ನವದೆಹಲಿ: 'ಪ್ರಧಾನ ಮಂತ್ರಿ ಅವರನ್ನು ಉಳಿಸಲು 'ಪ್ರಧಾನ್' ಅವರನ್ನು ವಜಾಗೊಳಿಸಲಾಗಿದೆ' ಎಂದು ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಹೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯ ಕುರಿತು ಮಂಗಳವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, 'ವಿದ್ಯಾರ್ಥಿಗಳು ಸರ್ಕಾರವನ್ನು ಮಂಡಿಯೂರಿವಂತೆ ಮಾಡಿದ್ದಾರೆ' ಎಂದರು.
ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಅಖಿಲೇಶ್, 'ತಮಾಷೆಯಾಗಿ ಆರಂಭವಾದ ಪ್ರತಿಭಟನೆ ದೇಶವ್ಯಾಪಿ ಚಳವಳಿಯಾಗಿ ರೂಪಾಂತರಗೊಂಡಿತು. ಇದು ಸರ್ಕಾರವೂ ಸಹ ಪ್ರಜಾಸತ್ತಾತ್ಮಕವಾಗಿ ಯೋಚಿಸುವಂತೆ ಮಾಡಿತು' ಎಂದು ಹೇಳಿದರು.
ಪ್ರತಿಭಟನಕಾರರಿಗೆ ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಲೇವಡಿ ಮಾಡಿದ ಅವರು, 'ಈ ಸರ್ಕಾರವು ಸುಳ್ಳು ಭರವಸೆ ನೀಡುತ್ತದೆಯೇ ಹೊರತು ನೈಜ ಭರವಸೆಗಳನ್ನಲ್ಲ. ಆದರೂ ವಿದ್ಯಾರ್ಥಿಗಳಿಗೆ ಕೊಟ್ಟ ಮಾತನ್ನು ಅದು ಉಳಿಸಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ' ಎಂದು ತಿಳಿಸಿದರು.
ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ದಮನಕಾರಿ ಕ್ರಮ ಖಂಡಿಸಿದ ಅಖಿಲೇಶ್, 'ಇದು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿದೆ' ಎಂದರು.
'ನಾನು ತುರ್ತು ಪರಿಸ್ಥಿತಿಯನ್ನು ನೋಡಿಲ್ಲ. ಆದರೆ, ಆಗ ಏನು ನಡೆದಿತ್ತೋ ಅದನ್ನು ಕಳೆದ ವಾರ ದೆಹಲಿಯಲ್ಲಿ ವಿದ್ಯಾರ್ಥಿಗಳನ್ನು ಮುಳ್ಳಿನ ರಾಡ್‌ಗಳು ಮತ್ತು ಎಲೆಕ್ಟ್ರಿಕ್ ಬ್ಯಾಟನ್‌ಗಳಿಂದ ಕ್ರೂರವಾಗಿ ಥಳಿಸಿದಾಗ ಹಾಗೂ ಅವರ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಿದಾಗ ನಾವು ನೋಡುವಂತಾಯಿತು' ಎಂದು ಕಿಡಿಕಾರಿದರು.
ಹೊಸ ಕಾಯ್ದೆಯ ಅಗತ್ಯವನ್ನು ಪ್ರಶ್ನಿಸಿದ ಅವರು, '2024 ರಲ್ಲಿ ಸರ್ಕಾರ ಹೊಸ ಕಾಯ್ದೆಯನ್ನು ತಂದ ಹೊರತಾಗಿಯೂ ಪೇಪರ್ ಸೋರಿಕೆಗಳು ನಿಲ್ಲಲಿಲ್ಲ. ಈಗ ಸರ್ಕಾರವು ತಿದ್ದುಪಡಿಯನ್ನು ತರಲು ಮುಂದಾಗಿದೆ' ಎಂದು ತಿಳಿಸಿದರು.
ರಾಮಮಂದಿರ ದೇಣಿಗೆ ಕಳ್ಳತನದ ಆರೋಪದ ವಿಷಯವನ್ನೂ ಪ್ರಸ್ತಾಪಿಸಿದ ಅಖಿಲೇಶ್, 'ಬಿಜೆಪಿ ಸರ್ಕಾರಕ್ಕೆ ದೇಣಿಗೆ ಕಳ್ಳತನವನ್ನಾಗಲಿ ಅಥವಾ ಪೇಪರ್ ಸೋರಿಕೆಯನ್ನಾಗಲಿ ತಡೆಯಲು ಸಾಧ್ಯವಾಗಲಿಲ್ಲ' ಎಂದರು.
'ರಾಮಮಂದಿರದ ದೇಣಿಗೆ ಕಳ್ಳತನಕ್ಕೆ ಅವಕಾಶ ಮಾಡಿಕೊಟ್ಟ ಜನರೇ ಪೇಪರ್ ಸೋರಿಕೆಗೂ ಅವಕಾಶ ಮಾಡಿಕೊಡುತ್ತಿದ್ದಾರೆ' ಎಂದು ಹೇಳಿದರು.

