Dailyhunt Logo
  • Light mode
    Follow system
    Dark mode
    • Play Story
    • App Story
ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ

ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ

ಚಾಮರಾಜನಗರ: ಬೆಳಗಾದರೆ 80ನೇ ಸ್ವಾತಂತ್ರ್ಯದಿನದ ಸಂಭ್ರಮ. ಆದರೆ, ಬೆಳಗಾಗುವ ಮೊದಲೇ ಚಾಮರಾಜ ನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಬಂದೂಕಿನ ನಳಿಕೆಯಿಂದ ಹಾರಿದ ಗುಂಡುಗಳು ಮೂವರನ್ನು ಬಲಿ ಪಡೆದವು. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿತು.

ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಸೂತಕದ ಛಾಯೆ ಕಸಿಯಿತು.

ಸಾವಿರಾರು ವನ್ಯಜೀವಿಗಳ ಮಾರಣಹೋಮ ನಡೆಸಿದ್ದ ಕಾಡುಗಳ್ಳ ವೀರಪ್ಪನ್ ಹತ್ಯೆ ಬಳಿಕ ಕಳ್ಳಬೇಟೆ ನಿಂತೇ ಹೋಯಿತು, ಎಲ್ಲವೂ ಸರಿಹೋಯಿತು ಎಂದೇ ಭಾವಿಸಲಾಗಿತ್ತು. ಮೂವರ ಜೀವ ಬಲಿ ಪಡೆದ ಹನೂರು ಶೂಟೌಟ್‌ ಪ್ರಕರಣವು ಕಾಡಿನಂಚಿನ ಸಂಘರ್ಷ ಮತ್ತು ಕಳ್ಳಬೇಟೆ ಇನ್ನೂ ಕೊನೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿತು.

ಈ ಘಟನೆ ಸಾಮಾನ್ಯ ಕಳ್ಳಬೇಟೆ ಪ್ರಕರಣವಾಗಿ ತೆರೆಯಮರೆಗೆ ಸರಿಯಲಿಲ್ಲ. ನೆರೆಯ ತಮಿಳುನಾಡು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಎರಡೂ ರಾಜ್ಯಗಳ ನಡುವಿನ ರಾಜಕೀಯ ಸಂಘರ್ಷಕ್ಕೂ ನಾಂದಿ ಹಾಡಿದೆ. ದಂತಚೋರ ವೀರಪ್ಪನ್‌ ಹಾಗೂ ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಭಾವಚಿತ್ರವಿರುವ ಬ್ಯಾನರ್‌ ಕಾಣಿಸಿಕೊಂಡಿದೆ. ತಮಿಳು ಭಾಷಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಭಾಷೆ ಮತ್ತು ಜನಾಂಗೀಯ ದ್ವೇಷದ ಕಿಡಿ ಹೊತ್ತಿಸಲಾಗುತ್ತಿದೆ, ಜೊತೆಗೆ ಧರ್ಮದ ನಂಟೂ ಬೆಸೆದುಕೊಂಡಿದೆ ಎಂಬ ಆರೋಪಗಳು ಕೇಳಿಬಂದವು.

ಕರ್ನಾಟಕ, ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ನಡುವೆ ಹರಡಿಕೊಂಡಿರುವ ಅರಣ್ಯದಂಚಿನ ಗ್ರಾಮಗಳ ಜನರ ಬಡತನ, ಅನಕ್ಷರತೆ, ಗಡಿಗ್ರಾಮಗಳ ಮೂಲ ಸಮಸ್ಯೆ, ನಿರುದ್ಯೋಗ, ಅರಣ್ಯ ಇಲಾಖೆ ಲೋಪ ದೋಷಗಳು ಮುನ್ನೆಲೆಗೆ ಬಂದಿವೆ. ಹಾಗಂತ ಮೇಲ್ನೋಟಕ್ಕೆ ಕಂಡಷ್ಟು ಇದು ಸರಳವಾಗಿಲ್ಲ. ಕಳ್ಳಬೇಟೆ ಜಾಡು ಹಿಡಿದು ಹೊರಟರೆ ನಿಗೂಢ ಪ್ರಪಂಚವೇ ತೆರೆದುಕೊಳ್ಳುತ್ತದೆ.

ವೀರಪ್ಪನ್‌ ಬಳಿಕ ಮಾದಪ್ಪನ ಕಾಡಿ ನಲ್ಲಿ ಮರಿ ವೀರಪ್ಪನ್‌ಗಳು ಹುಟ್ಟಿಕೊಂಡಿ ದ್ದಾರೆ. ಇದರಿಂದಾಗೇ ವನ್ಯಜೀವಿಗಳ ಕಳ್ಳಬೇಟೆ ನಿಂತಿಲ್ಲ ಎಂಬ ಸತ್ಯವು ಅಂಕಿ ಅಂಶಗಳಿಂದ ಗೋಚರವಾಗುತ್ತದೆ.

ಚಾಮರಾಜನಗರ ಜಿಲ್ಲೆಯು ಶೇ 60ರಷ್ಟು ದಟ್ಟ ಅರಣ್ಯದಿಂದ ಆವೃತವಾಗಿದೆ. 1,024 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಕಾವೇರಿ ಹಾಗೂ 935 ಚ.ಕಿ.ಮೀ ಹರಡಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮವು ತಮಿಳುನಾಡಿನಲ್ಲೂ ಹರಡಿಕೊಂಡಿವೆ. ಮರ ಕಳ್ಳತನ, ಕಳ್ಳಬೇಟೆಯಂತಹ ಅಕ್ರಮ ಚಟುವಟಿಕೆ ಎರಡು ಕಡೆಯಿಂದಲೂ ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ.

ತಮಿಳುನಾಡಿನಲ್ಲಿ ಮೆಟ್ಟೂರು ಜಲಾಶಯ ನಿರ್ಮಿಸಿದಾಗ ಅಲ್ಲಿಂದ ಒಕ್ಕಲೆದ್ದ ಸಾವಿರಾರು ಮಂದಿ ಹನೂರು ತಾಲ್ಲೂಕಿನ ವನ್ಯಧಾಮಗಳ ಸುತ್ತಲಿನ ಗ್ರಾಮಗಳಿಗೆ ಬಂದು ನೆಲಸಿದರು.

ಬಹುತೇಕ ಗ್ರಾಮಗಳಲ್ಲಿ ತಮಿಳು ಭಾಷಿಕರ ಪ್ರಭಾವ ಢಾಳಾಗಿ ಕಾಣಸಿಗುತ್ತದೆ. ಬಡತನ, ಅನಕ್ಷರತೆ ಹೆಚ್ಚಾಗಿದ್ದು ಕೂಲಿ ಹಾಗೂ ಹೈನುಗಾರಿಕೆ ಬಹುಪಾಲು ಜನರ ಪ್ರಮುಖ ಆದಾಯದ ಮೂಲ. ಇದರಿಂದ ಬರುವ ಆದಾಯವೂ ಹೇಳಿಕೊಳ್ಳುವಂತಿಲ್ಲ ಎನ್ನುವುದು ಸ್ಥಳೀಯರ ಮಾತು.

ಕಾಡು ಬಿಟ್ಟು ಬೇರೆ ಪ್ರಪಂಚದ ಅರಿವು ಇಲ್ಲದ ಜನರಿಗೆ ಬಡತನ ಹುಟ್ಟಿನಿಂದಲೇ ಬಂದ ಬಳುವಳಿ. ಇದರಿಂದ ಮುಕ್ತಿ ಪಡೆಯಲು ಮತ್ತು ಸುಲಭವಾಗಿ ಹಣ ಮಾಡಲು ಗೊತ್ತಿರುವ ಮಾರ್ಗವೇ ಕಳ್ಳಬೇಟೆ. ಕೆಲವರು ಇದರಲ್ಲಿ ಸಕ್ರಿಯರಾಗಿದ್ದಾರೆ. ನೀರಾವರಿ ಸೌಲಭ್ಯ ಇಲ್ಲದ ಕಾರಣ ಬೇಸಿಗೆಯಲ್ಲಿ ಕೂಲಿಗಾಗಿ ಕೊಡಗು ಹಾಗೂ ಕೇರಳದ ಕಾಫಿ ತೋಟಗಳಿಗೆ ಹೆಚ್ಚಿನವರು ಗುಳೆ ಹೋಗುತ್ತಾರೆ. ದೊಡ್ಡ ಹಿಡುವಳಿ ಹೊಂದಿರುವವರ ಪ್ರಮಾಣ ತೀರಾ ಕಡಿಮೆ. ಕಾಡಂಚಿಗೆ ಹೊಂದಿಕೊಂಡಂತೆ ಸಣ್ಣ ಕೃಷಿ ಹಿಡುವಳಿಗಳಿದ್ದು ಮಳೆಗಾಲದಲ್ಲಿ ಮಾತ್ರ ಬೆಳೆ ಬೆಳೆಯುತ್ತಾರೆ.

'ಕಾಡಂಚಿನ ಗ್ರಾಮಸ್ಥರು ಅರಣ್ಯದೊಳಗೆ ದನ ಮೇಯಿಸಲು ಅರಣ್ಯ ಸಿಬ್ಬಂದಿ ಅಡ್ಡಿಪಡಿಸುತ್ತಾರೆ. ಅರಣ್ಯ ಇಲಾಖೆಯ ಪ್ರಕಾರ ಮೇವಿಗಾಗಿ ಕಾಡಿನೊಳಗೆ ದನಗಳನ್ನು ಬಿಡುವುದು ಕಾನೂನುಬಾಹಿರ. ಇದರಿಂದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಹಿಂದಿದ್ದ ಬಾಂಧವ್ಯ ಕೂಡ ಹಳಸಿದೆ. ವನ್ಯಜೀವಿಗಳ ದಾಳಿಯಿಂದಾದ ಬೆಳೆನಷ್ಟ ಪರಿಹಾರ ನೀಡುವಲ್ಲಿ ತಾರತಮ್ಯ ಹಾಗೂ ವಿಳಂಬವಾಗುತ್ತಿರುವುದು ಸ್ಥಳೀಯರ ಸಿಟ್ಟಿಗೆ ಕಾರಣ' ಎನ್ನುತ್ತಾರೆ ಹೋರಾಟಗಾರ ಚಂಗಡಿ ಕರಿಯಪ್ಪ.

ಬಿಡಿಗಾಸಿಗಾಗಿ ಬೇಟೆ:

ಕಾಡಂಚಿನ ಗ್ರಾಮಗಳಲ್ಲಿ ಉತ್ತಮ ಸಾರಿಗೆ ಸಂಪರ್ಕ, ಶಾಲೆ, ಆಸ್ಪತ್ರೆ, ರಸ್ತೆಗಳಿಲ್ಲ. ದುಡಿವ ಕೈಗಳಿಗೆ ಉದ್ಯೋಗ ಇಲ್ಲ. ಕೂಲಿ, ಹೈನುಗಾರಿಕೆಗೂ ಅರಣ್ಯ ಸಿಬ್ಬಂದಿ ಅಡ್ಡಿಯಾಗುತ್ತಿದ್ದಾರೆ. ಬೇರೆ ಆದಾಯ ಮೂಲಗಳಿಲ್ಲದ ಕಾರಣ ಕೆಲವರು ಕಳ್ಳಬೇಟೆ ದಾರಿ ಹಿಡಿಯುತ್ತಿದ್ದಾರೆ.

ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಬೇಡಗಂಪಣ ಸಮುದಾಯ ಮತ್ತು ಸೋಲಿಗರು ಕಾಡನ್ನೇ ದೈವ ಎಂದು ನಂಬಿಕೊಂಡು ಬಂದವರು. ಮಾದಪ್ಪನ ಅಪ್ಪಟ ಭಕ್ತರಾಗಿರುವ ಅವರ ಬದುಕು ಕಾಡಿನೊಂದಿಗೆ ಬೆಸೆದುಕೊಂಡಿದೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುತ್ತ, ಕೂಲಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆಯೇ ಹೊರತು ಅದರ ಒಡಲಿಗೆ ಬೆಂಕಿ ಇಕ್ಕುವ ಕೆಲಸ ಮಾಡಲಾರರು ಎಂದು ಸ್ಥಳೀಯರು ಹೇಳುತ್ತಾರೆ .

'ವನ್ಯಜೀವಿಗಳನ್ನು, ಮರಗಳನ್ನು ದೈವದಂತೆ ಆರಾಧಿಸಿಕೊಂಡು ಈ ಸಮುದಾಯಗಳು ಬಂದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರಸಂಗ ಬಂದಲ್ಲಿ ಕಾಡಿನ ರಕ್ಷಣೆಗೂ ಟೊಂಕ ಕಟ್ಟಿ ನಿಲ್ಲುತ್ತಾರೆ. ಅರಣ್ಯ ರಕ್ಷಕರಾಗಿ ಈ ಜನರೇ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂಥವರ ನಡುವೆ ಸೇರಿಕೊಂಡು ಒಂದಿಷ್ಟು ಕಳ್ಳಬೇಟೆಗಾರರು ಕಾಡಂಚಿನ ಜನರ ಹೆಸರಿಗೆ ಕಳಂಕ ತರುತ್ತಿದ್ದಾರೆ' ಎನ್ನುತ್ತಾರೆ ಸೋಲಿಗ ಸಮುದಾಯದ ಮುಖಂಡ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ.

ಕಳ್ಳಬೇಟೆ ದಂಧೆಯ ಮುಖ...

ಕಳ್ಳಬೇಟೆ ಪ್ರಕರಣಗಳಲ್ಲಿ ದಂಧೆಕೋರರು ನೇರವಾಗಿ ಭಾಗಿಯಾಗುವುದಿಲ್ಲ. ಮದ್ಯವರ್ತಿಗಳ ಮೂಲಕ ಕಾಡಂಚಿನ ಗ್ರಾಮಗಳ ಬೇಟೆಗಾರರನ್ನು ಸಂಪರ್ಕಿಸಿ ಬಿಡಿಗಾಸು ಕೊಟ್ಟು ಬೇಟೆಯಾಡಿಸುತ್ತಾರೆ. ಹುಂಬತನ ಮತ್ತು ಅರಣ್ಯ ಕಾನೂನುಗಳ ಅರಿವಿನ ಕೊರತೆಯಿಂದ ಬಹಳಷ್ಟು ಕಳ್ಳಬೇಟೆ ಪ್ರಕರಣಗಳಲ್ಲಿ ಸಿಕ್ಕಿ ಬೀಳುವವರು ಸ್ಥಳೀಯರೇ ಆಗಿರುತ್ತಾರೆ.

ಮಾರಾಟ ಜಾಲದ ಸೂತ್ರದಾರರು ಕೊಂಬು, ದಂತ, ಚರ್ಮ, ಉಗುರು ಮುಂತಾದವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸಿದರೆ, ಬೇಟೆಗಾರರಿಗೆ ಸಿಗುವುದು ಮಾತ್ರ ಪುಡಿಗಾಸು.

ಪುನುಗುಬೆಕ್ಕು, ಚಿಪ್ಪು ಹಂದಿ, ಕಾಡು ಪಾಪ, ಗೂಬೆ, ಮಣ್ಣುಮುಕ್ಕ ಹಾವು, ನಕ್ಷತ್ರ ಆಮೆ ಲಕ್ಷಾಂತರ ರೂಪಾಯಿಗೆ ಬಿಕರಿಯಾಗುತ್ತವೆ ಮಾಂಸ ಮತ್ತು ಚರ್ಮಕ್ಕಾಗಿ ಜಿಂಕೆ, ಕಡವೆ, ಕಾಟಿಯಂತಹ ಪ್ರಾಣಿಗಳನ್ನು ಬೇಟೆಯಾಡಿದರೆ, ಹುಲಿ, ಚಿರತೆ, ಆನೆಗಳನ್ನು ದಂತ, ಉಗುರು, ಚರ್ಮ, ಮೂಳೆಗಾಗಿ ಕೊಂದು ಸಾಗಿಸುವ ಜಾಲ ಸಕ್ರಿಯವಾಗಿದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಕಳ್ಳಬೇಟೆ ಜಾಡು ಹಿಡಿದು...:

ಕಳ್ಳಬೇಟೆಯ ಜಾಡು ಹಿಡಿದು ಹೊರಟರೆ ಕಾಡಿನ ರಹಸ್ಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಹಾಗೆ ನೋಡಿದರೆ, ಕಾಡಿನಲ್ಲಿ ನಡೆಯುವ ಅಪರಾಧ ಪ್ರಕರಣಗಳ ಪೈಕಿ ಹೊರ ಜಗತ್ತಿಗೆ ತಲುಪುವುದು ಶೇ 10 ರಿಂದ 20ರಷ್ಟು ಮಾತ್ರ. ಉಳಿದವು ಕಾಡಿನಲ್ಲೇ ಸಮಾಧಿಯಾಗುತ್ತವೆ.

ಕಾಡಿನಲ್ಲಿ ಕಳ್ಳ ದಾರಿಯ ಜಾಡು ತೋರಿಸುವವರು, ಆಯುಧ ಒದಗಿಸುವವರು, ಬೇಟೆ ಆಡುವವರು,ಹಣಕಾಸು ಒದಗಿಸುವವರು, ಇದಕ್ಕೆ ಸಹಾಯ ಮಾಡುವವರು, ಖರೀದಿದಾರರು ರಹಸ್ಯವಾಗಿ ಕೆಲಸ ಮಾಡುತ್ತಾರೆ. ಕಾಡುಗಳ್ಳರಿಗೆ ಬೇಕಾಗುವ ಆಯುಧ ಪೂರೈಸುವ ದೊಡ್ಡ ಜಾಲ ಸಕ್ರಿಯವಾಗಿದೆ. ಗಡಿಭಾಗದಲ್ಲಿಯೇ ನಾಡಬಂದೂಕು ತಯಾರಿಸಲಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಪೊಲೀಸ್‌ ಹಾಗೂ ಇಲಾಖೆ ಜೊತೆಗಿನ ಸಮನ್ವಯ ಕೊರತೆಯೂ ಇದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯ ಪರಿಸರವಾದಿಗಳು.

2013-2015ರ ನಡುವೆ ಅಂದಿನ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎಸ್‌.ಎಸ್‌.ಲಿಂಗರಾಜ ಅವರು ತಮಗೆ ಬಂದ ಮಾಹಿತಿಯಿಂದ ಪುಣಜೂರು ವ್ಯಾಪ್ತಿಯ ಕಾಡಂಚಿನಲ್ಲಿರುವ ಗ್ರಾಮಗಳ ಕಳ್ಳಬೇಟೆಗಾರರಿಂದ ದೊಡ್ಡ ಪ್ರಮಾಣದಲ್ಲಿ ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದರು. ಇದಾದ ನಂತರ ಇಂತಹ ಕಾರ್ಯಾಚರಣೆ ನಡೆದಿಲ್ಲ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾಡಿನೊಳಗೆ ಗಸ್ತು ತಿರುಗುವುದನ್ನು ಕಡಿಮೆ ಮಾಡಿರುವುದು ಮತ್ತು ಮಾಹಿತಿದಾರರ ಜೊತೆ ಸಂಪರ್ಕ ಕಳೆದುಕೊಂಡಿರುವುದೇ ಇದಕ್ಕೆ ಕಾರಣ ಎನ್ನುವುದು ಸ್ಥಳೀಯರ ಆಪಾದನೆ.

ಈ ಘಟನೆಯ ಬಳಿಕ ಕಳ್ಳಬೇಟೆಗಾರರು ಮನೆಯಲ್ಲಿ ನಾಡ ಬಂದೂಕು ಇರಿಸುತ್ತಿಲ್ಲ. ಬದಲಾಗಿ ಅರಣ್ಯವೇ ಶಸ್ತ್ರಾಸ್ತ್ರಗಳ ಅಡುಗುದಾಣಗಳಾಗಿ ಬದಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಓಡಾಡದ, ಮಾನವ ಸಂಪರ್ಕಕ್ಕೆ ಸಿಗದ ಜಾಗಗಳನ್ನು ಗುರುತಿಸಿ ಭೂಮಿ ಅಡಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ನಾಡ ಬಂದೂಕು ಹಾಗೂ ಶಸ್ತ್ರಾಸ್ತ್ರ ಮುಚ್ಚಿಡುತ್ತಾರೆ.

ತಮಿಳುನಾಡಿಗೆ ಹೊಂದಿಕೊಂಡಿರುವ ಸತ್ತೇಗಾಲ ಸೇತುವೆ, ಗರಿಕೆಕಂಡಿ, ಅರ್ಧನಾರಿಪುರ ಹಾಗೂ ಪಾಲಾರ್ ಸಹಿತ ಗಡಿ ಭಾಗಗಳು ಅರಣ್ಯ ಅಪರಾಧ ಪ್ರಕರಣಗಳ ತವರು. ಗಡಿಯಲ್ಲಿ ಕಳ್ಳಬೇಟೆಗಾರರಿಗೆ ಸುಲಭವಾಗಿ ನಾಡ ಬಂದೂಕು, ಗನ್‌ ಪೌಡರ್‌, ಮದ್ದು, ಗುಂಡು ಪೂರೈಕೆಯಾಗುತ್ತಿವೆ. ಅಲ್ಲಿ ತಯಾರಾಗುವ ಬಂದೂಕು ಕಳ್ಳದಾರಿ ಮೂಲಕ ಅನಾಯಾಸವಾಗಿ ರಾಜ್ಯದ ಗಡಿ ಪ್ರವೇಶಿಸುತ್ತಿವೆ. ಸ್ಥಳೀಯವಾಗಿಯೂ ನಾಡ ಬಂದೂಕುಗಳ ತಯಾರಿಕೆ ನಡೆಯುತ್ತಿದೆ.

ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಈ ಕರಾಳ ದಂಧೆ ಮಟ್ಟಹಾಕಬೇಕು. ನಾಡಕೋವಿಗಳ ಸಂಗ್ರಹ ಅಡಗುದಾಣ ಪತ್ತೆ ಹಚ್ಚಲು ಕಾಡಂಚಿನ ಜನರ ನೆರವು ಪಡೆಯಬೇಕು ಎನ್ನುವುದು ಸ್ಥಳೀಯ ಪರಿಸರವಾದಿ ಕೆ.ಮಲ್ಲೇಶಪ್ಪ ಸಲಹೆ.

ದನ ಮೇಯಿಸುವ, ಹುಡುಕುವ ನೆಪದಲ್ಲಿ ಅರಣ್ಯ ಪ್ರವೇಶಿಸುವ ಬೇಟೆಗಾರರು ಅಲ್ಲಿ ಬಚ್ಚಿಟ್ಟಿರುವ ಬಂದೂಕು ಬಳಸಿ ಬೇಟೆಯಾಡುತ್ತಾರೆ. ಇದೊಂದು ಸಂಘಟಿತ ಕೃತ್ಯ. ಇಂತಹ ತಂಡದಲ್ಲಿ ಬೇಟೆಯ ಜಾಡು ಪತ್ತೆ ಹಚ್ಚುವವರು, ಬೇಟೆಗಾರರು, ಮಾಂಸವನ್ನು ತುಂಡು, ತುಂಡಾಗಿ ಕತ್ತರಿಸುವವರು, ಚರ್ಮ ಸುಲಿಯುವವರು, ಕಳ್ಳದಾರಿಗಳಲ್ಲಿ ಸಾಗಿಸುವ ನಿಪುಣರು ಇರುತ್ತಾರೆ. ಬೇಟೆಯಾಡಿದ್ದಕ್ಕೆ ಒಂಚೂರು ಕುರುಹು ಸಿಗದಂತೆ ಅಚ್ಚುಕಟ್ಟಾಗಿ ಕೆಲಸ ಮಾಡಿ ಮುಗಿಸುವುದರಿಂದ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ.

'ನಾಲ್ಕೈದು ವರ್ಷಗಳ ಹಿಂದೆ ತಮಿಳುನಾಡು ಸರ್ಕಾರ ನಾಡ ಬಂದೂಕುಗಳನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸುವಂತೆ ಗಡುವು ನೀಡಿತ್ತು. ಕಾಲಮಿತಿಯೊಳಗೆ ಬಂದೂಕು ಒಪ್ಪಿಸದಿದ್ದರೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಬಹಳಷ್ಟು ಬೇಟೆಗಾರರು ನಾಡ ಬಂದೂಕುಗಳನ್ನು ಒಪ್ಪಿಸಿದ್ದರು. ಇದೇ ಮಾದರಿಯಲ್ಲಿ ಕರ್ನಾಟಕ ಕೂಡ ಕ್ರಮ ಕೈಗೊಳ್ಳಬೇಕು. ಶ್ವಾನದಳ ಹಾಗೂ ತಂತ್ರಜ್ಞಾನದ ನೆರವಿನೊಂದಿಗೆ ಕಾಡಿನೊಳಗೆ ಅಡಗಿಸಿಟ್ಟಿರುವ ಬಂದೂಕುಗಳನ್ನು ಪತ್ತೆ ಹಚ್ಚಬೇಕು' ಎನ್ನುತ್ತಾರೆ ಪರಿಸರವಾದಿ ಜೋಸೆಫ್ ಹೂವರ್.

ಅರಣ್ಯ ಇಲಾಖೆಯ ಅಧಿಕೃತ ಅಂಕಿ, ಅಂಶಗಳ ಪ್ರಕಾರ ಹತ್ತು ವರ್ಷಗಳಲ್ಲಿ ಜಿಲ್ಲೆಯ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮ, ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ ಚಾಮರಾಜನಗರ ವೃತ್ತದಲ್ಲಿ ದಾಖಲಾಗಿರುವ ಅರಣ್ಯ ಅಪರಾಧ ಪ್ರಕರಣ ಸಂಖ್ಯೆ 3,700. ಇವುಗಳಲ್ಲಿ 777 ಅರಣ್ಯ ಅಪರಾಧ ಹಾಗೂ 378 ಕಳ್ಳಬೇಟೆ ಪ್ರಕರಣ. ಬೇಟೆಗಾರರಿಂದ ನಾಡ ಬಂದೂಕು ವಶ ಮತ್ತು ದಾಳಿ ವೇಳೆ ನಡೆದ ಗುಂಡಿನ ಚಕಮಕಿಗೆ ಸಂಬಂಧಿಸಿದಂತೆ 66 ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ.

ಪ್ರತೀಕಾರದ ಕಿಚ್ಚು:

ಹನೂರು ಶೂಟೌಟ್‌ಗೆ ಪ್ರತೀಕಾರವಾಗಿ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಧಾಮದೊಳಗಿರುವ 10 ಕಳ್ಳಬೇಟೆ ತಡೆ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ಕೆಲವು ಶಿಬಿರಗಳ ಧ್ವಂಸಕ್ಕೆ ಜಿಲೆಟಿನ್ ಬಳಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹತ್ತು ಎಕರೆಗೂ ಹೆಚ್ಚು ಕಾಡಿಗೆ ಬೆಂಕಿ ಇಡಲಾಗಿದೆ.

ಜಿಲೆಟಿನ್ ಬರುವುದು ಎಲ್ಲಿಂದ?:

ಚಾಮರಾಜನಗರ ಜಿಲ್ಲೆಯಲ್ಲಿ 180 ಕಲ್ಲು ಕ್ವಾರಿಗಳಿದ್ದು, ಆ ಪೈಕಿ ಬಂಡೀಪುರ ಅರಣ್ಯ ಪ್ರದೇಶ ಇರುವ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 85, ಚಾಮರಾಜನಗರ ತಾಲ್ಲೂಕಿನಲ್ಲಿ 93, ಹನೂರು ಹಾಗೂ ಕೊಳ್ಳೇಗಾಲದಲ್ಲಿ ಎರಡು ಕ್ವಾರಿಗಳಿವೆ. ಇಲ್ಲಿ ಬಂಡೆ ಸ್ಫೋಟಿಸಲು ಬಳಸುವ ಜಿಲೆಟಿನ್‌ ಕಡ್ಡಿಗಳು ಸುಲಭವಾಗಿ ಕಳ್ಳಬೇಟೆಗಾರರ ಕೈ ಸೇರುತ್ತಿವೆ ಎನ್ನುವುದು ಪೊಲೀಸರ ವಾದ.

ಜೆಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರವನ್ನು ಸ್ಫೋಟಿಸಿರುವ ಪ್ರಕರಣದ ಜಾಡು ಹಿಡಿದಿರುವ ಪೊಲೀಸರು ಜೆಲೆಟಿನ್ ಪೂರೈಕೆಯ ಜಾಲದ ಬೆನ್ನು ಹತ್ತಿದ್ದಾರೆ. ಅಕ್ರಮ ನಾಡ ಬಂದೂಕುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು ಎನ್ನುತ್ತಾರೆ ಚಾಮರಾಜನಗರ ಎಸ್‌.ಪಿ ಎಂ.ಮುತ್ತುರಾಜ್.

ಸಿಬ್ಬಂದಿ ಕೊರತೆ; ಕಾಡು ರಕ್ಷಣೆ ಸವಾಲು!:

ಕಾಡು ರಕ್ಷಣೆ ಹೊಣೆ ಹೊತ್ತಿರುವ ಅರಣ್ಯ ಇಲಾಖೆಗೆ ಸಿಬ್ಬಂದಿ ಕೊರತೆಯೇ ಸವಾಲಾಗಿದೆ. ಜೊತೆಗೆ ಆಧುನಿಕ ಶಸ್ತ್ರಾಸ್ತ್ರ, ಮೂಲಸೌಕರ್ಯ, ಅತ್ಯಾಧುನಿಕ ತಂತ್ರಜ್ಞಾನದ ಕೊರತೆಯಂತಹ ಸಮಸ್ಯೆಗಳನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಖಾಲಿ ಹುದ್ದೆ ಭರ್ತಿಯಾಗದಿರುವುದು ಕೂಡ ತೊಡಕಾಗಿದೆ.

ಅರ್ಧಕ್ಕಿಂತ ಹೆಚ್ಚು ಅರಣ್ಯ ವೀಕ್ಷಕರು, ಅರಣ್ಯ ರಕ್ಷಕರ ಹುದ್ದೆಗಳು ಖಾಲಿ ಇವೆ. ಅರಣ್ಯ ರಕ್ಷಣೆಯಲ್ಲಿ ಮುಂಚೂಣಿ ಸಿಬ್ಬಂದಿ ಎನಿಸಿಕೊಳ್ಳುವ ಇವರಿಗೆ ಹೆಚ್ಚು ಬೀಟ್‌ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಪರಿಣಾಮಕಾರಿಯಾಗಿ ಗಸ್ತು ಮೇಲೆ ನಿಗಾ ವಹಿಸಲು, ಕಾಡಿನೊಳಗೆ ತಿರುಗಲು ಅವರಿಂದ ಸಾಧ್ಯವಾಗುತ್ತಿಲ್ಲ.

ಕಾಯಂ ನೌಕರರಿಗೆ ಮಾತ್ರ ಗನ್‌ ಬಳಸುವ ಅಧಿಕಾರವಿದೆ. ಅವರಿಲ್ಲದಿದ್ದಾಗ ಕಾಡುಪ್ರಾಣಿ, ಕಳ್ಳಬೇಟೆಗಾರರು ದಾಳಿ ನಡೆಸಿದರೆ ಹಂಗಾಮಿ ನೌಕರರು ಅವರನ್ನು ಎದುರಿಸಲು ಸಾಧ್ಯವಾಗದೆ ಅಪಾಯ ಮೈಮೇಲೆ ಎಳೆದುಕೊಂಡ ಘಟನೆಗಳು ವರದಿಯಾಗಿವೆ.

ಮೊದಲಿದ್ದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮಸ್ಥರೊಂದಿಗೆ, ಆದಿವಾಸಿಗಳು, ಬುಡಕಟ್ಟು ಜನರೊಂದಿಗೆ ಉತ್ತಮ ಬಾಂಧವ್ಯ ಮತ್ತು ಉತ್ತಮ ಮಾಹಿತಿ ಜಾಲ ಹೊಂದಿದ್ದರು. ಕಾಡಿನ ಇಂಚಿಂಚೂ ಅವರಿಗೆ ಗೊತ್ತಿರುತಿತ್ತು. ಒಂದು ಮರ ಬಿದ್ದರೂ, ಪ್ರಾಣಿ ಸತ್ತರೂ ಮಾಹಿತಿ ತಲುಪುತಿತ್ತು. ಈಗ ಹಿಂದಿನ ಪರಿಸ್ಥಿತಿ ಇಲ್ಲ. ಗಸ್ತು ಕಡಿಮೆಯಾಗಿದೆ. ಮಾಹಿತಿದಾರರ ಸಂಖ್ಯೆ ಕುಸಿದಿದೆ. ಇದು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ ಎನ್ನುವ ಮಾತುಗಳಿವೆ.

'ಅರಣ್ಯ ಕಾಯುವ ಮುಂಚೂಣಿ ಸಿಬ್ಬಂದಿಯಾಗಿರುವ ಅರಣ್ಯ ರಕ್ಷಕರು ಮತ್ತು ಗಸ್ತು ಪಾಲಕರ ಹುದ್ದೆಗೆ ತಕ್ಕ ವೇತನ ನೀಡಬೇಕು. ಇದೀಗ ಹೊರಗುತ್ತಿಗೆ ಸಿಬ್ಬಂದಿಗೆ ದುಡಿಮೆಗೆ ತಕ್ಕ ವೇತನ ಇಲ್ಲ. ರಜೆ ಇಲ್ಲದೆ ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಸಿಗದೆ ಖಿನ್ನತೆಗೆ ಸಿಲುಕಿ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ದೇಶದ ಗಡಿ ಕಾಯುವ ಸೈನಿಕರಿಗೆ ನೀಡುವಂತೆ ಅರಣ್ಯ ಸಿಬ್ಬಂದಿಗೂ ಗೌರವ, ವೇತನ ಸಿಗಬೇಕು' ಎನ್ನುತ್ತಾರೆ ಪರಿಸರವಾದಿ ಮಲ್ಲೇಶಪ್ಪ.

ಪ್ರವಾಸೋದ್ಯಮ ನೆಪದಲ್ಲಿ ಕಳ್ಳಬೇಟೆಗೆ ಕುಮ್ಮಕ್ಕು!:

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಭಾರತೀಯ ಸೇನೆಯ ನಿವೃತ್ತ ಕರ್ನಲ್‌ ಒಡೆತನದ ಹೋಂ ಸ್ಟೇನಲ್ಲಿ ಕೆಲ ವಾರದ ಹಿಂದೆ 48 ಜಿಂಕೆ ಕೊಂಬು, ಚರ್ಮ, ನವಿಲುಗರಿ ಪತ್ತೆಯಾಗಿದ್ದವು. ಕಾಡಂಚಿನಲ್ಲಿರುವ ಕೆಲವು ರೆಸಾರ್ಟ್‌ಗಳು ಮೊಲ, ಜಿಂಕೆ, ಕಾಡುಹಂದಿ, ಸಾಂಬಾರ್ ಮೊದಲಾದ ಪ್ರಾಣಿಗಳ ಮಾಂಸದ ಊಟದ ಆಸೆ ತೋರಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯದ ಅಂಚಿನಲ್ಲಿರುವ ತಲೆ ಎತ್ತಿರುವ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳದ ಕಾರಣ ಪ್ರವಾಸೋದ್ಯಮದ ಹೆಸರಿನಲ್ಲಿಯೂ ಕಳ್ಳಬೇಟೆ ನಿರಂತರವಾಗಿ ನಡೆಯುತ್ತಿದೆ. ಇದೆಲ್ಲ ಗೊತ್ತಿದ್ದರೂ ಗೊತ್ತಿಲ್ಲದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂದು ದೂರುತ್ತಾರೆ ರೈತ ಮುಖಂಡ ಹೊನ್ನೂರು ಪ್ರಕಾಶ್‌.

ಕಳ್ಳಬೇಟೆ ನಿಯಂತ್ರಣಕ್ಕೆ ಅರಣ್ಯ ಅಪರಾಧ ನಿಯಂತ್ರಣ ಕೋಶ ಸಕ್ರಿಯಗೊಳಿಸಬೇಕು ಎಂದು ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದರು. ಇದು ಕಾರ್ಯಗತವಾಗಿಲ್ಲ. ಗ್ರಾಮದಂಚಿನ ಜನರ ಜೊತೆ ಅರಣ್ಯ ಇಲಾಖೆಯ ಸಂಬಂಧ ಸುಧಾರಣೆಯಾದರೆ ಕಳ್ಳಬೇಟೆ ನಿಯಂತ್ರಣವಾಗುತ್ತದೆ. ಸಂಘರ್ಷ ತಗ್ಗುತ್ತದೆ. ಕೇವಲ ಕ್ಯಾಮೆರಾ ಟ್ರ್ಯಾಪ್‌ ಅಳವಡಿಕೆಯಿಂದ ಅಪರಾಧ ಪ್ರಕರಣಗಳಿಗೆ ಸಾಕ್ಷ್ಯ ದೊರಕುತ್ತದೆ ಹೊರತು ಅಪರಾಧ ನಿಲ್ಲುವುದಿಲ್ಲ.

'ಆತ್ಮವಿಲ್ಲದ ಕಾಡು ಉಳಿದರೆಷ್ಟು?:

ಹನೂರು ಶೂಟೌಟ್‌ನಂತಹ ದುರದೃಷ್ಟಕರ ಘಟನೆ ಮರುಕಳಿಸಬಾರದು. ಮನೆ ಗಳಲ್ಲಿ ಪರವಾನಗಿ ಇಲ್ಲದ ನಾಡಕೋವಿಗಳು ಸಿಗುತ್ತಿವೆ. ಇದು, ಬೇಟೆ ನಮ್ಮ ಸಂಸ್ಕೃತಿ ಮತ್ತು ಹಕ್ಕು ಎಂದು ಪ್ರತಿಪಾದಿಸುವ ಮನಃಸ್ಥಿತಿಯ ಪ್ರತೀಕ. ಹತ್ತು ವರ್ಷಗಳಲ್ಲಿ ನಾಲ್ಕು ಸಾವಿರ ಅರಣ್ಯ ಅಪರಾಧ ಪ್ರಕರಣ ದಾಖಲಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ವನ್ಯಜೀವಿಗಳನ್ನೆಲ್ಲಾ ಕೊಂದು ಆತ್ಮವಿಲ್ಲದ ಕಾಡನ್ನು ಉಳಿಸಿಕೊಂಡರೆಷ್ಟು, ಬಿಟ್ಟರೆಷ್ಟು? ಇಲ್ಲಿ ಕಾನೂನು ವ್ಯವಸ್ಥೆ ಎಚ್ಚೆತ್ತುಕೊಳ್ಳ ಬೇಕು. ಇದು ಕೇವಲ ಅರಣ್ಯ ಇಲಾಖೆಗಷ್ಟೇ ಸಂಬಂಧಿಸಿದ ವಿಷಯವಲ್ಲ. ಪೊಲೀಸರೂ ಕೈಜೋಡಿಸಬೇಕು. ಕಾಡಂಚಿನ ಸಮುದಾಯಕ್ಕೆ ತಮ್ಮ ಹೊಣೆ ಗಾರಿಕೆಯ ಅರಿವನ್ನು ಮೂಡಿಸುವ ಜವಾಬ್ದಾರಿ ಸರ್ಕಾರದ್ದು.

-ಕೃಪಾಕರ, ಸೇನಾನಿ ವನ್ಯಜೀವಿ ತಜ್ಞರು

-ಹೊನ್ನೂರು ಪ್ರಕಾಶ್, ರೈತ ಮುಖಂಡಇಲಾಖೆ ಮೇಲೆ ಕೋಪಕ್ಕೆ ಕಾಡು ಬಲಿ: ಬಡತನ, ಅನಕ್ಷರತೆ, ಅರಣ್ಯ ಕಾನೂನುಗಳ ಅರಿವಿನ ಕೊರತೆ, ಇಲಾಖೆ ಮೇಲಿನ ಆಕ್ರೋಶ ವನ್ಯಜೀವಿಗಳ ಬೇಟೆ ಹೆಚ್ಚಾಗಲು ಕಾರಣ ಇರಬಹುದು. ಜನರ, ಸಿಬ್ಬಂದಿ, ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕು. ಕಾನೂನು, ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಮಹತ್ವ ಕುರಿತು ನಿರಂತರ ಜಾಗೃತಿ ಮೂಡಿಸಬೇಕು. ಮುಖ್ಯವಾಗಿ ಕಾಡಂಚಿನ ಜನರ ಜೀವನೋಪಾಯ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವಿನ ಕಂದಕ ಮುಚ್ಚುವ ಪ್ರಯತ್ನ ನಡೆಯಬೇಕು-ಚಂಗಡಿ ಕರಿಯಪ್ಪ, ಹೋರಾಟಗಾರ'ಹೈನುಗಾರಿಕೆ ಜೀವಾಳ': ಅರಣ್ಯ ಕಾನೂನುಗಳನ್ನು ಮುಂದಿಟ್ಟುಕೊಂಡು ಕಾಡಂಚಿನಲ್ಲಿ ನೆಲೆಸಿರುವವರ ಮೇಲೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ. ಹೈನುಗಾರಿಕೆ ಈ ಬಾಗದ ಆರ್ಥಿಕ ಜೀವಾಳವಾಗಿದ್ದು ಕಾಡಿನೊಳಗೆ ಜಾನುವಾರು ಮೇಯಿಸಲು ಹೋದರೆ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಾರೆ, ಪ್ರಾಣಿಗಳ ದಾಳಿಯಿಂದ ಬೆಳೆ ನಾಶವಾದರೆ ಪರಿಹಾರ ಕೊಡುವುದಿಲ್ಲ. ಮಳೆ-ಬೆಳೆ ಇಲ್ಲದೆ ಸ್ಥಳೀಯರು ಕಂಗಾಲಾಗಿದ್ದಾರೆ. ಜೀವ ವೈವಿಧ್ಯ ರಕ್ಷಣೆಗೆ, ಕಾಡಂಚಿನ ಜನರ ಜೀವನೋಪಾಯ ಸುಧಾರಣೆಗೆ 'ಎಕೋ ಡೆವಲಪ್‌ಮೆಂಟ್ ಸಮಿತಿ' ರಚನೆ ಮಾಡಬೇಕು ಎಂಬ ನಿಯಮವಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಸರ್ವಾಧಿಕಾರಿ ಮನಸ್ಥಿತಿಯಿಂದ ಹೊರಬಂದು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಕಳ್ಳಬೇಟೆಯಂತಹ ಪ್ರಕರಣಗಳು ತಗ್ಗುತ್ತವೆ.-ವಿಲಿಯಂ ವಿನ್ಸೆಂಟ್, ಮೃತ ಅಂಥೋಣಿಸ್ವಾಮಿ ಸಹೋದರಕೊಂದವರಿಗೆ ಶಿಕ್ಷೆ ಆಗಲಿ: ಅರಣ್ಯದೊಳಗೆ ಜಾನುವಾರು ಮೇಯಿಸೋದು ಹಿಂದಿನಿಂದಲೂ ರೂಢಿ. ಕಾಡಿನೊಳಗೆ ಜಾನುವಾರು ಕಳೆದು ಹೋಗುವುದು, ಸ್ಥಳೀಯರು ಹೋಗಿ ಹುಡುಕುವುದು ಸಾಮಾನ್ಯ. ಅರಣ್ಯದೊಳಗೆ ಹೋದ ಮಾತ್ರಕ್ಕೆ ಬೇಟೆಗಾರರು ಎಂಬ ಹಣೆಪಟ್ಟಿ ಗುಂಡು ಹಾರಿಸಿರುವುದು ಕೊಲೆಗೆ ಸಮಾನ. ಉದ್ದೇಶಪೂರ್ವಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ. ಕೊಂದವರಿಗೆ ತಕ್ಕ ಶಿಕ್ಷೆಯಾಗಬೇಕು-ಸಿ.ಮಾದೇಗೌಡ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ'ಸೋಲಿಗರು ಪ್ರಕೃತಿ ಆರಾಧಕರು': ಸೋಲಿಗರ ಪಾಲಿಗೆ ಕಾಡು ಹಾಗೂ ವನ್ಯಜೀವಿಗಳು ದೇವರ ಸಮಾನ, ಆನೆ, ಹುಲಿ, ಕರಡಿ, ಹಂದಿ, ಕಾಡೆಮ್ಮೆ, ಹಾವು ಸೋಲಿಗರ ಕುಲದೈವಗಳಾಗಿದ್ದು ಆರಾಧಿಸಿಕೊಂಡು ಬಂದಿದ್ದೇವೆ. ಕಾಡುತ್ಪನ್ನಗಳನ್ನು ಸಂಗ್ರಹಿಸುವಾಗಲೂ ಅಂಟುವಾಳದ ಮರ, ನೆಲ್ಲಿಕಾಯಿ ಮರ ಹಾಗೂ ಜೇನು ಕಟ್ಟಿರುವ ಮರಗಳಿಗೆ ಪೂಜೆ ಸಲ್ಲಿಸಿಯೇ ಉತ್ಪನ್ನ ಸಂಗ್ರಹಿಸುವುದು. ಕಾಡಿನಲ್ಲಿ ಕಾಡ್ರಿಚ್ಚು ಕಾಣಿಸಿದಾಗ ಅರಣ್ಯ ಇಲಾಖೆ ಜೊತೆಗೂಡಿ ಬೆಂಕಿ ಹಾರಿಸುವ ಕೆಲಸ ಮಾಡುವುದು ಕಾಡಿನ ಜನರು.

ಅರಣ್ಯ ಇಲಾಖೆಯ ಕೊರತೆಗಳು..

* ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮ, ಬಿಳಿಗಿರಿ ರಂಗನಾಥಸ್ವಾಮಿ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರದಿಂದ ಮಂಜೂರಾಗಿದ್ದು, 1,334 ಹುದ್ದೆ. ನೇಮಕವಾದದ್ದು 547 ಸಿಬ್ಬಂದಿ ಮಾತ್ರ!

* 47 ವಲಯ ಅರಣ್ಯಾಧಿಕಾರಿ ಹುದ್ದೆಗಳ ಪೈಕಿ 27 ಭರ್ತಿ, 185 ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಿಣಿದಾರ ಪೈಕಿ 148 ಹುದ್ದೆಗಳಿಗೆ ಮಾತ್ರ ನೇಮಕವಾಗಿದೆ. 726 ಗಸ್ತು ಅರಣ್ಯ ಪಾಲಕರ ಹುದ್ದೆ ಪೈಕಿ 297 ಹುದ್ದೆ ಭರ್ತಿಯಾಗಿ, 429 ಖಾಲಿ ಉಳಿದಿವೆ. 357 ಅರಣ್ಯ ವೀಕ್ಷಕರ ಹುದ್ದೆಗಳಿಗೆ 60 ಮಂದಿ ನೇಮಕ ಮಾಡಿಕೊಳ್ಳಲಾಗಿದೆ.

* ವನ್ಯಜೀವಿ ವಿಭಾಗಗಳ ಕಳ್ಳಬೇಟೆ ಶಿಬಿರಗಳಲ್ಲಿ ನಾಲ್ವರು ಹಂಗಾಮಿ ಹಾಗೂ ಒಬ್ಬ ಕಾಯಂ ನೌಕರ ಇರಬೇಕು ಎಂದು ಇಲಾಖೆಯ ನಿರ್ದೇಶನವಿದೆ. ಆದರೆ, ಈ ಭಾಗಗಳಲ್ಲಿ ನೌಕರರ ಕೊರತೆಯಿದ್ದು, ಇರುವ ದಿನಗೂಲಿ ನೌಕರ ನಿಗದಿತ ಎಂಟು ತಾಸಿಗಿಂತಲೂ ಹೆಚ್ಚು ಸಮಯ ದುಡಿಯಬೇಕಾಗಿದೆ.

* ಪಿಎಫ್, ಇಎಸ್‌ಐ ಸೌಲಭ್ಯಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ನಮ್ಮ ಕೈ ಸೇರುತ್ತಿಲ್ಲ ಎಂಬುದು ದಿನಗೂಲಿ ನೌಕರರ ಅಳಲು, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ 110ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿಗೆ ಇದೇ ವರ್ಷದ ಆರಂಭದಲ್ಲಿ ನಾಲ್ಕು ತಿಂಗಳು ವೇತನ ಬಿಡುಗಡೆಯಾಗಿರಲಿಲ್ಲ.

* ವೇತನ ಪಾವತಿ ಟೆಂಡರ್ ಪಡೆದಿದ್ದ ಸಂಸ್ಥೆ ವೇತನ ಸಹಿತ ಸಂಕಷ್ಟ ಪರಿಹಾರ ಭತ್ಯೆಯನ್ನೂ ನೀಡಿರಲಿಲ್ಲ. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲೂ 120ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರಿಗೆ ವೇತನ ಬಾಕಿ ಇತ್ತು, ಪಿಎಫ್, ಇಎಸ್‌ಐ ವಂತಿಗೆಯೂ ಸರಿಯಾಗಿ ಪಾವತಿಯಾಗಿರಲಿಲ್ಲ. ಪ್ರಸ್ತುತ ಬಾಕಿ ವೇತನ ಬಿಡುಗಡೆಯಾಗಿದೆ.

ಪೂರಕ ಮಾಹಿತಿ: ಎಂ.ಮಹೇಶ್

Dailyhunt
Disclaimer: This content has not been generated, created or edited by Dailyhunt. Publisher: Prajavani