ಟೆಲ್ ಅವಿವ್: ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ಫ್ಲೈ ದುಬೈ ವಿಮಾನ ತುರ್ತು ಸಂದೇಶಗಳನ್ನು ರವಾನಿಸಿ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಸೌದಿ ಅರೇಬಿಯಾದ ಸೇನಾ ನೆಲೆಯಾಗಿರುವ ತಬುಕ್‌ನಲ್ಲಿ ಫ್ಲೈ ದುಬೈ ವಿಮಾನ ಸುರಕ್ಷಿತವಾಗಿ ಇಳಿದಿದೆ.
ವಿಮಾನದಲ್ಲಿದ್ದ 180 ಇಸ್ರೇಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ನಡುವಿನ ಜಗಳವೇ ಈ ಘಟನೆಗೆ ಕಾರಣ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಬೆನ್ ಗುರಿಯನ್‌ಗೆ ವಿಮಾನ ಹೊರಟಿತ್ತು. ಕೆಲವೇ ಕ್ಷಣಗಳಲ್ಲಿ ವಿಮಾನ ಅಪಹರಣ ಹಾಗೂ ಅಕ್ರಮ ಪ್ರವೇಶವನ್ನು ಸೂಚಿಸುವ '7500' ಕೋಡ್ ಅನ್ನು ಪೈಲಟ್‌ಗಳು ನಿಯಂತ್ರಣ ಕೊಠಡಿಗೆ ರವಾನಿಸಿದರು. ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಮಧ್ಯೆ ಜಗಳ ನಡೆದಿದೆ. ಒಬ್ಬ ಪೈಲಟ್ ಮತ್ತೊಬ್ಬನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರ ಹೇಳಿಕೆ ಉಲ್ಲೇಖಿಸಿ 'ದಿ ಜೆರುಸಲೇಂ ಪೋಸ್ಟ್' ವರದಿ ಮಾಡಿದೆ. ಜಗಳ ತಡೆಯಲು ಕೆಲವು ಪ್ರಯಾಣಿಕರು ವಿಮಾನದ ಸಿಬ್ಬಂದಿಗೆ ನೆರವಾದರು ಎಂದು ತಿಳಿದು ಬಂದಿದೆ.
ಕಾಕ್‌ಪಿಟ್ ಬಾಗಿಲು ತೆರೆದಾಗ ಒಳಗೆ ರಕ್ತ ಚೆಲ್ಲಿತ್ತು. ಒಂದು ಹಂತದಲ್ಲಿ ತಾವು ಜೀವಂತವಾಗಿ ಉಳಿಯುವುದಿಲ್ಲ ಎಂದೇ ಭಾವಿಸಿದ್ದೆವು ಎಂದು ಮಿರಿಯಮ್ ಎಂಬ ಪ್ರಯಾಣಿಕರು ಹೇಳಿದ್ದಾರೆ.
ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಫ್ಲೈ ದುಬೈ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

