ಚಿಕ್ಕಮಗಳೂರು: 'ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು ಒಂದು ದಿನವೂ ನಡೆಯಲು ಸಾಧ್ಯವೇ ಇಲ್ಲ. ನೀವೇ ಈ ಸಮಾಜದ ನಿಜವಾದ ಶಕ್ತಿ. ಅಧಿಕಾರಿಗಳಿಗೆ ಹೆದರಬೇಡಿ, ಧೈರ್ಯವಾಗಿ ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ' ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.
ರಘು ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರ ಕುಂದು-ಕೊರತೆಗಳ ನೇರ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದರೆ ಕೆಲಸದಿಂದ ತೆಗೆಯುತ್ತಾರೆ, ಇಲ್ಲವೇ ಬೇರೆಡೆಗೆ ವರ್ಗಾವಣೆ ಮಾಡುತ್ತಾರೆ ಎಂಬ ಭಯ ಪೌರಕಾರ್ಮಿಕರಲ್ಲಿ ಬೇಡ. ನಿಮಗೆ ಕಿರುಕುಳ ನೀಡಿದರೆ ಅಥವಾ ಬೆದರಿಕೆ ಹಾಕಿದರೆ ನೇರವಾಗಿ ನನಗೆ ಕರೆ ಮಾಡಿ ಅಥವಾ ನಮ್ಮ ಆಯೋಗದ ವಾಟ್ಸ್‌ಆಯಪ್ ಸಂಖ್ಯೆಗೆ ಸಂದೇಶ ಕಳುಹಿಸಿ. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ' ಎಂದು ಭರವಸೆ ನೀಡಿದರು.
ಪೌರಕಾರ್ಮಿಕರ ಸಮಸ್ಯೆಗಳ ಸಂಪೂರ್ಣ ವರದಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದು ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪೌರಕಾರ್ಮಿಕ ನಾಗರಾಜ್ ಮಾತನಾಡಿ, 'ಪೌರ ಕಾರ್ಮಿಕರಿಗಾಗಿ ನಿರ್ಮಿಸಿರುವ ವಸತಿ ಗೃಹಗಳನ್ನು ತಕ್ಷಣವೇ ಹಸ್ತಾಂತರಿಸಬೇಕು. ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ವರ್ಷಗಳಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ತಕ್ಷಣವೇ ಕಾಯಂಗೊಳಿಸಬೇಕು' ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-126-1662144516

