಿಸಬೇಕು ಎನ್ನುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ರೇಷ್ಮೆ ಉದ್ಯಮದ ಕಥೆ ಹೇಳುವೆ ಹಂಪಾಪುರ ಕಾರ್ಖಾನೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿರುವ ಸರ್ಕಾರಿ ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಖಾನೆಯ ಇಂದಿನ ಸ್ಥಿತಿ ನೂಲು ಬಿಚ್ಚಾಣಿಕೆ ಮತ್ತು ರೇಷ್ಮೆ ಉದ್ಯಮದ ಸ್ಥಿತಿಗತಿಯ ಕನ್ನಡಿಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ 1980-90ರ ದಶಕದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ರೇಷ್ಮೆ ಕೃಷಿ ಪ್ರಸ್ತುತ ಅವಸಾನದ ಅಂಚು ತಲುಪಿದೆ. ಗುಣಮಟ್ಟದ ರೇಷ್ಮೆ ಉತ್ಪಾದನೆ ಆಗುತ್ತಿದ್ದ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಈಗ ಬೆರಳೆಣಿಕೆ ರೇಷ್ಮೆ ಬೆಳೆಗಾರರು ಮಾತ್ರ ಉಳಿದಿದ್ದಾರೆ. ರೇಷ್ಮೆ ಇಲಾಖೆ ಒಡೆತನದಲ್ಲಿದ್ದ ಸಾವಿರಾರು ಎಕರೆ ಜಾಗ ಅನ್ಯ ಇಲಾಖೆಗಳ ಪಾಲಾಗಿದೆ. ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಖಾನೆಗಳು ಸದ್ದು ನಿಲ್ಲಿಸಿ ದಶಕಗಳು ಕಳೆದಿವೆ. ಕಣ್ಣು ಹಾಯಿಸಿದಷ್ಟು ನಿಲುಕುತ್ತಿದ್ದ ರೇಷ್ಮೆ ಕೃಷಿ ಕ್ಷೇತ್ರ ಸಂಪೂರ್ಣ ಮರೆಯಾಗಿದೆ.
ಹಂಪಾಪುರ ಗ್ರಾಮದಲ್ಲಿ 1938ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸರ್ಕಾರಿ ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಖಾನೆ ಆರಂಭಿಸಿತ್ತು. 3000ಕ್ಕೂ ಹೆಚ್ಚು ಕಾಯಂ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇಲ್ಲಿ ತಯಾರಾಗುತ್ತಿದ್ದ ಗುಣಮಟ್ಟದ ರೇಷ್ಮೆ ಇಂಗ್ಲೆಂಡ್ಗೆ ಹೆಚ್ಚಾಗಿ ರಫ್ತು ಆಗುತ್ತಿತ್ತು. ರೇಷ್ಮೆ ನೂಲುಗಳಿಂದ ತಯಾರಿಸಲಾಗುತ್ತಿದ್ದ ದಾರಗಳನ್ನು ಬ್ರಿಟಿಷರು ಪ್ಯಾರಾಚೂಟ್ ಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.
13 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆ 2013ರಲ್ಲಿ ಸ್ಥಗಿತವಾಗಿದೆ. 85 ವರ್ಷಗಳ ಕಾಲ ನಿರಂತರವಾಗಿ ರೇಷ್ಮೆ ಉತ್ಪಾದನೆ ಮಾಡಿದ್ದ ಕಾರ್ಖಾನೆ ಪಾಳುಬಿದ್ದಿದೆ. ನಿರ್ವಹಣೆ ಇಲ್ಲದೆ ಬಹುತೇಕ ಕಟ್ಟಡಗಳು ಕುಸಿದಿವೆ. ಯಂತ್ರಗಳು, ಪರಿಕರಗಳು ತುಕ್ಕು ಹಿಡಿದು ಹಾಳಾಗಿವೆ.
ಪೂರಕ ಮಾಹಿತಿ: ಓದೇಶ ಸಕಲೇಶಪುರ, ಬಾಲಚಂದ್ರ ಎಚ್., ಕೆ.ಓಂಕಾರ ಮೂರ್ತಿ

ರೇಷ್ಮೆ ಗೂಡು ಬೇಯಿಸುತ್ತಿರುವುದು

