Dailyhunt Logo
  • Light mode
    Follow system
    Dark mode
    • Play Story
    • App Story
ಪಶು ಆಹಾರದ ಬೆಲೆ ಏರಿಕೆ; ರೈತ ಸಂಘದಿಂದ ಆಕ್ರೋಶ

ಪಶು ಆಹಾರದ ಬೆಲೆ ಏರಿಕೆ; ರೈತ ಸಂಘದಿಂದ ಆಕ್ರೋಶ

ದೊಡ್ಡಬಳ್ಳಾಪುರ: ಹಾಲಿನ ಬೆಲೆ ಏರಿಕೆಯಾಗಿರುವ ನಡುವೆ ಪಶುಗಳಿಗೆ ನೀಡುವ ಹಿಂಡಿ, ಬೂಸಾದಂತಹ ಪಶು ಆಹಾರಗಳ ಬೆಲೆಯನ್ನು ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಹೇಳಿದರು.

ನಗರದ ಎಪಿಎಂಸಿಯ ರೈತ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬರಗಾಲ ಎಲ್ಲ ಕಡೆ ಆವರಿಸಿದ್ದು, ಕೃಷಿ ಕ್ಷೇತ್ರದಲ್ಲಿ ಪರಿಣಾಮ ಬೀರಲು ಆರಂಭವಾಗಿದೆ.

ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಿದ್ದು, ನಿಗದಿತ ದರವೂ ನೇರವಾಗಿ ರೈತರಿಗೆ ಸಿಗಬೇಕು ಎಂದರು.

ಹಾಲಿನ ದರ ಹೆಚ್ಚಾದಂತೆ ಪಶು ಆಹಾರಗಳ ಬೆಲೆಯನ್ನು ಖಾಸಗಿ ಕಂಪನಿಗಳು ಗಣನೀಯವಾಗಿ ಏರಿಸುತ್ತಿವೆ. ಕೆಎಂಎಫ್ ಪೂರೈಕೆ ಮಾಡುವ ಪಶು ಆಹಾರ ಕಳಪೆ ಗುಣಮಟ್ಟ ಇರುವುದರಿಂದ ಖಾಸಗಿ ಕಂಪನಿಗಳ ಪಶು ಆಹಾರವನ್ನು ರೈತರು ಅವಲಂಬಿಸಿದ್ದಾರೆ. ಸರ್ಕಾರದ ಪ್ರೋತ್ಸಾಹ ಧನ ನೀಡಲು ಸಾಕಷ್ಟು ಮಾನದಂಡ ವಿಧಿಸುತ್ತದೆ. ಪ್ರತಿ 1 ಲೀಟರ್‌ ಹಾಲಿಗೆ ₹5 ಪ್ರೋತ್ಸಾಹ ಹಣ ನೀಡಲಾಗುತ್ತದೆ. 1 ಕೋಟಿ ಲೀಟರ್ ಹಾಲು ಬಂದರೆ ₹5 ಕೋಟಿ ನೀಡಬೇಕು. ಆದರೆ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ರೈತರಿಗೆ, ಪ್ರೋತ್ಸಾಹ ಧನ ಹೆಚ್ಚಿಸುವುದಾಗಿ ಸರ್ಕಾರ ಚುನಾವಣ ಪ್ರಣಾಳಿಕೆಯಲ್ಲಿ ಹೇಳಿದಂತೆ ₹7 ಪ್ರೋತ್ಸಾಹಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪಶುಆಹಾರದ ಬೆಲೆ ₹250 ಏರಿಕೆ: ಜಾನುವಾರುಗಳಿಗೆ ನೀಡುವ ಬೂಸಾ, ಹಿಂಡಿ ಪ್ರತಿ 45 ಕೆ.ಜಿ ಚೀಲದ ಬೆಲೆಯಲ್ಲಿ ₹250ರಿಂದ ₹300ರವರೆಗೂ ಏರಿಕೆ ಮಾಡಲಾಗಿದೆ ಎಂದು ರೈತ ಮುಖಂಡ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.

ಹಾಲಿನ ದರ ಹೆಚ್ಚಿಸಲು ರೈತರು ಅನೇಕ ಹೋರಾಟ ಮಾಡಿದರು. ಹೋರಾಟದ ಫಲವಾಗಿ ಸರ್ಕಾರ ರೈತರಿಗೆ ನ.1ರಂದು ಸಿಹಿ ಸುದ್ದಿ ನೀಡಿದೆ. ರೈತ ಹಿತದೃಷ್ಟಿಯಿಂದ ಕೆಲಸ ಮಾಡಿದೆ. ಯಾವುದೇ ಸರ್ಕಾರ ಇದ್ದರೂ ರೈತರ ಕಾಳಜಿ ಮಾಡದ ಹೊರತು ಯಶಸ್ಸು ಕಾಣಲು ಸಾಧ್ಯವಿಲ್ಲ. ಆದರೆ ರೈತರಿಗೆ ಹಾಲಿನ ರೂಪದಲ್ಲಿ ನೀಡಿದ ಬೆಲೆ ಹಿಂಡಿ, ಬೂಸಾ ಬೆಲೆ ಏರಿಕೆಯಿಂದ ಸಮಸ್ಯೆಯಾಗುತ್ತಿದೆ. ದರ ಏರಿಕೆ ಲಾಭ ಹಿಂಡಿ, ಬೂಸಾ ಖರೀದಿಗೆ ಹೋಗುವಂತಾಗಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ ನೀಡಬೇಕು. ಹಾಲು ಒಕ್ಕೂಟದ ಸಿಬ್ಬಂದಿಗೆ ನೀಡುವಂತೆ ಉತ್ತಮ ವೇತನ ನೀಡಿ ಪ್ರೋತ್ಸಾಹಿಸಬೇಕು. ಒಂದೇ ಸಂಸ್ಥೆಯಲ್ಲಿ ವೇತನ ತಾರತಮ್ಯ ಆಗುತ್ತಿದೆ. ಪ್ರಾಥಮಿಕ ಸಹಕಾರ ಸಂಸ್ಥೆಗಳಿಗೆ ನೆರವು ನೀಡಿದರೆ ಅವುಗಳು ಆರ್ಥಿಕವಾಗಿ ಬಲವರ್ಧನೆ ಆಗುತ್ತದೆ. ಜತೆಗೆ ಸದಸ್ಯರಿಗೂ ಇದರಿಂದ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಮನಿಸಬೇಕು ಎಂದರು.

ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಮುನಿನಾರಾಯಣಪ್ಪ, ಮುಖಂಡರಾದ ಧನಂಜಯ, ತಿಮ್ಮಣ್ಣ, ಗಂಗಾಧರ್ ಹಾಜರಿದ್ದರು.

261104-15-1586552456

Dailyhunt
Disclaimer: This content has not been generated, created or edited by Dailyhunt. Publisher: Prajavani