ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳು ಎನ್ನಲಾದ ನಾಲ್ವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಚಿಕ್ಕಬಳ್ಳಾಪುರದ ಅಂದರಹಳ್ಳಿಯ ಮೋಹನ್ ರಾಜ್, ಜಡೇಮಾರನಹಳ್ಳಿಯ ಅಕ್ಕುಲ ರೆಡ್ಡಿ ಅಲಿಯಾಸ್ ಅಖಿಲ್ ರೆಡ್ಡಿ, ತಲಹಳ್ಳಿಯ ಟಿ.ಎಸ್.ಮಹೇಂದ್ರ ಮತ್ತು ಅಡವಿಗೊಲ್ಲರಹಳ್ಳಿಯ ಪ್ರಕಾಶ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.
ಪ್ರತಿವಾದಿಗಳಾದ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣಾಧಿಕಾರಿ ಹಾಗೂ ದೂರುದಾರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಸ್.ಎಂ.ಅಮರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
'ನಮ್ಮ ವಿರುದ್ಧ ಚಿಕ್ಕಬಳ್ಳಾಪುರ ಟೌನ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದ ತನಿಖೆ ಹಾಗೂ ಚಿಕ್ಕಬಳ್ಳಾಪುರದ ಪ್ರಧಾನ ಹಿರಿಯ ಹಾಗೂ ಸಿಜೆಎಂ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಕರಣವೇನು?: ಅರ್ಜಿದಾರರು ಕಳೆದ ಜೂನ್ 27ರಂದು ಬೆಳಿಗ್ಗೆ 11:30 ಗಂಟೆಗೆ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರ್ಜಿದಾರರ ವಿರುದ್ಧ; ಭಾರತೀಯ ನ್ಯಾಯ ಸಂಹಿತಾ-2023ರ (ಬಿಎನ್‌ಎಸ್) ಕಲಂ 189, 192(2), 132, 352 ಮತ್ತು 351(3)ರ ಅಪರಾಧಗಳಡಿ ಚಿಕ್ಕಬಳ್ಳಾಪುರ ಟೌನ್ ಠಾಣಾ ಪೊಲೀಸರು 2026ರ ಜೂನ್ 27ರಂದು ಎಫ್‌ಐಆರ್ ದಾಖಲಿಸಿದ್ದರು.

