Dailyhunt
ಪಶ್ಚಿಮ ಬಂಗಾಳ: ಸಹಚರನ ಹತ್ಯೆ ಪೂರ್ವ ಯೋಜಿತ ಎಂದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳ: ಸಹಚರನ ಹತ್ಯೆ ಪೂರ್ವ ಯೋಜಿತ ಎಂದ ಸುವೇಂದು ಅಧಿಕಾರಿ

ಕೋಲ್ಕತ್ತ: ತಮ್ಮ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರದ್ದು 'ಪೂರ್ವ ಯೋಜಿತ ಕೊಲೆ' ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಇದು ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ತೃಣಮೂಲ ಕಾಂಗ್ರೆಸ್‌ನ 'ಮಹಾಜಂಗಲ್ ರಾಜ್'ನ ಪ್ರತಿಫಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸುವೇಂದು ಅಧಿಕಾರಿ, 'ಇದು ಹೃದಯ ವಿದ್ರಾವಕ ಘಟನೆಯಾಗಿದೆ. ಹತ್ಯೆ ಮಾಡುವುದಕ್ಕಿಂತ ಮೊದಲು ದುಷ್ಕರ್ಮಿಗಳು ಸ್ಥಳಕ್ಕೆ ಭೇಟಿ ನೀಡಿ, ಯೋಜನೆ ರೂಪಿಸಿದ್ದರು ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ ಮುಂದುವರಿದಿದ್ದು, ಬಸಿರ್ಹತ್ ಮತ್ತು ಬರಾನಗರದಲ್ಲೂ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ' ಎಂದು ತಿಳಿಸಿದರು.

ಈ ದಾಳಿಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬ ಬಗ್ಗೆ ನೇರವಾಗಿ ಹೇಳದ ಅಧಿಕಾರಿ, 'ಬಿಜೆಪಿ ಕಾರ್ಯಕರ್ತರು ಶಾಂತಿ ಕಾಪಾಡಬೇಕು' ಎಂದು ಮನವಿ ಮಾಡಿದರು. 'ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ನಾವು ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಬಯಸುವುದಿಲ್ಲ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ವಿನಂತಿಸುತ್ತೇನೆ' ಎಂದರು.

ಸದ್ಯ ಘಟನೆ ಸಂಬಂಧ ಸುವೇಂದು ಅಧಿಕಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಪಶ್ಚಿಮ ಬಂಗಾಳ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಗುಂಡಿಕ್ಕಿ ಕೊಲೆ

ಏನಿದು ಪ್ರಕರಣ:

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್‌ ರಥ್‌ ಅವರನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ರಥ್‌ ಅವರು ಕೋಲ್ಕತ್ತದಿಂದ ತಮ್ಮ ಫ್ಲಾಟ್‌ಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಮಧ್ಯಮ್‌ಗ್ರಾಮ್‌ ಪ್ರದೇಶದ ಜೆಸ್ಸೋರ್‌ ರಸ್ತೆಯ ದೊಹರಿಯಾ ಬಳಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಹತ್ತಿರದಿಂದ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 48 ಗಂಟೆಗಳಲ್ಲೇ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿ ಈ ಕೃತ್ಯ ನಡೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani