ಕಾಸರಗೋಡು: ಕೇರಳಂನಲ್ಲಿ ಬುಧವಾರ ತಿರುವೋಣಂ ಆಚರಣೆ ನಡೆ ಯಲಿದ್ದು, ಸಂಭ್ರಮಕ್ಕೆ ರಂಗು ಹೆಚ್ಚಿಸಲು ಕರ್ನಾಟಕದಿಂದ ಆವಕವಾಗಿರುವ ಹೂವುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಹೂವಿನ ರಂಗೋಲಿ ಸಹಿತ ಓಣಂ ಆಚರಿಸಲಾಗುತ್ತಿದ್ದರೆ, ಕನ್ನಡಿಗರಾದ ಹೂವಿನ ವ್ಯಾಪಾರಿಗಳು ಸೋಮವಾರ ಕಾಸರಗೋಡಿಗೆ ಬಂದಿದ್ದಾರೆ.
ವಿವಿಧ ಬಣ್ಣಗಳ ಸೇವಂತಿಗೆ, ಅಬ್ಬಲಿಗೆ, ಗುಲಾಬಿ, ಮಲ್ಲಿಗೆ ಹೂವು ಗಳಿಗೆ ಭಾರಿ ಬೇಡಿಕೆ ಇದ್ದು, ಮೊಳಕ್ಕೆ ₹40ರಿಂದ ₹100ವರೆಗೆ ಮಾರಾಟಗೊಳ್ಳುತ್ತಿವೆ. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಲಾದ ಬಿಡಿಹೂವುಗಳು ₹50ರಿಂದ 200ರವರೆಗೆ ಮಾರಾಟವಾಗುತ್ತಿವೆ. ಹೂವಿನ ಮಾರಾಟದ ಅಂಗಡಿಗಳಲ್ಲಿ ಸಾಂಪ್ರದಾಯಿಕ ಮಲ್ಲಿಗೆ ಹೂವು ಮೊಳಕ್ಕೆ ₹200ರಿಂದ 400ರವರೆಗೆ ಇದೆ. ಕಾಕಡ ಮೊಳಕ್ಕೆ ₹50ರಿಂದ 100ರವರೆಗೆ ಬೆಲೆ ಇದೆ.
ತಿರುವೋಣಂ ದಿನದ ಮಧ್ಯಾಹ್ನದವರೆಗೂ ಈ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂದು ಸಕಲೇಶಪುರದ ಸಿದ್ಧಪ್ಪ 'ಪ್ರಜಾವಾಣಿ'ಗೆ ತಿಳಿಸಿದರು. ಮಲಯಾಳಂ ಭಾಷಿಗರೊಂದಿಗೆ ಅರೆಬರೆ ಮಲಯಾಳಂ, ತಮಿಳು, ಹಿಂದಿಯಲ್ಲಿ ವ್ಯವಹಾರ ಕುದುರಿಸುವುದಾಗಿ ಗದಗ ತಿಪ್ಪೇಶಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಂಗವಾಗಿ ನಗರದ ನೂತನ ಬಸ್ ನಿಲ್ದಾಣ ಬಳಿಯ ಮೇಲ್ಸೇತುವೆಯಡಿ ಈ ಬಾರಿ ಹೂವಿನ ಮಾರಾಟಕ್ಕೆ ಸ್ಥಳೀಯಾ ಡಳಿತ ಅನುಮತಿ ನೀಡಿರುವುದು ಅನುಕೂಲವಾಗಿದೆ ಎಂದು ಹಂಪಿಯ ಚೆನ್ನಮ್ಮ ನುಡಿಯುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-29-1952860838

