ಹರಿಹರ: ಜಿಲ್ಲೆಯಲ್ಲಿರುವ 176 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು (ಪಿಎಸಿಎಸ್) ಶೀಘ್ರವೇ ಪೂರ್ಣವಾಗಿ ಡಿಜಿಟಲೀಕರಣಗೊಳ್ಳಲಿವೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಪ್ರಭಾರ ಅಧ್ಯಕ್ಷ ಡಿ.ಕುಮಾರ್ ಹೇಳಿದರು.
ನಗರದ ಡಿಡಿಸಿಸಿ ಶಾಖೆಗೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಿಎಸಿಎಸ್‌ಗಳಿಗೆ ಡಿಡಿಸಿಸಿ ಮೂಲಕವೇ ಹಣಕಾಸು ನೆರವು ನೀಡಲಾಗುತ್ತಿದೆ. ರೈತರ ಹಾಗೂ ಗ್ರಾಮೀಣರ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುವ ಜಿಲ್ಲೆಯ ಎಲ್ಲ ಪಿಎಸಿಎಸ್‌ಗಳು ಹಳೆಯ ಲೆಡ್ಜರ್ ಪದ್ಧತಿಯಿಂದ ಡಿಜಿಟಲ್‌ನತ್ತ ಹೆಜ್ಜೆ ಇಡುತ್ತಿವೆ ಎಂದರು.
ಅಂಚೆ ಕಚೇರಿಯಂತೆಯೇ ಗ್ರಾಮೀಣ ಭಾಗದವರಿಗೆ ಪಿಎಸಿಎಸ್‌ಗಳನ್ನು ಇನ್ನಷ್ಟು ಹತ್ತಿರವಾಗಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಪಹಣಿ ಸೇರಿದಂತೆ ಜಮೀನಿನ ದಾಖಲೆಗಳು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಿವಿಧ ಸರ್ಕಾರಿ ದಾಖಲೆ, ಸೇವೆಗಳು ಸಂಘಗಳಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಡಿಡಿಸಿಸಿ ಬ್ಯಾಂಕ್‌ನಲ್ಲಿ ಅಂದಾಜು ₹600 ಕೋಟಿ ಠೇವಣಿಯಿದ್ದು, ರೈತರಿಗೆ ₹900 ಕೋಟಿ ಬಡ್ಡಿ ರಹಿತ ಸಾಲ, ಶೇ 3ರ ಬಡ್ಡಿದರದಲ್ಲಿ ₹100 ಕೋಟಿ ಸಾಲ, ಕೃಷಿ ಸಂಬಂಧಿತ ಉದ್ಯಮಗಳಿಗೆ, ಆಭರಣ, ವಾಹನ, ಅಡಮಾನ ಸೇರಿದಂತೆ ವಿವಿಧ ಕಾರಣಗಳಿಗೆ ₹375 ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
ರೈತರು ಸೇರಿದಂತೆ ಸಾರ್ವಜನಿಕರೂ ಈ ಬ್ಯಾಂಕ್‌ನಲ್ಲಿ ವಹಿವಾಟು ಮಾಡಬಹುದಾಗಿದ್ದು, ವಾಣಿಜ್ಯ ಬ್ಯಾಂಕ್‌ಗಳ ರೀತಿಯಲ್ಲಿ ಹಲವು ವ್ಯವಹಾರಗಳನ್ನು ನಡೆಸಲು ಅವಕಾಶವಿದೆ ಎಂದರು.
ಬಾಡಿಗೆ ಕಟ್ಟಡದಲ್ಲಿರುವ ಬ್ಯಾಂಕ್‌ನ ಹರಿಹರ ಶಾಖೆಯನ್ನು ಟಿಎಪಿಸಿಎಂಎಸ್ ಆವರಣದ ಸ್ವಂತ ನಿವೇಶನದಲ್ಲಿ ಶೀಘ್ರವೇ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲಾಗುವುದು ಮಾಹಿತಿ ನೀಡಿದರು.
261104-43-67581141

