Dailyhunt Logo
  • Light mode
    Follow system
    Dark mode
    • Play Story
    • App Story
ಪರ್ಸನಲ್ ಎಐ ಅಸಿಸ್ಟೆಂಟ್‌ಗಳು!

ಪರ್ಸನಲ್ ಎಐ ಅಸಿಸ್ಟೆಂಟ್‌ಗಳು!

ಕೃಷ್ಣ ಭಟ್‌

ಕಳೆದ ವಾರ ಅಮೆಜಾನ್‌ ಕಂಪನಿ 'ಬೀ' ಎಂಬ ಸಾಧನವನ್ನು ಬಿಡುಗಡೆ ಮಾಡಿದೆ. ವಿಶೇಷ ಎಂದರೆ, ತನ್ನ ಉತ್ಪನ್ನಗಳನ್ನು ಭಾರಿ ಪ್ರಚಾರ ಕೊಟ್ಟು ಬಿಡುಗಡೆ ಮಾಡುವ ಕಂಪನಿ, ಈ ಪ್ರಾಡಕ್ಟ್ ಅನ್ನು ಬಿಡುಗಡೆ ಮಾಡಿದ್ದರೂ, ಇದು ಬಿಡುಗಡೆಯಾಗಿದ್ದು ಸುದ್ದಿಯಾಗಲೇ ಇಲ್ಲ.

ಇದೊಂದು ಪುಟ್ಟ ಸಾಧನ. ಇಂಥದ್ದನ್ನು 'ಎಐ ರೆಕಾರ್ಡರ್' ಎಂದು ಕರೆಯಲಾಗುತ್ತದೆ.

ಈ ಸಾಧನವನ್ನು ಖರೀದಿ ಮಾಡಿ, ವಾಚ್ ರೀತಿ ಕೈಗೆ ಕಟ್ಟಿಕೊಂಡರೆ, ಇಡೀ ದಿನ ನಾವು ಏನು ಮಾತನಾಡಿದರೂ, ಅದನ್ನು ಕೇಳಿಸಿಕೊಳ್ಳುತ್ತದೆ. ನಮ್ಮ ಎದುರಿನವರೂ ಮಾತನಾಡಿದ್ದನ್ನೂ ಕೇಳಿಸಿಕೊಳ್ಳುತ್ತದೆ. ಎಲ್ಲವನ್ನೂ ಕೇಳಿಸಿಕೊಳ್ಳುತ್ತಲೇ ಟಿಪ್ಪಣಿ ಮಾಡಿಕೊಳ್ಳುತ್ತದೆ. 'ನಾಳೆ ಸಂಜೆ 4.30‌ಕ್ಕೆ ಒಂದು ಮೀಟಿಂಗ್ ಇದೆ' ಎಂದು ನೀವು ಮಾತನಾಡುತ್ತಾ ಯಾರಿಗೋ ಹೇಳಿದರೆ, ಅದನ್ನೂ ಅದು ರೆಕಾರ್ಡ್ ಮಾಡಿಕೊಂಡು, ಕ್ಯಾಲೆಂಡರ್‌ಗೆ ಸೇರಿಸುತ್ತದೆ. ಇದೊಂದು ರೀತಿ ನಿಮ್ಮನ್ನು ಅರ್ಥ ಮಾಡಿಕೊಂಡ ಪರ್ಸನಲ್ ಅಸಿಸ್ಟೆಂಟ್ ರೀತಿ ಕೆಲಸ ಮಾಡುತ್ತಿರುತ್ತದೆ. ಇದು ಎಲ್ಲರಿಗೂ ಪ್ರಯೋಜನಕ್ಕೆ ಬರದೇ ಇದ್ದರೂ, ಕೆಲವರಿಗೆ ಸಹಾಯ ಮಾಡಬಹುದು. ಯಾರೋ ಸ್ನೇಹಿತರ ಬಳಿ ಮಾತನಾಡುತ್ತಿದ್ದಾಗ, ಅವರು ಯಾವುದೋ ಸಿನಿಮಾವನ್ನೋ ಪುಸ್ತಕವನ್ನೋ ನಿಮಗೆ ಮಾತಿನ ಮಧ್ಯೆ ಸಜೆಸ್ಟ್ ಮಾಡುತ್ತಿರುತ್ತಾರೆ. ಅವರ ಜೊತೆ ಚಹಾ ಕುಡಿದು ಎದ್ದು ಬಂದ ನಂತರ, ಆ ಚಹಾದ ಸವಿ ಮಾತ್ರ ನಾಲಿಗೆ ಮೇಲೆ ಇರುತ್ತದೆ. ಅವರು ಸಜೆಸ್ಟ್ ಮಾಡಿದ ಪುಸ್ತಕ, ಸಿನಿಮಾದ ಹೆಸರು ಮಸ್ತಿಷ್ಕದಿಂದ ಮರೆಯಾಗಿರುತ್ತದೆ. ಆದರೆ, ಈ ಡಿವೈಸ್ ಇದೆಯಲ್ಲ, ಅದು ಮಾತನ್ನೆಲ್ಲ ಕೇಳಿಸಿಕೊಂಡು ತಲೆಯಲ್ಲಿಟ್ಟುಕೊಂಡಿರುತ್ತದೆ. ನೀವು ಆಮೇಲೆ ಅದರ ಬಳಿ ಕೇಳಿ ತಿಳಿದುಕೊಳ್ಳಬಹುದು!

ಇದು ಮೇಲ್ನೋಟಕ್ಕೆ ಬಹಳ ಆಸಕ್ತಿಕರವಾಗಿ ಕಾಣಿಸಬಹುದು. ಆದರೆ, ಅಸಲಿಗೆ ಇದು ಎಷ್ಟು ಸಹಾಯ ಮಾಡುತ್ತದೆ? ಗೊತ್ತಿಲ್ಲ.

ಇದೇ ರೀತಿಯ ಇನ್ನೊಂದು ಸಾಧನ ಫ್ರೆಂಡ್. ಇದಂತೂ ಪರ್ಸನಲ್ ಎಐ ವಿಭಾಗದಲ್ಲಿ ಭಾರಿ ಪ್ರಚಾರವನ್ನೂ ಗಿಟ್ಟಿಸಿಕೊಂಡಿದೆ ಹಾಗೂ ವಿವಾದವನ್ನೂ ಹುಟ್ಟುಹಾಕಿದೆ. ಇದು ಕತ್ತಿಗೆ ನೇತುಹಾಕಿಕೊಳ್ಳುವ ಸಾಧನ. ಚಿನ್ನದ ಸರಕ್ಕೊಂದು ಪದಕ ಇರುತ್ತದೆಯಲ್ಲ, ಆ ರೀತಿ! ಇದು ನಮ್ಮ ಮಾತಿನ ಧ್ವನಿ, ಧಾಟಿ, ಮೂಡ್ ಅನ್ನು ಅರ್ಥ ಮಾಡಿಕೊಂಡು ಸಾಂತ್ವನ ಹೇಳುತ್ತದೆ ಎಂಬುದು ಇದರ ಹೆಚ್ಚುಗಾರಿಕೆ.

ಇತ್ತೀಚೆಗೆ ಮೆಟಾ ಕೂಡ ಇಂಥದ್ದೇ ಸಾಧನವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಅದರ ಮೆಟಾ ಗ್ಲಾಸ್ ಜನಪ್ರಿಯವಾದ ಮೇಲೆ, 'ಮ್ಯೂಸ್ ಚಾರ್ಮ್' ಎಂಬ ಸಾಧನವನ್ನು ಈ ವರ್ಷದ ಡಿಸೆಂಬರ್ ಹೊತ್ತಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದು ಕೂಡ ಪರ್ಸನಲ್ ಎಐ ಅಸಿಸ್ಟೆಂಟ್ ವಿಭಾಗದ ಸಾಧನವೇ ಆಗಿದೆ. ಕಳೆದ ತಿಂಗಳು ಇದರ ಮಾದರಿಯ ಪ್ರದರ್ಶನವನ್ನೂ ಮಾರ್ಕ್ ಝಕರ್‌ಬರ್ಗ್‌ ಮಾಡಿದ್ದಾರೆ. ನೋಡುವುದಕ್ಕೇನೋ ಆಕರ್ಷಕವಾಗಿಯೇ ಇದೆ.

ಇದೇ ಮೆಟಾ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು 'ನಿರ್ವಾ' ಎಂಬ ಎಐ ಜ್ಯುವೆಲರಿಯನ್ನು ಬಿಡುಗಡೆ ಮಾಡಿದ್ದಾರೆ. ಇದು ನೆಕ್‌ಲೇಸ್ ರೀತಿ ಕತ್ತಿಗೆ ಧರಿಸುವಂಥದ್ದು. ಇದು ಕೂಡ ಈಗಾಗಲೇ ಹೇಳಿದ ಸಾಧನದ ರೀತಿಯಲ್ಲೇ ಕೆಲಸ ಮಾಡುತ್ತದೆ.

ಇದೇ ರೀತಿ ಪ್ಲಾಡ್ ಕಂಪನಿಯ 'ನೋಟ್‌ಪಿನ್', 'ಓಮಿ' ಎಂಬ ಇನ್ನೊಂದು ಸಾಧನ, ಝೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಟೆಂಪಲ್ ಎಂಬ ಸಾಧನ ಸೇರಿದಂತೆ 15ಕ್ಕೂ ಸಾಧನಗಳು ಈ ವಿಭಾಗದಲ್ಲಿ ಸದ್ಯಕ್ಕೆ ಮಾರುಕಟ್ಟೆಯಲ್ಲಿವೆ. ಆದರೆ, ಇವು ಯಾವುವೂ ಈವರೆಗೆ ಬಹಳ ಸಂಚಲನ ಸೃಷ್ಟಿಸುವಂಥದ್ದೇನೂ ಮಾಡಿಲ್ಲ.

ಈ ಎಲ್ಲ ಸಾಧನಗಳಲ್ಲಿ ಗೌಪ್ಯತೆಯ ಆತಂಕವೂ ಇದೆ. ನಿಮ್ಮ ಬಳಿ ಯಾರೋ ಆತ್ಮೀಯತೆಯಿಂದ ಏನೋ ಹೇಳಿಕೊಳ್ಳುತ್ತಾರೆ. ಅವರಿಗೆ ವಿಶ್ವಾಸ ಏನೆಂದರೆ, ನೀವು ಅದನ್ನು ನಿಮ್ಮ ತಲೆಯಲ್ಲೇ ಇಟ್ಟುಕೊಂಡಿರುತ್ತೀರಿ, ಬೇರೆಯವರಿಗೆ ಹೇಳುವುದಿಲ್ಲ ಎಂದು. ನಮಗೆ ಆಪ್ತತೆ ಬರುವುದೇ ನಾವು ಹೇಳಿಕೊಂಡ ಸಂಗತಿಗಳು ಅಲ್ಲೇ ಉಳಿಯುತ್ತವೆ. ಅದು ಆ ಕಿವಿಯನ್ನು ದಾಟಿ, ಮಿದುಳಿಗೆ ಹೋಗಿ, ಪ್ರೋಸೆಸ್ ಆಗಿ, ಬಾಯಿಗೆ ಬರುವುದಿಲ್ಲ ಎಂಬ ವಿಶ್ವಾಸ ಇದ್ದಾಗ ಮಾತ್ರ. ಅದೂ ಅಲ್ಲದೆ, ನಮಗೆ ಬಂದ ಮಾಹಿತಿಯೆಲ್ಲವೂ ನಮ್ಮ ಮಿದುಳಿನಲ್ಲಿ ರೆಕಾರ್ಡ್ ಆಗುತ್ತದೆಯಾದರೂ, ಅದನ್ನು ಯಾರೂ ಕದ್ದಾಲಿಸಲು ಸಾಧ್ಯವಿಲ್ಲ! ಅದಕ್ಕೊಂದು ಕ್ಲೌಡ್ ಡ್ರೈವ್ ಇಲ್ಲ! ಅದನ್ನು ಕದ್ದು ಬೇರೆಯವರು ಕೇಳಿಸಿಕೊಳ್ಳಲು ಸಾಧ್ಯವೇ ಇಲ್ಲವಲ್ಲ!

ಆದರೆ, ಇದೇ ವಿಷಯವನ್ನು ಡಿಜಿಟಲ್ ಸಾಧನಗಳಿಗೆ ಅನ್ವಯಿಸುವಂತಿಲ್ಲ. ನಾವು ಹಾಕಿಕೊಂಡಿರುವ ಕನ್ನಡಕದಲ್ಲೋ, ಕೈಗೆ ಕಟ್ಟಿಕೊಂಡಿರುವ ವಾಚ್‌ನಲ್ಲೋ, ಕತ್ತಿಗೆ ನೇತು ಹಾಕಿಕೊಂಡಿರುವ ಸಾಧನದಲ್ಲೋ ನಮ್ಮ ಮಾತೆಲ್ಲ ರೆಕಾರ್ಡ್ ಆಗುತ್ತದೆ ಎಂದಾದರೆ ನಮ್ಮ ಜೊತೆಗೆ ಆಪ್ತವಾಗಿ ಮಾತನಾಡುವವರ ಸಂಖ್ಯೆಯೇ ಕಡಿಮೆಯಾಗಬಹುದು.

ಸುಮ್ಮನೆ ಒಂದು ಸಂಗತಿಯನ್ನು ಗಮನಿಸೋಣ. ಇಬ್ಬರು ಸ್ನೇಹಿತರು ಸುಮ್ಮನೆ ಮಾತನಾಡುತ್ತಿರುವಾಗ ಒಂದು ಆಪ್ತವಾದ ಹಾಗೂ ಮುಕ್ತವಾದ ಭಾವ ಇರುತ್ತದೆ. ಹಾಗೆ ಮಾತನಾಡುತ್ತಿರುವಾಗಲೇ, ನೀವು ನಿಮ್ಮ ಕಿಸೆಯಲ್ಲಿರುವ ಫೋನ್ ತೆಗೆದು ಅವರ ಮಾತನ್ನು ವೀಡಿಯೋ ರೆಕಾರ್ಡ್ ಮಾಡಲು ಶುರು ಮಾಡಿ. ಮೊದಲು ಮುಕ್ತವಾಗಿ, ಹಿಂಜರಿಕೆ ಇಲ್ಲದೇ ಮಾತನಾಡುತ್ತಿದ್ದ ಅವರು, ಅವರ ಎಲ್ಲ ಪ್ರಜ್ಞೆಯನ್ನೂ ಜಾಗೃತಗೊಳಿಸಿಕೊಂಡವರ ಹಾಗೆ ಕೃತ್ರಿಮವಾಗಿ ವರ್ತಿಸಲು ಶುರು ಮಾಡುತ್ತಾರೆ. ಇದೇ ಕಾರಣಕ್ಕೆ 'ಕ್ಯಾಂಡಿಡ್ ಫೋಟೋಗ್ರಫಿ' ಎಂಬ ವಿಭಾಗವೇ ಪ್ರಚಾರ ಪಡೆದಿದ್ದೂ ನಮಗೆ ಗೊತ್ತಿದೆ.

ಈ ಡಿಜಿಟಲ್ ಜಗತ್ತಿಗೆ ನಾವು ತೆರೆದುಕೊಂಡ ಮೇಲೆ ನಾವು ಮೊದಲಿಗಿಂತ ಹೆಚ್ಚು 'ಇದು ನನ್ನ ಪರ್ಸನಲ್' ಎಂದ ಪದಪ್ರಯೋಗವನ್ನು ಮಾಡುತ್ತಿದ್ದೇವೆ. ಇದು ನಮ್ಮ ವೈಯಕ್ತಿಕ ಸ್ಥಳ ದಿನದಿಂದ ದಿನಕ್ಕೆ ಸಾರ್ವಜನಿಕವಾಗುತ್ತಿರುವುದರ ಸಂಕೇತ ಎನ್ನಬಹುದೇನೋ!

261104-51-803929460

Dailyhunt
Disclaimer: This content has not been generated, created or edited by Dailyhunt. Publisher: Prajavani