'ನವರಾತ್ರಿಯಲ್ಲಿ ಗೊಂಬೆಗಳನ್ನು ಕೂರಿಸುವುದು ಕೇವಲ ಒಂದು ಆಚರಣೆಯಲ್ಲ. ಅದು ಪುರಾಣ, ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಲಾತ್ಮಕ ಅಭಿವ್ಯಕ್ತಿ. ಒಂದೊಂದು ಗೊಂಬೆಯೂ ಒಂದೊಂದು ಕಥೆಯನ್ನು ಹೇಳಿದರೆ, ಗೊಂಬೆಗಳ ಸಾಲುಗಳು ಪೌರಾಣಿಕ ಪ್ರಸಂಗಗಳಿಂದ ಹಿಡಿದು ನಮ್ಮ ಪರಂಪರೆಯ ವೈಭವದವರೆಗೆ ಕಣ್ಣಿಗೆ ಕಟ್ಟುವ ಚಿತ್ರಣ ನೀಡುತ್ತವೆ' ಎನ್ನುತ್ತಾರೆ ಬೆಂಗಳೂರಿನ ಗೊಂಬೆ ಪ್ರಿಯೆ ಕೃಪಾ ಸುನಿಲ್.
ಕಳೆದ 16 ವರ್ಷಗಳಿಂದ ದಸರಾ ಗೊಂಬೆಗಳನ್ನು ಕೂರಿಸುತ್ತಿರುವ ಇವರು, ಪ್ರತಿವರ್ಷವೂ ವಿಭಿನ್ನ ವಿಷಯವನ್ನು ಆಯ್ದುಕೊಂಡು ಗೊಂಬೆಗಳ ಮೂಲಕ ಕಥನವನ್ನು ಕಟ್ಟಿಕೊಡುತ್ತಿದ್ದಾರೆ. ಇವರ ಸಂಗ್ರಹದಲ್ಲಿ 1,250ಕ್ಕೂ ಹೆಚ್ಚು ಗೊಂಬೆಗಳಿವೆ.
ಒಂದೆಡೆ ವರ್ಲಿ ಕಲೆಯ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿರುವ ಕೃಷ್ಣನ ಬಾಲಲೀಲೆ. ಮತ್ತೊಂದೆಡೆ ಕೈಯಿಂದ ಮಾಡಿದ ಅಷ್ಟಲಕ್ಷ್ಮಿ ಗೊಂಬೆ ಅಲಂಕಾರ. ಮಗದೊಂದೆಡೆ ಎ.ಐ ಚಿತ್ರಗಳನ್ನು ಬಳಸಿ ಮಾಡಿರುವ ದಶಾವತಾರ ಜತೆಗೆ ರಾಮಾಯಣ, ಗಂಗಾವತರಣ, ಮೈಸೂರು ದಸರಾ ಉತ್ಸವ ಮತ್ತು ಕೈಲಾಸ ಮಹಾತ್ಮೆ ಸಂಬಂಧಿಸಿದ ವಿವಿಧ ಪ್ರಸಂಗಗಳು ಒಟ್ಟಾರೆ ಸಂಸ್ಕೃತಿಯ ಅನಾವರಣ ಈ ಬಾರಿಯ ಪ್ರದರ್ಶನದ ಆಕರ್ಷಣೆಗಳಾಗಿವೆ.
ಪರಿಸರಸ್ನೇಹಿ ಗೊಂಬೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಇವರ ಸಂಗ್ರಹದಲ್ಲಿ ಶೇ 80ರಷ್ಟು ಮಣ್ಣಿನ ಗೊಂಬೆಗಳಿವೆ ಮತ್ತು ಉಳಿದವುಗಳಲ್ಲಿ ಪೇಪರ್ ಮಷೆ (ಕಾಗದದ ತಿರುಳಿನಿಂದ ತಯಾರಿಸಿದ) ಗೊಂಬೆಗಳೂ ಸೇರಿವೆ.
ಹವ್ಯಾಸವಾಗಿ ಆರಂಭವಾದ ಗೊಂಬೆ ಜೋಡಣೆ ಇಂದು ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವಾಗಿ ಬೆಳೆದಿದೆ. ಜತೆಗೆ, ಜಂಜಾಟದ ಕೆಲಸಗಳ ನಡುವೆ ಕುಟುಂಬಸ್ಥರು, ಸ್ನೇಹಿತರು ಒಟ್ಟಿಗೆ ಸೇರುವ ಸ್ನೇಹಕೂಟವೂ ಹೌದು.
ಎಂಬಿಎ ಪದವಿ ಹಾಗೂ ಅನಿಮೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೃಪಾ ಅವರು, ಆಧುನಿಕತೆ ಮತ್ತು ತಂತ್ರಜ್ಞಾನದೊಂದಿಗೆ ಬೆಳೆಯುವ ಮಕ್ಕಳು ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನೂ ಅರಿತುಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ ಮತ್ತು ಗೊಂಬೆಗಳ ಮೂಲಕ ಮಕ್ಕಳಲ್ಲಿ ಪರಂಪರೆಯ ಅರಿವು ಮೂಡಿಸುವ ಉದ್ದೇಶ ಹೊಂದಿದ್ದಾರೆ. ಇದಕ್ಕೆ ಇವರ ಕುಟುಂಬಸ್ಥರ ಬೆಂಬಲವೂ ಇದೆ. ಹೀಗೆ ಗೊಂಬೆಗಳ ಮೂಲಕ ಪುರಾಣದ ಕಥನಗಳನ್ನು ಪರಿಚಯಿಸುವುದರ ಜತೆಗೆ, ಸಂಸ್ಕೃತಿಯ ಬೇರುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವೂ ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
ಪೌರಾಣಿಕ ಪ್ರಸಂಗಗಳನ್ನು ಗೊಂಬೆಗಳ ಮೂಲಕ ಪ್ರಸ್ತುತಪಡಿಸುವುದು ನನ್ನ ನೆಚ್ಚಿನ ಹವ್ಯಾಸ. ಇಂದಿನ ದಿನಗಳಲ್ಲಿ ಮಕ್ಕಳೆಲ್ಲಾ ಆಧುನಿಕತೆ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ. ಹೊಸತನವನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ, ಅದರೊಂದಿಗೆ ನಮ್ಮ ಸಂಸ್ಕೃತಿಯನ್ನು ಅರಿಯುವುದು ಅಗತ್ಯ. ಅದನ್ನು ಮಕ್ಕಳಿಗೆ ತಿಳಿಸುವುದು ನಮ್ಮ ಜವಾಬ್ದಾರಿ
ಕೃಪಾ ಸುನಿಲ್
ಕೃಪಾ ಸುನಿಲ್‌ಪೌರಾಣಿಕ ಪ್ರಸಂಗಗಳನ್ನು ಗೊಂಬೆಗಳ ಮೂಲಕ ಚಿತ್ರಿಸುವುದು ನನ್ನ ನೆಚ್ಚಿನ ಹವ್ಯಾಸ. ಇಂದಿನ ದಿನಗಳಲ್ಲಿ ಮಕ್ಕಳೆಲ್ಲಾ ಹೆಚ್ಚು ಆಧುನಿಕತೆ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ. ಹೊಸತನವನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ, ಅದರೊಂದಿಗೆ ನಮ್ಮ ಸಂಸ್ಕೃತಿಯನ್ನು ಅರಿಯುವುದು ಅಗತ್ಯ. ಅದನ್ನು ಮಕ್ಕಳಿಗೆ ತಿಳಿಸುವುದು ನಮ್ಮ ಜವಾಬ್ದಾರಿ.

261017-4-1231090226

