Dailyhunt
ಪಿಯುಸಿ ಮುಗೀತು, ಮುಂದೇನು ಎನ್ನುವ ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಪಿಯುಸಿ ಮುಗೀತು, ಮುಂದೇನು ಎನ್ನುವ ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಸ್.ಎಸ್.ಎಲ್.ಸಿ. ಅಥವಾ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ 'ಮುಂದೆ ನೀವು ಏನಾಗಬೇಕು?' ಎಂದು ಪ್ರಶ್ನಿಸಿದರೆ ಬಹುತೇಕ ಮಂದಿ ಥಟ್ಟನೆ ನೀಡುವ ಉತ್ತರ ಒಂದೋ ಇಂಜಿನಿಯರ್, ಇಲ್ಲವೇ ಡಾಕ್ಟರ್. ಅವರ ತಂದೆ ತಾಯಿಯರನ್ನು ಕೇಳಿದರೂ ಸಿಗುವುದು ಹೆಚ್ಚುಕಮ್ಮಿ ಇದೇ ಉತ್ತರವೇ.

ತಮ್ಮ ಮಕ್ಕಳನ್ನು ಇಂಜಿನಿಯರ್ ಅಥವಾ ಡಾಕ್ಟರ್ ಆಗಿ ಕಾಣಬೇಕೆಂಬುದೇ ಹೆಚ್ಚಿನವರ ಆಸೆ. ಈ ಆಸೆಯಲ್ಲಿ ತಪ್ಪೇನೂ ಇಲ್ಲ. ನಮ್ಮ ಸಮಾಜದಲ್ಲಿ ಇವೆರಡೂ ಪ್ರತಿಷ್ಠಿತ ವೃತ್ತಿಗಳು. ನಮ್ಮ ದೇಶಕ್ಕೆ ಉತ್ತಮ ಇಂಜಿನಿಯರ್‌ಗಳು, ಒಳ್ಳೆಯ ವೈದ್ಯರು ಬೇಕು. ಆದರೆ ಬದುಕಿಗೆ ಇರುವುದು ಇವೆರಡೇ ಆಯ್ಕೆಗಳಲ್ಲ.

ನಮ್ಮೆದುರು ವಿಶಾಲ ಪ್ರಪಂಚವಿದೆ. ಸಾವಿರಾರು ಉದ್ಯೋಗಗಳಿವೆ. ಆದರೆ ಕೇವಲ ಕೆಲವೇ ಉದ್ಯೋಗಗಳನ್ನು ಶ್ರೇಷ್ಠವೆಂದು ಭ್ರಮಿಸುವ ಸ್ಥಿತಿ ನಮ್ಮ ಸಮಾಜದಲ್ಲಿದೆ. ಇದಕ್ಕೆ ಕಾರಣ ತಂದೆ ತಾಯಿಯರಲ್ಲಿ ವಾಸ್ತವ ಪ್ರಪಂಚದ ಅರಿವಿನ ಕೊರತೆ ಇರುವುದು, ಮತ್ತು ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯದ ಉದ್ಯೋಗಾವಕಾಶಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದು. ಇವೆರಡಕ್ಕಿಂತಲೂ ಪ್ರಮುಖವಾಗಿರುವ ಇನ್ನೊಂದು ಕಾರಣವೆಂದರೆ ಶಿಕ್ಷಣ ಸಂಸ್ಥೆಗಳ ವಾಣಿಜ್ಯಾಸಕ್ತಿ. ಶಿಕ್ಷಣವನ್ನೇ ಬಹುಕೋಟಿ ಉದ್ಯಮ ಮಾಡಿಕೊಂಡಿರುವ ಇವು ಇಂಜಿನಿಯರಿಂಗ್-ಮೆಡಿಕಲ್ ಕೋರ್ಸುಗಳನ್ನೇ ವೈಭವೀಕರಿಸುತ್ತಾ ತಂದೆತಾಯಿಯರು ಮತ್ತು ವಿದ್ಯಾರ್ಥಿಗಳ ದಾರಿತಪ್ಪಿಸಿವೆ. ಬೇರೆ ಅವಕಾಶಗಳ ಕುರಿತು ಅವರನ್ನು ಕುರುಡರನ್ನಾಗಿಸಿವೆ.

ಇಂಜಿನಿಯರುಗಳು, ಡಾಕ್ಟರುಗಳಷ್ಟೇ ಈ ಸಮಾಜಕ್ಕೆ ಉತ್ತಮ ಅಧಿಕಾರಿಗಳು, ನ್ಯಾಯವಾದಿಗಳು, ಪೊಲೀಸರು, ಕಲಾವಿದರು, ವಿಜ್ಞಾನಿಗಳು, ಪತ್ರಕರ್ತರು, ಸೈನಿಕರು, ಉದ್ಯಮಿಗಳು, ವಿನ್ಯಾಸಕಾರರು, ಔಷಧಿ ತಯಾರಕರು, ಲೆಕ್ಕಪರಿಶೋಧಕರು, ಸಂಶೋಧಕರು- ಹೀಗೆ ಹತ್ತುಹಲವು ಮಂದಿಯ ಅವಶ್ಯಕತೆಯಿದೆ. ಸಮತೋಲನದ ಶ್ರೇಷ್ಠ ಸಮಾಜವೊಂದರ ನಿರ್ಮಾಣಕ್ಕೆ ಇವರೆಲ್ಲರ ಕೊಡುಗೆಗಳೂ ಅಗತ್ಯ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು.

ಆಸಕ್ತಿಗೆ ಪ್ರಾಶಸ್ತ್ಯ ನೀಡಿ

ಬದುಕಿನಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸಲು ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ಅತ್ಯಂತ ಸೂಕ್ತ ಹಂತ. ತೀರಾ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮುಂದೆ ತಾವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಅರಿವಿರುವುದಿಲ್ಲ. ಆದರೆ ಅವರ ಜಾಯಮಾನ ಮತ್ತು ಆಸಕ್ತಿಗಳನ್ನು ಗಮನಿಸುವ ಅವಕಾಶ ಮತ್ತು ಹೊಣೆಗಾರಿಕೆ ಅವರ ತಂದೆತಾಯಂದಿರಿಗೆ ಮತ್ತು ಅಧ್ಯಾಪಕರಿಗೆ ಇದೆ. ಮಕ್ಕಳ ಆಸಕ್ತಿಗಳಿಗೆ ಸರಿಹೊಂದುವ ವೃತ್ತಿಕ್ಷೇತ್ರದತ್ತ ಅವರನ್ನು ಮುನ್ನಡೆಸಿದರೆ ಅದು ಯಾವುದೇ ಕ್ಷೇತ್ರವಾದರೂ ಅವರು ಅದರಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಬಲ್ಲರು. ಅದು ಅವರಿಗೆ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ನಿಸ್ಸಂಶಯವಾಗಿ ಒಳ್ಳೆಯ ಸ್ಥಾನಮಾನ ದೊರಕಿಸೀತು.

ಆಸಕ್ತಿಯಿಲ್ಲದ ಕ್ಷೇತ್ರಕ್ಕೆ ಎಷ್ಟೇ ಒತ್ತಾಯದಿಂದ ಮಗುವನ್ನು ನೂಕಿದರೂ ಕೊನೆಗದು 'ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು' ಎಂದಷ್ಟೇ ಆದೀತು. ನೂಕಿದವರಿಗಾಗಲೀ ನೂಕಿಸಿಕೊಂಡವರಿಗಾಗಲೀ ಅದರಲ್ಲಿ ತೃಪ್ತಿಯಿಲ್ಲ. ಮನಸ್ಸಿಗೆ ಹತ್ತಿರವಲ್ಲದ ಕೆಲವನ್ನು ಎಷ್ಟು ಕಾಲ ಮಾಡಿಯೇವು? ಒಳ್ಳೆಯ ಕಲಾವಿದನಾಗಬಲ್ಲವನನ್ನು ನೀನು ಇಂಜಿನಿಯರೇ ಆಗು ಎಂದರೆ ಹೇಗೆ? ಒಳ್ಳೆಯ ವಕೀಲನಾಗಬಲ್ಲವನನ್ನು ನೀನು ವೈದ್ಯನೇ ಆಗು ಎಂದರೆ ಹೇಗೆ? ಒಳ್ಳೆಯ ಸಾಹಿತಿಯಾಗಬಲ್ಲವನನ್ನು ನೀನು ತಂತ್ರಜ್ಞನಾಗು ಎಂದು ಒತ್ತಾಯಿಸಿದರೆ ಹೇಗೆ? ಬದುಕಿಗೆ ವಾಸ್ತವವಾಗಿ ಬೇಕಿರುವುದು

ತೃಪ್ತಿ ಮತ್ತು ನೆಮ್ಮದಿ

ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡವರು ಒಂದೋ ನೀಟ್, ಜೆಇಇ ಇಲ್ಲವೇ ಸಿಇಟಿ ಪರೀಕ್ಷೆಗಳಿಗೆ ತಯಾರಾಗುವತ್ತ ಹೆಚ್ಚು ಗಮನ ಕೊಡುತ್ತಾರೆ. ಅವುಗಳಲ್ಲಿ ತಕ್ಕಮಟ್ಟಿನ ರ್ಯಾಂಕ್ ಪಡೆದುಕೊಂಡವರು ಆಯಾ ಕ್ಷೇತ್ರಗಳಿಗೆ ಲಗ್ಗೆಯಿಡುತ್ತಾರೆ. ಅಲ್ಲಿ ಸೀಟು ಸಿಗದೇ ಇರುವವರು ಬಿಎಸ್ಸಿ ಕೋರ್ಸುಗಳಿಗೆ ಸೇರುವವರು ಎಂಬ ಮನಸ್ಥಿತಿ ಈಗ ಬೆಳೆದಿದೆ. ಆದರೆ ಇಂದು ಮೂಲವಿಜ್ಞಾನದಲ್ಲಿ ವ್ಯಾಸಂಗ ಮುಂದುವರಿಸುವವರ ಅಗತ್ಯ ತುಂಬ ಇದೆ ಎಂಬ ಅಂಶ ಬಹಳ ಮಂದಿಗೆ ತಿಳಿದಿಲ್ಲ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿಶಾಸ್ತ್ರ ಮುಂತಾದ ಮೂಲವಿಜ್ಞಾನದ ಶಾಖೆಗಳಲ್ಲಿ ಶ್ರೇಷ್ಠ ವಿಜ್ಞಾನಿಗಳು ತಯಾರಾಗುವುದನ್ನು, ಅವರಿಂದ ಸಂಶೋಧನೆಯ ಕ್ಷೇತ್ರಕ್ಕೆ ಹೊಸಹೊಸ ಕೊಡುಗೆಗಳಾಗುವುದನ್ನು ಪ್ರಪಂಚ ಎದುರುನೋಡುತ್ತಿದೆ. ಏಕೆಂದರೆ ಯಾವುದೇ ಕ್ಷೇತ್ರ ಮುಂದುವರಿಯಬೇಕಾದರೆ ಅದರಲ್ಲಿ ಹೊಸಹೊಸ ಸಂಶೋಧನೆಗಳಾಗಬೇಕು. ಇದೊಂದು ನಿರ್ಲಕ್ಷಿತ ಕ್ಷೇತ್ರವಾಗುತ್ತಿದೆ. ಎಲ್ಲಿಯೂ ಸಲ್ಲದವರು ಮಾತ್ರ ಇಲ್ಲಿ ಉಳಿದು ಪ್ರಯೋಜನ ಇಲ್ಲ.

ಕಾನೂನು ಕ್ಷೇತ್ರ

ಲಾಯರ್ ಅಥವಾ ಜಡ್ಜ್ ನಮ್ಮ ಸಮಾಜದ ಪ್ರತಿಷ್ಠಿತ ಹುದ್ದೆಗಳು. ಪಿಯುಸಿ ಅಥವಾ ಪದವಿ ಓದಿದ ಮೇಲೆ ಎಲ್‍ಎಲ್‍ಬಿ ವ್ಯಾಸಂಗ ಮಾಡಿ ಕಾನೂನು ಕ್ಷೇತ್ರ ಪ್ರವೇಶಿಸಬಹುದು. ಪಿಯುಸಿ ಓದಿದವರು ಐದು ವರ್ಷ, ಡಿಗ್ರಿ ಓದಿದವರು ಮೂರು ವರ್ಷದ ಎಲ್‍ಎಲ್‍ಬಿ ಪದವಿ ಪಡೆಯಬೇಕಾಗುತ್ತದೆ. ಸ್ವತಂತ್ರ ಕಾನೂನು ಸಲಹೆಗಾರರಾಗಿ, ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋರ್ಟುಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಲು ಹೇರಳ ಅವಕಾಶಗಳಿವೆ. ಪಬ್ಲಿಕ್ ಪ್ರಾಸೆಕ್ಯೂಟರ್ ಆಗಿ, ನ್ಯಾಯಾಧೀಶರಾಗಿ ಸರ್ಕಾರಿ ಸೇವೆ ಸಲ್ಲಿಸಲೂ ಸಾಧ್ಯವಿದೆ.

ಮನಃಶಾಸ್ತ್ರ

ಮನಃಶಾಸ್ತ್ರವನ್ನು ಕೆಲವು ಕಡೆ ವಿಜ್ಞಾನ ಕೋರ್ಸುಗಳ ಭಾಗವಾಗಿ ಬೋಧಿಸುತ್ತಾರಾದರೂ, ಅನೇಕ ಕಡೆಗಳಲ್ಲಿ ಅದು ಕಲಾವಿಭಾಗದಲ್ಲೂ ಲಭ್ಯವಿದೆ. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಮನೋವಿಜ್ಞಾನವನ್ನು ವ್ಯಾಸಂಗ ಮಾಡಬಹುದು. ಬದುಕು ಸಂಕೀರ್ಣವಾಗುತ್ತಿರುವ ಕಾಲ ಇದು. ವೇಗದ ನಗರೀಕರಣ, ಆಧುನಿಕ ಬದುಕು, ಒತ್ತಡದ ದಿನಚರಿಗಳಿಂದಾಗಿ ಜನರು ಬೇರೆಬೇರೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇಂದು ಮನೋವೈದ್ಯರ ಹಾಗೂ ಆಪ್ತಸಮಾಲೋಚಕರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮನಃಶಾಸ್ತ್ರವನ್ನು ವ್ಯಾಸಂಗ ಮಾಡಿದವರು ಸ್ವತಂತ್ರವಾಗಿಯೂ, ಕಂಪೆನಿಗಳ ಉದ್ಯೋಗಿಗಳಾಗಿಯೂ ಉತ್ತಮ ವೃತ್ತಿಜೀವನ ನಡೆಸಬಹುದು.

ಜಾಹೀರಾತು ಕ್ಷೇತ್ರ

ನಮ್ಮ ದಿನಚರಿ ಬಹುತೇಕ ಜಾಹೀರಾತುಗಳಿಂದ ಸುತ್ತುವರಿದಿದೆ. ನಮ್ಮ ಪ್ರತೀ ನಿರ್ಧಾರದ ಹಿಂದೆ ಯಾವುದೋ ಒಂದು ಜಾಹೀರಾತಿನ ಪ್ರಭಾವ ಇರುತ್ತದೆ. ಪತ್ರಿಕೆ, ಟಿವಿ, ರೇಡಿಯೋ, ಅಂತರಜಾಲಗಳಲ್ಲಿ ಕಾಣಿಸಿಕೊಳ್ಳುವ ಈ ಜಾಹೀರಾತುಗಳು ಎಲ್ಲಿ ತಯಾರಾಗುತ್ತವೆ? ಯಾರು ತಯಾರಿಸುತ್ತಾರೆ? ಇಂದು ಜಾಹೀರಾತು ಒಂದು ಬಹುಕೋಟಿ ಉದ್ದಿಮೆ. ಈ ಜಾಹೀರಾತುಗಳು ತಯಾರಾಗುವುದರ ಹಿಂದೆ ಸಾವಿರಾರು ಮಂದಿಯ ಶ್ರಮ, ಕೌಶಲ, ಬುದ್ಧಿವಂತಿಕೆ ಇದೆ. ಒಂದು ಜಾಹೀರಾತಿನ ನೀಲನಕ್ಷೆಯನ್ನು ತಯಾರಿಸುವುದರಿಂದ ತೊಡಗಿ ಅದರ ಒಟ್ಟಾರೆ ನಿರ್ಮಾಣದವರೆಗೆ ಹತ್ತಾರು ಮಂದಿ ಕೆಲಸ ಮಾಡಬೇಕಾಗುತ್ತದೆ. ಪಿಯುಸಿ ಬಳಿಕ ಜಾಹೀರಾತು ನಿರ್ಮಾಣಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಪೂರೈಸಿ ಆ ಕ್ಷೇತ್ರ ಪ್ರವೇಶಿಸಬಹುದು. ಯಾವುದೇ ನಿರ್ದಿಷ್ಟ ಪದವಿ ಇಲ್ಲದೆಯೂ ಈ ಆಕರ್ಷಕ ಕ್ಷೇತ್ರಕ್ಕೆ ಕಾಲಿಡಬಹುದು ಎಂಬುದು
ಗಮನಾರ್ಹ.

ಗ್ರಾಫಿಕ್ಸ್ ಅಥವಾ ಅನಿಮೇಶನ್

ಜಾಹೀರಾತಿನಷ್ಟೇ ಬೇಡಿಕೆಯಿರುವ ಇನ್ನೊಂದು ಕ್ಷೇತ್ರವಿದು. ಸಿನಿಮಾರಂಗದಲ್ಲಂತೂ ಗ್ರಾಫಿಕ್ಸ್ ಮತ್ತು ಅನಿಮೇಶನ್ ಅನಿವಾರ್ಯ. ಅನಿಮೇಶನ್ ಆಧಾರದಲ್ಲೇ ನಡೆಯುವ ಟಿವಿ ಚಾನೆಲ್‍ಗಳಿವೆ. ಅನಿಮೇಶನ್ ಮತ್ತು ಗ್ರಾಫಿಕ್ಸೇ ಪ್ರಧಾನವಾಗಿರುವ ಚಲನಚಿತ್ರಗಳಿವೆ. ಹಿಂದೆ ಹಾಲಿವುಡ್‍ನಲ್ಲಿ ಪ್ರಮುಖವಾಗಿದ್ದ ಗ್ರಾಫಿಕ್ಸ್ ಇಂದು ಪ್ರಾದೇಶಿಕ ಭಾಷಾ ಚಿತ್ರಗಳಿಗೂ ಲಗ್ಗೆಯಿಟ್ಟಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾವಿರಾರು ಅನಿಮೇಟರ್‌ಗಳ ಅವಶ್ಯಕತೆಯಿದೆ. ಪಿಯುಸಿ ಅಥವಾ ಪದವಿ ಬಳಿಕ ಗ್ರಾಫಿಕ್ಸ್ ಅಥವಾ ಅನಿಮೇಶನ್ ಕೋರ್ಸುಗಳನ್ನು ಮಾಡಿ ಈ ರಂಗವನ್ನು ಪ್ರವೇಶಿಸಿ ಒಳ್ಳೆಯ ವರಮಾನ ಗಳಿಸಬಹುದು.

ಮಾಧ್ಯಮರಂಗ

ಪತ್ರಿಕೆ, ಟಿವಿ ಚಾನೆಲ್‍ಗಳು, ರೇಡಿಯೋ, ಡಿಜಿಟಲ್ ಮಾಧ್ಯಮ ನಮ್ಮ ದಿನನಿತ್ಯದ ಬದುಕಿನ ಭಾಗವಾಗಿಬಿಟ್ಟಿವೆ. ಇವುಗಳಲ್ಲಿ ನಾವೂ ಉದ್ಯೋಗ ಮಾಡಬಹುದೇ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಮಾಧ್ಯಮಗಳನ್ನು ವೃತ್ತಿಜೀವನಕ್ಕೆ ಆರಿಸಿಕೊಳ್ಳುವುದರಿಂದ ಸಮಾಜದಲ್ಲಿ ನಾಲ್ಕು ಮಂದಿಗೆ ಪ್ರಯೋಜನವಾಗುವ ಕೆಲಸವನ್ನು ಮಾಡಿದ ತೃಪ್ತಿಯೂ ಲಭಿಸೀತು, ಜೀವನೋಪಾಯಕ್ಕೆ ಉತ್ತಮ ಆದಾಯವೂ ದೊರೆತೀತು. ಪಿಯುಸಿ ಬಳಿಕ ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಪತ್ರಿಕೋದ್ಯಮ, ಮಾಧ್ಯಮ ಅಧ್ಯಯನ ವಿಷಯಗಳು ಇಂದು ಜನಪ್ರಿಯ ಆಯ್ಕೆಗಳಾಗಿವೆ. ಡಿಜಿಟಲ್ ಮಾಧ್ಯಮ ಪ್ರವರ್ಧಮಾನಕ್ಕೆ ಬಂದಮೇಲಂತೂ ಸ್ವತಂತ್ರ ಉದ್ಯೋಗಾವಕಾಶಗಳು ಹೇರಳವಾಗಿ ಹುಟ್ಟಿಕೊಂಡಿವೆ.

ಬರವಣಿಗೆ ಮತ್ತು ಭಾಷಾಂತರ

ಉತ್ತಮ ಭಾಷಾಕೌಶಲ ಬೆಳೆಸಿಕೊಂಡವರು ಪದವಿ ಬಳಿಕ ತಾಂತ್ರಿಕ ಬರವಣಿಗೆ ಮತ್ತು ಭಾಷಾಂತರವನ್ನು ಒಂದು ವೃತ್ತಿಯಾಗಿ ಸ್ವೀಕರಿಸಬಹುದು. ಕಂಟೆಂಟ್ ರೈಟಿಂಗ್ ಮತ್ತು ಟೆಕ್ನಿಕಲ್ ರೈಟಿಂಗ್ ಇಂದು ಬಹುಬೇಡಿಕೆಯ ಕ್ಷೇತ್ರ. ಬೇರೆಬೇರೆ ಕಂಪೆನಿಗಳ ಜಾಲತಾಣಗಳು, ಪ್ರಚಾರ ಸಾಮಗ್ರಿಗಳು ಹಾಗೂ ಜಾಹೀರಾತುಗಳನ್ನು ಸಿದ್ಧಪಡಿಸಿಕೊಡುವ ಸಂಸ್ಥೆಗಳಲ್ಲಿ ತಾಂತ್ರಿಕ ಬರಹಗಾರರಿಗೆ ಅಪಾರ ಅವಕಾಶವಿದೆ. ಇದನ್ನೊಂದು ಸ್ವತಂತ್ರ ಉದ್ಯೋಗವನ್ನಾಗಿಯೂ ಕೈಗೊಳ್ಳಬಹುದು. ಭಾಷಾಂತರವಂತೂ ಇಂದು ದೊಡ್ಡ ಉದ್ದಿಮೆಯಾಗಿದೆ. ಯಾವುದಾದರೂ ಎರಡು ಭಾಷೆಗಳ ಮೇಲೆ ಹಿಡಿತ ಹೊಂದಿರುವವರು ಭಾಷಾಂತರ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿ ಹಾಗೂ ಸ್ವತಂತ್ರವಾಗಿ ಉತ್ತಮ ಆದಾಯ ಗಳಿಸಬಹುದು. ಸೃಜನಶೀಲ ಲೇಖಕರಿಗೆ ಟಿವಿ ಧಾರಾವಾಹಿ, ಸಿನಿಮಾ ಚಿತ್ರಕಥೆ-ಸಂಭಾಷಣೆ ಬರವಣಿಗೆಯಲ್ಲಿ ಸಾಕಷ್ಟು ಅವಕಾಶವಿದೆ.

ಬೋಧನೆ ಅಥವಾ ಸಂಶೋಧನೆ

ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಕನ್ನಡ-ಇಂಗ್ಲಿಷ್ ಸಾಹಿತ್ಯ ಮುಂತಾದ ವಿಷಯಗಳನ್ನು ವ್ಯಾಸಂಗ ಮಾಡುವವರಿಗೆ ಸ್ನಾತಕಕೋತ್ತರ ಪದವಿಯ ಬಳಿಕ ಬೋಧನೆ ಹಾಗೂ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಖಾಸಗಿ ಹಾಗೂ ಸರ್ಕಾರಿ ವಲಯಗಳೆರಡರಲ್ಲೂ ಇವಕ್ಕೆ ಈಗ ಸಾಕಷ್ಟು ಬೇಡಿಕೆಯಿದೆ. ಶಿಕ್ಷಣ ಕ್ಷೇತ್ರದಲ್ಲಿ ನೈಜ ಆಸಕ್ತಿಯಿರುವ ಪ್ರತಿಭಾವಂತರು ಅದನ್ನು ಪ್ರವೇಶಿಸಿದರೆ ಅವರಿಗೂ, ಸಮಾಜಕ್ಕೂ ಬಹಳ ಅನುಕೂಲ.

ಭಾರತೀಯ ರೈಲ್ವೇ

ಭಾರತೀಯ ರೈಲ್ವೇ ಉದ್ಯೋಗಾವಕಾಶಗಳ ಬಹುದೊಡ್ಡ ಸಾಗರ. ಇದರಲ್ಲಿ ಪ್ರತೀ ವರ್ಷ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತಿರುತ್ತವೆ, ನೇಮಕಾತಿಗಳು ನಡೆಯುತ್ತಿರುತ್ತವೆ. 6800 ರೈಲ್ವೇ ನಿಲ್ದಾಣಗಳು, 7000ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು, 4000ಕ್ಕೂ ಅಧಿಕ ಗೂಡ್ಸ್ ರೈಲುಗಳು ಇರುವ ಈ ಬೃಹತ್ ದೇಶದ ರೈಲ್ವೇ ಜಾಲಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯ ಉದ್ಯೋಗಿಗಳ ಅವಶ್ಯಕತೆ ಇರುವುದು ಅಚ್ಚರಿಯೇನಲ್ಲ. ಇತರ ಅನೇಕ ಸರ್ಕಾರಿ ಉದ್ಯೋಗಗಳಂತೆ ಇವುಗಳೂ ಸ್ಪರ್ಧಾತ್ಮಕ ಪರೀಕ್ಷೆಗಳ ಆಧಾರದಲ್ಲಿ ಸಿಗುವಂಥವು; ಸ್ವಪ್ರಯತ್ನದಿಂದ ದಕ್ಕಿಸಿಕೊಳ್ಳುವಂಥವು. ಆದರೆ ಕನ್ನಡಿಗರು ಇವುಗಳತ್ತ ಗಮನಹರಿಸುವುದು ಕಡಿಮೆಯೇ. ರೈಲ್ವೇಯ ಬಹುತೇಕ ನೇಮಕಾತಿಗಳನ್ನು ರೈಲ್ವೇ ನೇಮಕಾತಿ ಮಂಡಳಿ (RRB)ಗಳು ನಡೆಸುತ್ತವೆ. ಇದಕ್ಕಾಗಿಯೇ ದೇಶದ ವಿವಿಧೆಡೆ ಒಟ್ಟು 21 ಆರ್‌ಆರ್‌ಬಿ ಶಾಖೆಗಳಿವೆ.

ಗ್ರೂಪ್ ಡಿ ಹುದ್ದೆಗಳಿಂದ ತೊಡಗಿ ಪ್ಯಾರಾಮೆಡಿಕಲ್ ಹುದ್ದೆಗಳವರೆಗೆ ಸಾವಿರಾರು ಉದ್ಯೋಗಗಳಿಗೆ ಈ ಮಂಡಳಿಗಳೇ ನೇಮಕಾತಿ ನಡೆಸುತ್ತವೆ. ತಾಂತ್ರಿಕೇತರ ಜನಪ್ರಿಯ ವಿಭಾಗ (ಎನ್‍ಟಿಪಿಸಿ), ಆರ್‌ಆರ್‌ಎಫ್ ಕಾನ್‍ಸ್ಟೇಬಲ್, ಆರ್‌ಆರ್‌ಎಫ್ ಸಬ್‍ಇನ್ಸ್‍ಪೆಕ್ಟರ್, ಅಸಿಸ್ಟೆಂಟ್ ಲೋಕೋಪೈಲಟ್, ಜೂನಿಯರ್ ಇಂಜಿನಿಯರ್, ಪ್ಯಾರಾಮೆಡಿಕಲ್- ಹೀಗೆ ವಿವಿಧ ನೇಮಕಾತಿಗಳು ನಿರಂತರ ನಡೆಯುತ್ತಲೇ ಇರುತ್ತವೆ. ರೈಲ್ವೇ ಹುದ್ದೆಗಳಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಳೀರ್ವರೂ ಸಮಾನವಾಗಿ ಅರ್ಹರು.

ಬ್ಯಾಂಕಿಂಗ್

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉದ್ಯೋಗ ಪಡೆಯಲು ಮುಕ್ತ ಅವಕಾಶವಿರುವ ದೊಡ್ಡದೊಂದು ಕ್ಷೇತ್ರ - ಬ್ಯಾಂಕಿಂಗ್. ಸದಾ ಚಲನಶೀಲವಾಗಿರುವ ಈ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣ ಕುಸಿಯುವ ಸಾಧ್ಯತೆಯಂತೂ ತೀರಾ ಅಪರೂಪ. ಬ್ಯಾಂಕಿಂಗ್‍ನಲ್ಲಿ ಪ್ರತೀವರ್ಷ ಸಾವಿರಾರು ನೇಮಕಾತಿಗಳು ನಡೆಯುತ್ತಿರುತ್ತವೆ. ಖಾಸಗಿ ಬ್ಯಾಂಕ್‍ಗಳ ಹೊರತಾಗಿ, ಸರ್ಕಾರಿ ಬ್ಯಾಂಕಿಂಗ್ ವಲಯದಲ್ಲೂ ಇಂದು ಅವಕಾಶಗಳು ವಿಫುಲವಾಗಿವೆ. ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಲು ಬಿಕಾಂ ಅಥವಾ ಬಿಬಿಎಂನಂತಹ ಕೋರ್ಸುಗಳನ್ನು ಓದಿರಬೇಕೆಂದೇನೂ ಇಲ್ಲ. ಕಲೆ ಅಥವಾ ವಿಜ್ಞಾನ ಹಿನ್ನೆಲೆಯ ಅಭ್ಯರ್ಥಿಗಳೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಬ್ಯಾಂಕ್ ಅಧಿಕಾರಿಗಳಾಗಬಹುದು.

ನಾಗರಿಕ ಸೇವೆ (ಸರ್ಕಾರಿ ಉದ್ಯೋಗ):

ನಾಗರಿಕ ಸೇವೆಗಳು (ಸರ್ಕಾರಿ ಉದ್ಯೋಗ) ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇನ್ನೊಂದು ಕ್ಷೇತ್ರ. ಸರ್ಕಾರಿ ವಲಯದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಷಾರ, ಸ್ವಜನಪಕ್ಷಪಾತ, ಲಂಚರುಷುವತ್ತು, ಜಾತಿ ರಾಜಕೀಯ ಇತ್ಯಾದಿಗಳು ಆ ವಲಯದ ಬಗ್ಗೆ ಜನರು ಬೇಸರಗೊಳ್ಳಲು ಪ್ರಮುಖ ಕಾರಣ. ಯಾರಿಂದಲೂ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಸಮಾಜ ತಲುಪಿದೆ. ಹೊಲಕ್ಕೆ ಬೆಂಕಿಬಿದ್ದರೆ ಒಂದೋ ಅದನ್ನು ನಂದಿಸಲು ಕೈಲಾದ ಪ್ರಯತ್ನ ಮಾಡಬೇಕು, ಪೂರ್ತಿ ಉರಿದುಹೋದರೆ ಆರಂಭದಿಂದ ಹೊಸ ಬೆಳೆ ತೆಗೆಯುವ ಪ್ರಯತ್ನವನ್ನಾದರೂ ಮಾಡಬೇಕು; ಇಲ್ಲವಾದರೆ ಹೊಟ್ಟೆಗೆ ಹಿಟ್ಟಿಲ್ಲದೆ ಉಪವಾಸ ಬೀಳಬೇಕಾದೀತು. ಸರ್ಕಾರಿ ಉದ್ಯೋಗಗಳ ಬಗ್ಗೆ ಇರುವ ಅನಾಸಕ್ತಿಯಿಂದ ಸಮಾಜದ ದೊಡ್ಡದೊಂದು ಭಾಗ ಹೊರಬರುವ ಅವಶ್ಯಕತೆ ಇದೆ. ಉತ್ತಮ ಪ್ರತಿಭೆಗಳು, ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಆಸೆಯಿರುವ ಪ್ರಾಮಾಣಿಕ ಮನಸ್ಸುಗಳು ನಾಗರಿಕ ಸೇವೆಗೆ ಸೇರುವ ಅನಿವಾರ್ಯ ಇಂದಿದೆ.

21 ವರ್ಷ ಪೂರೈಸಿರುವ, ಪದವಿ ತೇರ್ಗಡೆಯಾದ ಎಲ್ಲರೂ ಐಎಎಸ್ ಪರೀಕ್ಷೆ ಬರೆಯಬಹುದು. ಡಿಗ್ರಿಯ ಅಂತಿಮ ವರ್ಷದಲ್ಲಿರುವವರೂ ಇದಕ್ಕೆ ಅರ್ಹರು. ಬಿಎ, ಬಿಎಸ್ಸಿ, ಬಿಕಾಂನಂತಹ ಸಾಂಪ್ರದಾಯಿಕ ಪದವಿಗಳಿಂದ ತೊಡಗಿ ಇಂಜಿನಿಯರಿಂಗ್, ಮೆಡಿಕಲ್ ಪದವಿ ಓದಿದವರೂ ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಪರೀಕ್ಷೆಯ ಸಿಲೆಬಸ್‍ನ ಹೆಚ್ಚಿನ ಭಾಗ ಎಲ್ಲರಿಗೂ ಸಾಮಾನ್ಯವಾಗಿದ್ದರೂ ವಿಸ್ತಾರ ಅಧ್ಯಯನ, ವ್ಯವಸ್ಥಿತ ತಯಾರಿಯೇ ಇಲ್ಲಿ ನಿರ್ಣಾಯಕ. ಸಾಮಾನ್ಯ ವರ್ಗದ ಅಭ್ಯರ್ಥಿಗಳು 32 ವರ್ಷಗಳವರೆಗೆ 6 ಬಾರಿ ಐಎಎಸ್ ಪರೀಕ್ಷೆ ಬರೆಯಲು ಅವಕಾಶವಿದೆ. ಹಿಂದುಳಿದ ವರ್ಗಗಳಿಗೆ ಸೇರಿದವರು 35 ವರ್ಷಗಳವರೆಗೆ 9 ಬಾರಿ ಪ್ರಯತ್ನಿಸಬಹುದು. ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳು 37 ವರ್ಷದವರೆಗೆ ಎಷ್ಟು ಬಾರಿ ಬೇಕಾದರೂ ಬರೆಯಬಹುದು.

ದೇಶಸೇವೆಯ ಅವಕಾಶ

ಭಾರತೀಯ ಸೈನ್ಯ ಸೇರಿ ದೇಶಸೇವೆ ಮಾಡಬೇಕೆಂಬ ಕನಸು ಅನೇಕ ಯುವಕ-ಯುವತಿಯರಿಗೆ ಇರುತ್ತದೆ. ಆದರೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದ ಒಂದು ಹಂತದಲ್ಲಿ ನಿರಾಶೆಪಡುವಂತಾಗುತ್ತದೆ. ಭೂಸೇನೆ, ನೌಕಾಸೇನೆ ಅಥವಾ ವಾಯುಸೇನೆಗಳಿಗೆ ಸೇರಲು ಅನೇಕ ದಾರಿಗಳಿವೆ. ಸೂಕ್ತ ತಯಾರಿಯೊಂದಿಗೆ ಸರಿಯಾದ ದಾರಿಯಲ್ಲಿ ಮುನ್ನಡೆದರೆ ಗುರಿ ತಲುಪುವುದು ಅಸಾಧ್ಯವೇನೂ ಅಲ್ಲ. ಕಲೆ, ವಾಣಿಜ್ಯ, ವಿಜ್ಞಾನ- ಹೀಗೆ ಯಾವುದೇ ಹಿನ್ನೆಲೆಯಿಂದ ಹೋಗುವವರಿಗೂ ಸೇನೆ ಪ್ರವೇಶಿಸಲು ಅದರದ್ದೇ ಆದ ವಿಧಾನಗಳಿವೆ. ಭಾರತೀಯ ಭೂಸೇನೆಯನ್ನು ಸೇರಲು ನಾಲ್ಕು ದಾರಿಗಳಿವೆ.

ಮೊದಲನೆಯದು, ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (ಎನ್‍ಡಿಎ) ಪರೀಕ್ಷೆ ಬರೆಯುವುದು. ಪಿಯುಸಿ ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ ಮತ್ತು ಗಣಿತ) ಓದಿದ 16.5 ರಿಂದ 19.5 ವರ್ಷದ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಈ ಅವಕಾಶವಿದೆ. ಲಿಖಿತ ಪರೀಕ್ಷೆಯ ಬಳಿಕ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್‍ಎಸ್‍ಬಿ) ಸಂದರ್ಶನ ಎದುರಿಸಿ ವೈದ್ಯಕೀಯ ಪರೀಕ್ಷೆ ತೇರ್ಗಡೆ ಹೊಂದಿದ ಮೇಲೆ ತರಬೇತಿಗೆ ಆಯ್ಕೆಯಾಗುತ್ತಾರೆ. ಪೂನಾದಲ್ಲಿರುವ ಎನ್‍ಡಿಎಯಲ್ಲಿ ಮೂರು ವರ್ಷ ಹಾಗೂ ಡೆಹ್ರಾಡೂನಿನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿಯಿರುತ್ತದೆ.

ಭೂಸೇನೆ ಸೇರಲು ಪುರುಷ ಅಭ್ಯರ್ಥಿಗಳಿಗೆ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಎಂಬ ಎರಡನೆಯ ದಾರಿಯಿದೆ. ಇದಕ್ಕೆ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದಲ್ಲಿ ಸರಾಸರಿ ಶೇ. 60 ಅಂಕ ಪಡೆದಿರಬೇಕು. ಜೆಇಇ ಮೈನ್ಸ್ ಪರೀಕ್ಷೆ ಬರೆದಿರಬೇಕು. ಇವರಿಗೆ ಪ್ರತ್ಯೇಕ ಲಿಖಿತ ಪರೀಕ್ಷೆ ಇರುವುದಿಲ್ಲ. ಎಸ್‍ಎಸ್‍ಬಿ ಸಂದರ್ಶನ, ವೈದ್ಯಕೀಯ ಪರೀಕ್ಷೆಯ ಬಳಿಕ ಐದು ವರ್ಷ ತರಬೇತಿಯಿರುತ್ತದೆ.

ಮೂರನೆಯದಾಗಿ, ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಸಿಡಿಎಸ್) ಪರೀಕ್ಷೆ ಬರೆಯುವ ಮೂಲಕ ಪದವೀಧರ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭೂಸೇನೆ ಸೇರಬಹುದು. ಈ ಪರೀಕ್ಷೆಯನ್ನು ಯುಪಿಎಸ್‍ಸಿ ನಡೆಸುತ್ತದೆ. ಪುರುಷ ಅಭ್ಯರ್ಥಿಗಳಿಗೆ 19ರಿಂದ 24 ವರ್ಷಗಳ ವಯೋಮಿತಿ, ಮಹಿಳಾ ಅಭ್ಯರ್ಥಿಗಳಿಗೆ 19ರಿಂದ 25 ವರ್ಷಗಳ ವಯೋಮಿತಿ ಇದ್ದು, ಯಾವುದಾದರೂ ಸ್ನಾತಕ ಪದವಿ ಹೊಂದಿರಬೇಕಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಎಸ್‍ಎಸ್‍ಬಿ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಎದುರಿಸಬೇಕು. ಮುಂದೆ ಪುರುಷ ಅಭ್ಯರ್ಥಿಗಳಿಗೆ ಡೆಹ್ರಾಡೂನಿನ ಐಎಂಎಯಲ್ಲಿ, ಮಹಿಳಾ ಅಭ್ಯರ್ಥಿಗಳಿಗೆ ಚೆನ್ನೈಯ ಅಫೀಶಿಯಲ್ ಟ್ರೈನಿಂಗ್ ಅಕಾಡೆಮಿ (ಒಟಿಎ)ಯಲ್ಲಿ ತರಬೇತಿಯಿರುತ್ತದೆ.

ಶಾರ್ಟ್ ಸರ್ವೀಸ್ ಕಮಿಶನ್ (ಎಸ್‍ಎಸ್‍ಸಿ) ನಾಲ್ಕನೆಯ ದಾರಿ. ಈ ಮೊದಲು ಹೇಳಿರುವ ವಿಧಾನಗಳ ಮೂಲಕ ಪೂರ್ಣಾವಧಿ ಕಮೀಶನ್ಡ್ ಅಧಿಕಾರಿಗಳಾಗಬಹುದು. ಅಂದರೆ ವಯೋನಿವೃತ್ತಿಯಾಗುವವರೆಗೂ ಸೇನೆಯಲ್ಲಿರಬೇಕಾಗುತ್ತದೆ. ಎಸ್‍ಎಸ್‍ಸಿ ಆಯ್ದುಕೊಂಡರೆ ಗರಿಷ್ಠ 14 ವರ್ಷಗಳ ಬಳಿಕ ನಿವೃತ್ತಿ ಪಡೆದು ವಾಪಸಾಗಬಹುದು. 10 ವರ್ಷಗಳ ಸೇವೆಯ ಬಳಿಕ ಪರ್ಮನೆಂಟ್ ಕಮೀಶನ್ಡ್ ಆಫೀಸರ್ ಆಗುವ ಅಥವಾ ನಾಲ್ಕು ವರ್ಷಗಳ ಸೇವಾ ವಿಸ್ತರಣೆ ಪಡೆದು ಮತ್ತೆ ಹಿಂದಿರುಗುವ ಆಯ್ಕೆ ನೀಡಲಾಗುತ್ತದೆ. ಈ ವಿಧಾನದಲ್ಲೂ ಲಿಖಿತ ಪರೀಕ್ಷೆ, ಎಸ್‍ಎಸ್‍ಬಿ ಹಾಗೂ ವೈದ್ಯಕೀಯ ಪರೀಕ್ಷೆಯಿರುತ್ತದೆ. 49 ವಾರಗಳ ತರಬೇತಿಯಿರುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದೆ.

ಪಿಯುಸಿ ಬಳಿಕ ಪುರುಷ ಅಭ್ಯರ್ಥಿಗಳು ಬಿ.ಟೆಕ್ ಎಂಟ್ರಿ ಯೋಜನೆಯಲ್ಲಿ ನೌಕಾಪಡೆ ಸೇರಬಹುದು. ಪಿಯುಸಿ ಪಿಸಿಎಂ ವಿಷಯಗಳಲ್ಲಿ ಶೇ. 70 ಹಾಗೂ ಇಂಗ್ಲಿಷಿನಲ್ಲಿ ಶೇ. 50 ಅಂಕ ಪಡೆದಿರಬೇಕು. ಜೆಇಇ ಮೈನ್ಸ್ ಬರೆದಿದ್ದು, ಇದರ ಆಧಾರದಲ್ಲಿ ಎಸ್‍ಎಸ್‍ಬಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಕೇರಳದಲ್ಲಿರುವ ಇಂಡಿಯನ್ ನೇವಲ್ ಅಕಾಡೆಮಿಯ ತರಬೇತಿಗೆ, ಅಂದರೆ ಬಿ.ಟೆಕ್ ಕೋರ್ಸಿಗೆ ಆಯ್ಕೆಯಾಗುತ್ತಾರೆ. ನಾಲ್ಕು ವರ್ಷಗಳ ಬಳಿಕ ನೌಕಾಸೇನೆಯ ಪೂರ್ಣಾವಧಿ ಕಮೀಶನ್ಡ್ ಹುದ್ದೆಗಳಿಗೆ ನೇಮಕವಾಗುತ್ತಾರೆ.

ವಾಯುಸೇನೆ ಸೇರಲು ಮೂರು ದಾರಿಗಳಿವೆ

ಎನ್‍ಡಿಎ ಪರೀಕ್ಷೆ, ಏರ್‍ಫೋರ್ಸ್ ಸಾಮಾನ್ಯ ಪ್ರವೇಶ ಪರೀಕ್ಷೆ (ಎಎಫ್‍ಸಿಎಟಿ) ಹಾಗೂ ಎನ್‍ಸಿಸಿ ಸ್ಪೆಶಲ್ ಎಂಟ್ರಿ. ಎನ್‍ಡಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ (ಪುರುಷರಿಗೆ ಮಾತ್ರ) ಈ ಮೊದಲು ಹೇಳಿದಂತೆಯೇ ಎಸ್‍ಎಸ್‍ಬಿ ಸಂದರ್ಶನ ಹಾಗೂ ಮೆಡಿಕಲ್ ಪರೀಕ್ಷೆ ಇರುತ್ತದೆ. ಮುಂದೆ ಮೂರು ವರ್ಷಗಳ ಎನ್‍ಡಿಎ ತರಬೇತಿ ಹಾಗೂ ತೆಲಂಗಾಣದ ಏರ್‍ಫೋರ್ಸ್ ಅಕಾಡೆಮಿಯಲ್ಲಿ ಒಂದು ವರ್ಷದ ತರಬೇತಿ ಇರುತ್ತದೆ. ಎಎಫ್‍ಸಿಟಿಎ ಮೂಲಕ ಪುರುಷ-ಮಹಿಳಾ ಅಭ್ಯರ್ಥಿಗಳಿಬ್ಬರೂ ವಾಯುಸೇನೆ ಸೇರಬಹುದು.

Dailyhunt
Disclaimer: This content has not been generated, created or edited by Dailyhunt. Publisher: Prajavani