Dailyhunt Logo
  • Light mode
    Follow system
    Dark mode
    • Play Story
    • App Story
ಒಳನೋಟ | ಕ್ವಾಂಟಮ್ ಕಂಪ್ಯೂಟಿಂಗ್: ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದೆ

ಒಳನೋಟ | ಕ್ವಾಂಟಮ್ ಕಂಪ್ಯೂಟಿಂಗ್: ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದೆ

ಬೆಂಗಳೂರು: ಹೀಗೊಂದು ಆಟವನ್ನು ಊಹಿಸಿಕೊಳ್ಳಿ. ಒಂದು ಆವರಣ. ಅದರೊಳಗೆ ಒಂಬತ್ತು ಕೊಠಡಿಗಳಿವೆ. ಇವುಗಳಲ್ಲಿ ಯಾವುದೋ ಒಂದು ಕೊಠಡಿಯ ಬಾಗಿಲಿನ ಹಿಂದೆ ಜಾಕ್‌ಪಾಟ್ ಇದೆ. ಅದು ಯಾವುದು ಎಂದು ಹುಡುಕಲು ಕಂಪ್ಯೂಟರ್‌ಗೆ 9 ಸೆಕೆಂಡುಗಳು ಬೇಕಾಗಬಹುದು ಎಂದಾದರೆ, ಕ್ವಾಂಟಮ್ ಕಂಪ್ಯೂಟಿಂಗ್‌ಗೆ ವರ್ಗಮೂಲದ ಆಧಾರದಲ್ಲಿ 3 ಸೆಕೆಂಡುಗಳು ಮಾತ್ರ ಸಾಕು.

ಭವಿಷ್ಯದ ತಂತ್ರಜ್ಞಾನ ಎಂದೇ ಬಿಂಬಿತವಾಗಿರುವ ಮತ್ತು ತಂತ್ರಜ್ಞಾನಕ್ಕೆ ಮಿಂಚಿನ ವೇಗ ತಂದುಕೊಡಬಲ್ಲ ಕ್ವಾಂಟಮ್ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆಯಲು ಸಿಲಿಕಾನ್ ನಗರಿ ಎಂದು ಕರೆಯಿಸಿಕೊಳ್ಳುತ್ತಿರುವ ಬೆಂಗಳೂರು ಮತ್ತು ಅಮರಾವತಿ ಈಗ ಹೂಡಿಕೆದಾರರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿವೆ. ಜತೆಗೆ ಭವಿಷ್ಯದ ಈ ತಂತ್ರಜ್ಞಾನದಲ್ಲಿ ದಿಗ್ಗಜರೆನಿಸಿಕೊಳ್ಳಲು ಪರಸ್ಪರ ಪೈಪೋಟಿಗೆ ಬಿದ್ದಿವೆ. ಅಬ್ಬರವೇನೋ ಜೋರಾಗಿದ್ದರೂ, ಫಲಿತಾಂಶ ನೋಡುವ ಕಾತರದಲ್ಲಿರುವ ತಂತ್ರಜ್ಞಾನ ಕ್ಷೇತ್ರ ಹಾಗೂ ಈ ತಂತ್ರಜ್ಞಾನದ ಆಧಾರದಲ್ಲಿ ಬದಲಾಗಲಿದೆ ಭವಿಷ್ಯ ಎಂಬ ಕನಸು ಹೊತ್ತು ನಿರೀಕ್ಷೆಯ ಕಣ್ಣುಗಳಿಂದ ನೋಡುತ್ತಿರುವ ಯುವ ಸಮುದಾಯ ಭರವಸೆಯ ಕಿರಣಗಳಿಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಜಗತ್ತನ್ನೇ ಮತ್ತೊಂದು ಯುಗದತ್ತ ಕೊಂಡೊಯ್ಯಬಲ್ಲ ಈ ಶ್ರೀಮಂತ ತಂತ್ರಜ್ಞಾನದ ಸಾಕಾರಕ್ಕೆ ಅಗತ್ಯವಿರುವ ಹೂಡಿಕೆಯ ವಿಷಯದಲ್ಲಿ ಕ್ವಾಂಟಮ್ ಕ್ಷೇತ್ರ ಬಡತನ ಎದುರಿಸುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.

ಹಾಗಿದ್ದರೆ ಕ್ವಾಂಟಮ್ ಕ್ಷೇತ್ರದಲ್ಲಿ ನಡೆಯುತ್ತಿರುವುದೇನು?

ಒಂದು ಕಾಲದಲ್ಲಿ ಕೊಠಡಿ ತುಂಬುವಷ್ಟು ದೊಡ್ಡದಿದ್ದ ಕಂಪ್ಯೂಟರ್‌ಗಳು ಇಂದು ಧರಿಸಬಹುದಾದ ಗ್ಯಾಜೆಟ್‌ ರೂಪದಲ್ಲಿ ದೈನಂದಿನ ಭಾಗವಾಗಿವೆ. ಕೃತಕ ಬುದ್ಧಿಮತ್ತೆ ಸೇರಿದಂತೆ ಕಳೆದ ಕೆಲವು ದಶಕಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರ ಅಚ್ಚರಿಯ ವೇಗದಲ್ಲಿ ಬೆಳವಣಿಗೆ ಕಂಡಿದ್ದರೂ, ಈಗ ವಿಜ್ಞಾನಿಗಳು ಮತ್ತೊಂದು ಮಹತ್ವದ ತಿರುವಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಆ ಹೊಸ ಅಧ್ಯಾಯವೇ ಕ್ವಾಂಟಮ್ ಕಂಪ್ಯೂಟಿಂಗ್.

ಇದು ಕೇವಲ ಮತ್ತೊಂದು ಹೊಸ ತಂತ್ರಜ್ಞಾನವಲ್ಲ. ಕ್ವಾಂಟಮ್ ಮೆಕ್ಯಾನಿಕ್ಸ್‌ನ ಗುಣಗಳನ್ನು ಬಳಸಿಕೊಂಡು, ಇಂದಿನ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್‌ಗಳಿಗೂ ಕಷ್ಟವಾಗುವ ಕೆಲವು ಸಂಕೀರ್ಣ ಸಮಸ್ಯೆಗಳನ್ನು ಹೊಸ ರೀತಿಯಲ್ಲಿ ಪರಿಹರಿಸುವ ಸಾಮರ್ಥ್ಯ ಹೊಂದಿರುವ ಮುಂದಿನ ತಲೆಮಾರಿನ ಗಣಕ ವ್ಯವಸ್ಥೆ ಇದಾಗಿದೆ.

ಔಷಧ ಸಂಶೋಧನೆ, ಹೊಸ ವಿನ್ಯಾಸ, ಹವಾಮಾನ ದಾಖಲೆ, ಹಣಕಾಸು, ಸೈಬರ್ ಸುರಕ್ಷತೆ, ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದರ ಬಳಕೆಯ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕ್ಯಾನ್ಸರ್, ಮಧುಮೇಹದಂತ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧಕ್ಕಾಗಿ ಹತ್ತಾರು ವರ್ಷಗಳ ಬದಲು, ಕಡಿಮೆ ಸಮಯದಲ್ಲಿ ಸಿದ್ಧವಾಗಲು ನೆರವಾಗುವ ತಂತ್ರಜ್ಞಾನ ಎಂದೇ ಬಿಂಬಿತವಾಗಿದೆ. ಸಂಶೋಧನೆಗಳೂ ನಡೆಯುತ್ತಿವೆ. ಆದರೆ ಅದರ ಸಾಕಾರ ಮಾತ್ರ ಸೂಪರ್‌ ಅಥವಾ ಕ್ವಾಂಟಮ್‌ ಕಂಪ್ಯೂಟರ್‌ ವೇಗದಲ್ಲಿಲ್ಲ ಎಂಬುದು ವಾಸ್ತವ.

ಕ್ವಾಂಟಮ್ ಕಂಪ್ಯೂಟರ್‌ನ ಮೂಲ ಘಟಕ 'ಕ್ಯೂಬಿಟ್'. 100 ಕ್ಯೂಬಿಟ್ ಇರುವ ಕಂಪ್ಯೂಟರ್ ಎಂದರೆ 50 ಕ್ಯೂಬಿಟ್ ಇರುವ ಕಂಪ್ಯೂಟರ್‌ಗಿಂತ ಎರಡು ಪಟ್ಟು ಶಕ್ತಿಶಾಲಿ ಎಂದಲ್ಲ. ಕ್ಯೂಬಿಟ್‌ಗಳ ಸಂಖ್ಯೆಯ ಜತೆಗೆ ಅವುಗಳ ಗುಣಮಟ್ಟ, ಲೋಪದೋಷಗಳ ದರ, ಸಂಪರ್ಕ ಮತ್ತು ಮುಖ್ಯವಾಗಿ ತಪ್ಪನ್ನು ತಿದ್ದಿಕೊಳ್ಳುವ ಮೂಲಕ ರೂಪುಗೊಳ್ಳುವ ಲಾಜಿಕಲ್ ಕ್ಯೂಬಿಟ್‌ಗಳು ಕೂಡ ಮಹತ್ವದ್ದಾಗುತ್ತವೆ.

ಹೀಗಾಗಿ ಜಗತ್ತಿನ ಕ್ವಾಂಟಮ್ ಓಟ ಕೇವಲ 'ಯಾರ ಬಳಿ ಹೆಚ್ಚು ಕ್ಯೂಬಿಟ್?' ಎಂಬ ಸ್ಪರ್ಧೆಯಲ್ಲ. 'ಯಾರ ಬಳಿ ಹೆಚ್ಚು ವಿಶ್ವಾಸಾರ್ಹ ಕ್ಯೂಬಿಟ್ ಇದೆ' ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ಉದಾಹರಣೆಗೆ ತಪ್ಪನ್ನು ಸರಿಪಡಿಸಿಕೊಳ್ಳುವ ಹಂತದಲ್ಲಿ ಗೂಗಲ್‌ನ 105 ಕ್ಯೂಬಿಟ್‌ಗಳ ವಿಲ್ಲೋ ಚಿಪ್ ಮಹತ್ವದ ಪ್ರಗತಿಯನ್ನು ಪ್ರದರ್ಶಿಸಿದೆ. ಕ್ವಾಂಟಮ್‌ ಕಂಪ್ಯೂಟಿಂಗ್ ರೇಸ್‌ನಲ್ಲಿರುವ ಕಂಪನಿಗಳೂ ವಿಶ್ವಾಸಾರ್ಹ ಕ್ಯೂಬಿಟ್‌ಗಳ ಅಭಿವೃದ್ಧಿಯಲ್ಲಿ ತೊಡಗಿವೆ.

'ನಮ್ಮಲ್ಲಿ ರಿಯಲ್‌ ಎಸ್ಟೇಟ್‌ಗೆ, ಇ-ಕಾಮರ್ಸ್‌ಗೆ ಹಣ ಹೂಡಿಕೆ ಮಾಡಲು ತೋರುವ ಆಸಕ್ತಿ, ತಂತ್ರಜ್ಞಾನಕ್ಕೆ ಹಣ ಹೂಡುವಲ್ಲಿ ಕಂಡುಬರುವುದಿಲ್ಲ. ಹೊಸ ತಂತ್ರಜ್ಞಾನ ಎಂಬುದು ಗಾಳಿಯಲ್ಲಿದ್ದಂತೆ. ಅದರ ಹೆಸರಿನಲ್ಲಿ ಮೋಸ ಮಾಡುವವರೂ ಇದ್ದಾರೆ ಹಾಗೆಯೇ ಉತ್ತಮರೂ ಇದ್ದಾರೆ. ಆದರೆ ಆ ಉತ್ತಮರಿಗೆ ಹಣ ಸಿಗುತ್ತಿಲ್ಲ. ಈಗಲೂ ಕಸದಿಂದ ರಸ ತೆಗೆಯಿರಿ ಎಂಬ ಮಂತ್ರವನ್ನೇ ಜಪಿಸಲಾಗುತ್ತಿದೆ ಎಂಬುದು ವಾಸ್ತವ ಎಂದು ಬೆಂಗಳೂರಿನ ಇನ್ನರ್‌ವರ್ಸ್‌ ಟೆಕ್‌ ಸಂಸ್ಥೆಯ ಸಿಇಒ ಹಾಗೂ ಸಹ ಸಂಸ್ಥಾಪಕ ಕೆ.ಆರ್. ಶಿವರಾಮ್‌ ಹೇಳುತ್ತಾರೆ.

 ಇದು ಕೇವಲ ಭಾರತದ ಸಮಸ್ಯೆಯೇ?

ಜಾಗತಿಕ ಚಿತ್ರಣ ನೋಡಿದರೆ ಉತ್ತರ ಮತ್ತಷ್ಟು ಕುತೂಹಲಕಾರಿಯಾಗಿದೆ. ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರಕ್ಕೆ 10 ಶತಕೋಟಿ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚು ಹೂಡಿಕೆ ಮಾಡುವುದಾಗಿ 2026ರ ಜೂನ್‌ನಲ್ಲಿ ಐಬಿಎಂ ಘೋಷಿಸಿತು. ಈ ಮೊತ್ತ ಸಂಶೋಧನೆ, ಉತ್ಪಾದನೆ, ಮೂಲಸೌಕರ್ಯ, ಕಂಪನಿಗಳ ಸ್ವಾಧೀನ ಮತ್ತು ಪರಿಸರ ವ್ಯವಸ್ಥೆ ವಿಸ್ತರಣೆಗೆ ಬಳಕೆಯಾಗಲಿದೆ ಎಂದು ಹೇಳಿರುವುದು ಈ ಕ್ಷೇತ್ರದ ಮೇಲಿನ ಬೃಹತ್ ಬಂಡವಾಳ ಹೂಡಿಕೆಯ ಚಿತ್ರಣವನ್ನು ನೀಡುತ್ತದೆ.

ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ವಾಂಟಮ್ ಮಿಷನ್‌ಗೆ ₹6,003.65 ಕೋಟಿ ಮಂಜೂರು ಮಾಡಿದೆ. 2023-24ರಿಂದ 2030-31ರವರೆಗೆ ನಡೆಯಲಿರುವ ಈ ಮಿಷನ್‌ನಡಿ 50ರಿಂದ 1,000 ಭೌತಿಕ ಕ್ಯೂಬಿಟ್‌ ಸಾಮರ್ಥ್ಯದ ಮಧ್ಯಮ ಪ್ರಮಾಣದ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಕೇಂದ್ರ ಹೊಂದಿದೆ ಎಂದು ವರದಿಯಾಗಿದೆ. ಕ್ವಾಂಟಮ್ ಸಂವಹನ, ಕ್ವಾಂಟಮ್ ಸೆನ್ಸಿಂಗ್, ಕ್ವಾಂಟಮ್ ಮಟೀರಿಯಲ್ ಸೇರಿದಂತೆ ಹಲವು ಕ್ಷೇತ್ರಗಳನ್ನು ಈ ಯೋಜನೆ ಒಳಗೊಂಡಿದೆ ಎಂದೆನ್ನಲಾಗಿದೆ. ಆದರೆ ಇದಕ್ಕೆ ಬೇಕಿರುವ ಸಂಶೋಧನೆಯನ್ನು ಕೈಗಾರಿಕೆಗೆ ತಲುಪಿಸುವ ಪೂರಕ ವ್ಯವಸ್ಥೆ ಬೇಕಿದೆ.

ಕ್ವಾಂಟಮ್ ಕ್ಷೇತ್ರದ ಪ್ರಯೋಜನವನ್ನು ಬಹಳ ಮೊದಲೇ ಗುರುತಿಸಿದ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಕ್ಯೂ-ಸಿಟಿ ನಿರ್ಮಾಣ ಘೋಷಣೆ ಮಾಡಿತು. ಬೆಂಗಳೂರಿನ ಹೆಸರಘಟ್ಟದಲ್ಲಿ 'ಕ್ಯೂ-ಸಿಟಿ' ಸ್ಥಾಪನೆಗಾಗಿ ಸುಮಾರು ಆರು ಎಕರೆ ಜಮೀನು ಮಂಜೂರು ಮಾಡಿದೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ವಾಂಟಮ್ ಸಂಶೋಧನಾ ಪಾರ್ಕ್‌ ಸ್ಥಾಪಿಸಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಸಂಶೋಧನೆ ನಡೆಸುತ್ತಿದೆ. ಈ ಯೋಜನೆ ಅನುಷ್ಠಾನಕ್ಕಾಗಿಯೇ ಮಾಹಿತಿ ತಂತ್ರಜ್ಞಾನ ಇಲಾಖೆ ವಿಶೇಷ ಟಾಸ್ಕ್‌ಫೋರ್ಸ್‌ ರಚಿಸಿದೆ. 'ಈ ಎಲ್ಲದರ ಪರಿಣಾಮ 2035ರೊಳಗೆ ಕರ್ನಾಟಕವನ್ನು ಏಷ್ಯಾದ ಪ್ರಮುಖ ಕ್ವಾಂಟಮ್‌ ನಾವೀನ್ಯತೆಯ ಹಬ್‌ ಆಗಿ ರೂಪಿಸುವುದು ಮತ್ತು 20 ಶತಕೋಟಿ ಡಾಲರ್‌ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಿಸುವುದು ಸರ್ಕಾರದ ಸ್ಪಷ್ಟ ಗುರಿ' ಎನ್ನುವುದು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರ ಮಾತು.

ಕ್ಯೂ-ಸಿಟಿ ಮೂಲಕ ಸಂಶೋಧನೆ, ಪ್ರತಿಭೆ, ಮೂಲಸೌಕರ್ಯ ಮತ್ತು ಉದ್ಯಮ ಇವೆಲ್ಲವನ್ನೂ ಒಂದೇ ಸೂರಿನಡಿ ತರುವ ಪ್ರಯತ್ನ ಸರ್ಕಾರದ್ದು. ಕ್ಲೌಡ್‌ ಆಧಾರಿತ ಕ್ವಾಂಟಮ್ ಕಂಪ್ಯೂಟಿಂಗ್ ಸೇವೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಉದ್ಯಮಶೀಲ ಮತ್ತು ಉದ್ಯಮ ಬೆಂಬಲ, ಐಪಿ ಸೌಲಭ್ಯ, ಇನ್‌ಕ್ಯುಬೇಷನ್‌, ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌, ಉತ್ಪಾದನೆ ಮತ್ತು ರಫ್ತು ಕ್ಷೇತ್ರಕ್ಕೆ ಕ್ವಾಂಟಮ್ ಮಿಂಚಿನ ವೇಗ ಸಿಗಲಿದೆ. ಕ್ವಾಂಟಮ್ ಇಂಡಿಯಾ ಬೆಂಗಳೂರು ಶೃಂಗದಂತೆ ಜಿಇಎಸ್‌ಡಿಎ, ಓಪನ್ ಕ್ವಾಂಟಮ್ ಇನ್‌ಸ್ಟಿಟ್ಯೂಟ್‌, ಷಿಕಾಗೊ ಕ್ವಾಂಟಮ್ ಎಕ್ಸ್‌ಚೇಂಜ್‌ ಮುಂತಾದ ಪ್ರತಿಷ್ಠಿತ ಜಾಗತಿಕ ಸಂಸ್ಥೆಗಳೊಂದಿಗೆ ಕಾರ್ಯತಂತ್ರ ಸಹಭಾಗಿತ್ವದ ಸಾಧ್ಯತೆಯನ್ನೂ ಬೆಳೆಸಲಾಗುತ್ತಿದೆ ಎಂದು ಸರ್ಕಾರದ ಯೋಜನೆಗಳ ಪಟ್ಟಿಯನ್ನೇ ಅವರು ಮುಂದಿಡುತ್ತಾರೆ.

ಅಮರಾವತಿಯಲ್ಲಿ ಕ್ವಾಂಟಮ್

ಮತ್ತೊಂದೆಡೆ ಆಂಧ್ರಪ್ರದೇಶ ಸರ್ಕಾರವು ಅಮರಾವತಿ ಬಳಿ ₹730 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸುತ್ತಿದೆ. ಇದೇ ಸೆಪ್ಟೆಂಬರ್‌ನಿಂದ ಕಾರ್ಯ ಆರಂಭಿಸುವ ಈ ಸಂಸ್ಥೆಗೆ ಗುಂಟೂರು ಬಳಿ ತಾತ್ಕಾಲಿಕ ಕೇಂದ್ರ ಸ್ಥಾಪಿಸಲಾಗಿದೆ. ಕ್ವಾಂಟಮ್ ಸಂಶೋಧನೆ, ನಾವೀನ್ಯತೆ ಮತ್ತು ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ 1.25 ಲಕ್ಷ ಚದರಡಿ ಪ್ರದೇಶದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲು ಉದ್ದೇಶಿಸಿದೆ. ಇಲ್ಲಿ ಕ್ವಾಂಟಮ್ ಫೋಟೊನಿಕ್ಸ್‌, ಕ್ರಯೋಜೆನಿಕ್ಸ್‌ ಮತ್ತು ನ್ಯಾನೊ ಫ್ಯಾಬ್ರಿಕೇಷನ್‌ ಸೌಲಭ್ಯಗಳು ಇಲ್ಲಿ ಲಭ್ಯ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಇಷ್ಟು ಮಾತ್ರವಲ್ಲ, ರಿಯಾಯಿತಿ ದರದಲ್ಲಿ ಜಾಗ, ವಿದ್ಯುತ್ ಮತ್ತು ಪೂರಕ ಶೈಕ್ಷಣಿಕ ವಲಯ ನಿರ್ಮಾಣದ ಮೂಲಕ ವೃತ್ತಿಪರ ಮಾನವಸಂಪನ್ಮೂಲ ಸೃಷ್ಟಿಸಲೂ ಆಂಧ್ರ ಯೋಜನೆಗಳನ್ನು ರೂಪಿಸಿದೆ. ಐಐಟಿ ತಿರುಪತಿ, ಐಐಐಟಿ ಶ್ರೀ ಸಿಟಿಗಳು ಸಮೀಪದಲ್ಲೇ ಇವೆ.

ಬೆಂಗಳೂರು- ಅಮರಾವತಿ: ಕ್ವಾಂಟಮ್‌ ರೇಸ್‌ನಲ್ಲಿ ಯಾರು ಮುಂದೆ?

ಹಾಗಿದ್ದರೆ ಬೆಂಗಳೂರಿಗಿಂತ ಅಮರಾವತಿ ಒಂದು ಹೆಜ್ಜೆ ಮುಂದಿದೆಯೇ...? ಎಂಬ ಪ್ರಶ್ನೆಗೆ 'ಇಲ್ಲ' ಎಂಬ ಉತ್ತರ ನೀಡುತ್ತಾರೆ ಕರ್ನಾಟಕ ಕ್ವಾಂಟಮ್ ಮಿಷನ್‌ನ ಮುಖ್ಯಸ್ಥ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಸಂಶೋಧಕ ಪ್ರೊ. ಅರಿಂದಮ್ ಘೋಷ್‌.

ಬೆಂಗಳೂರು ಮತ್ತು ಅಮರಾವತಿ ನಗರಗಳ ಕ್ವಾಂಟಮ್‌ ಹಬ್‌ಗಳ ಕಾರ್ಯವಿಧಾನ ಬೇರೆಯದ್ದೇ ಆಗಿದೆ. ಅಲ್ಲಿ ಟಾಪ್‌-ಡೌನ್‌ ಮಾದರಿ ಅನುಸರಿಸಲಾಗುತ್ತಿದೆ. ಕ್ವಾಂಟಮ್ ಕಂಪ್ಯೂಟರ್‌ ಅಳವಡಿಸುವುದು, ಅದರ ಉಪಯೋಗ ಪಡೆದುಕೊಳ್ಳಲು ಕಂಪನಿಗಳು ಹಾಗೂ ಸಂಸ್ಥೆಗಳನ್ನು ಆಹ್ವಾನಿಸುವುದು ಅಲ್ಲಿಯ ಕಾರ್ಯವಿಧಾನ.

ಆದರೆ ಬೆಂಗಳೂರಿನದ್ದು ಬೇರೆ. ಇಲ್ಲಿ ಇಡೀ ಕ್ವಾಂಟಮ್ ಜಗತ್ತನ್ನೇ ಸಿದ್ಧಪಡಿಸಲಾಗುತ್ತಿದೆ. ಸಣ್ಣ ಹಾರ್ಡ್‌ವೇರ್‌ನಿಂದ ಹಿಡಿದು, ತಂತ್ರಾಂಶ ಹಾಗೂ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿರುವುದು ಬೆಂಗಳೂರಿನ ಬಲವಾದ ಸಂಶೋಧನಾ ಸಂಸ್ಕೃತಿ ಮತ್ತು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಮೂಲಸೌಕರ್ಯ. ಹೀಗಾಗಿ ಈ ಎರಡೂ ಪದ್ಧತಿಗಳು ಕ್ವಾಂಟಮ್ ಬೆಳವಣಿಗೆಗೆ ಅಗತ್ಯ. ಎರಡು ನಗರಗಳ ಪೈಪೋಟಿ ಬದಲಾಗಿ, ಜತೆಗೂಡಿ ಕೆಲಸ ಮಾಡಿದರೆ ಮಾತ್ರ ಭಾರತದ ಬೆಳವಣಿಗೆಗೆ ಪೂರಕ ಎನ್ನುವುದು ಅವರ ಮಾತು.

ಕ್ವಾಂಟಮ್‌ ಕ್ಷೇತ್ರದಲ್ಲಿ ಸದ್ಯ ಸ್ವಿಟ್ಜರ್ಲೆಂಡ್ ಮತ್ತು ಮ್ಯೂನಿಕ್‌ ಕ್ವಾಂಟಮ್ ವ್ಯಾಲಿಯಂತ ಮಾದರಿಗಳು ಇವೆ. ಇವುಗಳಿಂದಲೇ ಪ್ರೇರಿತವಾಗಿ ರಾಜ್ಯದಲ್ಲಿ ಕ್ವಾಂಟಮ್ ನಾವೀನ್ಯತೆ ಹರಡಲು ಸಜ್ಜಾಗಿದೆ ಎಂದು ಕರ್ನಾಟಕ ಈ ಹಿಂದೆಯೇ ಹೇಳಿದೆ. 'ಕ್ವಾಂಟಮ್ ಆಯಸ್‌ ಎ ಸರ್ವೀಸ್‌' ಎಂಬ ಯೋಜನೆಯಡಿ ಕ್ಲೌಡ್ ವೇದಿಕೆ ಮತ್ತು ರಿಮೋಟ್ ಆಕ್ಸೆಸ್‌ ಲ್ಯಾಬ್‌ಗಳ ಮೂಲಕ ಭೌಗೋಳಿಕ ಅಡೆತಡೆಗಳಿಲ್ಲದೆ ಸಂಶೋಧಕರು, ಸ್ಟಾರ್ಟ್‌ಅಪ್ ಮತ್ತು ಉದ್ಯಮಗಳಿಗೆ ಕ್ವಾಂಟಮ್ ಸಂಪನ್ಮೂಲಗಳ ಬಳಕೆಗೆ ವೇದಿಕೆ ಕಲ್ಪಿಸಲಾಗಿದೆ ಎಂದು ಡಾ. ಮಂಜುಳಾ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌, ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಅನುಸಾಂಧಾನ ಕೇಂದ್ರ (ಜೆಎನ್‌ಸಿಎಎಸ್‌ಆರ್), ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ ( ಐಸಿಟಿಎಸ್), ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್), ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಳಗೊಂಡ 15 ಸಾವಿರಕ್ಕೂ ಹೆಚ್ಚು ಬಲಿಷ್ಠ ಅಂತರಶಿಸ್ತೀಯ ಪರಿಸರ ವ್ಯವಸ್ಥೆ ರಾಜ್ಯದಲ್ಲಿದೆ. ಇಸ್ರೊ, ಸಿ-ಡ್ಯಾಕ್, ಡಿಆರ್‌ಡಿಒ-ಸಿಎಐಆರ್‌ನಂಥ ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವ, 18 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌, 5700ಕ್ಕೂ ಹೆಚ್ಚು ಡೀಪ್‌ ಟೆಕ್‌ ಸ್ಟಾರ್ಟ್‌ಅಪ್‌ ಒಳಗೊಂಡ ಉದ್ಯಮ ಪರಿಸರ ವ್ಯವಸ್ಥೆ ಕರ್ನಾಟಕದ ಶಕ್ತಿ.

ಎಂಜಿನಿಯರಿಂಗ್‌ ಕಾಲೇಜುಗಳು ಕ್ವಾಂಟಮ್ ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಗಶಾಲೆ. ಶಾಲಾ ಹಂತದಲ್ಲೇ ಕ್ವಾಂಟಮ್‌ ಪಠ್ಯಕ್ರಮ ಪರಿಚಯ, ಪಿಎಚ್‌.ಡಿ ಫೆಲೊಶಿಪ್‌ಗಳಿಗೆ ಬೆಂಬಲ ಸೇರಿದಂತೆ ಈಗಾಗಲೇ ಕ್ವಾಂಟಮ್‌ ಯುಗಕ್ಕೆ ಶಿಕ್ಷಣ ಕ್ಷೇತ್ರವೂ ಅಣಿಯಾಗಿದೆ. ಕ್ವಾಂಟಮ್ ಸಂಶೋಧನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು 1,000 ಕ್ಯೂಬಿಟ್‌ ಪ್ರೊಸೆಸರ್‌ ಅಭಿವೃದ್ಧಿ ಆರಂಭಗೊಂಡಿದೆ ಎಂಬುದು ಅಧಿಕಾರಿಗಳ ಹೇಳಿಕೆ.

ಅಮರಾವತಿಯಲ್ಲಿ ರೂಪುಗೊಳ್ಳುತ್ತಿರುವ ಕ್ವಾಂಟಮ್ ವ್ಯಾಲಿ ಟೆಕ್‌ ಪಾರ್ಕ್‌ನಲ್ಲಿ ಐಬಿಎಂ ಕ್ವಾಂಟಮ್ ಸಿಸ್ಟಂ 2 ಸ್ಥಾಪಿಸುವ ಯೋಜನೆಯನ್ನು ಆಂಧ್ರ ಸರ್ಕಾರ ಪ್ರಕಟಿಸಿದ್ದು, ಇದರಲ್ಲಿ ಐಬಿಎಂ ಮತ್ತು ಟಿಸಿಎಸ್‌ ಇರಲಿವೆ. ಇಲ್ಲಿ 156 ಕ್ಯೂಬಿಟ್‌ನ ಐಬಿಎಂ ಹೆರಾನ್‌ ಪ್ರೊಸೆಸರ್‌ ಆಧಾರಿತ ವ್ಯವಸ್ಥೆ ಇರಲಿದೆ. ಟಿಸಿಎಸ್‌, ಐಬಿಎಂ ಜತೆಗೂಡಿ ಕ್ವಾಂಟಮ್ ಅಲ್ಗಾರಿದಮ್ ಮತ್ತು ಅಪ್ಲಿಕೇಷನ್‌ ಅಭಿವೃದ್ಧಿಪಡಿಸುವ ಕೆಲಸದಲ್ಲೂ ಪಾಲ್ಗೊಳ್ಳಲಿವೆ ಎಂದು ವರದಿಯಾಗಿದೆ.

ಭವಿಷ್ಯದ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಭವಿಷ್ಯದ ಕೈಗಾರಿಕಾ ಕ್ರಾಂತಿಯ ಮೂರು ಪ್ರಮುಖ ಸ್ತಂಭಗಳೆಂದು ಪರಿಗಣಿಸಲಾಗುತ್ತಿದೆ. ಸಾಮಾನ್ಯ ಬಳಕೆಗೆ ಕ್ವಾಂಟಮ್‌ ತಂತ್ರಜ್ಞಾನ ಬರಲು ಸಾಕಷ್ಟು ಸಮಯ ಬೇಕು. ಆದರೆ ಸಂಶೋಧನೆ ಮತ್ತು ಹೂಡಿಕೆಗಳು ಭವಿಷ್ಯದ ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬುದು ಈ ತಜ್ಞರ ವಿಶ್ವಾಸ.

ಪ್ರೊ. ಅರಿಂದಮ್ ಘೋಷ್‌,ಕರ್ನಾಟಕ ಕ್ವಾಂಟಮ್ ಮಿಷನ್‌ನ ಮುಖ್ಯಸ್ಥ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಸಂಶೋಧಪ್ರಯೋಗಕ್ಕೆ ಬೇಕಾದ ವೋಲ್ಟ್‌ ಮೀಟರ್‌ ಎಂಬ ಪುಟ್ಟ ಸಾಧನವನ್ನೂ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕ್ವಾಂಟಮ್ ಮಿಷನ್‌ ಯಶಸ್ವಿಯಾಗಬೇಕಾದರೆ ಸ್ವದೇಶಿ ಗುಣಮಟ್ಟದ ಉಪಕರಣಗಳ ಅಭಿವೃದ್ಧಿ ಹೆಚ್ಚಾಗಬೇಕುಕೆ.ಆರ್. ಶಿವರಾಮ್‌, ಸಿಇಒ ಹಾಗೂ ಸಹ ಸಂಸ್ಥಾಪಕ, ಇನ್ನರ್‌ವರ್ಸ್‌ ಟೆಕ್‌ ಸಂಸ್ಥೆ ಕ್ವಾಂಟಮ್ ಕಂಪ್ಯೂಟರ್‌ಗಳು -270 ಕೆಲ್ವಿನ್‌ನಲ್ಲಿ ಕೆಲಸ ಮಾಡುವ ಸಾಧನ. ಇದನ್ನು ಸದ್ಯಕ್ಕೆ ಮೊಬೈಲ್‌ನಲ್ಲಿ ಅಳವಡಿಸುವುದು ಕಷ್ಟ. ಜತೆಗೆ ತಾಂತ್ರಿಕ ಸವಾಲುಗಳೂ ಹೆಚ್ಚಿವೆ. ಆದರೆ ಬಳಕೆ ಯೋಗ್ಯವಾಗಿ ಈವರೆಗೂ ಇದು ವೃದ್ಧಿಸಿಲ್ಲ. ಪಾಶ್ಚಾತ್ಯ ರಾಷ್ಟ್ರಗಳು ಈ ತಂತ್ರಜ್ಞಾನಕ್ಕೆ ಸಾಕಷ್ಟು ಹಣ ಹೂಡಿವೆ. ನಮ್ಮಲ್ಲಿ ಹೂಡಿಕೆಯ ಕೊರತೆಯಿದೆಡಾ. ಎಸ್.ಎಂ.ದಿಲೀಪ್ ಕುಮಾರ್ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ, ಯುವಿಸಿಇ, ಬೆಂಗಳೂರುಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೊದಲ ಸೆಮಿಸ್ಟರ್‌ನಲ್ಲಿ ಸಿ, ಸಿ++, ಡಿಜಿಟಲ್ ಸರ್ಕ್ಯೂಟ್‌ ಡಿಸೈನ್‌ ಓದುವ ಬದಲು ಕ್ವಾಂಟಮ್ ಮೆಕ್ಯಾನಿಕ್ಸ್, ಸರ್ಕ್ಯೂಟ್ಸ್‌, ಕಂಪ್ಯೂಟಿಂಗ್ ಓದಬೇಕಾಗುತ್ತದೆ. ತಂತ್ರಜ್ಞಾನಕ್ಕೆ ಕಾಯುವ ದಿನಗಳು ಕಡಿತವಾಗಲಿವೆ. ಬಳಕೆ ಹೆಚ್ಚಾದಂತೆ ತಂತ್ರಜ್ಞಾನವೂ ಅಗ್ಗವಾಗಲಿದೆ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

 ಡಾ. ಎಸ್.ಎಂ.ದಿಲೀಪ್ ಕುಮಾರ್ ಕೆ.ಆರ್. ಶಿವರಾಮ್ ಡಾ. ಎನ್.ಮಂಜುಳಾ ಡಾ. ಎನ್. ಮಂಜುಳಾ ಕರ್ನಾಟಕದ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿಮುಖಪುಟ.. 2035ರ ಹೊತ್ತಿಗೆ 20 ಶತಕೋಟಿ ಅಮೆರಿಕನ್ ಡಾಲರ್‌ ಮೊತ್ತದ ಉದ್ಯಮ ಅಭಿವೃದ್ಧಿಯ ಜತೆಗೆ 10 ಸಾವಿರ ಉದ್ಯೋಗ ಸೃಷ್ಟಿಯ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ -

ಸದ್ಯ ಇರುವ ಕ್ವಾಂಟಮ್ ಕಂಪ್ಯೂಟರ್‌ಗಳು

ಹಲವು ದಶಲಕ್ಷ ಡಾಲರ್‌ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಐಬಿಎಂನ ಕೊಂಡೋರ್‌ ಒಂದು ಸಾವಿರಕ್ಕೂ ಹೆಚ್ಚು ಕ್ಯೂಬಿಟ್‌ಗಳನ್ನು ಹೊಂದಿದೆ. ಐಬಿಎಂ ಹೆರಾನ್‌ ನೂರಕ್ಕೂ ಹೆಚ್ಚು ಕ್ಯೂಬಿಟ್‌ಗಳನ್ನು ಹೊಂದಿದೆ. ಗೂಗಲ್‌ನ ಸೈಕಾಮೋರ್‌ 53 ಕ್ಯೂಬಿಟ್‌ ಹೊಂದಿರುವ ಕ್ವಾಂಟಮ್ ಕಂಪ್ಯೂಟರ್ ಆಗಿದೆ. ಗೂಗಲ್‌ನ ವಿಲ್ಲೋ 100ಕ್ಕೂ ಹೆಚ್ಚು ಕ್ಯೂಬಿಟ್‌ಗಳನ್ನು ಹೊಂದಿದೆ. ಎಚ್‌-ಸಿರೀಸ್‌ನ ಕ್ವಾಂಟಮ್ ಕಂಪ್ಯೂಟರ್‌ 20ಕ್ಕೂ ಹೆಚ್ಚು ಲಾಜಿಕಲ್ ಅಥವಾ ಫಿಸಿಕಲ್ ಕ್ಯೂಬಿಟ್‌ಗಳನ್ನು ಹೊಂದಿದೆ. ರಿಗೆಟ್ಟಿ ಕಂಪ್ಯೂಟಿಂಗ್‌ ಆಯಸ್ಪೆನ್ ಸಿರೀಸ್‌ 80ಕ್ಕೂ ಹೆಚ್ಚು ಕ್ಯೂಬಿಟ್‌ಗಳನ್ನು ಹೊಂದಿದೆ. ಐಯಾನಿಕ್‌ ಕ್ಯೂ ಫೋರ್ಟೆ ಸುಮಾರು 20ಕ್ಕೂ ಹೆಚ್ಚು ಆಲ್ಗಾರಿದಮ್‌ ಕ್ಯೂಬಿಟ್‌ಗಳನ್ನು ಹೊಂದಿದೆ.

ಕ್ಯೂಪಿಎಐ ಕ್ಯೂಎನ್‌ಯು ಲ್ಯಾಬ್‌

ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಐಬಿಎಂ ಫ್ಯುಜಿಟ್ಸು ಟಿಸಿಎಸ್‌ ಅಟೋಸ್ ಎಲ್‌ಟಿಐ ಮೈಂಡ್‌ಟ್ರೀ ಎಲ್‌ ಆಯಂಡ್‌ ಟಿ ಕ್ಲೌಡ್‌ಫಿನಿಟಿ ರಿಗೆಟ್ಟಿ ಕಂಪ್ಯೂಟಿಂಗ್‌ ಕ್ಯಾಪ್‌ಜೆಮಿನಿ ಸೇರಿದಂತೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಹಲವು ಬಹುರಾಷ್ಟ್ರೀಯ ಕಂಪನಿಗಳು ಕ್ವಾಂಟಮ್ ಸಂಶೋಧನೆ ಮತ್ತು ನಿಯೋಜನೆಯಲ್ಲಿ ಸಕ್ರಿಯವಾಗಿವೆ. ಸ್ಟಾರ್ಟ್‌ಅಪ್‌ ರಂಗದಲ್ಲಿ ಕ್ಯೂಪಿಎಐ ಕ್ಯೂನು ಲ್ಯಾಬ್ಸ್‌ ಕ್ವಾನ್‌2ಡಿ ಅವಿನ್ಯಾ ಎಸ್‌ಕ್ಯೂ ಮತ್ತು ಕ್ಯೂಸಿನ್‌ ಕಂಪನಿಗಳ ಪ್ರಗತಿ ಕುರಿತು ಈಗಾಗಲೇ ವರದಿಗಳಾಗಿವೆ. ಭಾರತ ಮೂಲದ ಕ್ಯೂಪಿಎಐ ಕಂಪನಿಯು ಫುಲ್ ಸ್ಟ್ಯಾಕ್ 25 ಕ್ಯೂಬಿಟ್‌ ಸೂಪರ್‌ಕಂಡಕ್ಟಿಂಗ್ ಕ್ವಾಂಟಮ್‌ ಕಂಪ್ಯೂಟರ್‌ ಕೆಪಿಎಐ-ಇಂಡಸ್‌ ಅನ್ನು ಅಭಿವೃದ್ಧಿಪಡಿಸಿರುವುದು ಈ ಕ್ಷೇತ್ರದಲ್ಲಿ ದೇಶದ ಈವರೆಗಿನ ಸಾಧನೆಯಾಗಿದೆ.

ಸದ್ಯದ ಕ್ವಾಂಟಮ್ ಓಟ

ಐಬಿಎಂ: ಹೆರಾನ್‌ ಪ್ರೊಸೆಸರ್‌ನ 156 ಕ್ಯೂಬಿಟ್‌ ಆವೃತ್ತಿಯನ್ನು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಬಳಸುವ ವ್ಯವಸ್ಥೆಗಳಲ್ಲಿ ಅಳವಡಿಸಲಾಗುತ್ತಿದೆ. ಗೂಗಲ್‌ನ ವಿಲ್ಲೋ 105 ಕ್ಯೂಬಿಟ್‌ ಪ್ರೊಸೆಸರ್‌ ತಪ್ಪುಗಳನ್ನು ಪತ್ತೆ ಮಾಡಿ ಅದನ್ನು ಸರಿಪಡಿಸುವ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ತೋರಿಸಿದೆ. ಕ್ಯೂಪಿಎಐ: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕ್ಯೂಪಿಎಐ 25 ಕ್ಯೂಬಿಟ್ ಇಂಡಸ್ ಸಿಸ್ಟಮ್‌ ಅನ್ನು ಪರಿಚಯಿಸಿದೆ. ಐಐಟಿ ಧಾರವಾಡ ಹಾಗೂ ಐಐಐಟಿ ರಾಯಚೂರಿನಲ್ಲಿ ಶಿಕ್ಷಣ ಸಂಶೋಧನೆ ಮತ್ತು ಕೈಗಾರಿಕೆಗಳ ನೆರವಿಗಾಗಿ ಸ್ಥಾಪಿಸುವ ಯೋಜನೆ ಹೊಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani