ನವದೆಹಲಿ: ಅರಬ್ಬಿ ಸಮುದ್ರದ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತದ ಯುದ್ಧ ನೌಕೆಗೆ ಪಾಕಿಸ್ತಾನದ ಯುದ್ಧ ಹಡಗು ಮಂಗಳವಾರ ಸಂಜೆ ಡಿಕ್ಕಿಯಾಗಿದ್ದು, ಈ ಕುರಿತು ಪಾಕಿಸ್ತಾನದ ರಾಯಭಾರ ಕಚೇರಿಗೆ ಸಮನ್ಸ್ ಜಾರಿಮಾಡಲಾಗಿದೆ.
ಭಾರತವು, ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಯಿಸಿಕೊಂಡು, ಸ್ವೀಕಾರಾರ್ಹವಲ್ಲದ ಈ ನಡವಳಿಕೆಯ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
'ಸೇನಾ ಅಭ್ಯಾಸ, ತುಕಡಿಗಳ ಚಲನವಲನದ ಕುರಿತು ಪೂರ್ವಭಾವಿಯಾಗಿ ಮಾಹಿತಿ ನೀಡುವ ಕುರಿತು 1991ರಲ್ಲಿ ಉಭಯ ದೇಶಗಳ ನಡುವೆ ಮಾಡಿಕೊಳ್ಳಲಾದ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಇದು' ಎಂದು ಸಚಿವಾಲಯ ಮಾಹಿತಿ ನೀಡಿದೆ.
'ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಪಾಕಿಸ್ತಾನದ ಆಡಳಿತಕ್ಕೆ ತಿಳಿಸಬೇಕು ಎಂದು ರಾಜತಾಂತ್ರಿಕ ಅಧಿಕಾರಿಯ ಗಮನಕ್ಕೆ ತರಲಾಗಿದೆ' ಎಂದು ಸಚಿವಾಲಯ ಹೇಳಿದೆ.
'ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿಯೂ ಪ್ರತಿಭಟನೆದಾಖಲಿಸುವಂತೆ ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿಗೂ ಸೂಚಿಸಲಾಗಿದೆ' ಎಂದು ಹೇಳಿದೆ.
ಗಡಿ ಜಂಟಿ ಆಯೋಗಕ್ಕೆ ನಕಾರ
ಪಾಕಿಸ್ತಾನ ಮತ್ತು ಚೀನಾ ರಚಿಸಿರುವ 'ಗಡಿ ಜಂಟಿ ಆಯೋಗ'ವನ್ನು ಭಾರತ ಬುಧವಾರ ತಿರಸ್ಕರಿಸಿದೆ.
'ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿದ್ದು, ಅವುಗಳನ್ನು ದೇಶದಿಂದ ಬೇರ್ಪಡಿಸಲು ಸಾಧ್ಯ ಇಲ್ಲ. ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಭಾರತದ ಈ ಪ್ರದೇಶಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವುದಕ್ಕೆ ಈ ಆಯೋಗಕ್ಕೆ ಯಾವುದೇ ಅಧಿಕಾರ ಇಲ್ಲ' ಎಂದು ಹೇಳಿದೆ.
ಆಯೋಗದ ಮೊದಲ ಸಭೆ ಇಸ್ಲಾಮಾಬಾದ್‌ನಲ್ಲಿ ನಡೆದಿದೆ. ಇದರ ಬೆನ್ನಲ್ಲೇ, ಭಾರತ ಈ ಪ್ರತಿಕ್ರಿಯೆ ನೀಡಿದೆ.
'ಪಾಕಿಸ್ತಾನ ಮತ್ತು ಚೀನಾ ಮಧ್ಯೆ ಯಾವುದೇ ಗಡಿಯೂ ಇಲ್ಲ. ಹೀಗಾಗಿ, ಈ ಆಯೋಗವನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸುತ್ತದೆ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.
260917-51-62247629

