Sunday, 24 Jan, 11.25 am ಪ್ರಜಾವಾಣಿ

ಜಿಲ್ಲೆ
ಪಾದಯಾತ್ರೆಯಲ್ಲಿ ಭಾಗವಹಿಸಿದ ಮಹಿಳೆಯರು

ಹಗರಿಬೊಮ್ಮನಹಳ್ಳಿ: ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾಜದವರು ಕೈಗೊಂಡಿರುವ ಪಾದಯಾತ್ರೆ ಶನಿವಾರ ತಾಲ್ಲೂಕಿನ ಹೊಸ ಆನಂದೇವನಹಳ್ಳಿಯಿಂದ ಆರಂಭಗೊಂಡಿತು.

ಸ್ವಾಮೀಜಿಗಳ ನೇತೃತ್ವದಲ್ಲಿ ಆರಂಭಗೊಂಡಿರುವ ಪಾದಯಾತ್ರೆಯಿಂದಾಗಿ ಮತ್ತು ವಾಸ್ತವ್ಯ ಹೂಡಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ಈ ಸಂಭ್ರಮದಲ್ಲಿ ಎಲ್ಲ ವರ್ಗದ ಜನ ಭಾಗವಹಿಸಿದ್ದು ವಿಶೇಷವಾಗಿತ್ತು. ಪೂರ್ಣಕುಂಭ ಮತ್ತು ಕಳಸಗಳೊಂದಿಗೆ ಹೊರಟ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು.

ದಾರಿಯುದ್ದಕ್ಕೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಜನ ಸೇರ್ಪಡೆಗೊಂಡರು. ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ 1ಕಿ.ಮೀ.ಅಧಿಕ ದೂರ ಸಮಾಜದ ಜನರಿಂದ ತುಂಬಿತ್ತು. ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ಪಟ್ಟಣದ ಹೊರ ವಲಯದ ಗಾಳೆಮ್ಮ ದೇಗುಲದ ಬಳಿ ಸ್ವಾಮೀಜಿಗೆ ಭವ್ಯ ಸ್ವಾಗತ ಕೋರಲಾಯಿತು. ದಾರಿಯುದ್ದಕ್ಕೂ ಸ್ವಾಗತ ಕೋರಿದ ಫ್ಲೆಕ್ಸ್, ಕಟೌಟ್‍ಗಳು ರಾರಾಜಿಸುತ್ತಿದ್ದವು.

ವಿವಿಧ ವಾದ್ಯವೃಂದದೊಂದಿಗೆ ಸ್ವಾಮೀಜಿ ಅವರನ್ನು ಪಟ್ಟಣದ ಬಸವೇಶ್ವರ ಪುತ್ಥಳಿ ಬಳಿ ನಿರ್ಮಿಸಲಾಗಿದ್ದ ವೇದಿಕೆಗೆ ಕರೆತರಲಾಯಿತು. ಬಸವೇಶ್ವರ ಪುತ್ಥಳಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ನಮಿಸಿದರು. ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು. ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಕ್ಕ ಮಹಾದೇವಿಯರ ಸ್ತಬ್ದ ಚಿತ್ರಗಳು ಗಮನ ಸೆಳೆದವು.

ಮುಸ್ಲಿಂ ಸಮಾಜದ ಮುಖಂಡರು 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮತ್ತು ಶಾಸಕ ಎಸ್.ಭೀಮನಾಯ್ಕ ಅವರನ್ನು ಸನ್ಮಾನಿಸಿದರು.

ಹರಿಹರ ಪೀಠದ ಮೊದಲ ಪೀಠಾಧ್ಯಕ್ಷ ಸಿದ್ದಲಿಂಗೇಶ್ವರ ಸ್ವಾಮೀಜಿ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಮಾತನಾಡಿದರು. ಶಾಸಕ ಎಸ್.ಭೀಮನಾಯ್ಕ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಕೆ.ನೇಮಿರಾಜನಾಯ್ಕ, ಮುಖಂಡರಾದ ಪಿ.ಚನ್ನಬಸವನಗೌಡ ಬಾವಿ ಬೆಟ್ಟಪ್ಪ, ಅಕ್ಕಿ ಶಿವಕುಮಾರ್, ಬದಾಮಿ ಮೃತ್ಯುಂಜಯ ಸೋಮಶೇಖರ್, ನರೇಗಲ್ ಕೊಟ್ರೇಶ್, ನರೇಗಲ್ ಮಲ್ಲಿಕಾರ್ಜುನ ವೀರೇಶ್ ನಂದಿ ಇದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top