ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಆರಂಭಿಸಿದ್ದ ಪ್ರತಿಭಟನೆಗೆ ಕೈಜೋಡಿಸಿ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಮೋದಿ ವಿಡಿಯೊ ಸಂದೇಶದಲ್ಲಿ ನೀಡಿದ ಭರವಸೆ ಮತ್ತು ಸಚಿವರ ಲಿಖಿತ ಪತ್ರದ ಅಧಾರದ ಮೇಲೆ ತಮ್ಮ 26 ದಿನಗಳ ಉಪವಾಸಕ್ಕೆ ತೆರೆ ಎಳೆದಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಕಠಿಣ ಕಾನೂನು, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ, ಶಾಂತಿಯುತ ಪ್ರತಿಭನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸದಿರುವ ಭರವಸೆ ಸಿಕ್ಕಿತ್ತು. ಆದರೆ, ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೂ ಮುನ್ನವೇ ವಾಂಗ್ಚೂಕ್ ಉಪವಾಸ ನಿಲ್ಲಿಸಿದ ಬಗ್ಗೆ ಟೀಕೆ ವ್ಯಕ್ತವಾಗಿದ್ದವು. ಸರ್ಕಾರ ಮತ್ತು ಅವರ ನಡುವೆ ಯಾವುದೋ ಒಳ ಒಪ್ಪಂದ ಆಗಿದೆ ಎಂಬ ಗುಮಾನಿಯನ್ನೂ ಕೆಲವರು ವ್ಯಕ್ತಪಡಿಸಿದ್ದರು. ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.
ನಾನೇಕೆ ಉಪವಾಸ ಸತ್ಯಾಗ್ರಹ ನಿಲ್ಲಿಸಿದೆ?
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯು ಖಂಡಿತವಾಗಿಯೂ ಒಂದು ಪ್ರಮುಖ ಅಂಶವಾಗಿತ್ತು. ಆದರೆ, ಕೇಂದ್ರದೊಂದಿಗಿನ ಮಾತುಕತೆಯ ಸಮಯದಲ್ಲಿ ನಾನು ಅದಕ್ಕೆ ಒತ್ತಾಯ ಮಾಡಲಿಲ್ಲ. ಏಕೆಂದರೆ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗುವುದನ್ನು ತಡೆಯುವುದೇ ನನ್ನ ಆದ್ಯತೆಯಾಗಿತ್ತು ಎಂದು ಸೊನಮ್ ಶುಕ್ರವಾರ ತಡರಾತ್ರಿ ಪೋಸ್ಟ್ ಮಾಡಿದ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.
'ಈ ರಾಜೀನಾಮೆಯ ವಿಷಯಕ್ಕೆ ಕಟ್ಟುಬೀಳುವುದು ವಿದ್ಯಾರ್ಥಿಗಳಿಗಿಂತ ಅತ್ಯಗತ್ಯ ಎಂದು ನಾನು ಭಾವಿಸುವುದಿಲ್ಲ' ಎಂದು ಅವರು ಆಸ್ಪತ್ರೆಯ ಬೆಡ್ ಮೇಲೆ ಕುಳಿತೇ ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ವಿವರಿಸಿದ್ದಾರೆ.
ಕೇಂದ್ರಕ್ಕೆ ಪ್ರಧಾನ್ ರಾಜೀನಾಮೆಯು ಸಣ್ಣ ವಿಷಯವಾಗಿದೆ. ರಾಜೀನಾಮೆ ನಿರಾಕರಿಸುವ ಮೂಲಕ ಸರ್ಕಾರವು ಭಾರಿ ಹಾನಿ ಅನುಭವಿಸುತ್ತಿದೆ. ದೇಶದಾದ್ಯಂತ ಅವರ ವರ್ಚಸ್ಸು ಹಾಳಾಗುಗುತ್ತಿದೆ. ಜನರು ಕೋಪ ಹಾಗೂ ದ್ವೇಷದಿಂದ ಕುದಿಯುತ್ತಿದ್ದಾರೆ ಎಂದು ವಾಂಗ್ಚೂಕ್ ಹೇಳಿದ್ದಾರೆ.
ಪ್ರಧಾನ್ ರಾಜೀನಾಮೆ ಬಗ್ಗೆಯೂ ಕೇಂದ್ರ ಸಚಿವರ ಜೊತೆಗಿನ ಮಾತುಕತೆ ವೇಳೆ ನಾನು ಪ್ರಸ್ತಾಪಿಸಿದ್ದೆ. ಆದರೆ, ಕೂಡಲೇ ಸಾಧ್ಯವಿಲ್ಲ. ಹೆಚ್ಚಿನ ಸಮಯ ಬೇಕೆಂದು ಹೇಳಿದರು ಎಂಬುದಾಗಿಯೂ ವಾಂಗ್ಚೂಕ್ ಹೇಳಿದ್ದಾರೆ. ಅಲ್ಲದೆ, ಕಾಲ ಕ್ರಮೇಣ ಪ್ರಧಾನ್ ರಾಜೀನಾಮೆ ನೀಡುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
'ಈ ಸನ್ನಿವೇಶವನ್ನು ದೀರ್ಘ ಸಮಯದವರೆಗೆ ಕೇಂದ್ರ ಸರ್ಕಾರ ಮುಂದುವರಿಸಲಾರದು. ಪ್ರಧಾನ್ ಸದ್ಯದಲ್ಲೇ ಅಥವಾ ನಂತರ ಸ್ವಲ್ಪ ಸಮಯದಲ್ಲಿ ರಾಜೀನಾಮೆ ಕೊಡುತ್ತಾರೆ. ರಾಜೀನಾಮೆ ವಿಷಯ ತನ್ನಷ್ಟಕ್ಕೆ ತಾನೇ ಸ್ವಲ್ಪ ಸಮಯದಲ್ಲಿ ನಿವಾರಣೆಯಾಗಲಿದೆ. ಅವರು ರಾಜೀನಾಮೆ ತಳ್ಳಿಹಾಕುತ್ತಿರುವುದರಿಂದ ಸರ್ಕಾರದ ವರ್ಚಸ್ಸಿಗೆ ಹಾನಿ ಮಾಡಿಕೊಂಡಿದ್ದಾರೆ. ಹಾಗಾಗಿ, ಕೇಂದ್ರ ಸಚಿವರ ಜೊತೆಗಿನ ಮಾತುಕತೆ ವೇಳೆ ದೊಡ್ಡದಾಗಿ ಒತ್ತಿ ಹೇಳಲಿಲ್ಲ'ಎಂದಿದ್ದಾರೆ.
'ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಬಾರದೆಂಬುದೇ ನನ್ನ ಫೋಕಸ್ ಆಗಿತ್ತು. ನನ್ನ ಪ್ರಮುಖ ಕಾಳಜಿ ಇದ್ದದ್ದು ತಪ್ಪಿತಸ್ಥರ ವಿರುದ್ಧ ಪ್ರಕರಣ ಮತ್ತು ಕಠಿಣ ಕ್ರಮವಾಗಿತ್ತು. ಸಚಿವರ ರಾಜೀನಾಮೆ ಭರವಸೆಯನ್ನು ಪಡೆಯಬೇಕಿತ್ತೆಂಬುದು ನನಗೆ ಆದ್ಯತೆಯಾಗಿ ಕಾಣಲಿಲ್ಲ' ಎಂದಿದ್ದಾರೆ.
ಸರ್ಕಾರದ ಜೊತೆ ಒಪ್ಪಂದದ ಆರೋಪಕ್ಕೆ ಕಿಡಿ
ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳು ಕಾನೂನು ಅಥವಾ ಹಿಂಸಾಚಾರದ ಸನ್ನಿವೇಶಗಳನ್ನು ಎದುರಿಸಬಾರದು ಎಂಬುದು ನನ್ನ ಆದ್ಯತೆಯಾಗಿತ್ತು ಎಂದಿದ್ದಾರೆ..
'ಶುಕ್ರವಾರ ಮಧ್ಯರಾತ್ರಿ ಲಿಖಿತವಾಗಿ ಭರವಸೆ ಈಡೇರಿಸುವ ಪತ್ರಕ್ಕಾಗಿ ಸಚಿವರನ್ನು ಒತ್ತಾಯಿಸಿದ್ದೆ. ನಾನು ತರಾತುರಿಯಲ್ಲೇಇದ್ದೆ. ಏಕೆಂದರೆ, ದೆಹಲಿಯ ಪರಿಸ್ಥಿತಿ ಹಾಗಿತ್ತು. ಪರಿಸ್ಥಿತಿ ತೀರಾ ಕೈಮೀರುವ ಹಂತ ತಲುಪಿತ್ತು. ವರದಿಗಳನ್ನು ನಾನು ನೋಡುತ್ತಿದ್ದೆ. 2025ರ ಸೆಪ್ಟೆಂಬರ್ 24ರಂದು ಲಡಾಕ್‌ನ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕರುಣಾಹೀನವಾಗಿ ಗುಂಡು ಹಾರಿಸಿದ್ದು ನೆನಪಿಗೆ ಬಂದಿತು. ಆ ರೀತಿಯದ್ದೇ ಏನೋ ಸಂಭವಿಸಬಹುದೆಂಬ ಆತಂಕ ನನಗಿತ್ತು. ನನ್ನ ಉಪವಾಸ ಅಂತ್ಯಗೊಳಿಸುವ ಮೂಲಕ ಶಾಂತಿಗೆ ಕರೆ ನೀಡಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಾನು ನಂಬಿದ್ದೆ'ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಸಮ್ಮುಖದಲ್ಲಿ ಉಪವಾಸ ಅಂತ್ಯಗೊಳಿಸಿದ್ದನ್ನು ಟೀಕಿಸುವವರಿಗೆ ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ನನ್ನ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಅರಿವಿರಲಿಲ್ಲ ಉತ್ತರ ಕೊರಿಯಾದಲ್ಲಿದ್ದಂತೆ ನನಗೆ ಭಾಸವಾಗುತ್ತಿತ್ತು ಎಂದಿದ್ದಾರೆ.
ನಾನು ಒಪ್ಪಂದ ಮಾಡಿಕೊಳ್ಳಲು ಇಚ್ಚಿಸಿದ್ದರೆ, 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಬೇಕಿತ್ತೇ? ಉಪವಾಸದ ಬದಲು ಎಸಿ ಕೊಠಡಿಯಲ್ಲಿ ಕುಳಿತು ಡೀಲ್ ಮಾಡಿಕೊಳ್ಳಬಹುದಿತ್ತು ಎಂದು ಖಾರವಾಗಿ ಉತ್ತರಿಸಿದ್ದಾರೆ.
ನನ್ನನ್ನು ಮೆದಾಂತ ಆಸ್ಪತ್ರೆಯಲ್ಲಿ ಭೇಟಿಯಾದ ನಡ್ಡಾ ಮತ್ತು ಸಿಂಗ್ ಅವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂದರ್ಭ ಆತ್ಮಹತ್ಯೆಗೆ ಶರಣಾದ ಮಕ್ಕಳ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಪರೀಕ್ಷಾ ವ್ಯವಸ್ಥೆಯ ಹೊಣೆಗಾರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ. ಅವರ ಮೌಖಿಕ ಭರವಸೆಗೆ ಮಣಿಯದ ನಾನು ಲಿಖಿತ ಭರವಸೆ ಕೇಳಿದೆ, ಅದಕ್ಕವರು ಒಪ್ಪಿಕೊಂಡರು ಎಂದಿದ್ದಾರೆ.
'ಉಪವಾಸವನ್ನು ಕೊನೆಗೊಳಿಸಿದಾಗ, ನನಗೆ ಬೆಂಬಲ ನೀಡಲು ಬಂದಿದ್ದ ನನ್ನ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಂಸದರು ಅಲ್ಲಿ ಉಪಸ್ಥಿತರಿರಲು ಸಾಧ್ಯವಾಗಲಿಲ್ಲ ಎಂಬುದೇ ನನ್ನ ಹೃದಯದ ಅತಿದೊಡ್ಡ ನೋವು' ಎಂದು ಅವರು ಹೇಳಿದ್ದಾರೆ.
ಉತ್ತರ ಕೊರಿಯಾದಲ್ಲಿ ಇದ್ದಂತೆ ಭಾಸವಾಯಿತು: ಆಸ್ಪತ್ರೆಯ ಅನುಭವ ತೆರೆದಿಟ್ಟ ಸೊನಮ್ಪ್ರತಿಭಟನೆಯಲ್ಲಿ ಭಾಗವಹಿಸಲು ಆಸ್ಪತ್ರೆಯಿಂದ ತೆರಳಲು ಅನುಮತಿ ಕೊಡಿ: ಸೊನಮ್ ಪತ್ರ
