Dailyhunt Logo
  • Light mode
    Follow system
    Dark mode
    • Play Story
    • App Story
ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ

ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ

ಬೆಂಗಳೂರು: 'ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಿದ್ದರಾಮಯ್ಯ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ. ಈಗಲೂ ಮುಂದುವರಿದಿದೆ. ಈ ಯೋಜನೆಗಳ ಫಲಾನುಭವಿಗಳು ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಟ್ಟು ಆತಂಕಕ್ಕೆ ಈಡಾಗಬೇಕಾಗಿಲ್ಲ ಎಂದಿದ್ದಾರೆ.

ಬಿಜೆಪಿ ಮೂಲತಃ ಬಡವರ ವಿರೋಧಿ ಪಕ್ಷ.‌ ಅದು ಗ್ಯಾರಂಟಿ ಯೋಜನೆಗಳನ್ನು ಮೊದಲ ದಿನದಿಂದಲೇ ವಿರೋಧಿಸುತ್ತಾ ಬಂದಿದೆ. ಮೊದಲು ಗ್ಯಾರಂಟಿ ಯೋಜನೆಗಳ ಜಾರಿಯೇ ಅಸಾಧ್ಯ ಎಂದರು, ನಂತರದ ದಿನಗಳಲ್ಲಿ ಹಣಕಾಸಿನ ಕೊರತೆಯಿಂದ ಸರ್ಕಾರ ದಿವಾಳಿಯಾಗಲಿದೆ ಎಂದರು. ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎನ್ನುವ ಪುಕಾರು ಹಬ್ಬಿಸುತ್ತಿದ್ದಾರೆ. ಇದು ಅವರ ರಾಜಕೀಯ ಹತಾಶೆಯ ಪ್ರತೀಕ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಯಾಗಿ ಐದು ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದಲ್ಲದೆ, ಇದರಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ಏನೂ ದುಷ್ಪರಿಣಾಮ ಬೀರದಂತೆ ನೋಡಿಕೊಂಡಿದ್ದೇನೆ. ಇಂದು ಕರ್ನಾಟಕ ರಾಜ್ಯವು ತಲಾವಾರು ಆದಾಯದಲ್ಲಿ ದೇಶಕ್ಕೇ ಮೊದಲನೇ ಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಎರಡನೇ ರಾಜ್ಯ ಕರ್ನಾಟಕ. ಖಜಾನೆ ಖಾಲಿಯಾಗಿದ್ದರೆ, ಸರ್ಕಾರ ದಿವಾಳಿ ಸ್ಥಿತಿಯಲ್ಲಿದ್ದರೆ ಈ ಸಾಧನೆ ಸಾಧ‍್ಯವೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ, ಅದೇ ಯೋಜನೆಗಳನ್ನು ಮಧ್ಯಪ್ರದೇಶ, ಬಿಹಾರ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ನಕಲು ಹೊಡೆದು ಅಧಿಕಾರಕ್ಕೆ ಬಂದಿದೆ. ಇವರಿಗೆ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಯಾವ ನೈತಿಕತೆ ಇದೆ? ಎಂದೂ ಕೇಳಿದ್ದಾರೆ

ಕೆಲವು ರಾಜ್ಯಗಳ ಚುನಾವಣಾ ಪೂರ್ವದಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿದರೂ ಅವುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಗಳು ನಿಜವಾದ ಅರ್ಹರಿಗೆ ಸಿಗಬೇಕು. ಅದು ಅನರ್ಹರ ಪಾಲಾದಾಗ ಅದನ್ನು ತಡೆಗಟ್ಟುವುದು ಚುನಾಯಿತ ಸರ್ಕಾರದ ಕರ್ತವ್ಯವಾಗಿದೆ. ನಮ್ಮ ಜನರು ಕೂಡಾ ಈ ಬಗ್ಗೆ ಯೋಚನೆ ಮಾಡಬೇಕಾಗಿದೆ. ದುರಾಸೆಗೆ ಬಲಿಬಿದ್ದು ಸರ್ಕಾರಕ್ಕೆ ಮೋಸ ಮಾಡಿ ಗ್ಯಾರಂಟಿ ಯೋಜನೆಗಳ ಲಾಭ ತೆಗೆದುಕೊಳ್ಳುವುದು ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ರಾಜ್ಯದ ಜನತೆಗೆ ಬಗೆವ ದ್ರೋಹವಾಗಿದೆ. ಇಂತಹ ವಿಷಯದಲ್ಲಿ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡಲು ಹೋಗದೆ, ಅರ್ಹರಿಗೆ ಯೋಜನೆಗಳನ್ನು ತಲುಪಿಸಲು ಸರ್ಕಾರಕ್ಕೆ ನೆರವಾಗಬೇಕು ಎಂದೂ ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ಪಷ್ಟನೆ ನೀಡಿದ್ದ ಸಿಎಂ

'ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳಾದ 'ಗೃಹಲಕ್ಷ್ಮಿ' ಮತ್ತು 'ಗೃಹಜ್ಯೋತಿ' ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ್ದ ಅವರು, 'ಕೆಲವರು ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಬ್ಯಾಂಕ್‌ ಖಾತೆ ತೆರೆದು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣಕ್ಕಾಗಿ, ಅವರ ಹೆಸರು, ವಿಳಾಸ, ಖಾತೆ ಸಂಖ್ಯೆ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೇಳಿದ್ದೇವೆ. ಅದರ ಹೊರತು ಯೋಜನೆಗಳನ್ನು ನಿಲ್ಲಿಸಲು ಅಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಎಲ್ಲ ಗ್ಯಾರಂಟಿ ಯೋಜನೆಗಳು ಶೇಕಡಾ ನೂರಕ್ಕೆ ನೂರರಷ್ಟು ಮುಂದುವರಿಯುತ್ತವೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ' ಎಂದೂ ಅವರು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಡಿ.ಕೆ. ಶಿವಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Prajavani