Dailyhunt Logo
  • Light mode
    Follow system
    Dark mode
    • Play Story
    • App Story
ಒಪ್ಪಂದಕ್ಕೆ ಹತ್ತಿರವಾಗಿದ್ದೇವೆ, ಹಾಳು ಮಾಡಬೇಡಿ: ಇರಾನ್, ಇಸ್ರೇಲ್‌ಗೆ ಟ್ರಂಪ್

ಒಪ್ಪಂದಕ್ಕೆ ಹತ್ತಿರವಾಗಿದ್ದೇವೆ, ಹಾಳು ಮಾಡಬೇಡಿ: ಇರಾನ್, ಇಸ್ರೇಲ್‌ಗೆ ಟ್ರಂಪ್

Trump warns Israel and Iran not to 'blow it' after new strikes threaten emerging ceasefire deal

ಜೆರುಸಲೆಮ್: ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿ ಮೂವರನ್ನು ಕೊಂದಿರುವುದಾಗಿ ಇಸ್ರೇಲ್ ಘೋಷಿಸಿದ ಬೆನ್ನಲ್ಲೇ ಇನ್ಯಾವುದೇ ದಾಳಿ ನಡೆಸದಂತೆ ಇರಾನ್ ಮತ್ತು ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಲೆಬನಾನ್ ರಾಜಧಾನಿ ಬಳಿಯ ಹಿಜ್ಬುಲ್ಲಾ ಭದ್ರಕೋಟೆಯಲ್ಲಿ ದಟ್ಟ ಹೊಗೆ ಎದ್ದಿದ್ದು, ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ಇದಕ್ಕೆ ಪ್ರತಿ ದಾಳಿ ನಡೆಸುವುದಾಗಿ ಇರಾನ್ ಹೇಳಿದ ಬೆನ್ನಲ್ಲೇ ಟ್ರಂಪ್ ಮಧ್ಯ ಪ್ರವೇಶಿಸಿದ್ದಾರೆ.

ಈ ಸಂಬಂಧ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಒಪ್ಪಂದಕ್ಕೆ ನಾವು ಹತ್ತಿರವಾಗಿದ್ದೇವೆ. ಅದನ್ನು ಹಾಳು ಮಾಡಬೇಡಿ'ಎಂದು ಬರೆದುಕೊಂಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಈ ಒಪ್ಪಂದ ಮಾತುಕತೆಯಲ್ಲಿ ಇಸ್ರೇಲ್ ಅನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಏಪ್ರಿಲ್ 7 ರಂದು ಯುದ್ಧ ವಿರಾಮ ಘೋಷಣೆಯಾದಾಗಿನಿಂದ ಒಂದಿಲ್ಲೊಂದು ದಾಳಿ ನಡೆಸುತ್ತಲೇ ಇರುವ ಇಸ್ರೇಲ್, ಶಾಂತಿ ಒಪ್ಪಂದಕ್ಕೆ ಅಡ್ಡಗಾಲಾಕಿದೆ.

ಭಾನುವಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದಿರುವ ಟ್ರಂಪ್, ಲೆಬನಾನ್ ಮೇಲಿನ ದಾಳಿ ಸ್ಥಗಿತಗೊಳಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ. ದಾಳಿಯನ್ನು ಸಮರ್ಥಿಸಿಕೊಂಡಿರುವ ನೆತನ್ಯಾಹು, ಹಿಜ್ಬುಲ್ಲಾ ಡ್ರೋನ್ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ನಮ್ಮ ದೇಶದ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಬೈರೂತ್‌ನ ದಕ್ಷಿಣ ಸಬರ್ಬನ್‌ನ ಘೋಬೈರಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿದೆ ಎಂದು ಲೆಬನಾನ್‌ನ ಅಧಿಕೃತ ರಾಷ್ಟ್ರೀಯ ಸುದ್ದಿ ಸಂಸ್ಥೆ(ಎನ್‌ಎನ್‌ಎ) ತಿಳಿಸಿದೆ. ಇದು ದಹಿಯೆಹ್ ಎಂದು ಕರೆಯಲ್ಪಡುವ ಹಿಜ್ಬುಲ್ಲಾ ಭದ್ರಕೋಟೆಯಾಗಿದೆ.

ಅಪಾರ್ಟ್‌ಮೆಂಟ್ ಅವಶೇಷಗಳು ಬೀದಿಗೆ ಬಿದ್ದಿದ್ದು, ಅದರಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಜನಜಂಗುಳಿ, ಅಂಗಡಿ ಮುಂಗಟ್ಟುಗಳಿಂದ ತುಂಬಿದ್ದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಇಸ್ರೇಲ್ ದಾಳಿಯಲ್ಲಿ ಮೂವರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಮಾರ್ಚ್ 2ರಿಂದ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಯುದ್ಧ ನಡೆಯುತ್ತಿದೆ. ಫೆಬ್ರುಬರಿ 28ರಂದು ಇರಾನ್‌ನ ಪರಮೋಚ್ಚ ನಾಯಕ ಅಯಾತೋಲ್ಲಾ ಖಮೇನಿ ಹತ್ಯೆ ಸೇಡು ತೀರಿಸಿಕೊಳ್ಳಲು ಹಿಜ್ಬುಲ್ಲಾ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani