Dailyhunt Logo
  • Light mode
    Follow system
    Dark mode
    • Play Story
    • App Story
ಪೋಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಜಾಗೃತಿ ಅಗತ್ಯ

ಪೋಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಜಾಗೃತಿ ಅಗತ್ಯ

ಶಿಡ್ಲಘಟ್ಟ: 'ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಜಾರಿಗೊಳಿಸಿರುವ ಪೋಕ್ಸೊ ಕಾಯ್ದೆ ಕುರಿತು ಮಕ್ಕಳು ಅರಿವು ಹೊಂದಿರಬೇಕು' ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಕಿವಿಮಾತು ಹೇಳಿದರು.

ನಗರದ ಪ್ಯಾರೇಗಾನ್ ಶಾಲೆಯಲ್ಲಿ ಮಂಗಳವಾರ ನ್ಯಾಯಾಲಯದ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, '18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಅಪರಾಧ ತಡೆಗಟ್ಟಲು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು 2012ರಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ.

ಮಕ್ಕಳಿಗೆ ತ್ವರಿತ ನ್ಯಾಯ ದೊರಕಿಸುವುದು ಇದರ ಮುಖ್ಯ ಉದ್ದೇಶ' ಎಂದರು.

'ಮಕ್ಕಳೊಂದಿಗೆ ಯಾರೇ ಅಸಭ್ಯವಾಗಿ ವರ್ತಿಸಿದರೂ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದರೂ ಭಯಪಡದೆ ತಕ್ಷಣ ಪೋಷಕರು ಅಥವಾ ಶಿಕ್ಷಕರ ಗಮನಕ್ಕೆ ತರಬೇಕು. ಸಂಬಂಧಿಕರು ಅಥವಾ ಪರಿಚಯಸ್ಥರು ಎಂಬ ಕಾರಣಕ್ಕೆ ಇಂತಹ ಕೃತ್ಯ ಸಹಿಸಬಾರದು. ತಮ್ಮ ಸುರಕ್ಷತೆ ಬಗ್ಗೆ ಮಕ್ಕಳು ಜಾಗೃತರಾಗಿರಬೇಕು' ಎಂದು ಸಲಹೆ ನೀಡಿದರು.

'ಮಕ್ಕಳ ಸಹಾಯವಾಣಿ 1098 ಟೋಲ್ ಫ್ರೀ ಸಂಖ್ಯೆ. ದೌರ್ಜನ್ಯ ಅಥವಾ ತೊಂದರೆ ಕುರಿತು ಮಾಹಿತಿ ನೀಡಬಹುದು. ದೂರು ನೀಡುವವರ ಹೆಸರು, ವಿಳಾಸ ಬಹಿರಂಗಪಡಿಸುವುದು ಕಡ್ಡಾಯವಲ್ಲ. ಮಾಹಿತಿ ನೀಡಿದರೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮಗುವಿನ ರಕ್ಷಣೆಗೆ ಮುಂದಾಗುತ್ತದೆ' ಎಂದು ತಿಳಿಸಿದರು.

'ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದರ ಜತೆಗೆ ತಮ್ಮ ಹಕ್ಕು ಮತ್ತು ಸುರಕ್ಷತೆ ಬಗ್ಗೆಯೂ ಅರಿವು ಹೊಂದಿರಬೇಕು. ತಮ್ಮ ಅಥವಾ ಪರಿಚಯಸ್ಥರ ಮೇಲೆ ಯಾವುದೇ ದೌರ್ಜನ್ಯ ನಡೆದರೆ ಪೊಲೀಸರ ಅಥವಾ ಶಿಕ್ಷಕರ ನೆರವು ಪಡೆಯಬೇಕು' ಎಂದು ಹೇಳಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಎಸ್.ರಫೀಕ್ ಅಹಮದ್, ಕಾರ್ಯದರ್ಶಿ ಇರ್ಫಾನ್, ಸಮದ್, ನದೀಮ್, ಅಬ್ದುಲ್ ಜಬಿ, ಮುಖ್ಯ ಶಿಕ್ಷಕ ದ್ಯಾವಪ್ಪ, ಶಿಕ್ಷಕರಾದ ಸರ್ವರ್ ಅಲಿ ಮತ್ತು ಮನ್ಸೂರ್ ಪಾಷ ಉಪಸ್ಥಿತರಿದ್ದರು.

261104-16-1164536156

Dailyhunt
Disclaimer: This content has not been generated, created or edited by Dailyhunt. Publisher: Prajavani