Dailyhunt Logo
  • Light mode
    Follow system
    Dark mode
    • Play Story
    • App Story
ಪಾಸ್‌ಪೋರ್ಟ್‌ ಪೌರತ್ವ ಪುರಾವೆ ಅಲ್ಲ: ಸರ್ಕಾರಿ ಮೂಲಗಳ ಸ್ಪಷ್ಟನೆ

ಪಾಸ್‌ಪೋರ್ಟ್‌ ಪೌರತ್ವ ಪುರಾವೆ ಅಲ್ಲ: ಸರ್ಕಾರಿ ಮೂಲಗಳ ಸ್ಪಷ್ಟನೆ

ವದೆಹಲಿ : ಪಾಸ್‌ಪೋರ್ಟ್ ಎಂದಿಗೂ ಪೌರತ್ವ ಸಾಬೀತುಪಡಿಸುವ ದಾಖಲೆಯಾಗಿರಲಿಲ್ಲ ಮತ್ತು ನರೇಂದ್ರ ಮೋದಿ ಸರ್ಕಾರವು ಕಳೆದ 12 ವರ್ಷಗಳಲ್ಲಿ ಈ ಬಗ್ಗೆ ಯಾವುದೇ ಹೊಸ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸರ್ಕಾರಿ ಮೂಲಗಳು ಗುರುವಾರ ತಿಳಿಸಿವೆ.

'ಪಾಸ್‌ಪೋರ್ಟ್ ಪ್ರಯಾಣ ದಾಖಲೆ ಮಾತ್ರ, ಅದು ಪೌರತ್ವಕ್ಕೆ ಪುರಾವೆಯಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸ್ಪಷ್ಟಪಡಿಸಿರುವ ಬಗ್ಗೆ

ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ವರದಿ ಕುರಿತಂತೆ, 'ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂಬುದು ಇಂದು-ನಿನ್ನೆ ತೆಗೆದುಕೊಂಡ ನಿರ್ಧಾರ ಅಲ್ಲ' ಎಂದು ಮೂಲಗಳು ಹೇಳಿವೆ.

'ಪಾಸ್‌ಪೋರ್ಟ್, ಒಬ್ಬ ವ್ಯಕ್ತಿಯ ಪೌರತ್ವ ಸಾಬೀತುಪಡಿಸುವ ದಾಖಲೆ ಅಲ್ಲ ಎಂಬುದು ನಿನ್ನೆ ಅಥವಾ ಕಳೆದ 12 ವರ್ಷಗಳಲ್ಲಿ ನಿರ್ಧರಿಸಲಾಗಿಲ್ಲ. ಪಾಸ್‌ಪೋರ್ಟ್ ಎಂದಿಗೂ ಪೌರತ್ವದ ಪುರಾವೆಯಾಗಿರಲಿಲ್ಲ. 1967ರ ಪಾಸ್‌ಪೋರ್ಟ್ ಕಾಯ್ದೆ ಪ್ರಕಾರ, ನಾಗರಿಕರಲ್ಲದವರಿಗೂ ಪಾಸ್‌ಪೋರ್ಟ್‌ಗಳನ್ನು ನೀಡಬಹುದು' ಎಂದು ತಿಳಿಸಿವೆ.

'ಪಾಸ್‌ಪೋರ್ಟ್ ಪ್ರಯಾಣ ದಾಖಲೆಯಾಗಿದೆ. ಅದು ಪೌರತ್ವದ ಪುರಾವೆಯಲ್ಲ' ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳು ಬುಧವಾರ ವರದಿ ಮಾಡಿದ್ದವು.

'ಪಾಸ್‌ಪೋರ್ಟ್‌, ಪೌರತ್ವದ ದಾಖಲೆಯಲ್ಲ ಎಂಬುದನ್ನು ಬಾಂಬೆ ಹೈಕೋರ್ಟ್‌ 2013ರಲ್ಲಿ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ' ಎಂದು ಅಧಿಕೃತ ಮೂಲಗಳು ಹೇಳಿವೆ.

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಕುರಿತ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, 'ಆಧಾರ್, ಪೌರತ್ವದ ನಿರ್ಣಾಯಕ ಪುರಾವೆಯಲ್ಲ, ಕೇವಲ ಗುರುತಿನ ದಾಖಲೆ' ಎಂದು ಹೇಳಿತ್ತು.

ಈಗಿನ ಸಂದರ್ಭದಲ್ಲಿ ಹಿಂದೂ ಹಾಗೂ ಬಿಜೆಪಿ ಮತದಾರನಾಗಿರಬೇಕಾದುದು ಪೌರತ್ವದ ಏಕೈಕ ಪುರಾವೆಯಾಗಿದೆ ಎಂದು ತೋರುತ್ತದೆ ಮಹುವಾ ಮೊಯಿತ್ರಾ, ಟಿಎಂಸಿ ನಾಯಕಿ

ಶುಲ್ಕ ಹೆಚ್ಚಳ

ಕೇಂದ್ರ ಸರ್ಕಾರವು 1980ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಪರಿಷ್ಕರಿಸಿದೆ. 36 ಪುಟಗಳನ್ನು ಹೊಂದಿರುವ ಹೊಸ ಪಾಸ್‌ಪೋರ್ಟ್‌ನ ಅರ್ಜಿ ಶುಲ್ಕವನ್ನು ಪ್ರಸ್ತುತ ₹1,500ರಿಂದ ₹2,500ಕ್ಕೆ ಹೆಚ್ಚಿಸಿದೆ.

ಇದೇ ವರ್ಗದ ಪಾಸ್‌ಪೋರ್ಟ್‌ನ ತತ್ಕಾಲ್‌ ಅರ್ಜಿ ಶುಲ್ಕವನ್ನು ಈಗಿನ ₹3,500ರಿಂದ ₹5,000ಕ್ಕೆ ಹೆಚ್ಚಳ ಮಾಡಿದೆ. ಪರಿಷ್ಕೃತ ಶುಲ್ಕ ಜುಲೈ 1ರಿಂದ ಜಾರಿಗೆ ಬರಲಿದೆ. 60 ಪುಟಗಳ ಪಾಸ್‌ಪೋರ್ಟ್‌ನ ಅರ್ಜಿ ಶುಲ್ಕವನ್ನು ಪ್ರಸ್ತುತ ₹2,000ದಿಂದ ₹3,500ಕ್ಕೆ ಹಾಗೂ ತತ್ಕಾಲ್‌ನಲ್ಲಿ ಇದೇ ವರ್ಗದ ಪಾಸ್‌ಪೋರ್ಟ್‌ ಅರ್ಜಿ ಶುಲ್ಕವನ್ನು ಈಗಿನ ₹4,000ದಿಂದ ₹6,000ಕ್ಕೆ ಏರಿಕೆ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani