ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಅಪರೂಪದ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ ಸಾಹಿತಿ ಸುಬ್ರಹ್ಮಣ್ಯರಾಜೇ ಅರಸು (ಚದುರಂಗ) ಹುಟ್ಟೂರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಸಮಸಮಾಜ ಸೃಷ್ಠಿಗೆ ಒತ್ತು ನೀಡಿ ಸಮಾಜಮುಖಿಯಾಗಿದ್ದ ಇವರು ಮೈಸೂರು ರಾಜವಂಶಸ್ಥ…
ಕಲ್ಲಹಳ್ಳಿ ಎನ್ನುತ್ತಿದ್ದಂತೆ ಎಲ್ಲರ ನೆನಪಿನ ಪರದೆಯಲ್ಲಿ ಮೂಡುವುದು ರಾಜ್ಯದ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಆದರೆ, ಇವರ ಸೋದರ ಸಂಬಂಧಿಯಾದ ಸುಬ್ರಹ್ಮಣ್ಯರಾಜೇ ಅರಸು ಮತ್ತು ಕೆಂಪರಾಜೇ ಅರಸು ಸಹ ತಮ್ಮ ಕಾರ್ಯಚಾಣಾಕ್ಷತನದಿಂದ ತಮ್ಮದೇ ಕ್ಷೇತ್ರದಲ್ಲಿ ಹೆಸರು ಸಂಪಾದಿಸಿಕೊಂಡವರು. ದೇವರಾಜ ಅರಸು ರಾಜಕೀಯ ಕ್ಷೇತ್ರದಲ್ಲಾದರೆ, ಸುಬ್ರಹ್ಮಣ್ಯರಾಜೇ ಅರಸು ಸಾಹಿತ್ಯ ಮತ್ತು ಕೆಂಪರಾಜೇ ಅರಸು ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿ ಇಂದಿಗೂ ಇವರ ಶಾಶ್ವತವಾಗಿ ಉಳಿದಿದ್ದಾರೆ.
ಕಲ್ಲಹಳ್ಳಿ ಗ್ರಾಮಕ್ಕೆ ಹಳೆ ಮೈಸೂರು ಭಾಗದಲ್ಲಿ ತನ್ನದೇ ವೈಶಿಷ್ಟತೆ ಇದ್ದು ರಾಜಕೀಯ ನಾಯಕರ ಅವಿನಾಭಾವ ಸಂಬಂಧ ಇಂದಿಗೆ ಬೆಸೆದುಕೊಂಡಿದ್ದು ದೇವರಾಜ ಅರಸು ಸ್ಮರಣೆ ನಡೆದಿದೆ. ಇದೇ ಗ್ರಾಮದ ಮಗನಾಗಿ ಹುಟ್ಟಿ ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಸುಬ್ರಹ್ಮಣ್ಯರಾಜೇ ಅರಸು ಮತ್ತು ಚಲನ ಚಿತ್ರ ಕ್ಷೇತ್ರದ ಕೆಂಪರಾಜೇ ಅರಸು ಅವರ ಸ್ಮರಣೆ ಕೆಲವೇ ಸೀಮಿತ ಜನರಿಗಷ್ಟೇ ಆಗಿದೆ.
ಮುದ್ದುರಾಜೇ ಅರಸು ಮತ್ತು ಮರುದೇವಮಣ್ಣಿ ದಂಪತಿಗೆ ಎರಡನೇ ಮಗನಾಗಿ ಕಲ್ಲಹಳ್ಳಿ ಗ್ರಾಮದಲ್ಲಿ ಸುಬ್ರಹ್ಮಣ್ಯರಾಜೇ ಅರಸು 1916ರ ಜನವರಿ 1ರಂದು ಜನಿಸಿದರು. ತಂದೆ ತಲಕಾಡು ಗಂಗರಸರ ವಂಶಕ್ಕೆ ಸೇರಿದ್ದು ತಾಯಿ ಮಂಗರಸ ಕವಿ ವಂಶಸ್ಥರಿಗೆ ಸೇರಿದ್ದು ಮೈಸೂರು ಒಡೆಯರ್ ವಂಶಕ್ಕೆ ಹತ್ತಿರದ ಸಂಬಂಧ ಹೊಂದಿದ್ದರು.
ರಾಜಮನೆತನ: ಸುಬ್ರಹ್ಮಣ್ಯರಾಜೇ ಅರಸು (ಚದುರಂಗ) ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರ್ ಸಹಪಾಠಿಯಾಗಿ ಮೈಸೂರಿನ ರಾಯಲ್ ಸ್ಕೂಲ್ನಲ್ಲಿ 10ನೇ ತರಗತಿ ವ್ಯಾಸಂಗ ನಂತರದಲ್ಲಿ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು ಪುಣೆಗೆ ಎಂ.ಎ. ವ್ಯಾಸಂಗಕ್ಕೆ ತೆರಳಿದರು. ಆ ನಂತರದಲ್ಲಿ ಹಲವು ತಿರುವುಗಳನ್ನು ಕಂಡರು. 1940ರಲ್ಲಿ ಅರಮನೆ ವಂಶಸ್ಥ ಕನ್ಯೆ ವಿವಾಹವಾಗಲು ನಿರಾಕರಿಸಿ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ರೈತ ಕುಟುಂಬದ ಕನ್ಯೆ ದೊಡ್ಡಮಣ್ಣಿ ಅವರನ್ನು ವಿವಾಹವಾಗಿ ಅರಮನೆ ಸಂಪರ್ಕಕ್ಕೆ ಕಡಿವಾಣ ಹಾಕಿ ನಂತರದಲ್ಲಿ ಸಾಮಾನ್ಯರಂತೆ ಬದುಕು ಆರಂಭಿಸಿದ್ದು ಇತಿಹಾಸ.
ಚದುರಂಗ ವೈವಾಹಿಕ ಜೀವನ ಕಲ್ಲಹಳ್ಳಿಯಲ್ಲಿ 1951 ರಿಂದ 1968, 8 ರಿಂದ 9 ವರ್ಷ ರೈತರಂತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಎದುರಾದ ಹಲವು ಸವಾಲುಗಳನ್ನು ಸ್ವಾಭಿಮಾನ ಹಾಗೂ ನಂಬಿಕೆ ಮೌಲ್ಯಗಳ ತಳಹದಿಯಲ್ಲಿ ಮೆಟ್ಟಿ ನಿಂತು ಗಾಂಧೀ ಅನುಯಾಯಿಯಾಗಿ ಹೊಸ ಬದುಕು ಆರಂಭಿಸಿದ್ದರು ಎನ್ನುವರು ಪುತ್ರ ನಿವೃತ್ತ ಪ್ರೊ. ವಿಕ್ರಂರಾಜೇ ಅರಸು. ಕಲ್ಲಹಳ್ಳಿಯಲ್ಲಿ ತಮಗಿದ್ದ 8 ಎಕರೆ ಭೂಮಿಯಲ್ಲಿ ಬೇಸಾಯದಲ್ಲಿ ತೊಡಗಿ ಗ್ರಾಮೀಣ ಜನಜೀವನ ಕಷ್ಟ ಸುಖವನ್ನು ವೈಯಕ್ತಿಕವಾಗಿ ಅನುಭವಿಸಿ ಅವುಗಳಿಂದ ಪ್ರೇರಿತರಾಗಿ ಅಕ್ಷರರೂಪದಲ್ಲಿ ಸಂಗ್ರಹಿಸಿದ್ದಾರೆ ಎನ್ನುವರು.

ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿರುವ ಕನ್ನಡ ಸಾಹಿತ್ಯ ಕ್ಷೇತ್ರದ ಅಗ್ರಗಣ್ಯ ಸಾಹಿತಿ ಸುಬ್ರಹ್ಮಣ್ಯರಾಜೇ ಅರಸು (ಚದುರಂಗ) ಅವರ ಮನೆ ಸ್ಥಳದಲ್ಲಿ ಸರ್ಕಾರ ಚದುರಂಗ ಭವನ ನಿರ್ಮಿಸಿರುವ ಚಿತ್ರ.
ತೊಟ್ಟಿಮನೆ: ಕಲ್ಲಹಳ್ಳಿ ಗ್ರಾಮ 16ನೇ ಶತಮಾನದಲ್ಲಿ ಮಂಗರಸರ ವಂಶಸ್ಥರ ಜೈನ ಕ್ಷೇತ್ರವಾಗಿದ್ದು ಈ ಗ್ರಾಮ ತನ್ನದೇ ಇತಿಹಾಸ ಹಿನ್ನಲೆ ಹೊಂದಿದೆ. 300 ವರ್ಷಗಳ ಇತಿಹಾಸದ 12 ಕಂಬಗಳ ತೊಟ್ಟಿ ಮನೆ ಸುಬ್ರಹ್ಮಣ್ಯರಾಜೇ ಅರಸು ಅವರ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದೆ. ತೊಟ್ಟಿ ಮನೆ ಸುತ್ತಲೂ ಮಣ್ಣಿನ ಕೋಟೆಯಿಂದ ಆವರಿಸಿ, ಮನೆಯಲ್ಲಿ 3 ಕೊಠಡಿ ಅಡುಗೆ ಮನೆ, ವಿಶಾಲವಾದ ಹಜಾರ, ಸೇರಿದಂತೆ ಮಧ್ಯದಲ್ಲಿ ಬಾವಿ ಈ ಎಲ್ಲವನ್ನು ಒಳಗೊಂಡಿದ್ದ ಮಣ್ಣಿನ ಮನೆ ತನ್ನದೇ ಪರಂಪರೆ ಹೊಂದಿತ್ತು.
ತೊಟ್ಟಿಮನೆಯಲ್ಲಿ ಒಂದು ಕೊಠಡಿ ಸುಬ್ರಹ್ಮಣ್ಯರಾಜೇ ಅರಸು ಸಾಹಿತ್ಯ ಕೃಷಿಗೆ ಸೀಮಿತವಾಗಿತ್ತು, ಹಲವು ಪುಸ್ತಕಗಳ ಹುಟ್ಟಿಗೆ ಕಲ್ಲಹಳ್ಳಿ ಗ್ರಾಮದ ಜನಜೀವನ ಪ್ರೇರಣೆಯಾಗಿ ಹಳ್ಳಿಯ ಸೊಗಡು ಹಿನ್ನಲೆಯಲ್ಲಿ ಸರ್ವಮಂಗಳ, ವೈಶಾಖ, ಹೆಜ್ಜಾಲ, ಉಯ್ಯಾಲೆ ಎಂಬ ಕೃತಿಗೆ ಪ್ರೇರಣೆಯಾಯಿತು. ತೊಟ್ಟಿ ಮನೆಯಲ್ಲಿ ಅಂಗಳದಲ್ಲಿ ಬೃಹತ್ ಬಾವಿ ತೋಡಿ ಅದನ್ನು ಜೀವನೋಪಾಯಕ್ಕೆ ಬಳಸುತ್ತಿದ್ದರು. ಹಿತ್ತಲಲ್ಲಿ ಹೈನುಗಾರಿಕೆ ಕೈ ತೋಟ ಹೊಂದಿದ್ದರು ಎನ್ನುವರು ಗ್ರಾಮದ ನಿವಾಸಿ ಶಿವಬಸಪ್ಪ ಮತ್ತು ಬೋಗಯ್ಯ.
ತೊಟ್ಟಿ ಮನೆ ಹಲವು ಇತಿಹಾಸಗಳಿಗೆ ಸಾಕ್ಷಿಯಾಗಿತ್ತಾದರೂ ಆ ಮನೆಯ ಸ್ವರೂಪ ಗ್ರಾಮದ ಕೆಲವು ನಿವಾಸಿಗರ ಸ್ಮೃತಿಪಟದಲ್ಲಿ ಉಳಿದಿದೆ, ತೊಟ್ಟಿ ಮನೆ ಜಾನಪದ ಕಲಾಶಿಲ್ಪಿ ಪಿ.ಆರ್.ತಿಪ್ಪೇಸ್ವಾಮಿ ಕುಂಚದಲ್ಲಿ ಅರಳಿದ ಚಿತ್ರ ಇಂದಿಗೂ ಕಾಣಬಹುದು.
ಸಾಹಿತ್ಯ ಮತ್ತು ಸಿನಿಮಾ: ಚದುರಂಗ ಕೃತಿ ಸರ್ವಮಂಗಳ, ಅವರೇ ನಿರ್ದೇಶಿಸಿ ಚಲನಚಿತ್ರ ನಿರ್ಮಿಸಿದರು. ಆ ಚಿತ್ರದಲ್ಲಿ ಗ್ರಾಮೀಣ ಸೊಗಡನ್ನು ಎಳೆ ಎಳೆಯಾಗಿ ಪರದೆ ಮೇಲೆ ತರುವ ಪ್ರಯತ್ನ ನಡೆಸಿದ್ದು, ಚಿತ್ರೀಕರಣ ಸಂಪೂರ್ಣ ಕಲ್ಲಹಳ್ಳಿ ಗ್ರಾಮದಲ್ಲೇ ನಡೆದಿತ್ತು. ಚಿತ್ರದಲ್ಲಿ ಗ್ರಾಮದ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಚಿತ್ರೀಕರಿಸಿದ್ದು ವಿಶೇಷ, ಕಥೆಯಲ್ಲಿ ವಿವಾಹದ ಸಂದರ್ಭದಲ್ಲಿ ವಧುವಿಗೆ ಸೀರೆ ನೀಡುವ ಚಿತ್ರೀಕರಣದಲ್ಲಿ ಗ್ರಾಮಸ್ಥರು ಸೀರೆ ಕೆಲವು ಆಭರಣ ಚದುರಂಗ ಅವರಿಗೆ ಕೊಡುಗೆ ನೀಡಿದ್ದರು. ಈ ಎಲ್ಲವೂ ಇಂದಿಗೂ ಮೈಸೂರಿನ ಜಯಚಾಮರಾಜೇಂದ್ರ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ.
ಚದುರಂಗ: ಸಾಮಾಜಿಕ ಕನಸುಗಾರ ಮಂಗರಸ ವಂಶಸ್ಥರಿಗೆ ಚದುರಂಗ ಆಟ ವರವಾಗಿತ್ತು, ಒಮ್ಮೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಚದುರಂಗದ ಆಟದಲ್ಲಿ ಮಂಗರಸ ವಂಶದ ಪೂರ್ವಜರು ಸೋಲಿಸಿದರು. ಇದರಿಂದ ಅರಸು ಮನೆತನಕ್ಕೆ ನಿಕಟ ಸಂಬಂಧಿ ಹಾಗೂ ಸಂಪರ್ಕ ಹೊಂದಿದ್ದ ಮಹಾರಾಜರು ಇರಿಸುಮುರಿಸಿನ ಅಸಮಾಧಾನಕ್ಕೆ ತುತ್ತಾಗಿದ್ದರು. ಆ ನಂತರದಲ್ಲಿ ಅರಮನೆ ಸಂಪರ್ಕ ಕಡಿತಗೊಂಡು ಕಲ್ಲಹಳ್ಳಿ ಗ್ರಾಮದಲ್ಲಿ ನೆಲೆಸಿದರು ಎಂಬ ಇತಿಹಾಸವಿದೆ. ತಂದೆ ಸುಬ್ರಹ್ಮಣ್ಯರಾಜೇ ಅರಸು ತಮ್ಮ ಸಾಹಿತ್ಯ ಕೃತಿಗಳನ್ನು ಚದುರಂಗ ಕಾವ್ಯನಾಮದಲ್ಲಿ ಹೊರ ತಂದರು ಎನ್ನುವರು ವಿಕ್ರಂರಾಜೇ ಅರಸು.

ಕಲ್ಲಹಳ್ಳಿ ಗ್ರಾಮಕ್ಕೆ ನಿರ್ಮಿಸಿರುವ ಸ್ವಾಗತ ಕಮಾನು.
ಕಲ್ಲಹಳ್ಳಿ ಗ್ರಾಮಕ್ಕೆ ವಿದ್ಯುತ್ ದೀಪ ತರುವಲ್ಲಿ ಮೂಲಪುರುಷರಾಗಿದ್ದ ಚದುರಂಗ, ನಂತರದಲ್ಲಿ ಆರ್ಥಿಕ ಸ್ಥಿತಿವಂತರು ವಿದ್ಯುತ್ ದೀಪ ಪಡೆಯಲು ಮುಂದಾದರು. ಬಯಲು ಶೌಚಾಲಯ ನಿಯಂತ್ರಣಕ್ಕೆ ಒತ್ತು ನೀಡಿ ನಾಗರಿಕರಿಗೆ ಜಾಗೃತಿ ಮೂಡಿಸಲು ರಾತ್ರಿ ಸೀಮೆ ಎಣ್ಣೆ ಲ್ಯಾಂಟಿನ್ ಹಿಡಿದು ಮನೆ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದರು ಎನ್ನುವರು ಗ್ರಾಮದ ನಿವಾಸಿ ಶಿವಬಸಪ್ಪ.
ಒಳಚರಂಡಿ: ನಗರ ಪ್ರದೇಶದಲ್ಲಿ ಒಳಚರಂಡಿ ಕಲ್ಪನೆ ಇಲ್ಲದ ಕಾಲದಲ್ಲಿ ಕಲ್ಲಹಳ್ಳಿ ಗ್ರಾಮಕ್ಕೆ ಒಳಚರಂಡಿ ತರುವ ಪ್ರಯತ್ನ ಚದುರಂಗ ಬ್ರಿಟಿಷ್ ಅಧಿಕಾರಿಯೊಂದಿಗೆ ಯೋಜನೆ ರೂಪಿಸಿದ್ದರು ಎನ್ನುವರು ಪುತ್ರ ಪ್ರೊ.ವಿಕ್ರಂರಾಜೇ ಅರಸು. ಹುಣಸೂರು ನಗರದ ಕಾಫಿ ವರ್ಕ್ಸ್ ಕಾರ್ಖಾನೆಯಲ್ಲಿ ಬ್ರಿಟಿಷ್ ಮೂಲದ ಎಂಜಿನಿಯರಿಂಗ್ ಅಧಿಕಾರಿಯಿಂದ ಯೋಜನೆ ಸಿದ್ದಪಡಿಸಿ ಅನುಷ್ಟಾನಕ್ಕೆ ಒತ್ತು ನೀಡಿ ಬಯಲು ಶೌಚಾಲಯಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೆಸಿದ್ದರು ಎನ್ನುವರು
ಕೃಷಿ ಭೂಮಿ: ಒಣಭೂಮಿ ಹೊಂದಿದ್ದ ಕಲ್ಲಹಳ್ಳಿ ರೈತಾಪಿ ಕುಟುಂಬ ಊಟಕ್ಕೆ ರಾಗಿ ಹೊರತುಪಡಿಸಿ ಬೇರಾವುದು ಇರಲಿಲ್ಲ. ಒಮ್ಮೆ ಅನ್ನದ ಖಾದ್ಯ ಪ್ರಸಂಗ ಎದುರಾಗಿ ಗ್ರಾಮಸ್ಥರು ರಾಗಿ ಬಿಟ್ಟು ಭತ್ತದ ಊಟ ಮಾಡಿಲ್ಲ ಎಂಬ ಹೇಳಿಕೆ ಇವರ ಮನಸ್ಸಿಗೆ ನಾಟಿ, ಆ ದಿನದಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲ್ಲೂಕಿನ ವಾರಂಚಿ ಗ್ರಾಮದಲ್ಲಿ ಕಾಡು ಕಡಿದು ಗದ್ದೆ ಬಯಲು ನಿರ್ಮಿಸಲು ಅವಕಾಶ ನೀಡುವಂತೆ ಮಾಡಿದ ಮನವಿಗೆ ಅಧಿಕಾರಿಗಳ ಸಹಮತದಿಂದ ಪ್ರತಿ ಕುಟುಂಬಕ್ಕೆ 2 ಎಕರೆ ವಾರಂಚಿ ಗ್ರಾಮದಲ್ಲಿ ಗದ್ದೆ ಹೊಂದಲು ಸಾಧ್ಯವಾಯಿತು. ಈಗಲೂ ಕೆಲವು ಕುಟುಂಬದವರು ಸುಬ್ರಹ್ಮಣ್ಯರಾಜೇ ಅರಸು ಸ್ಮರಿಸಿ ಊಟ ಮಾಡುತ್ತಿದ್ದಾರೆ ಎನ್ನುವರು ಗ್ರಾಮದ ನಿವಾಸಿ ಬೋಗಪ್ಪ.
10 ಕೋಟಿ: ದೇವರಾಜ ಅರಸು ಜನ್ಮ ಶತಮಾನೋತ್ಸವಕ್ಕೆ ರಾಜ್ಯ ಸರ್ಕಾರ ₹10 ಕೋಟಿ ಯೋಜನೆ ರೂಪಿಸಿ ಕಲ್ಲಹಳ್ಳಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿತ್ತು, ಅನುಷ್ಟಾನದ ಹಂತದಲ್ಲಿ ಸಮರ್ಪಕವಾಗಿ ಆಗದೆ ದೇವರಾಜ ಅರಸು ಹುಟ್ಟಿದ ಮನೆ ನಿರ್ವಹಣೆ ಇಲ್ಲದೆ ಈಗಲೂ ಮಳೆ ನೀರು ಸೋರುತ್ತಿದೆ. ಚದುರಂಗ ಅವರ ತೊಟ್ಟಿಮನೆಯನ್ನು ಸಮುದಾಯ ಭವನವನ್ನಾಗಿ ಮರು ನಿರ್ಮಾಣ ಮಾಡಿ ಅದರಲ್ಲಿ ಗ್ರಂಥಾಲಯ ಹಾಗೂ ಗ್ರಾಮದ ಚಟುವಟಿಕೆ ನಡೆಸಲು ಸೀಮಿತಗೊಳಿಸಿದ್ದರು.
ಚದುರಂಗ ಭವನ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಿದಾದರೂ ನಿರ್ವಹಣೆ ಇಲ್ಲದೆ ಪಾಳುಬಿದ್ದ ಕೊಂಪೆಯಾಗಿರುವುದು ವಿಪರ್ಯಾಸ ಎನ್ನುವರು ಶಿವಬಸಪ್ಪ.
ಕಲ್ಲಹಳ್ಳಿ ಗ್ರಾಮದಲ್ಲಿ ದೇವರಾಜ ಅರಸು ಹೆಸರಿನಲ್ಲಿ ವಸ್ತುಸಂಗ್ರಹಾಲಯ ನಿರ್ಮಿಸಬೇಕು, ಕಲ್ಲಹಳ್ಳಿ ಗ್ರಾಮದವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಬೇಕು ಎಂಬ ಕೂಗು ಸಾರ್ವಜನಿಕರ ಮತ್ತು ಪ್ರಗತಿಪರ ಸಂಘಟನೆಗಳದ್ದಾಗಿದ್ದು, ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಿ ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದ ದೇವರಾಜ ಅರಸು ಕುರಿತು ಸುಬ್ರಹ್ಮಣ್ಯರಾಜೇ ಅರಸು (ಚದುರಂಗ, ) ಕೆಂಪರಾಜೇ ಅರಸು ಕುರಿತು ಮಾಹಿತಿ ಕಣಜ ಯುವ ಪೀಳಿಗೆಗೆ ನೀಡಬೇಕು ಎಂಬ ಬೇಡಿಕೆ ಇದ್ದು ಆಳುವ ಸರ್ಕಾರ ಗಮನ ನೀಡಬೇಕಾಗಿದೆ ಎನ್ನುವರು ಗ್ರಾಮಸ್ಥರು.

