ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದ ಉಂಟು ಮಾಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ವಿಧಾನಸಭೆ ಹಣಾಹಣಿಯಲ್ಲಿ ಯಾರಿಗೆ ಮುಳುವಾಗುತ್ತದೆ? ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೊ ಅಥವಾ ಬಿಜೆಪಿಗೊ?
ಎಸ್‌ಐಆರ್ ನಿಂದ ಲಕ್ಷಾಂತರ ಜನರನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿರುವ ಚುನಾವಣಾ ಆಯೋಗ ನಡೆಸುತ್ತಿರುವ ಈ ಪ್ರಯೋಗ ಗಂಭೀರ ರೂಪದಲ್ಲಿ ಬಂಗಾಳದ ಮತದಾನದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಈ ಕಾರಣದಿಂದ, ರಾಜ್ಯದಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳಾಗಲಿ, ಮಮತಾರ ತ್ರಿಣಮೂಲ ಕಾಂಗ್ರೆಸ್ ಮೇಲೆ ಇದೆ ಎನ್ನಲಾದ ಆಡಳಿತ ವಿರೋಧಿ ಅಲೆಯಾಗಲೀ, ಇವೆಲ್ಲವೂ ಹಿಂದೆ ಸರಿದಿದ್ದು ಎಸ್‌ಐಆರ್‌ನಿಂದ ಆಗಿರುವ ದುಷ್ಪರಿಣಾಮಗಳು ಮಾತ್ರ ಮುನ್ನೆಲೆಗೆ ಬಂದಿದೆ.
ಆಯೋಗದ ಪ್ರಕಾರ ಎಸ್‌ಐಆರ್ ಉದ್ದೇಶ ನೈಜ ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಉಳಿಸಿ ಗೈರು ಹಾಜರಾಗಿರುವ, ಸ್ಥಳಾಂತರಗೊಂಡಿರುವ, ನಕಲಿ ದಾಖಲೆ ಇರುವ ಮತ್ತು ನಿಧನ ಹೊಂದಿದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಾಗಿದೆ. ಆದರೆ, ಮಮತಾರವರು ʻಎಸ್‌ಐಆರ್ ಉದ್ದೇಶ ಮುಸ್ಲಿಮರನ್ನು ಪಟ್ಟಿಯಿಂದ ಹೊರಗುಳಿಯುವಂತೆ ಮಾಡುವುದುʼ ಎಂದು ಆರೋಪಿಸುತ್ತಾ ಬಂದಿದ್ದಾರೆ. ಈ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಪ್ರಾರಂಭವಾದಾಗಿನಿಂದ ಇಂದಿನವರೆಗೂ ನ್ಯಾಯಾಲಯ ಮಧ್ಯಪ್ರವೇಶಿಸಿ ಅನೇಕ ಹಂತಗಳಲ್ಲಿ ತೀರ್ಪುಗಳನ್ನು ಕೊಡುತ್ತಾ ಬಂದಿದೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಅವ್ಯವಸ್ಥೆಯ ಆಗರವಾಗಿದೆ. ಇದು ಎಷ್ಟರ ಮಟ್ಟಿಗಿತ್ತೆಂದರೆ, ಒಂದು ಹಂತದಲ್ಲಿ ಬಂಗಾಳದಲ್ಲಿ ಚುನಾವಣೆಯನ್ನು ಮುಂದೂಡಬೇಕಾದೀತೇನೊ ಎನ್ನುವಂತಿತ್ತು.
ಈ ಪೂರ್ವ ರಾಜ್ಯದಲ್ಲಿ ಬಾಂಗ್ಲಾದೇಶದಿಂದ ಬಂದು ಅಕ್ರಮ ನುಸುಳುಕೋರರು ಎನ್ನಿಸಿಕೊಂಡಿರುವ ಮುಸ್ಲಿಮರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆಯುವುದರಿಂದ ಅದು ಬಿಜೆಪಿಗೆ ವರವಾಗಿ ಪರಿಣಮಿಸುತ್ತದೆ ಎಂದು ಹೇಳಲಾಗುತ್ತಿತ್ತು. ಆಗಬಹುದು ಕೂಡ. ಆದರೆ, ಈ ಪ್ರಯೋಗದಲ್ಲಿ ಲಕ್ಷಾಂತರ ಹಿಂದುಗಳೂ ಪಟ್ಟಿಯಿಂದ ಹೊರನೂಕಲ್ಪಟ್ಟಿದ್ದಾರೆ. ಇದಕ್ಕೆ ಪಟ್ಟಿಯಿಂದ ತೆಗೆದುಹಾಕಲಾದ ಹಿಂದುಗಳು ಕೇಸರಿ ಪಕ್ಷವನ್ನು ಹೊಣೆಯಾಗಿಸುತ್ತಿದ್ದಾರೆ. ಇದು ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದೂ ಹೇಳಲಾಗುತ್ತಿದೆ. ಎಸ್‌ಐಆರ್ ಟಿಎಂಸಿಗೆ ಭಾರೀ ಹೊಡೆತ ನೀಡುವ ಬದಲಾಗಿ ಮಮತಾ ವಿರುದ್ದ ಇರುವ ಜನರ ಅಸಮಾಧಾನದ ಶಮನಕ್ಕೆ ಕಾರಣವಾಗಬಲ್ಲದು. ಎಸ್ ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಚುನಾವಣಾ ಆಯೋಗ ಹಾಗೂ ಬಿಜೆಪಿಯ ಮೇಲೆ ಭಾರೀ ಮಟ್ಟದ ಟೀಕಾಪ್ರಹಾರದಲ್ಲಿರುವ ಮಮತಾ ಸುಪ್ರೀಂಕೋರ್ಟ್‌ನಲ್ಲಿ ಖುದ್ದಾಗಿ ಈ ವಿಷಯದಲ್ಲಿ ತಮ್ಮ ದಾವೆಯನ್ನೂ ಮಂಡಿಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಇದ್ದ ಮತುವಾ ಸಮುದಾಯ ಈ ಪ್ರಕ್ರಿಯೆಯಿಂದ ಬಹುಮಟ್ಟಿಗೆ ತೊಂದರೆಗೆ ಒಳಗಾಗಿದೆ ಎನ್ನಲಾಗಿದೆ. ಹಿಂದು ಸಮುದಾಯದ ಮತುವಾ ಬಾಂಗ್ಲಾದೇಶದಿಂದ 18ನೆಯ ಶತಮಾನದಲ್ಲಿ ಬಂದು ಬಂಗಾಳದಲ್ಲಿ ನೆಲೆಸಿರುವ, ಆಧಾರ್ ಸಹಿತ ಎಲ್ಲಾ ಗುರುತಿನ ಚೀಟಿ ಇರುವ ದಲಿತ ಪಂಗಡ. ರಾಜ್ಯದ ಸುಮಾರು 11 ಕೋಟಿ ಜನಸಂಖ್ಯೆಯ ಪೈಕಿ ಶೇ 17ರಷ್ಟಿರುವ ಇವರು ಹೆಚ್ಚಾಗಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಉತ್ತರ 24 ಪರಗಣ, ನಾಡಿಯಾ, ಮುರ್ಷಿದಾಬಾದ್, ಮಾಲ್ಡ ಜಿಲ್ಲೆಗಳಲ್ಲಿ ನೆಲೆಸಿರುತ್ತಾರೆ. ರಾಜ್ಯದ ಸುಮಾರು 40-45 ಸೀಟ್ ಗಳಲ್ಲಿ ಮತುವಾ ಮತದಾರರು ನಿರ್ಣಾಯಕವಾಗುತ್ತಾರೆ ಎನ್ನಲಾಗಿದೆ. ಹಾಗಾಗಿ ಮಮತಾ ಹಾಗು ಬಿಜೆಪಿಯಿಂದ ಇವರ ವೋಟಿಗಾಗಿ ಪೈಪೋಟಿ.
ಎಸ್‌ಐಆರ್‌ನಿಂದ ಮತದಾರರ ಪಟ್ಟಿಯಿಂದ ಹೊರಗುಳಿದವರಲ್ಲಿ ಮುಸ್ಲಿಮರೇ ಹೆಚ್ಚಾಗಿರುವುದರಿಂದ ಅವರಲ್ಲಿ ತಮ್ಮ ಭವಿಷ್ಯದ ಬಗ್ಗೆ ಭಯ ಜಾಸ್ತಿಯಾದಂತಿದೆ. ರಾಜ್ಯದ ಶೇ 27ರಷ್ಟು ಇರುವ ಇವರು ಮಮತಾರ ಕಟ್ಟಾ ಬೆಂಬಲಿಗರು. ಮುಖ್ಯಮಂತ್ರಿ ಎಸ್‌ಐಆರ್ ವಿರೋಧಿಸಲು ಇದು ಮುಖ್ಯ ಕಾರಣ. ಅನೇಕ ಸ್ಥಾನಗಳಲ್ಲಿ ಮುಸ್ಲಿಮರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯ ಕೂಡ ಬಾಂಗ್ಲಾದೇಶದ ಗಡಿಭಾಗದ ಜಿಲ್ಲೆಗಳಲ್ಲಿ ಹೆಚ್ಚು. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಭಾರತ ಬಾಂಗ್ಲಾದೇಶದ ಜೊತೆ 4,096 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ ಹೆಚ್ಚಿನ ಭಾಗ ಬಂಗಾಳವನ್ನು ಹೊಂದಿದೆ. ಪಶ್ಚಿಮ ಬಂಗಾಳ ಭಾರತದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ ಎರಡನೇ ರಾಜ್ಯವಾಗಿದೆ. 2011ನೇ ಜನಗಣತಿಯ ಪ್ರಕಾರ, ದೇಶದ ಸುಮಾರು 17.2 ಕೋಟಿ ಮುಸ್ಲಿಮರ ಪೈಕಿ ಶೇ. 14 ಈ ರಾಜ್ಯದಲ್ಲಿದ್ದಾರೆ. ಬೇರೆ ರಾಜ್ಯಗಳಲ್ಲಿರುವಂತೆ ಜಾತಿ ಬಂಗಾಳದಲ್ಲಿ ಪ್ರಮುಖ ಅಲ್ಲ.
ಬಂಗಾಳದ ಜನರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಅನೇಕ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಿರುವ ಟಿಎಂಸಿ ಸರಕಾರ ಅಧಿಕಾರದಲ್ಲಿ 15 ವರ್ಷ ಪೂರೈಸಿ 4ನೇ ಬಾರಿ ಗದ್ದುಗೆಗೇರುವ ವಿಶ್ವಾಸದಲ್ಲಿದೆ. ಮಮತಾರ ಯೋಜನೆಗಳಾದ ಲಕ್ಷ್ಮೀರ್ ಭಂಡಾರ್, ಕನ್ಯಾಶ್ರೀ ಮತ್ತು ಸ್ವಾಸ್ತ್ಯ ಸಾಥಿ - ಇವುಗಳು ವಿಸ್ತಾರವಾದ ಫಲಾನುಭವಿಗಳನ್ನು ರಾಜ್ಯಾದ್ಯಂತ ಹೊಂದಿದೆ ಮತ್ತು ಇವರಲ್ಲಿ ಹೆಚ್ಚಿನವರು ಮಮತಾ ಬೆಂಬಲಿಗರು. ಇದರ ಜೊತೆಗೆ ಮಮತಾರ ಜನಪ್ರಿಯತೆ, ಬಲವಾದ, ಯಾರಿಗೂ ಅಂಜದ ನಾಯಕತ್ವ ಅವರನ್ನು ಜನರ ಹತ್ತಿರಕ್ಕೆ ಕೊಂಡೊಯ್ದಿದೆ. ಆದರೆ, ಉದ್ಯೋಗ ಮತ್ತು ಅಭಿವೃದ್ಧಿ ಅಷ್ಟಾಗಿ ಕಾಣದ ಈ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ತೆ, ಮಹಿಳಾ ಸುರಕ್ಷತೆ ಮುಂತಾದ ವಿಷಯಗಳು ಟಿಎಂಸಿಗೆ ಹಿನ್ನಡೆಯುಂಟು ಮಾಡಬಹುದು. ಪಕ್ಷಕ್ಕೆ ಸಮಾಧಾನಕರ ವಿಷಯವೆಂದರೆ ಸರಕಾರದ ಬಗ್ಗೆ ಅಸಮಾಧಾನ ವ್ಯಾಪಕವಾಗಿ ಆಡಳಿತ ವಿರೋಧಿ ಅಲೆಯಾಗಿ ಮಾರ್ಪಟ್ಟಿಲ್ಲದಿರುವುದು.
2016ರಿಂದ ಬಂಗಾಳವನ್ನು ವಶಪಡಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಈ ಬಾರಿಯೂ ಮಮತಾರ ಭದ್ರಕೋಟೆ ಒಡೆಯಲು ಯತ್ನ ಮುಂದುವರಿಸಿದೆ. ತನ್ನ ಪ್ರಭಾವವಿರುವ ಬಂಗಾಳದ ಉತ್ತರ ಭಾಗದಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಇಲ್ಲಿನ 54 ಸ್ಥಾನಗಳಲ್ಲಿ ಬಿಜೆಪಿ 30ರಲ್ಲಿ ಜಯಗಳಿಸಿತ್ತು. ದಕ್ಷಿಣ ಬಂಗಾಳದ 242 ಕ್ಷೇತ್ರಗಳ ಅನೇಕ ಸ್ಥಾನಗಳಲ್ಲಿ ಕೂಡ ಬಿಜೆಪಿ ಉತ್ತಮ ಸ್ಥಿತಿಯಲ್ಲಿದೆ. ಆದರೆ ಇಲ್ಲಿ ಟಿಎಂಸಿಯದೇ ಯಾವಗಲೂ ಮೇಲುಗೈ. ಅನೇಕ ವರ್ಷಗಳಿಂದ ಪಕ್ಷದಲ್ಲಿನ ಆಂತರಿಕ ಕಲಹದಿಂದ ನಲುಗಿರುವ ಬಿಜೆಪಿಯ ದೊಡ್ಡ ಮೈನಸ್ ಪಾಯಿಂಟ್ ಎಂದರೆ ರಾಜ್ಯದಲ್ಲಿ ಜನಪ್ರಿಯ ನಾಯಕ ಇಲ್ಲದಿರುವುದು. ಒಂದು ರೀತಿಯಲ್ಲಿ ಬಿಜೆಪಿಗೆ, ಮಮತಾ ಅನೇಕ ಬಾರಿ ಹೇಳಿರುವ ʻಬಿಜೆಪಿ ಹೊರಗಿನ (ಔಟ್ ಸೈಡರ್) ಪಕ್ಷ, ಅದಕ್ಕೆ ಬಂಗಾಳಿ ಭಾಷೆ, ಬಂಗಾಳಿ ಸಂಸ್ಕೃತಿ ಯಾವುದೂ ಗೊತ್ತಿಲ್ಲ. ಬಿಜೆಪಿ ಬಂಗಾಳವನ್ನು ಪ್ರತಿನಿಧಿಸಲು ಸಾಧ್ಯವೇ ಇಲ್ಲʼ ಹೇಳಿಕೆಯನ್ನು ತೊಡೆದುಹಾಕಲು ಕೇಸರಿ ಪಕ್ಷಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.
ಕಾಂಗ್ರೆಸ್ ಮತ್ತು ಎಡ ಪಕ್ಷಗಳೂ ಕಣದಲ್ಲಿದ್ದು ಕೆಲವೊಂದು ಸೀಟ್ ಗಳಲ್ಲಿ ಮಾತ್ರ ಸ್ಪರ್ಧೆಯಲ್ಲಿದೆ. ಅಸದುದ್ದಿನ್ ಒವೈಸಿಯವರ ಎಂಐಎಂ ಪಕ್ಷ ಮತ್ತು ಹಿಂದೆ ಮಮತಾ ಸರಕಾರದಲ್ಲಿ ಮಂತ್ರಿಯಾಗಿದ್ದ ಹುಮಾಯುನ್ ಕಬೀರ್ ಅವರ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಟಿಎಂಸಿ ಪಕ್ಷದ ಮುಸ್ಲಿಂ ಮತಗಳನ್ನು ಕಸಿಯುವ ಸಾಧ್ಯತೆ ಇದೆ.
2021ರ ವಿಧಾನ ಸಭಾ ಕದನದಲ್ಲಿ 296 ಸೀಟ್ ಗಳ ಪೈಕಿ ಟಿಎಂಸಿ 215ರಲ್ಲಿ ಗೆದ್ದು ಭಾರೀ ಜಯಭೇರಿ ಹೊಂದಿತ್ತು. ಬಿಜೆಪಿ 77 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮತ ಹಂಚಿಕೆ (ವೋಟ್ ಶೇರ್)ಯಲ್ಲಿ ಟಿಎಂಸಿ ಶೇ. 48.02 ಮತ್ತು ಬಿಜೆಪಿ ಶೇ. 38.15 ಮತಗಳಿಸಿದ್ದವು. 2024ರ ಲೋಕಸಭೆ ಹಣಾಹಣಿಯಲ್ಲಿ ಟಿಎಂಸಿ 29, ಬಿಜೆಪಿ 12 ಮತ್ತು ಕಾಂಗ್ರೆಸ್ 1 ಸೀಟ್ ಗಳಿಸಿದ್ದವು. ಬಿಜೆಪಿಗೆ 2021ರ ಗಳಿಕೆಯಾದ 77 ಸೀಟ್ ನಿಂದ ಈಗ ಬಹುಮತಕ್ಕೆ ಬೇಕಾದ 149 ಸೀಟ್ ಗಳನ್ನು ಪಡೆಯುವುದು ಸುಲಭದ ಮಾತೇನಲ್ಲ.
(ಲೇಖಕ: ಹಿರಿಯ ಪತ್ರಕರ್ತ)

