Sunday, 24 Jan, 12.29 pm ಪ್ರಜಾವಾಣಿ

ವಿದೇಶ
ಪೌರತ್ವ ಗುರುತು: ಟ್ರಂಪ್ ಆದೇಶ ಹಿಂಪಡೆದ ಬೈಡನ್

ವಾಷಿಂಗ್ಟನ್: 2020ರ ಗಣತಿಯ ಅಂಕಿ ಅಂಶಗಳನ್ನು ಆಧರಿಸಿ ಜನರ ಪೌರತ್ವ ಹಾಗೂ ಅವರ ವಯಸ್ಸು ಕುರಿತ ದತ್ತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಅಮೆರಿಕದ ಜನಗಣತಿ ಸಂಸ್ಥೆ ಕೈಬಿಟ್ಟಿದೆ. ಈ ಮೂಲಕ ಟ್ರಂಪ್‌ ಆಡಳಿತ ಕೈಗೊಂಡಿದ್ದ ಮತ್ತೊಂದು ನಿರ್ಧಾರವನ್ನು ನೂತನ ಜೋ ಬೈಡನ್‌ ಆಡಳಿತವು ಹಿಂದೆ ಪಡೆದಿದೆ.

ಈ ಕುರಿತು ಆದೇಶಕ್ಕೆ ಜೋ ಬೈಡನ್ ಈಗಾಗಲೇ ಸಹಿ ಹಾಕಿದ್ದಾರೆ. ಈ ಸಂಬಂಧ ಹೇಳಿಕೆಯಲ್ಲಿ, ಜನಗಣತಿ ಸಂಸ್ಥೆಯು ಪೌರತ್ವ ಮತ್ತು ವಯಸ್ಸು ಆಧರಿಸಿದ ದತ್ತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. 2020ರ ಗಣತಿಗೆ ಸಂಬಂಧಿಸಿದ ಟ್ರಂಪ್ ಅವರ ಎರಡು ನಿರ್ದೇಶನಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದಿದೆ.

ಮೊದಲನೆಯದು ಅಮೆರಿಕದ ಪ್ರತಿ ನಾಗರಿಕರ ಪೌರತ್ವವನ್ನು ದಾಖಲೆಗಳನ್ನು ಆಧರಿಸಿ ಗ್ರಹಿಸುವುದು, ಎರಡನೆಯದು ಪೌರತ್ವವಿಲ್ಲದ, ನಿಯಮಬಾಹಿರವಾಗಿ ಇರುವ ನಾಗರಿಕರನ್ನು ಪ್ರತ್ಯೇಕಗೊಳಿಸುವುದು ಎಂದು ಸಂಸ್ಥೆಯು ತಿಳಿಸಿದೆ.

ಟ್ರಂಪ್‌ ಅವರ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಅವರು, ಬ್ಲಾಕ್ ಹಂತದ ಪೌರತ್ವ ಅಂಕಿ ಅಂಶ ಒದಗಿಸಬೇಕು ಎಂದು 2018ರಲ್ಲಿ ಆದೇಶಿಸಿದ್ದರು. ಬೈಡನ್‌ ಅವರ ಆದೇಶದ ನಂತರ ಜನಗಣತಿ ಸಂಸ್ಥೆಯು, ಗಣತಿಗೆ ಸಂಬಂಧಿತ ಯಾವುದೇ ದಾಖಲೆ ಭೂಪ್ರದೇಶ ಆಧರಿಸಿ ವಲಸಿಗರು ಅಥವಾ ಪೌರತ್ವ ಕುರಿತ ಮಾಹಿತಿ ಹೊಂದಿರುವುದಿಲ್ಲ ಎಂದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top