Dailyhunt Logo
  • Light mode
    Follow system
    Dark mode
    • Play Story
    • App Story
ಪಶ್ಚಿಮ ಏಷ್ಯಾ ಸಂಘರ್ಷ: ಟ್ರಂಪ್ -ಪೋಪ್ ಲಿಯೊ ಜಟಾಪಟಿ ತೀವ್ರ

ಪಶ್ಚಿಮ ಏಷ್ಯಾ ಸಂಘರ್ಷ: ಟ್ರಂಪ್ -ಪೋಪ್ ಲಿಯೊ ಜಟಾಪಟಿ ತೀವ್ರ

ವಾಷಿಂಗ್ಟನ್‌/ ರೋಮ್: ಯುದ್ಧವನ್ನು ಕೊನೆಗೊಳಿಸಬೇಕು ಎಂದು ಹೇಳಿರುವ ಪೋಪ್‌ 14ನೇ ಲಿಯೊ ವಿರುದ್ಧ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, 'ನಾನು ಲಿಯೊ ಅವರ ದೊಡ್ಡ ಅಭಿಮಾನಿಯೇನಲ್ಲ' ಎಂದು ಹೇಳಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪೋಪ್‌ 'ಟ್ರಂಪ್‌ ಆಡಳಿತದ ಬಗ್ಗೆ ಮಾತನಾಡಲು ನನಗೆ ಯಾವುದೇ ಭಯವಿಲ್ಲ' ಎಂದಿದ್ದಾರೆ.

ಈ ಮೂಲಕ ಇಬ್ಬರ ನಡುವಿನ ಜಟಾಪಟಿ ಮುಂದುವರಿದಿದೆ.

ಕ್ಯಾಥೊಲಿಕರ ಜಾಗತಿಕ ನಾಯಕ ಪೋಪ್ ಲಿಯೊ ಅವರು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು ಎಂದು ಹೇಳಿದ್ದರು. 'ಹಣದ ಮತ್ತು ಸ್ವಯಂ ಆರಾಧನೆ ಸಾಕು. ಶಕ್ತಿ ಪ್ರದರ್ಶನ ಮತ್ತು ಯುದ್ಧವೂ ಸಾಕು' ಎಂದಿದ್ದರು. ಟ್ರಂಪ್‌ ಆಡಳಿತದ ವಲಸೆ ನೀತಿಯನ್ನೂ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್‌ 'ಪೋ‍ಪ್‌ ತುಂಬಾ ಉದಾರ ವ್ಯಕ್ತಿ. ಅಪರಾಧವನ್ನು ಕೊನೆಗೊಳಿಸುವಲ್ಲಿ ಅವರು ನಂಬಿಕೆ ಹೊಂದಿಲ್ಲ' ಎಂದು ಸುದ್ದಿಗಾರರಿಗೆ ತಿಳಿಸಿದರು. ‌ಬಳಿಕ ಟ್ರಂಪ್, ಸಾಮಾಜಿಕ ಜಾಲತಾಣ 'ಟ್ರೂಥ್‌ ಸೋಷಿಯಲ್‌'ನಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದಾರೆ.

ಟ್ರಂಪ್‌ ಹೇಳಿದ್ದೇನು?

* ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಯಸುತ್ತಿರುವ ಇರಾನ್‌ಗೆ ಪೋಪ್‌ ಬೆಂಬಲ ಸೂಚಿಸಿದ್ದಾರೆ. ಶಸ್ತ್ರಾಸ್ತ್ರ ಹೊಂದುವುದು ಸರಿ ಎಂದು ಭಾವಿಸುವ ಪೋಪ್‌ ನನಗೆ ಬೇಡ

* ಅಪರಾಧ ಎಸಗುವವರ ವಿಷಯದಲ್ಲಿ ಪೋಪ್‌ ಮೃದು ಧೋರಣೆ ಹೊಂದಿದ್ದಾರೆ. ವಿದೇಶಾಂಗ ನೀತಿಯಲ್ಲಿ ಅವರು ದುರ್ಬಲರು

* ತಾವು ಅಮೆರಿಕನ್ನರು ಎಂಬ ಒಂದೇ ಕಾರಣದಿಂದ ಅವರು ಪೋಪ್‌ ಆಗಿ ಆಯ್ಕೆಯಾಗಿದ್ದಾರೆ. ಅದು ಅಧ್ಯಕ್ಷ ಟ್ರಂಪ್‌ ಅವರೊಂದಿಗೆ ವ್ಯವಹರಿಸಲು ಉತ್ತಮ ಮಾರ್ಗ ಎಂದು ಭಾವಿಸಿದ್ದಾರೆ ‌

* ನಾನು ಶ್ವೇತಭವನ‌ದಲ್ಲಿ ಇರದೇ ಇದ್ದರೆ ಲಿಯೊ ವ್ಯಾಟಿಕನ್‌ನಲ್ಲಿ ಇರುತ್ತಿರಲಿಲ್ಲ

ಪೋಪ್‌ ಹೇಳಿದ್ದೇನು?‌

* ಸಂಘರ್ಷದ ವಿರುದ್ಧ ನಾನು ದನಿ ಎತ್ತುತ್ತಲೇ ಇರುತ್ತೇನೆ. ಯುದ್ಧದ ವಿರುದ್ಧ ಗಟ್ಟಿಯಾಗಿ ಮಾತನಾಡುವುದನ್ನು ಮುಂದುವರಿಸುತ್ತೇನೆ

* ಶಾಂತಿ ನೆಲಸಲು ಹಾಗೂ ಹಾಗೂ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ದೇಶಗಳ ನಡುವಿನ ಬಹುಪಕ್ಷೀಯ ಸಂಬಂಧಗಳನ್ನು ಉತ್ತೇಜಿಸಲು ಬಯಸುತ್ತೇನೆ

* ಯುದ್ಧಗಳಿಂದಾಗಿ ಪ್ರಪಂಚದಲ್ಲಿ ಹಲವರು ಬಳಲುತ್ತಿದ್ದಾರೆ. ನಾಗರಿಕರು ಕೊಲ್ಲಲ್ಪಡುತ್ತಿದ್ದಾರೆ. ಇದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ಸಮಸ್ಯೆ ಬಗೆಹರಿಸಲು ಉತ್ತಮ ಮಾರ್ಗವಿದೆ ಎಂಬುದನ್ನು ಯಾರಾದರೂ ಎದ್ದು ನಿಂತು ಹೇಳಬೇಕಿದೆ

* ಟ್ರಂಪ್‌ ಜೊತೆಗೆ ವಾದ ಮಾಡಲು ನಾನು ಬಯಸುವು‌ದಿಲ್ಲ. ನಾನು ರಾಜಕಾರಣಿಯಾಗಿ ಈ ವಿಷಯದ ಕುರಿತು ಮಾತನಾಡುತ್ತಿಲ್ಲ

 ಡೊನಾಲ್ಡ್‌ ಟ್ರಂಪ್‌ಟ್ರಂಪ್‌ ತಮ್ಮನ್ನು ತಾವು ಯೇಸುವಿನಂತೆ ಬಿಂಬಿಸಿರುವ ಎಐ ಚಿತ್ರ

ತಾನು ಯೇಸು ಎಂಬಂತೆ ಬಿಂಬಿಸಿಕೊಂಡ ಟ್ರಂಪ್‌

ಪೋಪ್‌ ಲಿಯೊ ಜೊತೆಗೆ ಮಾತಿನ ಚಕಮಕಿ ಮುಂದುವರಿದಿರುವ ನಡುವೆಯೇ ಟ್ರಂಪ್‌ ತಮ್ಮನ್ನು ತಾವು ಯೇಸುವಿನಂತೆ ಬಿಂಬಿಸಿ ಕೃತಕ ಬುದ್ಧಿಮತ್ತೆ (ಎ.ಐ) ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಚಿತ್ರದಲ್ಲಿ ಟ್ರಂಪ್‌ ಕೆಂಪು ಮತ್ತು ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಯೇಸುವಿನಂತೆ ಟ್ರಂಪ್‌ ಅವರು ಅನಾರೋಗ್ಯ ಪೀಡಿತರನ್ನು ಆಶೀರ್ವದಿಸುತ್ತಿರುವ ರೀತಿಯಲ್ಲಿ ಚಿತ್ರವನ್ನು ಸೃಷ್ಟಿಸಲಾಗಿದೆ. ಚಿತ್ರದಲ್ಲಿ ಅಮೆರಿಕ ಧ್ವಜ ಇದೆ. ಅಲ್ಲದೇ ಸೈನಿಕರನ್ನು ದೇವದೂತರಂತೆ ಬಿಂಬಿಸಲಾಗಿದ್ದು ಕ್ಷಿಪಣಿಗಳು ಹಾದು ಹೋಗುತ್ತಿರುವುದೂ ಚಿತ್ರದಲ್ಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani