ನವದೆಹಲಿ: ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಬಾರದು ಎಂಬುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸಮಯೋಚಿತವಾಗಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೋಮವಾರ ಹೇಳಿದ್ದಾರೆ.
ಮಹಿಳೆಯರ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯವು ದುಬೈನಲ್ಲಿ ಭಾನುವಾರ ನಡೆಯಿತು. ಶ್ರೀಲಂಕಾ ಪಡೆಯನ್ನು 72 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ, ದಾಖಲೆಯ ಎಂಟನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.
ನಂತರ ಪ್ರಶಸ್ತಿ ಪ್ರದಾನ ಮಾಡಲು ನಕ್ವಿ ಅವರು ವೇದಿಕೆಗೆ ಬಂದಿದ್ದರು. ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು ಅವರು ರನ್ನರ್ಸ್‌ಅಪ್ ಟ್ರೋಫಿ ಸ್ವೀಕರಿಸಿದರು. ಆದರೆ, ಹರ್ಮನ್‌ಪ್ರೀತ್ ಕೌರ್ ಬಳಗ ವೇದಿಕೆಯತ್ತ ಸುಳಿಯಲಿಲ್ಲ.
ಶಫಾಲಿ-ಸ್ಮೃತಿ ಜೊತೆಯಾಟದ ರಂಗು: ಹರ್ಮನ್ ಪಡೆಗೆ ಎಂಟನೇ ಏಷ್ಯಾ 'ಕಪ್'ಕಳೆದ ವರ್ಷ ( 2025ರಲ್ಲಿ) ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತದ ಪುರುಷರ ತಂಡವೂ ಏಷ್ಯಾಕಪ್ ಗೆದ್ದಾಗ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಅದಾದ ನಂತರ ಉಭಯ ದೇಶಗಳ ನಡುವೆ ಸೇನಾ ಸಂಘರ್ಷ ಏರ್ಪಟಿತ್ತು. ಪಾಕಿಸ್ತಾನವು ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ ಎಂಬುದು ಕ್ರಿಕೆಟ್ ಅಂಗಳದ ಬೆಳವಣಿಗೆಗೆ ಕಾರಣ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸೈಕಿಯಾ, ʼನಾವು ಸದ್ಯದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಮಾಡಿದ್ದೇವೆ. ಈ ಪರಿಸ್ಥಿತಿಯಲ್ಲಿ ಭಾರತ ತಂಡವು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವನ್ನು ಎಸಿಸಿಗೆ ಮೊದಲೇ ತಿಳಿಸಲಾಗಿತ್ತುʼ ಎಂದು ಮಾಹಿತಿ ನೀಡಿದ್ದಾರೆ.
ʼದೇಶದ ಈಗಿನ ಸ್ಥಿತಿ ಹಾಗೂ ಜನರ ಭಾವನೆಯನ್ನು ಪರಿಗಣಿಸಿದರೆ, ನಕ್ವಿ ಅವರಿಂದ ಟ್ರೋಫಿ ಪಡೆಯದಿರುವುದೇ ಸೂಕ್ತ ಎಂದು ಬಿಸಿಸಿಐ ಭಾವಿಸಿತ್ತು. ಅದರಂತೆ ಸಾಂಸ್ಥಿಕವಾಗಿ ದೃಢ ನಿರ್ಧಾರ ಕೈಗೊಳ್ಳಲಾಗಿದೆ. ಅದು ಕ್ರೀಡೆ ಅಥವಾ ಟೂರ್ನಿಗೆ ವಿರುದ್ಧವಾದ ನಿಲುವು ಅಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

