Dailyhunt Logo
  • Light mode
    Follow system
    Dark mode
    • Play Story
    • App Story
ಪಂಜಾಬ್: ಶಾಸಕ ಸ್ಥಾನಕ್ಕೆ ಮಾಜಿ IPS ಅಧಿಕಾರಿ ವಿಜಯ್ ಪ್ರತಾಪ್ ಸಿಂಗ್ ರಾಜೀನಾಮೆ

ಪಂಜಾಬ್: ಶಾಸಕ ಸ್ಥಾನಕ್ಕೆ ಮಾಜಿ IPS ಅಧಿಕಾರಿ ವಿಜಯ್ ಪ್ರತಾಪ್ ಸಿಂಗ್ ರಾಜೀನಾಮೆ

ಚಂಡೀಗಢ: ಅಮಾನತುಗೊಂಡಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ) ಶಾಸಕ, ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಪಂಜಾಬ್ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಮೃತಸರ ಉತ್ತರ ಕ್ಷೇತ್ರದ ಶಾಸಕರಾಗಿರುವ ಸಿಂಗ್ ಅವರು ರಾಜೀನಾಮೆ ಪತ್ರವನ್ನು ಪಂಜಾಬ್ ವಿಧಾನಸಭೆಯ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ರವಾನಿಸಿದ್ದಾರೆ.

ನವೆಂಬರ್ 1ರಿಂದ ಜಾರಿಗೆ ಬರುವಂತೆ ನಾನು ಪಂಜಾಬ್ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ.

ಪಂಜಾಬ್‌ನ ಪಾಟಿಯಾಲ ಜಿಲ್ಲೆಯ ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೋರಾಮಾಜ್ರಾ ಮತ್ತು ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಠಾಣ್‌ಮಾಜ್ರಾ ಅವರು ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ 2025ರ ಜೂನ್‌ನಲ್ಲಿ ಸಿಂಗ್ ಅವರನ್ನು ಎಎಪಿ ಪಕ್ಷದಿಂದ ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು.

ಆಸ್ತಿ ಮೀರಿದ ಆದಾಯ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿರೋಮಣಿ ಅಕಾಲಿ ದಳದ ನಾಯಕ ವಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ಪಂಜಾಬ್ ಗುಪ್ತಚರ ಇಲಾಖೆ ಕೈಗೊಂಡಿದ್ದ ಕ್ರಮವನ್ನು ಪ್ರಶ್ನಿಸಿದ ನಂತರ ಸಿಂಗ್ ಅವರನ್ನು ಅಮಾನತು ಮಾಡಲಾಗಿತ್ತು.

ಅಂದಿನಿಂದಲೂ ಸಿಂಗ್ ಅವರು ಎಎಪಿ ಸರ್ಕಾರದ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು.

ಫರೀದ್‌ಕೋಟ್‌ನಲ್ಲಿ 2015ರಲ್ಲಿ ನಡೆದ ಧರ್ಮಗ್ರಂಥ ಅಪಮಾನ ಮತ್ತು ಪೊಲೀಸ್ ಗುಂಡಿನ ದಾಳಿ ಪ್ರಕರಣಗಳ ತನಿಖೆಯನ್ನು ಸರ್ಕಾರ ನಡೆಸಿದ ರೀತಿ ಬಗ್ಗೆ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ನ್ಯಾಯ ನೀಡುವಂತೆ ಪಟ್ಟು ಹಿಡಿದಿದ್ದರು.

2015ರ ಕೋಟ್‌ಕಾಪುರಾ ಮತ್ತು ಬೆಹಬಲ್ ಕಲಾನ್ ಪೊಲೀಸ್ ಗುಂಡಿನ ದಾಳಿ ಪ್ರಕರಣಗಳ ತನಿಖೆ ನಡೆಸಿದ ಪಂಜಾಬ್ ಪೊಲೀಸರ ವಿಶೇಷ ತನಿಖಾ ತಂಡದ ಭಾಗವಾಗಿ ವಿಜಯ್ ಪ್ರತಾಪ್ ಕಾರ್ಯನಿರ್ವಹಿಸಿದ್ದರು. ವಿಧಾನಸಭೆಯಲ್ಲೂ ಅವರು 2015ರ ಧರ್ಮಗ್ರಂಥ ಅಪಮಾನದ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿದ್ದರು.

ಕಳೆದ ವರ್ಷ ಅಮೃತಸರದಲ್ಲಿ ವಿಷಕಾರಿ ಮದ್ಯ ಸೇವಿಸಿ 20ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಯಲ್ಲೂ ಭಗವಂತ್ ಮಾನ್ ಸರ್ಕಾರದ ವೈಫಲ್ಯವನ್ನು ಪ್ರತಾಪ್ ಎತ್ತಿ ತೋರಿಸಿದ್ದರು.

2021ರಲ್ಲಿ ಪೊಲೀಸ್ ಸೇವೆಯಿಂದ ಅವಧಿಗೆ ಮುನ್ನವೇ ನಿವೃತ್ತಿ (ವಿಆರ್‌ಎಸ್) ಪಡೆದ ನಂತರ ಸಿಂಗ್ ಅವರು ಎಎಪಿಗೆ ಸೇರ್ಪಡೆಗೊಂಡಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani