Dailyhunt Logo
  • Light mode
    Follow system
    Dark mode
    • Play Story
    • App Story
ಔರಾದ್‌ನಲ್ಲಿ ಐದಾರು ತಿಂಗಳಿನಿಂದ ಬಾರದ ಮಾಸಾಶನದಿಂದ ಫಲಾನುಭವಿಗಳಿಗೆ ಸಂಕಷ್ಟ

ಔರಾದ್‌ನಲ್ಲಿ ಐದಾರು ತಿಂಗಳಿನಿಂದ ಬಾರದ ಮಾಸಾಶನದಿಂದ ಫಲಾನುಭವಿಗಳಿಗೆ ಸಂಕಷ್ಟ

ರಾದ್: ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಜೀವನ ಸಾಗಿಸುತ್ತಿರುವ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಸಾವಿರಾರು ಫಲಾನುಭವಿಗಳಿಗೆ ಕಳೆದ ಐದಾರು ತಿಂಗಳಿನಿಂದ ಮಾಸಾಶನ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾಸಾಶನವೇ ಜೀವನಾಧಾರವಾಗಿಸಿಕೊಂಡಿರುವ ಫಲಾನುಭವಿಗಳು ಹಣ ಬಾರದೆ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ನಿತ್ಯ ಅಲೆದಾಡುವಂತಾಗಿದೆ.

ವಯಸ್ಸಾದವರು, ಅಂಗವಿಕಲರು ಹಾಗೂ ಬಡ ಮಹಿಳೆಯರು ಕಚೇರಿಗೆ ವಿಚಾರಿಸಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

'ಕಳೆದ ಎಂಟು ತಿಂಗಳಿಂದ ನನಗೆ ಮಾಸಾಶನ ಬಂದಿಲ್ಲ. ತಲಾಟಿ ಬಳಿ ವಿಚಾರಿಸಿದರೆ ತಹಶೀಲ್ದಾರ್ ಕಚೇರಿಗೆ ಹೋಗುವಂತೆ ಹೇಳುತ್ತಾರೆ. ಕಚೇರಿಗೆ ಬಂದರೆ ಮಾಸಾಶನ ರದ್ದಾಗಿದ್ದು, ಮತ್ತೆ ಅರ್ಜಿ ಸಲ್ಲಿಸುವಂತೆ ಹೇಳುತ್ತಾರೆ. ವಯಸ್ಸಾದ ನಮಗೆ ಕಚೇರಿಗೆ ಅಲೆಯುವುದೇ ಕಷ್ಟವಾಗಿದೆ' ಎಂದು ಹಂಗರಗಾ ಗ್ರಾಮದ ವೃದ್ಧೆ ಮುಕ್ತುಂಬಿ ಮಹೆಬೂಬ್‌ಸಾಬ್ ಅವರು ಅಳಲು ತೋಡಿಕೊಂಡಿದ್ದಾರೆ.

ಇದೇ ಗ್ರಾಮದ ಅಂಗವಿಕಲ ಮಹಿಳೆ ಜೋರಾಬಿ ಅವರಿಗೂ ಕಳೆದ ಐದು ತಿಂಗಳಿಂದ ಮಾಸಾಶನ ಬಂದಿಲ್ಲ. ಎಕಂಬಾ ಗ್ರಾಮದ ಸುಶೀಲಾಬಾಯಿ ಶಿವಾಜಿ ಹಾಗೂ ಸುಶೀಲಾಬಾಯಿ ನಿವೃತ್ತಿ ಅವರು ಕೂಡ ವೃದ್ಧಾಪ್ಯ ವೇತನ ಸ್ಥಗಿತಗೊಂಡಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

13 ಸಾವಿರ ಮಂದಿಗೆ ಸಮಸ್ಯೆ!

ಔರಾದ್‌: ತಾಲ್ಲೂಕಿನಲ್ಲಿ ಸುಮಾರು 13 ಸಾವಿರ ಫಲಾನುಭವಿಗಳಿಗೆ ಮಾಸಾಶನ ಸ್ಥಗಿತಗೊಂಡಿದೆ. ಸರ್ಕಾರ ನಿಗದಿಪಡಿಸಿರುವ ಆದಾಯ ಮಿತಿ ಆಧರಿಸಿ ಫಲಾನುಭವಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ₹32 ಸಾವಿರಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರ ಮಾಸಾಶನ ಸ್ಥಗಿತಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಮಾಸಾಶನ ಸ್ಥಗಿತಗೊಂಡಿರುವ ಫಲಾನುಭವಿಗಳಿಗೆ ನೋಟಿಸ್ ನೀಡಿ, ಅವರಿಂದ ಮರುಅರ್ಜಿ ಪಡೆದು ಅರ್ಹರಿಗೆ ಮತ್ತೆ ಮಾಸಾಶನ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು' ಎಂದು ಗ್ರೇಡ್-2 ತಹಶೀಲ್ದಾರ್ ಸಂಗಯ್ಯ ಸ್ವಾಮಿ ತಿಳಿಸಿದ್ದಾರೆ.ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಉದ್ದೇಶವೇ ಆರ್ಥಿಕವಾಗಿ ದುರ್ಬಲರಾದವರಿಗೆ ಕನಿಷ್ಠ ಸಾಮಾಜಿಕ ಭದ್ರತೆ ಒದಗಿಸುವುದಾಗಿದೆ. ಆದರೆ, ಅರ್ಹ ಫಲಾನುಭವಿಗಳ ಮಾಸಾಶನ ತಿಂಗಳುಗಟ್ಟಲೆ ಸ್ಥಗಿತಗೊಂಡಿರುವುದರಿAದ ಯೋಜನೆಯ ಮೂಲ ಉದ್ದೇಶವೇ ಪ್ರಶ್ನಿಸುವಂತಾಗಿದೆ.

'ಕೂಡಲೇ ಮಾಸಾಶನ ಬಿಡುಗಡೆ ಮಾಡಿ'

ಸರ್ಕಾರ ಮಾಸಾಶನ ಸ್ಥಗಿತ ಮಾಡುವ ಮೂಲಕ ಬಡವರು, ವೃದ್ಧರು, ಅಂಗವಿಕಲರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಇದು ಸರಿಯಲ್ಲ. ಸ್ಥಗಿತಗೊಂಡಿರುವ ಮಾಸಾಶನ ತ್ವರಿತವಾಗಿ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕು. ವಯೋವೃದ್ಧರು ಹಾಗೂ ಅಂಗವಿಕಲರು ಮರು ಅರ್ಜಿಗಾಗಿ ಪದೇಪದೇ ಕಚೇರಿಗೆ ಅಲೆದಾಡದಂತೆ ಗ್ರಾಮ ಮಟ್ಟದಲ್ಲೇ ಅರ್ಜಿ ಸ್ವೀಕರಿಸಿ, ಪರಿಶೀಲನೆ ನಡೆಸಿ, ಬಾಕಿ ಮಾಸಾಶನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-33-775787328

Dailyhunt
Disclaimer: This content has not been generated, created or edited by Dailyhunt. Publisher: Prajavani