ಕಾರವಾರ: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಬಹುಭಾಗದ ಜನರ ಊಟದ ಎಲೆಯಲ್ಲಿ ಕೆಂಬಣ್ಣದ ಹರಳು ಕಾಣಸಿಗುತ್ತದೆ. ಹೀಗೆ ಕಾಣಸಿಗುವುದು ಪರಿಶುದ್ಧ ಉಪ್ಪು. ಯಂತ್ರಗಳ ಒತ್ತಡಕ್ಕೆ ಸಿಲುಕಿ ಪುಡಿಯಾಗದ, ರಾಸಾಯನಿಕ ಅಂಶಗಳನ್ನು ಅಂಟಿಸಿಕೊಳ್ಳದ ಅಪ್ಪಟ ನೈಸರ್ಗಿಕ ಉಪ್ಪು.
ಅರಬ್ಬಿ ಸಮುದ್ರ, ಅಘನಾಶಿನಿ ನದಿ ನೀರಿನ ಮಿಶ್ರಣದ ಈ ಪದಾರ್ಥ ವಿಶಾಲ ಗದ್ದೆಯಿಂದ ಊಟದ ತಟ್ಟೆಗೆ ಬಂದು ಬೀಳುವವವರೆಗೆ ಸಾವಯವ ಪದ್ಧತಿಯಲ್ಲೇ ಸಾಗುವುದೇ ಇದರ ವಿಶೇಷ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಸಾಣಿಕಟ್ಟಾ ಗ್ರಾಮದ ಗದ್ದೆಗಳಲ್ಲಿ 'ಬೆಳೆಯುವ' ಉಪ್ಪನ್ನು ಸಹಕಾರ ಸಂಘವೊಂದು ನಿಭಾಯಿಸುತ್ತದೆ. ಉಪ್ಪು ತಯಾರಿಸಲು ನೂರಾರು ಕಾರ್ಮಿಕರಿಗೆ ಕೆಲಸ, ಅದರಿಂದ ಬಂದ ಆದಾಯ ಭೂಮಾಲೀಕರಿಗೆ ಹಂಚುವ ಮೂಲಕ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ ಅಪರೂಪದ ಸಹಕಾರ ಸಂಘವೂ ಇದಾಗಿದೆ. 74 ವರ್ಷಗಳಿಂದ ಎಂದೂ ನಷ್ಟ ಕಾಣದೆ ಮುನ್ನಡೆದಿರುವ ಈ ಸಂಘದ ಹೆಸರು 'ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘ'.
ಅಘನಾಶಿನಿ ಹಿನ್ನೀರಿನ ಪಕ್ಕದಲ್ಲಿರುವ ಸಾಣಿಕಟ್ಟಾದ 469 ಎಕರೆ ವಿಶಾಲ ಗದ್ದೆಯಲ್ಲಿ ನೈಸರ್ಗಿಕ ವಿಧಾನಗಳೊಂದಿಗೆ ಉಪ್ಪು ತಯಾರು ಆಗುತ್ತದೆ. 433 ಎಕರೆಯ ನಾಗರಬೈಲ್ ವಲಯ, ಅದರ ಸಮೀಪದಲ್ಲಿನ ಇನ್ನೊಂದು ಬದಿಯ 36 ಎಕರೆಯ ನಾರಣಾಪುರ ವಲಯದ ಉಪ್ಪು ತಯಾರಿಸುವ ಕಾರ್ಖಾನೆಗಳು! ಈ ವಲಯಗಳಲ್ಲಿ ಇರುವ ತಲಾ 100 ಅಡಿ ಉದ್ದ, 20 ಅಡಿ ಅಗಲದ 858 ತಾಕುಗಳೇ (ಗದ್ದೆ) ಉಪ್ಪು ಸಿದ್ಧಪಡಿಸುವ 'ಯಂತ್ರ'ಗಳು.
ಸಮುದ್ರದ ಉಪ್ಪು ನೀರನ್ನು ಗದ್ದೆಗೆ ಎಳೆದುಕೊಂಡು, 10 ಕಿ.ಮೀ ಉದ್ದದ ಜಿಗ್‌ಜ್ಯಾಗ್ ಕಾಲುವೆಯಲ್ಲಿ ಚಲಿಸುವಂತೆ ಮಾಡುವ ಮೂಲಕ ನೀರಿನಲ್ಲಿನ ಉಪ್ಪಿನ ಸಾಂದ್ರತೆ ಏರಿಸುವ ಪದ್ಧತಿಯ ಮೂಲಕ ಉಪ್ಪು ಸಿದ್ಧಪಡಿಸುವ ವಿಭಿನ್ನ ಕೆಲಸ ಇಲ್ಲಿ ನಡೆಯುತ್ತದೆ.
ಇಲ್ಲಿ ಕೆಲಸ ಮಾಡುವ ತಂತ್ರಜ್ಞರಿಂದ ಹಿಡಿದು, ಬಿರು ಬಿಸಿಲಿನಲ್ಲಿ ಉಪ್ಪು ತೆಗೆಯುವ ಕಾರ್ಮಿಕರವರೆಗೆ ಎಲ್ಲರೂ ಸ್ಥಳೀಯರು. ಅಂದಾಜು 150 ಮಂದಿ ಕಾರ್ಮಿಕರು ಇಲ್ಲಿ ದುಡಿಯುತ್ತಾರೆ. ಅವರೆಲ್ಲರಿಗೆ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘ ಕೆಲಸವನ್ನು ನೀಡುತ್ತದೆ. ಇಲ್ಲಿ ಉಪ್ಪು ತಯಾರಿಕೆಯಿಂದ ಹಿಡಿದು, ಅದನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸ ಸಂಘವೇ ನಿರ್ವಹಿಸುತ್ತದೆ.
ಸಾಣಿಕಟ್ಟಾದ ಗದ್ದೆಗಳಲ್ಲಿ ಉಪ್ಪು ತಯಾರಾಗುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ. ಇದಕ್ಕೆ 3 ಶತಮಾನಗಳ ಇತಿಹಾಸವಿದೆ. ಆದರೆ, ಒಂದು ಕಾಲದಲ್ಲಿ ಸಾಂಪ್ರದಾಯಿಕವಾಗಿ ತೆಗೆಯಲಾಗುತ್ತಿದ್ದ ಉಪ್ಪು ಈಗ ವೈಜ್ಞಾನಿಕ ವಿಧಾನದೊಂದಿಗೆ ಸಿದ್ಧಗೊಳ್ಳುತ್ತಿದೆ. ಆಗಿನ ಕಾಲಕ್ಕೆ ಹೋಲಿಸಿದರೆ ಈಗ ಉಪ್ಪು ಸಂಗ್ರಹ ಹೆಚ್ಚುತ್ತಿದ್ದರೂ ತಯಾರಿಕೆ ಪ್ರಕ್ರಿಯೆಯಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಿದೆ.
'ಬೇಸಿಗೆಯಲ್ಲಿ ನೋಡಲು ಚೆಂದ ಕಾಣುವ ಉಪ್ಪಿನ ಗದ್ದೆಯನ್ನು ಮಳೆಗಾಲದಲ್ಲಿ ನೋಡಲಾಗದು. ಸುತ್ತಲೂ ಇರುವ ಗುಡ್ಡಗಳಿಂದ ಹರಿದು ಬರುವ ನೀರಿನಿಂದ ಅಘನಾಶಿನಿ ಉಕ್ಕೇರಿದಾಗ ಗದ್ದೆ ಸಂಪೂರ್ಣ ಜಲಾವೃತವಾಗಿ ಕೆಸರಿನಿಂದ ಆವರಿಸಿಕೊಳ್ಳುತ್ತದೆ. ಮಳೆಗಾಲ ಮುಗಿದ ಬಳಿಕ ಇಲ್ಲಿ ಸಂಗ್ರಹಗೊಂಡ ಕೆಸರು ತೆರವುಗೊಳಿಸಿ, ಗದ್ದೆಯ ಕಟ್ಟೆ ಕಟ್ಟಿಕೊಳ್ಳಲು 400 ಕಾರ್ಮಿಕರು ಕನಿಷ್ಠ ನಾಲ್ಕು ತಿಂಗಳು ಕೆಲಸ ಮಾಡಬೇಕು' ಎಂದು ಕಾರ್ಮಿಕ ಲಕ್ಷ್ಮಣ ಗೌಡ ಹೇಳಿದರು.

ಪೊಟ್ಟಣ ಮಾಡುವ ಸಲುವಾಗಿ ಉಪ್ಪಿನ ರಾಶಿಯಿಂದ ಉಪ್ಪನ್ನು ಬುಟ್ಟಿಯಲ್ಲಿ ತುಂಬಿ ಸಾಗಿಸುತ್ತಿರುವ ಕಾರ್ಮಿಕರು.
'ಇಡೀ ವರ್ಷಕ್ಕೆ ಸಾಲುವಷ್ಟು ಉಪ್ಪನ್ನು ಕೇವಲ ಮೂರುವರೆ ತಿಂಗಳ ಅವಧಿಯಲ್ಲಿ ಉತ್ಪಾದಿಸಬೇಕು. ಕೆಲ ವರ್ಷಗಳ ಹಿಂದೆ ಬರೋಬ್ಬರಿ ಐದು ತಿಂಗಳು ಉಪ್ಪು ತಯಾರಿಕೆಯ ಅವಧಿಯಾಗಿತ್ತು. ಬದಲಾಗುತ್ತಿರುವ ಹವಾಮಾನದಿಂದ ಇದು ಏರಿಳಿತ ಕಾಣುತ್ತಿದೆ. ಅಕಾಲಿಕ ಮಳೆ ಎದುರಾದರಂತೂ ಉಪ್ಪು ಸಂಗ್ರಹ ಬೇಗ ಸ್ಥಗಿತಗೊಳ್ಳುತ್ತದೆ. ಸಂಗ್ರಹಗೊಂಡ ಉಪ್ಪು ಕೂಡ ನೀರಿನಲ್ಲಿ ಕರಗುತ್ತದೆ' ಎಂದು ಸವಾಲುಗಳ ಬಗ್ಗೆ ಮಾತಿಗಿಳಿದರು ಉಪ್ಪಿನ ಗದ್ದೆಯ ನಿರ್ವಹಣೆ ಹೊಣೆ ಹೊತ್ತಿರುವ ಸೌರಭ್ ನಾಡಕರ್ಣಿ.
'ಸಮುದ್ರದ ಉಪ್ಪು ನೀರನ್ನು ಗದ್ದೆಗೆ ಹರಿಸಿದ ನಂತರ ಉಪ್ಪು ಉತ್ಪಾದನೆಯಾಗಲು ಸೂರ್ಯನ ಶಾಖವೇ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬೇಸಿಗೆಯಲ್ಲೂ ಮೋಡ ಕವಿದ ವಾತಾವರಣ ಎದುರಾದಾಗ ಉಪ್ಪು ತಯಾರಿಕೆ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಅಂತಹ ಸಮಸ್ಯೆ ಈಚಿನ ವರ್ಷದಲ್ಲಿ ಹೆಚ್ಚು ತಲೆದೋರುತ್ತಿದೆ' ಎಂದು ಸವಾಲಿನ ಬಗ್ಗೆ ಹೇಳಿದರು.
ಪ್ರತಿ ವರ್ಷ ಸರಾಸರಿ 10 ರಿಂದ 12 ಸಾವಿರ ಟನ್ ಉಪ್ಪು ಉತ್ಪಾದನೆ ಇಲ್ಲಿ ನಡೆಯುತ್ತಿದೆ. ಇಷ್ಟೊಂದು ಪ್ರಮಾಣದ ಉಪ್ಪು ಕೇವಲ ಮೂರುವರೆ ತಿಂಗಳ ಅಲ್ಪ ಅವಧಿಯಲ್ಲಿ ಆಗುತ್ತಿದೆ. ಆದರೆ, ಒಂದೆರಡು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದ ಉಪ್ಪು ಉತ್ಪಾದನೆ ಕುಸಿತ ಕಂಡಿದೆ.
'ಅರಬ್ಬಿ ಸಮುದ್ರ ಮಿಶ್ರಿತ ಅಘನಾಶಿನಿಯ ನೀರು ಮತ್ತು ಶಾಖ ಇವೆರಡನ್ನೇ ಬಳಸಿಕೊಂಡು ಉಪ್ಪು ಸಿದ್ಧಗೊಳ್ಳುತ್ತಿದೆ. ನೀರು ಮತ್ತು ಶಾಖವೇ ಇಲ್ಲಿ ಕಚ್ಚಾವಸ್ತುಗಳು. ಉತ್ಪಾದನೆಯ ಯಾವ ಹಂತದಲ್ಲೂ ಯಂತ್ರಗಳ ಬಳಕೆ ಮಾಡುವುದಿಲ್ಲ. ಸಿದ್ಧಗೊಂಡ ಉಪ್ಪನ್ನು ಸಾಗಿಸುವ ವಾಹನಗಳಷ್ಟೆ ಇಡೀ ಉತ್ಪಾದನೆ ಪ್ರಕ್ರಿಯೆಯಲ್ಲಿ ಬಳಕೆ ಆಗುವ ಯಂತ್ರಗಳು' ಎಂದು ಉಪ್ಪು ಉತ್ಪಾದನೆ ಪ್ರಕ್ರಿಯೆಯ ಮೇಲುಸ್ತುವಾರಿ ದುರ್ಗೇಶ್ ಕಾಗಾಲ ಹೇಳುವಾಗ ಪ್ರಕೃತಿಯ ಕರುಣೆಯ ಮೇಲೆ ಸಾಣಿಕಟ್ಟಾ ಉಪ್ಪು ಉತ್ಪಾದನೆ ಅವಲಂಬಿತವಾಗಿದೆ ಎಂಬುದು ಅರಿವಿಗೆ ಬಂತು.
'ಸಮುದ್ರ ಉಬ್ಬರದ ಸಮಯದಲ್ಲಿ ಅಘನಾಶಿನಿ ಅಳಿವೆಯ ಕಾಲುವೆಗೆ ಅಳವಡಿಸಿದ ಕಬ್ಬಿಣದ ಗೇಟುಗಳನ್ನು ತೆರೆದು ಉಪ್ಪಿನ ಆಗರದ ಪಕ್ಕದಲ್ಲಿನ ಕಿರು ಜಲಾಶಯಕ್ಕೆ ನೀರು ಹರಿಸಿಕೊಳ್ಳುತ್ತೇವೆ. ನೀರಿನಲ್ಲಿ ಉಪ್ಪಿನ ಅಂಶದ ಸಾಂದ್ರತೆ 3 ಡಿಗ್ರಿ ತಲುಪುತ್ತಿದ್ದಂತೆ ಉಪ್ಪಿನ ಆಗರದ ಸಮೀಪದ ಬಫರ್ ಪ್ರದೇಶಗಳಿಗೆ ನೀರು ಹರಿಸಲಾಗುತ್ತದೆ. ಬಿಸಿಲ ಶಾಖಕ್ಕೆ ಉಪ್ಪಿನ ಸಾಂದ್ರತೆ ಪ್ರಮಾಣ 20 ಡಿಗ್ರಿ ತಲುಪಿದ ಬಳಿಕ ಉಪ್ಪಿನ ಗದ್ದೆಗಳಿಗೆ ನೀರು ಹರಿಬಿಡಲಾಗುತ್ತದೆ. ಸೂರ್ಯನ ಶಾಖಕ್ಕೆ ಸಿಹಿನೀರು ಆವಿಯಾಗುತ್ತದೆ. ಗದ್ದೆಯಲ್ಲಿ ಉಪ್ಪು ಶೇಖರಣೆ ಆಗುತ್ತದೆ' ಎಂದು ದುರ್ಗೇಶ್ ಉಪ್ಪು ತಯಾರಿಕೆ ವಿಧಾನ ವಿವರಿಸಿದರು.
'26.5 ಡಿಗ್ರಿಯಿಂದ 29 ಡಿಗ್ರಿ ಸಾಂದ್ರತೆಯಲ್ಲಿ ಮಾತ್ರ ಸೇವನೆಗೆ ಯೋಗ್ಯವಾದ ಉಪ್ಪು ಸಿದ್ಧಗೊಳ್ಳುತ್ತದೆ. ಹೀಗಾಗಿ ಗದ್ದೆಯಲ್ಲಿ ಸಂಗ್ರಹಿಸಿಟ್ಟ ನೀರಿನ ಸಾಂದ್ರತೆ ಪ್ರಮಾಣವನ್ನು ನಿತ್ಯವೂ ಆಗಾಗ್ಗೆ ಬ್ಯುಮಿಯೊ ಮೀಟರ್ ಬಳಸಿ ಅಳೆಯಲಾಗುತ್ತದೆ. ಸಾಂದ್ರತೆ 29 ಡಿಗ್ರಿ ದಾಟಿದರೆ ತಯಾರಾಗುವ ಉಪ್ಪಿನಲ್ಲಿ ಮ್ಯಾಗ್ನಿಶಿಯಂ ಪ್ರಮಾಣ ಹೆಚ್ಚುತ್ತದೆ. ಸಾಂದ್ರತೆ ಹೆಚ್ಚುವುದು ಅರಿವಿಗೆ ಬಂದರೆ ಗದ್ದೆಯಿಂದ ನೀರು ಹೊರಕ್ಕೆ ಬಿಟ್ಟು ಸಾಂದ್ರತೆಯ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ' ಎಂದೂ ತಿಳಿಸಿದರು.

ಮರದ ಹಲಗೆಗಳನ್ನು ಜೋಡಿಸಿ ನಿರ್ಮಿಸಿರುವ ಉಪ್ಪು ದಾಸ್ತಾನು ಉಗ್ರಾಣ.
'ಉಪ್ಪು ತಯಾರಾಗುವ 858 ಗದ್ದೆಗಳಲ್ಲಿ ಸುಮಾರು 80 ಕಾರ್ಮಿಕರು ಉಪ್ಪು ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಇಲ್ಲಿ ಉಪ್ಪು ಸಂಗ್ರಹಿಸುವವರು ಪರಿಶಿಷ್ಟ ಆಗೇರ ಸಮುದಾಯಕ್ಕೆ ಸೇರಿದವರು. ಅವರು ಪಾರಂಪರಿಕವಾಗಿ ಉಪ್ಪು ಸಂಗ್ರಹದ ಕೆಲಸ ಮಾಡುತ್ತ ಬಂದಿದ್ದಾರೆ. ಪತಿ-ಪತ್ನಿ, ಸಹೋದರ-ಸಹೋದರಿ ಹೀಗೆ ಕುಟುಂಬಸ್ಥರು ಒಟ್ಟಾಗಿ ದುಡಿಯುವುದು ಅವರ ವಾಡಿಕೆ. ಹೀಗಾಗಿ 40 ಜೋಡಿಗೆ ತಲಾ 22 ಗದ್ದೆಗಳನ್ನು ಹಂಚಿಕೆ ಮಾಡಿಕೊಡಲಾಗಿದೆ. ಆಯಾ ಗದ್ದೆಯಲ್ಲಿ ನಿತ್ಯ ನಸುಕಿನ ಜಾವದಲ್ಲಿ ಉಪ್ಪು ಸಂಗ್ರಹಿಸಿ, ಅದನ್ನು ದಡಕ್ಕೆ ಎಳೆದು ರಾಶಿ ಹಾಕುವ ಕೆಲಸವನ್ನು ಈ ಕಾರ್ಮಿಕರು ಮಾಡುತ್ತಾರೆ. ಇವರೆಲ್ಲ ಸಹಕಾರ ಸಂಘದ ಕಾಯಂ ಕಾರ್ಮಿಕರು' ಎಂದರು.
'ನಸುಕಿನ ಜಾವ ಗದ್ದೆಯ ಅಂಚಿನ ಕಟ್ಟೆಗಳ ಮೇಲೆ ಸಂಗ್ರಹವಾಗಿರುವ ಉಪ್ಪಿನ ರಾಶಿಗಳನ್ನು ಹೊರಲು ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರು ಬರುತ್ತಾರೆ. ಸುಮಾರು 200 ಮೀಟರ್ ಉದ್ದದ ಒಂದು ಕಟ್ಟೆಯಲ್ಲಿನ ರಾಶಿ ಖಾಲಿ ಮಾಡಿದರೆ ₹300 ಪಾವತಿಸಲಾಗುತ್ತದೆ. ಕುಟುಂಬ ಸಮೇತರಾಗೇ ಬರುವ ಒಂದು ಕಾರ್ಮಿಕರ ಗುಂಪು ಸರಾಸರಿ 5 ಅಥವಾ 6 ಕಟ್ಟೆಗಳ ರಾಶಿಯನ್ನು ಹೊತ್ತು ಗದ್ದೆಯ ಮುಖ್ಯ ರಸ್ತೆಯ ಪಕ್ಕ ನಿರ್ಮಿಸಿದ ಪ್ಲಾಟ್ ಫಾರಂಗಳ ಮೇಲೆ ಉಪ್ಪು ದಾಸ್ತಾನು ಮಾಡುತ್ತದೆ. ಇದರಿಂದ ಕೆಲವರು ದಿನವೊಂದಕ್ಕೆ ಉಪ್ಪಿನ ಆಗರದಲ್ಲೇ ₹1 ಸಾವಿರದಷ್ಟು ಆದಾಯ ಗಳಿಸಿಕೊಳ್ಳುತ್ತಾರೆ' ಎಂದು ದುರ್ಗೇಶ್ ವಿವರಿಸಿದರು.
'ಗದ್ದೆಯ ಪ್ಲಾಟ್‌ಫಾರ್ಮ್‌ಗಳ ಮೇಲೆ ದಾಸ್ತಾನು ಆದ ಉಪ್ಪಿನ ರಾಶಿಯನ್ನು ಜೆಸಿಬಿ ಬಳಸಿಕೊಂಡು ಲಾರಿಗಳಿಗೆ ಸುರಿಯಲಾಗುತ್ತದೆ. ಅಲ್ಲಿಂದ ಲಾರಿಗಳು ಗದ್ದೆಯ ಸಮೀಪದಲ್ಲಿ ಮರದ ಹಲಗೆಗಳನ್ನು ಜೋಡಿಸಿ, ನಿರ್ಮಿಸಲಾಗಿರುವ ಉಗ್ರಾಣಕ್ಕೆ ತಂದು ಸುರಿಯುತ್ತವೆ. ಹೀಗೆ ಸುರಿದ ಉಪ್ಪಿನಲ್ಲಿರುವ ಕಸಕಡ್ಡಿಗಳನ್ನು ಸಣ್ಣ ಯಂತ್ರವೊಂದರ ಸಹಾಯದಿಂದ ಬೇರ್ಪಡಿಸಲಾಗುತ್ತದೆ. ಅದೇ ವೇಳೆ ಅಯೋಡಿನ್ ಮಿಶ್ರಣ ಮಾಡಲಾಗುತ್ತದೆ. ಆ ಬಳಿಕ ಉಪ್ಪನ್ನು ಮಹಿಳೆಯರು ಪೊಟ್ಟಣಕ್ಕೆ ತುಂಬಿಸಿಡುತ್ತಾರೆ' ಎಂದು ಮಾಹಿತಿ ನೀಡಿದರು.
'ಉಪ್ಪನ್ನು ಉಗ್ರಾಣದಿಂದ ತಂದು ಅದನ್ನು ಪೊಟ್ಟಣದ ರೂಪದಲ್ಲಿ ಕಟ್ಟುವ ಕೆಲಸ ಮಹಿಳೆಯರೇ ನಿಭಾಯಿಸುತ್ತಾರೆ. ಪ್ರತಿ ಒಂದು ಕೆ.ಜಿಗೆ ಒಂದು ಪೊಟ್ಟಣ ಸಿದ್ಧಗೊಳ್ಳುತ್ತದೆ. 50 ಪೊಟ್ಟಣ ಸೇರಿಸಿ ಒಂದು ಚೀಲಕ್ಕೆ ಸೇರಿಸಲಾಗುತ್ತದೆ. ಅವುಗಳನ್ನು ಹೊಲಿದು ಮಾರುಕಟ್ಟೆಗೆ ಕಳಿಸಲು ಸಿದ್ಧವಾಗಿಸುತ್ತೇವೆ. ಪ್ರತಿ ಒಂದು ಚೀಲ ಭರ್ತಿಯಾದರೆ, ಮಹಿಳಾ ಕಾರ್ಮಿಕರಿಗೆ ₹20 ಪಾವತಿಯಾಗುತ್ತದೆ. ದಿನವೊಂದಕ್ಕೆ ತಂಡವೊಂದು ನೂರಾರು ಚೀಲ ಸಿದ್ಧಪಡಿಸುತ್ತದೆ' ಎಂದರು.
'ಹೀಗೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಉಪ್ಪು ತಯಾರಿಸುವ ಕೆಲಸ 70 ವರ್ಷಗಳ ಹಿಂದೆ ಇರಲಿಲ್ಲ. ಆಗ ಎಲ್ಲ ಭೂಮಿಯ ಮಾಲೀಕರೆ ತಮ್ಮ ಗದ್ದೆಗಳಲ್ಲಿ ಪ್ರತ್ಯೇಕವಾಗಿ ಉಪ್ಪು ತಯಾರಿಸಿ, ಸ್ಥಳೀಯವಾಗಿ ಮಾರುತ್ತಿದ್ದರು. ಉಪ್ಪು ತಯಾರಿಕೆಯಲ್ಲಿ ಶಿಸ್ತು, ವ್ಯಾವಹಾರಿಕತೆ ಮೂಡಿದ್ದೇ 1952ರ ನಂತರ' ಎಂದು ನಾಗರಬೈಲ್ ಉಪ್ಪು ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ಅರುಣ ನಾಡಕರ್ಣಿ ತಿಳಿಸಿದರು.
'ಉಪ್ಪಿನ ಗದ್ದೆಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವ ಪದ್ಧತಿ ಹಿಂದೆ ತಿಳಿದಿರಲಿಲ್ಲ. ದೇಶದ ಉಪ್ಪಿನ ತಜ್ಞ ವಿ.ಪಿ.ಚೌಧರಿ ಸಾಣಿಕಟ್ಟಾಕ್ಕೆ ಬಂದು ಉಪ್ಪಿನ ಗದ್ದೆಗಳನ್ನು ವೈಜ್ಞಾನಿವಾಗಿ ಸಿದ್ಧಪಡಿಸಲು ಸಲಹೆ ನೀಡಿದ್ದರು. ಮೊದಲು 50 ಅಡಿ ಉದ್ದ 20 ಅಡಿ ಅಗಲದ ಸಣ್ಣ ಗದ್ದೆಗಳಲ್ಲಿ ಉಪ್ಪು ತಯಾರಿಕೆ ನಡೆದಿತ್ತು. ಚೌಧರಿ ಸಲಹೆಯಂತೆ ಗದ್ದೆಯನ್ನು 100 ಅಡಿ ಉದ್ದ, 20 ಅಡಿ ಅಗಲದಲ್ಲಿ ರಚಿಸಲಾಯಿತು. ಹೀಗೆ ರಚಿಸಿಕೊಳ್ಳಲು ಮೂರು ವರ್ಷ ಬೇಕಾಯಿತು. ಮೂರು ವರ್ಷ ಆದಾಯದ ಆಸೆ ಬಿಟ್ಟು ಭೂಮಿಯ ಮಾಲೀಕರು ಸಹಕರಿಸಿದ್ದರಿಂದ ಸಾಣಿಕಟ್ಟಾದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಉಪ್ಪು ತಯಾರಿಕೆ ನಡೆದಿದೆ' ಎಂದು ತಿಳಿಸಿದರು.

ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ (ಗದ್ದೆ) ಕಾರ್ಮಿಕರು ಉಪ್ಪು ಸಂಗ್ರಹಿಸಿ ರಾಶಿ ಹಾಕಿಡುತ್ತಿರುವುದು.
ಪ್ರಜಾವಾಣಿ ಚಿತ್ರಗಳು: ದಿಲೀಪ್ ರೇವಣಕರ್
ಕಾರ್ಮಿಕರ ಕೊರತೆಯ ಆತಂಕ
'ಕಾರ್ಮಿಕರಿಗೆ ಕೇಂದ್ರ ಸಣ್ಣ ಕೈಗಾರಿಕೆ ಇಲಾಖೆಯಿಂದ ಬರುವ ವಿಮೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ಚಾಚೂ ತಪ್ಪದೆ ಸಿಗುತ್ತಿದೆ. ಕಾರ್ಮಿಕರು-ಮಾಲೀಕರ ನಡುವೆ ಅಸಮಾನತೆ ಹೋಗಲಾಡಿಸಲು ವರ್ಷಕ್ಕೆ ಮೂರು ಬಾರಿ ಸಹಭೋಜನ ನಡೆಸುವ ಪದ್ಧತಿಯನ್ನೂ ನಡೆಸಿಕೊಂಡು ಬರಲಾಗಿದೆ' ಎಂದು ಕಾರ್ಮಿಕ ಮಹಿಳೆ ಗೀತಾ ಮುಕ್ರಿ ಹೇಳಿದರು.
'ಬಿಸಿಲ ಝಳದಲ್ಲಿ ಕೆಲಸ ಮಾಡುವುದು ನಮಗೆ ಸವಾಲೇ ಅಲ್ಲ. ಬಿಸಿಲು ಏರುವ ಹೊತ್ತಿಗೆ ನಾವು ಕೆಲಸ ಮುಗಿಸಿ ಮನೆಯತ್ತ ಹೆಜ್ಜೆ ಹಾಕಿರುತ್ತೇವೆ. ಬಿಸಿಲು ಕಡಿಮೆಯಾಗಿ, ಮೋಡ ಕವಿದರೆ ನಮಗೂ ಆತಂಕ ಶುರುವಾಗುತ್ತದೆ. ಉಪ್ಪು ಸಂಗ್ರಹಗೊಳ್ಳುವ ಹೊತ್ತಿಗೆ ಮಳೆ ಸುರಿದರೆ ಗದ್ದೆಯಲ್ಲಿ ಮಳೆನೀರು ನಿಂತುಕೊಳ್ಳುತ್ತದೆ. ಅವುಗಳನ್ನು ಹೊರಹಾಕಿ, ಮತ್ತೆ ಉಪ್ಪು ತಯಾರಾಗಲು ಒಂದೆರಡು ದಿನ ಕಾಯಬೇಕು. ಇದೇ ನಮಗೆ ದೊಡ್ಡ ಆತಂಕದ ಕ್ಷಣ' ಎಂದು ಉಪ್ಪಿನ ಆಗರದಲ್ಲಿ ಕೆಲಸ ಮಾಡುವ ಹೊನ್ನಮ್ಮ ಆಗೇರ ಹೇಳಿದರು.
'ಕುಟುಂಬ ತಲತಲಾಂತರಗಳಿಂದ 'ಉಪ್ಪಿನ ಆಗರ'ದಲ್ಲಿ ದುಡಿದು ಜೀವನ ಕಟ್ಟಿಕೊಂಡಿದೆ. ಊರಿನಲ್ಲಿ ಏನೂ ಕೆಲಸದ ಇಲ್ಲದ ಕಾಲದಲ್ಲಿ ಸಾಣಿಕಟ್ಟಾ ಉಪ್ಪಿನ ಗದ್ದೆಗಳು ಜೀವನ ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿವೆ. ಕುಟುಂಬ ಸಮೇತರಾಗಿ ಇಲ್ಲಿ ಕೆಲಸ ಮಾಡುವುದೇ ನಮಗೆ ಆಸರೆ. ಆದರೆ, ಈಗಿನ ತಲೆಮಾರಿನ ಯುವಕರು ಶಿಕ್ಷಣ ಪಡೆದು ಅನ್ಯ ಉದ್ಯೋಗದತ್ತ ವಲಸೆ ಹೋಗುತ್ತಿದ್ದಾರೆ. ಈ ತಲೆಮಾರಿನ ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ ಉಪ್ಪಿನ ಆಗರ ನೆಚ್ಚಿಕೊಂಡಂತೆ ಕಾಣುತ್ತಾರೆ. ಹೀಗಾದರೆ, ಕೆಲವೇ ವರ್ಷಗಳಲ್ಲಿ ಉಪ್ಪು ಸಿದ್ಧಪಡಿಸಲು ಕಾರ್ಮಿಕರ ಕೊರತೆ ಎದುರಾಗಬಹುದು ಎಂಬ ಆತಂಕವೂ ಇದೆ' ಎಂದು ಅವರು ಹೇಳಿದರು.
ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸಿದರೆ ವರ್ಷದದುದ್ದಕ್ಕೂ ಇದೇ ಆಗರ ಕಾರ್ಮಿಕರ ಹೊಟ್ಟೆಹೊರೆಯುತ್ತಿದೆ. ಸ್ಥಳೀಯ ಐದಾರು ಗ್ರಾಮಗಳ ನೂರಾರು ಜನರು ಎಂದೂ ಆಗರದಿಂದ ದೂರ ಉಳಿಯಲಾರರು ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತದೆ.
ಜಿಐ ಟ್ಯಾಗ್ ಸಿಗುತ್ತಿಲ್ಲ
ದೇಶದಲ್ಲೇ ಅಪರೂಪ ಪದ್ಧತಿಯಿಂದ ತಯಾರಾಗುವ ಸಾಣಿಕಟ್ಟಾ ಉಪ್ಪು ರುಚಿಯಲ್ಲೂ ವಿಭಿನ್ನತೆಯಿಂದ ಕೂಡಿದೆ. ಕರ್ನಾಟಕದಲ್ಲಂತೂ ಅಘನಾಶಿನಿಯ ಹಿನ್ನೀರಿನ ಕುಮಟಾ, ಅಂಕೋಲಾದ ಶಿಂಗನಮಕ್ಕಿಯಲ್ಲಿ ಖಾಸಗಿ ಜಮೀನುಗಳಲ್ಲಿ ಉಪ್ಪು ತಯಾರಿಕೆ ನಡೆದಿದ್ದರೂ ಅದು ಅಲ್ಪ ಪ್ರಮಾಣದ್ದು.
'ಸಾಣಿಕಟ್ಟಾದಂತೆ ಹೇರಳ ಪ್ರಮಾಣದ ಉಪ್ಪು ತಯಾರಾಗುವ ಇನ್ನೊಂದು ಸ್ಥಳ ಇಲ್ಲಿಲ್ಲ. ಇದೇ ಕಾರಣಕ್ಕೆ ವಿಶಿಷ್ಟ ಭೌಗೋಳಿಕ ಸೂಚಿ (ಜಿಐ ಟ್ಯಾಗ್) ಪಡೆಯಲು ಕೆಲ ವರ್ಷಗಳಿಂದ ನಿರಂತರ ಪ್ರಯತ್ನ ನಡೆದಿದೆ' ಎಂದು ನಾಗರಬೈಲ್ ಉಪ್ಪು ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ಅರುಣ ನಾಡಕರ್ಣಿ ಹೇಳಿದರು.
'ಜೀವ ವೈವಿಧ್ಯ ಮಂಡಳಿಗೆ ಅನಂತ ಹೆಗಡೆ ಅಶೀಸರ ಅಧ್ಯಕ್ಷ
ರಿದ್ದ ಅವಧಿಯಲ್ಲಿ ಸಾಣಿಕಟ್ಟಾ ಉಪ್ಪಿಗೆ ಜಿಐ ಟ್ಯಾಗ್‌ಗೆ ಮಾನ್ಯತೆ ಕೊಡಿಸುವ ಪ್ರಯತ್ನಕ್ಕೆ ನೆರವಾಗಿದ್ದರು. ಆಗ ಜಿಲ್ಲಾಮಟ್ಟದ ಸಮಿತಿಯಿಂದ ಅರ್ಜಿ ರವಾನೆ ಆಗಿತ್ತು. ಆದರೆ, ಮಾನ್ಯತೆಗೆ ಪ್ರತಿ ವರ್ಷ ನಬಾರ್ಡ್ ಹೊಸ ಹೊಸ ಸೂಚಿಗಳನ್ವಯ ದಾಖಲೆ ಕೇಳುತ್ತಿದೆ. ಅಂತಹ ದಾಖಲೆ ಒದಗಿಸುವಲ್ಲಿಯೇ ಹಲವು ಕಾಲ ಕಳೆದಿದೆ. ಇನ್ನೂ ಜಿಐ ಟ್ಯಾಗ್ ಸಿಕ್ಕಿಲ್ಲ' ಎಂದರು.

ಅಯೋಡಿನ್ ಮಿಶ್ರಣವಾಗಿ ಬಂದಿರುವ ಉಪ್ಪನ್ನು ಪೊಟ್ಟಣಕ್ಕೆ ತುಂಬಿಸುವ ಕೆಲಸದಲ್ಲಿ ಮಹಿಳಾ ಕಾರ್ಮಿಕರು ನಿರತರಾಗಿದ್ದರು.
ಶೋಷಣೆ ತಪ್ಪಿಸಿದ ಸಂಸ್ಥೆ
1720ರಿಂದ ಈ ಭಾಗದಲ್ಲಿ ಉಪ್ಪು ತಯಾರಿಕೆ ನಡೆಯುತ್ತಿತ್ತು. ತೊರ್ಕೆ, ಗೊನೆಹಳ್ಳಿ, ಕಡಮೆ, ನಾಗರಬೈಲ್ ಗ್ರಾಮಗಳ ವ್ಯಾಪ್ತಿಯ ಕೇವಲ 50 ಎಕರೆ ಜಮೀನಿನಲ್ಲಿ ನಿಗದಿತ ದಿನಗಳಲ್ಲಿ ಉಪ್ಪು ಶೇಖರಣೆ ಆಗುತ್ತಿತ್ತು. 1775ರ ಹೊತ್ತಿಗೆ ಅಘನಾಶಿನಿ ಹಿನ್ನೀರಿಗೆ ತೊರ್ಕೆ, ಗೋಕರ್ಣದ ಗುಡ್ಡಗಳ ನಡುವೆ ಒಡ್ಡು ನಿರ್ಮಾಣವಾದ ಮೇಲೆ ಈ ಪ್ರದೇಶಕ್ಕೆ ಸಾಣಿಕಟ್ಟಾ ಎಂಬ ಹೆಸರು ಬಂತು.
ಹಿನ್ನೀರು ಪ್ರದೇಶ ಸರ್ಕಾರಿ ಜಮೀನಾಗಿತ್ತು. ಆಗ ಭೂಮಿ ಖರೀದಿಸಿದ್ದ ಕೆಲವರು ಉಪ್ಪು ತಯಾರಿಕೆಗೆ ಮುಂದಾದರು. ಆದರೆ, ಕಾಲುವೆ, ಒಡ್ಡು ನಿರ್ಮಾಣಕ್ಕೆ ಹೆಚ್ಚು ಜಾಗ ಹೋಯಿತು. ಉಪ್ಪ ತಯಾರಾದರೂ ಅವುಗಳನ್ನು ಕೇಳಿದಷ್ಟು ದರಕ್ಕೆ ಮಾರಬೇಕಿತ್ತು. ಹೀಗೆ ಶತಮಾನಗಳ ಕಾಲ ನಡೆದುಕೊಂಡು ಬಂದಿತ್ತು. ಈ ಸಮಸ್ಯೆ ನಿವಾರಿಸಲು 1952ರಲ್ಲಿ ಸಾರಸ್ವತ ಸಮಾಜದ ಕೆಲವರು ಸೇರಿ ಸಹಕಾರ ಸಂಘ ನಿರ್ಮಿಸಿದ್ದರು. ಇಲ್ಲಿನ ಭೂಮಿಗಳ ಮಾಲೀಕರನ್ನು ಒಪ್ಪಿಸಿ, ಭೂಮಿಯನ್ನ ಸಹಕಾರ ಸಂಘವೇ ಪಡೆದುಕೊಂಡಿತು
'ರೈತರಿಂದ ಪಡೆದ ಭೂಮಿಯಲ್ಲಿ ಉಪ್ಪು ಉತ್ಪಾದಿಸಿ, ಅದರಿಂದ ಬಂದ ಲಾಭಾಂಶವನ್ನು ಸಮನಾಗಿ ಹಂಚಿಕೆ ಮಾಡುವ ಬೈಲಾ ಹೊಂದಿರುವ ದೇಶದ ಅಪರೂಪದ ಸಹಕಾರ ಸಂಸ್ಥೆ ಇದೆ. ಇಲ್ಲಿ ಒಮ್ಮೆ ಸದಸ್ಯತ್ವ ಪಡೆದವರು ಶಾಶ್ವತ ಸದಸ್ಯರು. ಅಂತಹ 359 ಸದಸ್ಯರು ಇಲ್ಲಿದ್ದಾರೆ. ಶಾಶ್ವತವಾಗಿ ಭೂಮಿ ಸಹಕಾರ ಸಂಘದ ಹೆಸರಿಗೆ ನೀಡಿದ್ದಾರೆ. ಪಹಣಿಯು ಭೂಮಾಲೀಕರ ಹೆಸರಿನಲ್ಲಿದ್ದರೂ ಅದರ ಬಳಕೆಯನ್ನು ಸಂಸ್ಥೆ ಮಾಡುತ್ತದೆ. ಮೂರು ತಲೆಮಾರು ಕಳೆದರೂ ಸಾಣಿಕಟ್ಟಾಕ್ಕೆ ಮರಳದ ಕುಟುಂಬಗಳೂ ಇವೆ. ಆದರೂ, ಅವರಿಗೆ ಪ್ರತಿ ವರ್ಷ ಸಂಸ್ಥೆಯು ತಯಾರಾದ ಉಪ್ಪಿನ ಲಾಭಾಂಶವನ್ನು ಖಾತೆಗೆ ಪಾವತಿಸುತ್ತಿದೆ' ಎಂಬುದು ಸಹಕಾರ ಸಂಘದ ಇತಿಹಾಸ ಹೇಳುತ್ತದೆ.
ಅರುಣ ನಾಡಕರ್ಣಿ, ಅಧ್ಯಕ್ಷ, ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘಉಪ್ಪು ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಳಿತ ಕಾಣುತ್ತಿದೆ. ಆದರೆ, ಈವರೆಗೆ ಸದಸ್ಯರಿಗೆ ಬರುವ ಲಾಭಾಂಶ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ. ಟೆಟ್ರಾ ಪ್ಯಾಕ್‌ನಲ್ಲಿಯೂ ಉಪ್ಪು ಮಾರುಕಟ್ಟೆಗೆ ಕಳಿಸುವ ಚಿಂತನೆಯಿದೆ. ದುರ್ಗೇಶ ಕಾಗಾಲ, ಮೇಲುಸ್ತುವಾರಿ, ಉಪ್ಪು ಉತ್ಪಾದನೆ ಘಟಕ2024ರಲ್ಲಿ 126 ದಿನ ಉಪ್ಪು ತಯಾರಿಸಲು ಅವಕಾಶ ಸಿಕ್ಕಿತ್ತು. ಆಗ 15 ಸಾವಿರ ಟನ್ ಉತ್ಪಾದನೆಯಾಗಿತ್ತು. ಈ ಬಾರಿ ಹವಾಮಾನ ಏರಿಳಿತದಿಂದ 8 ಸಾವಿರ ಟನ್ ಉತ್ಪಾದನೆಯ ನಿರೀಕ್ಷೆ ಇದೆ. ಮಹಾಬಲೇಶ್ವರ್, ಕಾರ್ಮಿಕಉಪ್ಪಿನ ಆಗರದಲ್ಲಿ ದಿನವಿಡೀ ಕೆಲಸ ಮಾಡುವುದು ಸವಾಲಿನ ಕೆಲಸ. ಅದಕ್ಕೆ ಉಪ್ಪು ಸಂಗ್ರಹಿಸುವವರಿಗೆ ನಸುಕಿನ ಜಾವ, ಉಪ್ಪು ಪೊಟ್ಟಣ, ಸಾಗಣೆ ಮಾಡವವರಿಗೆ ಬೆಳಿಗ್ಗೆ ಬಳಿಕ ಕೆಲಸ ನಿಗದಿಯಾಗಿದೆ ಪಾರ್ವತಿ ಗೌಡ, ಕಾರ್ಮಿಕ ಮಹಿಳೆಕಾರ್ಮಿಕರಿಗೆ ವಾರಕ್ಕೊಂದು ರಜೆ ಸಿಗುತ್ತದೆ. ಆ ದಿನ ದುಡಿದರೆ ದುಪ್ಪಟ್ಟು ವೇತನವಿದೆ. 64 ವರ್ಷದವರೆಗೆ ದುಡಿಯಲು ಅವಕಾಶವಿದ್ದು, ನಿವೃತ್ತಿ ಬಳಿಕ ಉಪ್ಪಿನ ಪೊಟ್ಟಣ ಮಾಡುವ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಅವಕಾಶವಿದೆ
