'ಪೆದ್ದಿ' 90ರ ದಶಕದ ಹಿನ್ನೆಲೆಯಲ್ಲಿ ಸಾಗುವ ಸ್ಫೋರ್ಟ್ಸ್ ಆಯಕ್ಷನ್ ಡ್ರಾಮಾ ಜಾನರ್‌ನ ಸಿನಿಮಾವಾಗಿದೆ. ಹೆಸರೇ ಇಲ್ಲದ ಒಂದು ಗುಡ್ಡಗಾಡು ಹಳ್ಳಿಯ ಜನರು ಹೊಟ್ಟೆಪಾಡಿಗಾಗಿ ವಿಜಯನಗರಕ್ಕೆ ವಲಸೆ ಹೋಗಿ ಕೂಲಿ ಕೆಲಸ ಮಾಡುತ್ತಿರುತ್ತಾರೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಇವರು ತಮ್ಮೂರಿಗೆ ತಲುಪಲು ಒಂದು ದಿನವೇ ಬೇಕಾಗುತ್ತದೆ.
ಈ ಊರಿನ ಜನರಿಗೆ ಯಾವುದೇ ಗುರುತಿನ ಚೀಟಿಯೂ ಇರುವುದಿಲ್ಲ. ಹಳ್ಳಿಯ ಪಕ್ಕದಲ್ಲೇ ರೈಲು ಹಾದುಹೋಗುತ್ತಿದ್ದರೂ ಅಲ್ಲಿ ರೈಲು ನಿಲ್ಲುವುದಿಲ್ಲ. ರೈಲು ತಮ್ಮೂರಿನಲ್ಲಿ ನಿಂತರೆ ತಮ್ಮ ಬದುಕು ಬದಲಾಗುತ್ತದೆ ಎಂಬುದು ಇವರ ದಶಕಗಳ ಹೋರಾಟ.
ಇದೇ ಊರಿನಲ್ಲಿ ಬೆಳೆದ ಪೆದ್ದಿ (ರಾಮ್‌ಚರಣ್) ಅದ್ಭುತ ಕ್ರಿಕೆಟ್ ಆಟಗಾರ. ಬೆಟ್ಟಿಂಗ್ ದಂಧೆಕೋರರು ಇವನನ್ನು ಹರಾಜಿನಲ್ಲಿ ಕೂಗಿ ತಮ್ಮ ಪರ ಆಡಿಸಿಕೊಳ್ಳುತ್ತಿರುತ್ತಾರೆ. ಆದರೆ, ಅನಿವಾರ್ಯ ಕಾರಣಗಳಿಂದ ಕ್ರಿಕೆಟ್‌ನಿಂದ ದೂರವಾಗುವ ಪೆದ್ದಿ, ಕೊನೆಗೆ 'ಗೌರ್‌ನಾಯ್ಡು' (ಶಿವರಾಜ್‌ಕುಮಾರ್) ಅವರ ಶಿಷ್ಯನಾಗಿ ಕುಸ್ತಿ ಅಖಾಡಕ್ಕಿಳಿಯುತ್ತಾನೆ. ಅಲ್ಲಿಂದ ಅವನ ಬದುಕು ಎತ್ತ ಸಾಗುತ್ತದೆ?, ಆಟದ ಮೂಲಕ ತನ್ನ ಹಳ್ಳಿಗೆ ಪೆದ್ದಿ ಗುರುತು ತಂದುಕೊಡುತ್ತಾನಾ?, ಅಷ್ಟಕ್ಕೂ ಕ್ರಿಕೆಟ್‌ನಿಂದ ಪೆದ್ದಿ ದೂರವಾಗಿದ್ದೇಕೆ?, ಕುಸ್ತಿಯಿಂದ ಅವನ ಬದುಕಿನಲ್ಲಾದ ಬದಲಾವಣೆಗಳೇನು?, ಪೆದ್ದಿ ಪ್ಯಾರಾ ಅಥ್ಲೀಟ್ ಆಗಿದ್ದು ಯಾಕೆ? ಆ ಊರಿನಲ್ಲಿ (ಅಪ್ಪಲವಲಸ) ರೈಲು ನಿಲುಗಡೆ ಆಗುತ್ತದೆಯೇ ಎಂಬ ಪ್ರಶ್ನೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ.
'ಪೆದ್ದಿ'ಯ ಚಿತ್ರದಲ್ಲಿ ಮೂರು ಶೇಡ್‌ಗಳ ಪಾತ್ರವನ್ನು ರಾಮ್‌ಚರಣ್ ಚೆನ್ನಾಗಿ ನಿಭಾಯಿಸಿದ್ದಾರೆ. ಒಂದು ಪಾತ್ರಕ್ಕಿಂತ ಮತ್ತೊಂದು ಪಾತ್ರ ಗಮನ ಸೆಳೆಯುತ್ತದೆ. ಕ್ರಿಕೆಟ್ ಆಟಗಾರನಾಗಿ, ಕುಸ್ತಿಪಟುವಾಗಿ, ಪ್ಯಾರಾ ಅಥ್ಲೀಟ್ ಆಗಿ ರಾಮ್‌ಚರಣ್ ಅದ್ಭುತವಾಗಿ ನಟಿಸಿದ್ದಾರೆ. ಮೂರು ಪಾತ್ರಗಳಿಗೆ ತಕ್ಕಂತೆ ದೇಹವನ್ನು ದಂಡಿಸಿರುವ ರೀತಿಯೂ ಬೆರಗು ಮೂಡಿಸುತ್ತದೆ. ಆಯಕ್ಷನ್ ಜತೆಗೆ ಎಮೋಷನ್ ಸೀನ್‌ಗಳಲ್ಲೂ ಚರಣ್ ನಟನೆ ಮನೋಜ್ಞ.
'ಪೆದ್ದಿ' ಸಿನಿಮಾದಲ್ಲಿ ಭಾವನಾತ್ಮಕ ಸಂಗತಿಗಳನ್ನು ತುಸು ಹೆಚ್ಚಾಗೇ ಸೇರಿಸಲಾಗಿದೆ. ಒಂದು ಹಳ್ಳಿಯ ಸಮಸ್ಯೆಯನ್ನು ಕ್ರೀಡೆಯೊಂದಿಗೆ ತಳುಕು ಹಾಕಿರುವುದು ಹಾಗೂ 'ಕ್ರಾಸ್ ಓವರ್ ಅಥ್ಲೀಟ್' ಎಂಬ ಪರಿಕಲ್ಪನೆ ಈ ಚಿತ್ರದಲ್ಲಿ ತೋರಿಸಿರುವುದು ವಿಶೇಷ.
'ಗೌರ್‌ನಾಯ್ಡು' ಆಗಿ ಶಿವರಾಜ್‌ಕುಮಾರ್ ಅವರು ಕಾಣಿಸಿಕೊಂಡಿದ್ದು, ಗರಡಿಯ ಮುಖ್ಯಸ್ಥರಾಗಿ (ಉಸ್ತಾದ್) ನಟಿಸಿದ್ದಾರೆ. ಅವರ ಗರಡಿಯಲ್ಲಿ ರಾಮ್‌ಚರಣ್ ಚೆನ್ನಾಗೇ ಪಳಗಿದ್ದಾರೆ. 'ಅಪ್ಪಲಸೂರಿ' ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಗಪತಿ ಬಾಬು ನೆನಪಿನಲ್ಲಿ ಉಳಿಯುತ್ತಾರೆ. ನಾಯಕಿಯಾಗಿ ನಟಿಸಿರುವ ಜಾನ್ವಿ ಕಪೂರ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಐಟಂ ಸಾಂಗ್‌ವೊಂದರಲ್ಲಿ ಶ್ರುತಿ ಹಾಸನ್, ಜಾನ್ವಿ ಕಪೂರ್ ಸೊಂಟ ಬಳುಕಿಸಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಸಿದ್ಧಸೂತ್ರಗಳಿಂದ ಆಚೆ ಬರಲು ನಿರ್ದೇಶಕ ಸನಾ ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎಂದೇ ಹೇಳಬಹುದು.
ಕ್ಲೈಮ್ಯಾಕ್ಸ್‌ನಲ್ಲಿ ರಾಮ್‌ಚರಣ್ ಹೇಳುವ ಮಾತುಗಳು ಮನಸ್ಸಿನಲ್ಲಿ ಉಳಿಯುತ್ತವೆ. ಎ.ಆರ್.ರೆಹಮಾನ್ ಅವರ ಹಾಡುಗಳು ಮತ್ತು ಕಥೆಯ ಆಶಯಕ್ಕೆ ತಕ್ಕಂತಹ ಹಿನ್ನೆಲೆ ಸಂಗೀತ ಮೂಡಿಬಂದಿದೆ. 'ಚಿಕಿರಿ ಚಿಕಿರಿ', 'ರೈ ರೈ ರಾರಾ', 'ಹಲೋ ಹಲ್ಲಲ್ಲೋ' ಹಾಡುಗಳು ಇಷ್ಟವಾಗುತ್ತವೆ. 'ಮಸ್ಸಾ ಮಸ್ಸಾ' ಹಾಡು ಪ್ರೇಕ್ಷಕರಿಗೆ ಮತ್ತಷ್ಟು ಮಜಾ ನೀಡುತ್ತದೆ.
'ಉಪ್ಪೇನ' ಖ್ಯಾತಿಯ ಬುಚ್ಚಿ ಬಾಬು ಸಾನಾ ಅವರ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ.
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳು ಚಿತ್ರವನ್ನು ಪ್ರಸ್ತುತಪಡಿಸಿದೆ. ಆರ್. ರತ್ನವೇಲು ಛಾಯಾಚಿತ್ರಗ್ರಹಣ, ನವೀನ್ ನೂಲಿ ಸಂಕಲನ ಸಿನಿಮಾಗಿದೆ.
ನೋಡಬಹುದಾದ ಸಿನಿಮಾ.

