ಉಡುಪಿಯ ಕೋಟದಲ್ಲಿ ಹುಟ್ಟಿದ ಕಾರಂತರು 1930ರಲ್ಲಿ, ತಮ್ಮ ಇಪ್ಪತ್ತೆಂಟನೇ ವಯಸ್ಸಿನಲ್ಲಿ, ಪುತ್ತೂರಿಗೆ ಬಂದರು. ಇಲ್ಲಿ ಅವರು ಬರಹ, ರಂಗಭೂಮಿ, ಶಿಕ್ಷಣ ಎಲ್ಲದರಲ್ಲೂ ಹೊಸ ದಾರಿ ತುಳಿದರು. 1973ರಲ್ಲಿ ಸಾಲಿಗ್ರಾಮಕ್ಕೆ ತೆರಳುವವರೆಗೆ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಇದೇ ಅವರ ನೆಲೆಯಾಗಿತ್ತು. ಮನೆಗೆ ಅವರು ಇಟ್ಟ ಹೆಸರು 'ಬಾಲವನ'. ಕಿಂಡರ್ಗಾರ್ಟನ್ ಎಂಬ ಅರ್ಥದಲ್ಲಿ ಆ ಹೆಸರನ್ನು ಅವರು ತಮ್ಮ ಕನಸಿನ ಶಾಲೆಗೆ ಇಟ್ಟಿದ್ದರು.
''ಈಗ ನಾನು ವಾಸವಾಗಿರುವ ಮನೆಯಿರುವ ಸ್ಥಳ ನಮ್ಮ ಶಾಲೆಗಾಗಿ ಆರಿಸಿದ ತಾವಾಗಿತ್ತು'' ಎಂದು ಅವರ ಆತ್ಮಕಥೆಯಲ್ಲಿ ನೆನೆಸಿಕೊಂಡಿದ್ದಾರೆ. ಗುಡ್ಡದ ಮಗ್ಗುಲಿನ, ಕಾಡು ತುಂಬಿದ, ನೋಟಕ್ಕೆ ರಮಣೀಯವಾದ ಜಾಗ ಅದು. ಅದನ್ನು ಗೇಣಿಗೆ ಪಡೆದು, ಗೆಳೆಯ ಮೊಳಹಳ್ಳಿ ಶಿವರಾಯರ ನೆರವಿನಿಂದ ಅವರು ಕಟ್ಟಡವನ್ನು ಎಬ್ಬಿಸಿದರು.
ಬಾಲವನದ ನಿಜವಾದ ಕನಸು ಮೊಳಕೆಯೊಡೆದದ್ದು ಕಾರಂತರು ಹಾಗೂ ಅವರ ಆತ್ಮೀಯ ಒಡನಾಡಿ ಮೊಳಹಳ್ಳಿ ಶಿವರಾಯರು ಸೇರಿ ಉಪ್ಪಿನಂಗಡಿಯಲ್ಲಿ ಹಮ್ಮಿಕೊಂಡಿದ್ದ 'ಮಕ್ಕಳ ಕೂಟ'ಗಳಲ್ಲಿ. 1930ರಲ್ಲಿ ನದಿತೀರದ ಆ ಹಳ್ಳಿಯಲ್ಲಿ ನಡೆದ ಪ್ರಥಮ ಕೂಟದಲ್ಲಿ ಅಂದಾಜು ಅರವತ್ತು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಲ್ಲಿ ಅಂಕಗಳ ಒತ್ತಡದ ಪಾಠ-ಪರೀಕ್ಷೆಗಳಿರಲಿಲ್ಲ; ಬದಲಿಗೆ ಮಕ್ಕಳು ಮುಕ್ತವಾಗಿ ಕತೆ ಹೇಳಿದರು, ಹಾಡಿದರು, ಹೆಜ್ಜೆಹಾಕಿದರು.
''ನಿಮ್ಮೂರಲ್ಲಿ ಎಷ್ಟು ಬಣ್ಣದ ಮಣ್ಣುಗಳಿವೆ?'' ಎಂದು ಕಾರಂತರು ಮುಗ್ಧವಾಗಿ ಪ್ರಶ್ನಿಸಿದಾಗ, ಸ್ಥಳೀಯ ಉಪಾಧ್ಯಾಯರು ಕೇವಲ ನಾಲ್ಕಾರು ಎಂದರೆ ಒಬ್ಬ ಹುಡುಗ ಬರೋಬ್ಬರಿ ಹತ್ತೊಂಬತ್ತು ಬಣ್ಣದ ಮಣ್ಣನ್ನು ತಂದು ನೆಲದ ಮೇಲೆ ಅದ್ಭುತ ಚಿತ್ರ ಬರೆದಿದ್ದ! ಅದನ್ನು ಕಂಡು ಬೆರಗಾದ ಕಾರಂತರು, ''ಮಣ್ಣಿನಲ್ಲಿ ಆ ಹುಡುಗನಿಗೆ ಎಷ್ಟು ಪ್ರೀತಿಯಿದ್ದಿತ್ತೋ!'' ಎಂದು ಆಶ್ಚರ್ಯಚಕಿತರಾದರು. ಸಾಂಪ್ರದಾಯಿಕ ಶಾಲೆಗಳಲ್ಲಿ 'ಪಾಠಕ್ಕೆ ಬಾರದ ದಡ್ಡರು' ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿದ್ದ ಮಕ್ಕಳೇ ಅಲ್ಲಿ ಅಸಾಧಾರಣ ಸೃಜನಶೀಲ ಪ್ರತಿಭೆಗಳಾಗಿ ಮಿಂಚಿದರು.

ಶಿವರಾಮ ಕಾರಂತರ 'ಬಾಲವನ'
ಐದಾರು ವರ್ಷಗಳ ಕಾಲ ಸಾಗಿದ ಈ ಕೂಟಗಳಿಗೆ ಕೊನೆಕೊನೆಗೆ ಇನ್ನೂರಕ್ಕೂ ಹೆಚ್ಚು ಮಕ್ಕಳು ಸೇರತೊಡಗಿದರು. ಯಾವುದೇ ಬಲವಂತವಿಲ್ಲದ, ಮುಕ್ತ ಕಲಿಕೆಯೇ ಅವರ ನಂಬಿಕೆಯಾಗಿತ್ತು. ವಿಶೇಷವೆಂದರೆ, ಹಿಂದೂ, ಮುಸಲ್ಮಾನ, ಕ್ರೈಸ್ತ ಹಾಗೂ ಹರಿಜನ ಮಕ್ಕಳು ಯಾವುದೇ ಜಾತಿಭೇದದ ಹಂಗಿಲ್ಲದೆ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ಆ ಪದ್ಧತಿ ಅಂದಿನ ಕಾಲದಲ್ಲೊಂದು ದೊಡ್ಡ ಸಾಮಾಜಿಕ ಕ್ರಾಂತಿಯೇ ಆಗಿತ್ತು. ಶಿಕ್ಷಣ ಎನ್ನುವುದು ಕಂಠಪಾಠವಾಗದೆ ಹೀಗೆ ರಸವತ್ತಾದ ಬದುಕಿನ ಅನುಭವವಾಗಲಾರದೇ ಎಂಬ ಆಳವಾದ ಪ್ರಶ್ನೆಯೇ ಮುಂದೆ 'ಬಾಲವನ'ದ ಹುಟ್ಟಿಗೆ ಅಡಿಪಾಯವಾಯಿತು.
ಮಕ್ಕಳನ್ನು ನಾಲ್ಕು ಗೋಡೆಗಳ ಕೋಣೆಯಲ್ಲಿ ಕೂಡಿಹಾಕುವ ನಿರ್ಜೀವ ಶಿಕ್ಷಣ ಪದ್ಧತಿಯನ್ನು ಕಾರಂತರು ಎಂದಿಗೂ ಒಪ್ಪಲಿಲ್ಲ. ಬದಲಿಗೆ, ಮರ, ಹಕ್ಕಿ, ಮಣ್ಣು, ರಂಗಭೂಮಿ ಹಾಗೂ ಚಿತ್ರಕಲೆಯ ಸಾಂಗತ್ಯದಲ್ಲಿ ಪ್ರಕೃತಿಯೊಂದಿಗೆ ಬೆರೆತು ಕಲಿಯುವುದೇ ನಿಜವಾದ ಜ್ಞಾನಾರ್ಜನೆ ಎಂದು ಬಲವಾಗಿ ನಂಬಿದ್ದರು. ಆ ದೃಢ ನಂಬಿಕೆಯಿಂದಲೇ 1935ರಲ್ಲಿ ಪುತ್ತೂರಿನ ಪೆರ್ಲಡ್ಕದಲ್ಲಿ ನವೀನ ಶಾಲೆಯೊಂದು ಆರಂಭವಾಯಿತು. ಶಾಲೆಯ ಹಸಿರು ಆವರಣದಲ್ಲಿ ನವಿಲು, ಜಿಂಕೆಗಳ ಪುಟ್ಟ ಮೃಗಾಲಯವಿತ್ತು; ಮಕ್ಕಳ ಆಟಕ್ಕೆ ಆಟದ ರೈಲು ಹಾಗೂ ಜಾರುಬಂಡಿಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಪಾಠವೂ ಹಸನ್ಮುಖಿ ಆಟವಾಗಬೇಕೆಂಬುದೇ ಅವರ ಹಂಬಲವಾಗಿತ್ತು. ಆ ಶಾಲೆಯ ಖರ್ಚಿಗಾಗಿ ತಮ್ಮ ಸ್ವಂತ ಬರಹದ ದುಡಿಮೆಯ ಸಂಪತ್ತನ್ನೇ ಅವರು ಧಾರೆಯೆರೆದರು. ಆದರೂ, ತಮ್ಮ ಆಶಯದಂತೆ ಆ ಶಾಲೆ ಬೆಳೆಯಲಿಲ್ಲ ಎಂಬ ಕೊರಗು ಕಾರಂತರಲ್ಲಿ ಉಳಿಯಿತು.
ಆದರೆ ಆ ಮಣ್ಣಿನಲ್ಲಿ ಬಿತ್ತಿದ ಬೀಜ ಬೇರೊಂದು ರೂಪದಲ್ಲಿ ಫಲ ಕೊಟ್ಟಿತು. ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ 'ಮೂಕಜ್ಜಿಯ ಕನಸುಗಳು' ಹುಟ್ಟಿದ್ದು ಇದೇ ಮನೆಯಲ್ಲಿ. ಸತ್ಯವನ್ನು ಅರಸುತ್ತಾ ಸಮಾಜದ ಕಟ್ಟುಪಾಡುಗಳನ್ನು ಮೌನವಾಗಿಯೇ ಪ್ರಶ್ನಿಸುವ ಆ ಹಿರಿಯ ಜೀವದ ಚಿತ್ರಣ ಇಲ್ಲಿನ ಮರಗಳ ನೆರಳಲ್ಲೇ ರೂಪುಗೊಂಡಿತು. ಯಕ್ಷಗಾನ ಮತ್ತು ನಾನಾ ಕಲೆಗಳ ತರಗತಿಗಳು ನಿರಂತರವಾಗಿ ನಡೆದ 'ನಾಟ್ಯಶಾಲೆ' ಅವರ ಕ್ರಾಂತಿಕಾರಿ ರಂಗ ಪ್ರಯೋಗಗಳಿಗೆ ಸಾಕ್ಷಿಯಾಗಿ ಇಂದಿಗೂ ಇದೇ ಬಾಲವನದ ಆವರಣದಲ್ಲಿ ನಿಂತಿದೆ. ಅವರ 'ಬಾಲಪ್ರಪಂಚ' ವಿಶ್ವಕೋಶದ ಮುದ್ರಣದ ಕಾಯಕವೂ ಅಂದಿನ ದಿನಗಳಲ್ಲೇ ಸಂಪೂರ್ಣಗೊಂಡಿತು. ಹಾಗೆ ನೋಡಿದರೆ, ಮಕ್ಕಳಿಗಾಗಿ ಅವರು ಕಟ್ಟಿದ ಹಸಿರು ವನ ಕೊನೆಗೆ ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಅಕ್ಷರ ವನವಾಯಿತು.

ಬಾಲವನದಲ್ಲಿರುವ 'ಆರ್ಟ್ ಗ್ಯಾಲರಿ'

ಬಾಲವನದಲ್ಲಿರುವ 'ಅಧ್ಯಯನ ಕೇಂದ್ರ'

ಬಾಲವನದಲ್ಲಿರುವ 'ಗ್ರಂಥಾಲಯ'
ಕಾಲ ಉರುಳಿತು, ಕಾರಂತರ ನೆನಪುಗಳು ಮಾತ್ರ ಚಿರವಾಯಿತು. 1997ರಲ್ಲಿ ಮಣಿಪಾಲದಲ್ಲಿ ಅವರು ನಿಧನರಾದ ಬಳಿಕ ಸರ್ಕಾರದ ವಶದಲ್ಲಿದ್ದ ಆ ಐತಿಹಾಸಿಕ ಮನೆ ಶಿಥಿಲವಾಯಿತು. ಆದರೆ, ಪುತ್ತೂರಿನ ಪ್ರಜ್ಞಾವಂತರು ಸುಮ್ಮನಿರದೆ ಡಾ. ಅಮೃತ ಮಲ್ಲ ಅವರ ನೇತೃತ್ವದಲ್ಲಿ 'ಕಾರಂತ ಮನೆ ಉಳಿಸಿ' ಹೋರಾಟ ಹೂಡಿದರು. 'ಇಂಟ್ಯಾಕ್' ಸಂಸ್ಥೆ ಮೂಲ ಸಾಮಗ್ರಿಗಳನ್ನೇ ಬಳಸಿ ಆ ಮನೆಯನ್ನು ಪುನರುಜ್ಜೀವನಗೊಳಿಸಿತು. 2016ರ ಅಕ್ಟೋಬರ್ನಲ್ಲಿ ಪೂರ್ಣಗೊಂಡ ಈ ಕಾರ್ಯದಲ್ಲಿ, ಕಾರಂತರ ಓದುಕೋಣೆಯನ್ನು ಅವರ 119ನೇ ಜನ್ಮದಿನದಂದು(ಅಕ್ಟೋಬರ್ 10) ಸಾರ್ವಜನಿಕವಾಗಿ ಮುಕ್ತಗೊಳಿಸಲಾಯಿತು. ಇಂದು ಅಲ್ಲಿರುವ ಅವರ ಅಪರೂಪದ ಫೋಟೋಗಳು ಹಾಗೂ ಬಳಸಿದ ವಸ್ತುಗಳು ಗತಕಾಲವನ್ನು ನೆನಪಿಸುತ್ತವೆ.
ಬಾಲವನ ಈಗ ಮಕ್ಕಳ ಆಟದ ತಾಣ, ಕಲಾ ಗ್ಯಾಲರಿ, ಬಯಲು ರಂಗಮಂದಿರ ಮತ್ತು ಈಜುಕೊಳ ಇರುವ ಪ್ರವಾಸಿ ಕೇಂದ್ರವೂ ಹೌದು. ಅಲ್ಲಿ ಬಂದು ಆಡುವ ಇಂದಿನ ಮಕ್ಕಳಿಗೆ ಈ ನೆಲದ ಇತಿಹಾಸ ತಿಳಿದಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಕಾರಂತರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರ ಮಗಳು, ನೃತ್ಯ ಕಲಾವಿದೆ ಕ್ಷಮಾ ರಾವ್ ಅವರು ಇಲ್ಲಿನ ಬೆಳವಣಿಗೆಗಳು ಕಾರಂತರ ಆದರ್ಶಗಳಿಂದ ದೂರ ಸರಿದಿವೆ ಎಂದು ಸಾರ್ವಜನಿಕವಾಗಿಯೇ ಬೇಸರ ವ್ಯಕ್ತಪಡಿಸಿದರು. ಅದು ಒಬ್ಬ ಮಗಳ ನೋವಷ್ಟೇ ಅಲ್ಲ, ಕಾರಂತರ ಆಶಯಗಳ ಬಗೆಗಿನ ಕಳಕಳಿಯೂ ಆಗಿತ್ತು. ಸ್ಥಳೀಯ ಆಡಳಿತ ಅಭಿವೃದ್ಧಿಪಡಿಸಿದ ಈಜುಕೊಳ ಇಂದಿಗೂ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿ ಕಾರಂತರು ನೆಟ್ಟಿದ್ದ ಹಣ್ಣಿನ ಮರಗಳನ್ನು ಕಡಿಯಲಾಯಿತು ಎಂಬ ಆಕ್ಷೇಪ ಅಭಿಮಾನಿಗಳದ್ದು. ಮರಗಳನ್ನು ಪ್ರೀತಿಸಿದ ಮನುಷ್ಯನ ನೆನಪಿಗೆ ಮರಗಳನ್ನೇ ಬಲಿಕೊಡುವುದು ವಿಪರ್ಯಾಸವಲ್ಲವೇ?
ರಾಜ್ಯೋತ್ಸವದ ಈ ಹೊತ್ತಿನಲ್ಲಿ ನಾವು ಕವಿ, ಸಾಹಿತಿಗಳ ಹೆಸರನ್ನು ವೇದಿಕೆಯಿಂದ ಸ್ಮರಿಸುತ್ತೇವೆ. ಆದರೆ ಅವರು ಬದುಕಿದ ನೆಲೆಗಳನ್ನು ಮರೆತುಬಿಡುತ್ತೇವೆ. ಭಾಷೆಯನ್ನು ಉಳಿಸುವುದು ಎಂದರೆ ಘೋಷಣೆ ಕೂಗುವುದಷ್ಟೇ ಅಲ್ಲ, ಅದನ್ನು ಬದುಕಿದವರ ನೆನಪನ್ನು, ನೆಲೆಯನ್ನು ಮತ್ತು ಆಶಯಗಳನ್ನು ಜೋಪಾನ ಮಾಡುವುದೂ ಹೌದು.

ಪುತ್ತೂರಿನಲ್ಲಿರುವ ಬಾಲವನ ಬರುವ ವೀಕ್ಷಕರಿಗೆ ದುರ್ನಾತ ಬೀರುವ ಚರಂಡಿಯೊಂದಿಗೆ ಸ್ವಾಗತ ನೀಡುತ್ತಿದೆ
''ಓದು ಪರೀಕ್ಷೆಗಾಗಿ ಮಾತ್ರ, ದುಡಿಮೆ ಸಂಬಳಕ್ಕಾಗಿ ಮಾತ್ರ'' ಎಂಬ ಮನೋಭಾವವನ್ನು ಕಾರಂತರು ತಮ್ಮ ಆತ್ಮಕಥೆಯಲ್ಲೇ ಕಟುವಾಗಿ ಟೀಕಿಸಿದ್ದಾರೆ. ಆ ಮಾತು ಇಂದಿಗೂ ನಮ್ಮ ಶಿಕ್ಷಣಕ್ಕೆ ಕನ್ನಡಿ ಹಿಡಿಯುತ್ತದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಲ್ಲ, ಮಕ್ಕಳನ್ನು ಪ್ರಕೃತಿಯ ಮಡಿಲಲ್ಲಿ ಬೆಳೆಸುವ, ಕಲೆಯನ್ನು ಕಲಿಕೆಯ ಭಾಗವಾಗಿಸುವ, ಸತ್ಯವನ್ನು ಧೈರ್ಯದಿಂದ ಹೇಳುವ ವಿಶಾಲ ಜೀವನದೃಷ್ಟಿ. ಕಾರಂತರು ಬಿಟ್ಟುಹೋದ ಈ ಜೀವಪರ ಆಶಯಗಳು ಕೇವಲ ನೆನಪಿನ ಮಾತುಗಳಾಗಿ ಉಳಿಯಬಾರದು. ಅವರು ಕಟ್ಟಿ ಬೆಳೆಸಿದ ಈ ನೆಲದ ಕಣಕಣದಲ್ಲೂ ಅವು ಮೈವೆತ್ತಿ ನಿಲ್ಲಬೇಕು. ಕೇವಲ ಗೋಡೆಗಳ ಸ್ಮಾರಕ ಉಳಿದರೆ ಸಾಲದು, ಅದರ ಆತ್ಮವೂ ಜೀವಂತವಾಗಿರಬೇಕು.
(ಲೇಖಕರು - ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕನ್ನಡ ವಿಭಾಗದಲ್ಲಿ ಪಿಎಚ್.ಡಿ ಸಂಶೋಧಕ)

