ಸುರಂಗ, ಟನಲ್ ಎಂದ ಕೂಡಲೇ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ಮಿಸಲಾಗುತ್ತಿರುವ ಸುರಂಗ ರಸ್ತೆಯದ್ದೇ ಮಾತು. ಪರ-ವಿರೋಧದ ನಡುವೆ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೆ, 16 ಕೆರೆಗಳಲ್ಲಿ ಈಗಾಗಲೇ ಸುರಂಗ ನಿರ್ಮಾಣವಾಗಿದೆ. ಇದಕ್ಕೆ ಯಾರ ವಿರೋಧವೂ ಇಲ್ಲ, ಬದಲಿಗೆ ಇಂತಹದ್ದೊಂದು ಸುರಂಗವನ್ನು ನಾವೂ ನಿರ್ಮಿಸಬಹುದಲ್ಲವೇ ಎಂಬ ಪ್ರೇರಣೆ ದೊರೆಯುತ್ತದೆ.
ಏಕೆಂದರೆ ಇದು 'ಹಸಿರು ಸುರಂಗ'. ನಿನ್ನೆ-ಮೊನ್ನೆ ಇದು ನಿರ್ಮಾಣವಾಗಿರುವುದಲ್ಲ. 10 ವರ್ಷಕ್ಕೂ ಹೆಚ್ಚಿನ ಪರಿಶ್ರಮದಿಂದ ಕೆರೆಗೆಳಲ್ಲಿ ಹಸಿರು ಸುರಂಗವಾಗಿ, ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿದೆ.
'ಕೆರೆಯು ಪ್ರಕೃತಿಯಿಂದ ಬಿಡಿಸಲ್ಪಟ್ಟ ಒಂದು ಕ್ಯಾನ್ವಾಸ್. ಈ ಮೇರುಕೃತಿಯು ಯಾವಾಗಲೂ ಜೀವಂತ ಮತ್ತು ರೋಮಾಂಚಕವಾಗಿ ಉಳಿಯುವಂತೆ ನೋಡಿಕೊಳ್ಳುವ ರಕ್ಷಕರು ನಾವಾಗೋಣ...' ಎಂಬುದು ಬಾಲಾಜಿ ರಘೋತ್ತಮ್ ಬಾಲಿ ಅವರ ಮಾತು. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಇವರು ಕಳೆದ 20 ವರ್ಷಗಳಲ್ಲಿ ಬಹುತೇಕ ಮುಂಜಾನೆಗಳನ್ನು ಹಸಿರಿಗಾಗಿ ಮುಡುಪಿಟ್ಟಿದ್ದಾರೆ. ಉದ್ಯೋಗದ ಸಮಯವನ್ನು ಹೊರತುಪಡಿಸಿದರೆ, ವಾರ್ಷಿಕವಾಗಿ ಸುಮಾರು 300 ದಿನದಲ್ಲಿ ತಮಗಾಗಿ ಉಳಿದ ಸಮಯದಲ್ಲಿ ಬಹುತೇಕ ಅವಧಿಯನ್ನು ಹಸಿರು ಬೆಳೆಸಿ, ಉಳಿಸಿ, ಸಂರಕ್ಷಿಸುವಲ್ಲಿ ಕಳೆದಿದ್ದಾರೆ, ಕಳೆಯುತ್ತಿದ್ದಾರೆ. ಹೀಗಾಗಿ, ನಗರ ಪೂರ್ವ ಭಾಗದ ಕೆರೆಗಳು ಹಸಿರು ಹೊದಿಕೆಯನ್ನು ಹೊದ್ದು, ಪ್ರಕೃತಿಯ ನೈಜ ಸೊಬಗನ್ನು ಪಸರಿಸುತ್ತಿವೆ.
PV Web Exclusive-ಪ್ರಕೃತಿ ಮಡಿಲು| ಜಲಪಾತಗಳ ನೀರು ಕುಡಿಯದಿರಿ... ಅದು ಅಶುದ್ಧ!ಸಾವಿರ ಕೆರೆಗಳ ನಗರಿ ಬೆಂಗಳೂರಿನಲ್ಲಿ ಅಳಿದುಳಿದಿರುವ ಕೆರೆಗಳಲ್ಲಿ ಸ್ವಯಂಸೇವಕರು ಸಾಕಷ್ಟು ಕೆಲಸ ಮಾಡಿ, ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಬಾಲಿ ಅವರು ಯಾವುದೇ ರೀತಿಯ ಸಹಾಯಹಸ್ತ ಚಾಚದೆ ತಮ್ಮದೇ ಉಳಿತಾಯವನ್ನು ಹಸಿರು ಬೆಳೆಸಲು ಬಳಸಿಕೊಳ್ಳುತ್ತಿದ್ದಾರೆ. ಸೀಗೇಹಳ್ಳಿ ಕೆರೆ, ಬಸವನಪುರ ಕೆರೆ, ಭಟ್ಟರಹಳ್ಳಿ ಕೆರೆ, ಹೂಡಿ ಕೆರೆ, ಗಂಗಾಶೆಟ್ಟಿ ಕೆರೆ, ಬೆನ್ನಿಗಾನಹಳ್ಳಿ ಕೆರೆ, ಕೌದೇನಹಳ್ಳಿ ಕೆರೆ, ವಾರಣಾಸಿ ಕೆರೆ, ಹೊಸಕೋಟೆ ಕೆರೆಗಳಲ್ಲಿ ಮುಂಜಾನೆಯಿಂದ ಗಿಡಗಳನ್ನು ರಕ್ಷಿಸುವುದೇ ಕಾಯಕ. ಒಂದೊಂದು ಕೆರೆಗೆ ಒಂದೊಂದು ದಿನ ಎಂಬ ವೇಳಾಪಟ್ಟಿಯನ್ನು ನಿಗದಿಪಡಿಸಿಕೊಂಡು ಕಾರ್ಯಕ್ಷೇತ್ರ ವೃದ್ಧಿಸಿಕೊಳ್ಳುತ್ತಿದ್ದಾರೆ. ಇವರ ಕೆಲಸದಿಂದ ಪ್ರೇರಣೆಗೊಂಡು, ಸ್ವಯಂಸೇವಕರಾಗಿ ಹಸಿರು ಬೆಳೆಸಲು ಮುಂದಾದವರಿಗೆ ಆ ಕೆರೆಯ ಅಂಗಳದಲ್ಲಿ ಹಸಿರು ಬೆಳೆಸುವ ಕಾಯಕವನ್ನು ಒಪ್ಪಿಸುತ್ತಿದ್ದಾರೆ.
ಕೆರೆಯ ಅಂಗಳದಲ್ಲಿ ವಾಯುವಿಹಾರಕ್ಕಾಗಿ ವಾಕಿಂಗ್ ಟ್ರ್ಯಾಕ್ ಇರುತ್ತದೆ. ಇದನ್ನೇ ಮೂಲ ಗುರಿಯನ್ನಾಗಿರಿಸಿಕೊಂಡಿರುವ ಬಾಲಿ, ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳು ಸುರಂಗ ಮಾರ್ಗವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಗಿಡಗಳು ಬೆಳೆದು ಮರಗಳಾದ ಮೇಲೆ ಅವುಗಳ ರೆಂಬೆಗಳು ಹರಡಿಕೊಂಡು, ಪರಸ್ಪರ ತಾಕಿಕೊಂಡಾಗ 'ಹಸಿರು ಸುರಂಗ ಮಾರ್ಗ' ಸೃಷ್ಟಿಯಾಗುತ್ತದೆ. ಇದು ಒಂದೆರಡು ದಿನ ಅಥವಾ ತಿಂಗಳಲ್ಲಾಗುವ ಕೆಲಸವಲ್ಲ. ಹಲವು ವರ್ಷಗಳನ್ನು ಇದು ಬೇಡುತ್ತದೆ. ಅದಾದ ಮೇಲೆ ಪರಿಶ್ರಮಕ್ಕೆ ತಕ್ಕ ಫಲ ನೀಡುತ್ತದೆ. ಮುಂಜಾನೆ ವಾಯುವಿಹಾರವನ್ನು ತಪ್ಪಿಸಿಕೊಳ್ಳುವ, ಸೂರ್ಯ ಹುಟ್ಟಿ ಕೆಲವು ಗಂಟೆಗಳಾದ ಮೇಲೆ ಕಣ್ಣೊರೆಸಿಕೊಂಡು ಏಳುವ ಜನರಿಗೆ ಬಿಸಿಲಿನ ಸಬೂಬು ನೀಡಿ ನಡಿಗೆಯನ್ನು ತಪ್ಪಿಸಿಕೊಳ್ಳಲು 'ಹಸಿರು ಸುರಂಗ' ಅವಕಾಶ ನೀಡುವುದಿಲ್ಲ. ಅವರಿಗೆ ಹಸಿರ ಪರಿಸರದಲ್ಲಿ ನಡೆದಾಡಲು ಇನ್ನಷ್ಟು ಪ್ರೇರೇಪಣೆ ನೀಡುತ್ತಿದೆ.
PV Web Exclusive-ಪ್ರಕೃತಿ ಮಡಿಲು| ಹಳ್ಳದಲ್ಲಲ್ಲ, ಹೃದಯದಲ್ಲಿ ನದಿ ಹರಿಯಲಿ!'ನಾನು 'ಹಸಿರು ಸುರಂಗ' ಉಪಕ್ರಮವನ್ನು ವಿವಿಧ ಕೆರೆಗಳಲ್ಲಿ ಕೈಗೆತ್ತಿಕೊಂಡಿದ್ದೇನೆ. ಬೆಂಗಳೂರಿಗನಾಗಿ ಕೆರೆಗಳನ್ನು ಉಳಿಸಲು ಸ್ವಯಂಸೇವಕನಾಗಿ ಕೆಲಸ ಮಾಡುತ್ತೇನೆ. ಗಿಡ ನೆಡುವ ಅಭಿಯಾನವೂ ಇದರ ಒಂದು ಭಾಗವಾಗಿದೆ. ಈ 'ಕೆರೆಗಳನ್ನು ಉಳಿಸಿ' ಕಾರ್ಯಕ್ರಮದ ಅಡಿಯಲ್ಲಿ ಅನೇಕ ಉಪಕ್ರಮಗಳಿವೆ. 'ಕೆರೆ ಪರಿಸರಕ್ಕೆ ಶನಿವಾರ', 'ವಲಂಟಿಯರಿಂಗ್ ಸಂಡೆ' (ಸ್ವಯಂಸೇವಕ ಭಾನುವಾರ), 'ಐ ಡಿಡ್ ಮೈ ಬಿಟ್ ಟು ದಿಸ್ ಲೇಕ್' (ಈ ಕೆರೆಗಾಗಿ ನನ್ನದೂ ಒಂದು ಅಳಿಲು ಸೇವೆ), 'ಕ್ಯಾನ್ ಭಗೀರಥ', 'ಏಪ್ರಿಲ್ ಕೂಲ್', 'ಬ್ರಿಂಗ್ ವಾಟರ್ ಫ್ರಮ್ ಹೋಮ್' (ಮನೆಯಿಂದ ನೀರು ತನ್ನಿ) ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಇದು ವಾಯುವಿಹಾರ ಮಾಡುವ ಉತ್ಸಾಹಿಗಳಿಗೆ ಮತ್ತು ಸ್ವಯಂಸೇವಕರಿಗೆ ಇದರ ಭಾಗವಾಗಲು ಪ್ರೇರಣೆ ಮತ್ತು ಸ್ಫೂರ್ತಿ ನೀಡುತ್ತದೆ. ಬೆಂಗಳೂರಿನ ಕೆರೆಗಳ ವೈಭವ ಹಾಗೂ ಉದ್ಯಾನ ನಗರಿಯ ಚಂದವನ್ನು ಮರಳಿ ತರುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ' ಎಂದು ಬಾಲಾಜಿ ರಘೋತ್ತಮ್ ಬಾಲಿ ಹೇಳಿದರು.
'ಪ್ರತಿ ವರ್ಷ ನಾನು ಸ್ವಯಂಸೇವಕನಾಗಿ ಒಂದು ಕೆರೆಯನ್ನು ಕೈಗೆತ್ತಿಕೊಳ್ಳುತ್ತೇನೆ. ಸ್ವಯಂಸೇವಕನಾಗಿ ಕೆಲಸ ಮಾಡುವಾಗ ಪ್ರತಿ ಕೆರೆಯಲ್ಲೂ ಕೆಲವು ಸ್ವಯಂಸೇವಕರು ನನ್ನೊಂದಿಗೆ ಕೈಜೋಡಿಸುತ್ತಾರೆ. ಅವರು ಆಸಕ್ತಿ ವಹಿಸಿ ಮುಂದುವರಿಸಲು ಬಯಸಿದಾಗ ಅವರಿಗೆ ಆ ಕೆರೆಯ ಜವಾಬ್ದಾರಿ ವಹಿಸುತ್ತೇನೆ. ಅದರಂತೆ, ವಾರಣಾಸಿ ಕೆರೆಯಲ್ಲಿ ಕೇಶವ್, ಪಾಪಣ್ಣ, ರಾಮಣ್ಣ, ಪ್ರಣವ್; ಬೆನ್ನಿಗಾನಹಳ್ಳಿ ಕೆರೆಯಲ್ಲಿ ಸುಬ್ರಮಣಿಯನ್, ಅಂಬರೀಶ್, ಗಂಗಾಶೆಟ್ಟಿ ಕೆರೆಯಲ್ಲಿ ಶೇಷಪ್ಪ, ಮುನಿರಾಜು, ಮುರಳಿ, ಸೂರಿ; ಸೀಗೇಹಳ್ಳಿ ಕೆರೆಯಲ್ಲಿ ವಿಶ್ವ, ಹರಿ, ರಾಮರಾವ್ ಮತ್ತು ನಂದಾ ಅವರು ಹಸಿರು ಬೆಳೆಸುವ ಕಾಯಕವನ್ನು ಮುಂದುವರಿಸಿದ್ದಾರೆ. ಇವರೆಲ್ಲರ ಪರಿಶ್ರಮದಿಂದ 'ಹಸಿರು ಸುರಂಗ' ನಿರ್ಮಾಣವಾಗುತ್ತಿದೆ' ಎಂದು ಮಾಹಿತಿ ನೀಡಿದರು.
ಹಕ್ಕಿಗಳನ್ನು ಆಕರ್ಷಿಸುವ, ಹಣ್ಣು ಬಿಡುವ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಹಲಸು, ಪೇರಲ (ಸೀಬೆಹಣ್ಣು), ಸೀತಾಫಲ, ನೇರಳೆ, ಬಾದಾಮಿ, ಬೆಟ್ಟದ ನಲ್ಲಿಕಾಯಿ, ಚಿಕ್ಕೂ (ಸಪೋಟ) ಇತ್ಯಾದಿ ಗಿಡಗಳನ್ನು ಹೆಚ್ಚಾಗಿ ನೆಡುತ್ತಿದ್ದೇವೆ. ಸುಮಾರು ಇಪ್ಪತ್ತುವ ವರ್ಷಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಇದರಲ್ಲಿ ಬಹುತೇಕ ಮರಗಳಾಗಿವೆ ಎಂದು ಅಂಕಿ-ಅಂಶ ನೀಡಿದರು.
PV Web Exclusive: ಪ್ರಕೃತಿ ಮಡಿಲು, ಕೆರೆಯಲ್ಲೇ ಕೊಳೆಯುವುದು ಕೊಳಕು!ಬಾಲಾಜಿ ಬಾಲಿ ಅವರ ಬಗ್ಗೆ ಹೇಳುವುದಾದರು...
ಬೆಂಗಳೂರಿನವರಾದ ಬಾಲಾಜಿ ಅವರು ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಕ್ಷೇತ್ರದಲ್ಲಿ ತಮ್ಮದೇ ಆದ ಅಳಿಸದ ಮುದ್ರೆಯನ್ನು ಒತ್ತಿದ್ದಾರೆ. 1974ರಲ್ಲಿ ಜನಿಸಿದ ಅವರು, ತಮ್ಮ ಜ್ಞಾನ ಮತ್ತು ಉತ್ಸಾಹವನ್ನು 'ರಾಷ್ಟ್ರೀಯ ಸೇವೆ' ಎಂದು ಸೂಕ್ತವಾಗಿ ಬಣ್ಣಿಸುವ ಕಾರ್ಯಕ್ಕೆ ಧಾರೆ ಎರೆದಿದ್ದಾರೆ. ಇವರ ಈ ಪಯಣವು 1991ರಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಅವರು ಬೆಂಗಳೂರಿನ 16 ಕೆರೆಗಳ ನಿರ್ವಹಣೆ ಮತ್ತು ಪುನರುಜ್ಜೀವನದ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ. ಬೆಂಗಳೂರು ಪ್ರದೇಶದ ಹಲವಾರು ಕೆರೆಗಳ ಪುನಶ್ಚೇತನವನ್ನು ಕೈಗೆತ್ತಿಕೊಳ್ಳಲು ಮತ್ತು ಅದಕ್ಕಾಗಿ ಶ್ರಮಿಸಲು ಅವರು ತೋರಿರುವ ಸ್ವಯಂಪ್ರೇರಿತ ಪ್ರಯತ್ನಗಳಲ್ಲಿ ಪರಿಸರ ಸಂರಕ್ಷಣೆಯ ಮೇಲಿನ ಅವರ ಗಮನಾರ್ಹ ಸಮರ್ಪಣಾ ಭಾವ ಎದ್ದು ಕಾಣುತ್ತದೆ. ಸೀಗೇಹಳ್ಳಿ ಕೆರೆ, ಭಟ್ಟರಹಳ್ಳಿ ಕೆರೆ, ಹೂಡಿ ಕೆರೆ, ಕೆ.ಆರ್. ಪುರಂ ಕೆರೆ, ಗಂಗಾಶೆಟ್ಟಿ ಕೆರೆ, ವಾರಣಾಸಿ ಕೆರೆ ಮತ್ತು ಇತರ ಹಲವು ಕೆರೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕೆರೆಗಳ ಅಭಿವೃದ್ಧಿಗೆ ಇವರು ಬದ್ಧರಾಗಿದ್ದಾರೆ.
ಇತ್ತೀಚೆಗೆ ಪುನಶ್ಚೇತನಗೊಂಡ ಕೆರೆಗಳ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವ ಸಮೀಕ್ಷಾ ತಂಡಗಳ ಸದಸ್ಯರಾಗಿಯೂ ಬಾಲಾಜಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಹಲವಾರು ಕೆರೆಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಸಮೀಕ್ಷೆಯ ಪ್ರಯತ್ನಗಳಿಗೆ ಕೊಡುಗೆ ನೀಡುವ ಮೂಲಕ, ಬಾಲಾಜಿ ಅವರು ಬೆಂಗಳೂರಿನ ನೈಸರ್ಗಿಕ ಜಲಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಕಾರ್ಯದ ಬಗ್ಗೆ ತಮಗಿರುವ ಅಚಲವಾದ ಸಮರ್ಪಣೆಯನ್ನು ಪ್ರದರ್ಶಿಸುತ್ತಾರೆ. ಅವರ ಕೆಲಸವು ತಳಮಟ್ಟದ ಪರಿಸರ ಕ್ರಿಯಾಶೀಲತೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ಒಂದು ಸ್ಪೂರ್ತಿದಾಯಕ ಉದಾಹರಣೆಯಾಗಿದೆ.
ಬಾಲಾಜಿ ಅವರ ಬದ್ಧತೆಯು ಕೇವಲ ಕೆರೆಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿಲ್ಲ. ಅವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದೀವಟಿಗೆಯಾಗಿದ್ದು, ನಿರಂತರವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮತ್ತು ಪ್ರಭಾವಶಾಲಿ ಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅವರ ಗಮನಾರ್ಹ ಉಪಕ್ರಮಗಳಲ್ಲಿ ಒಂದಾದ 'ಒಂದು ಮನೆ ಎರಡು ಗಿಡ' ಎಂಬುದು ಅವರ ಕೆಲಸದ ಸಾರವನ್ನು ಸಾರುತ್ತದೆ. 'ಪರಿಸರಕ್ಕೆ ಶನಿವಾರ' ಕಾರ್ಯಕ್ರಮದ ಮೂಲಕ ಅವರು ಪರಿಸರ ಉಸ್ತುವಾರಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತಾರೆ. ಅವರ ಇತರ ಉಪಕ್ರಮಗಳಲ್ಲಿ 'ವಲಂಟಿಯರಿಂಗ್ ಸಂಡೆ' (ಸ್ವಯಂಸೇವಕ ಭಾನುವಾರ), 'ಶಾಲಾ ಮಕ್ಕಳಿಗಾಗಿ ನೀರುಣಿಸುವ ದಿನ' ಮತ್ತು 'ಕೆರೆಯ ಸಸಿಗಳಿಗಾಗಿ ಮನೆಯಿಂದ ನೀರು ತನ್ನಿ' ಸೇರಿವೆ.
'ಐ ಡಿಡ್ ಮೈ ಬಿಟ್ ಟು ದಿಸ್ ಲೇಕ್' (ಈ ಕೆರೆಗಾಗಿ ನನ್ನದೂ ಒಂದು ಅಳಿಲು ಸೇವೆ) ಎಂಬುದು ಕೆರೆಗಳ ರಕ್ಷಣೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ನಿವಾಸಿಗಳಿಗೆ ಪ್ರೇರಣೆ ನೀಡುವ ಮತ್ತೊಂದು ಪ್ರಯತ್ನವಾಗಿದೆ. ಸಾರ್ವಜನಿಕರು ತಮ್ಮ ಸ್ಥಳೀಯ ಕೆರೆಗಳ ಮಾಲೀಕತ್ವವನ್ನು ವಹಿಸಿಕೊಳ್ಳಲು, ಅಲ್ಲಿ ಕಸ ಮತ್ತು ತ್ಯಾಜ್ಯಗಳನ್ನು ಎಸೆಯುವುದನ್ನು ತಡೆಯಲು ಇದು ಒಂದು ಸ್ಪಷ್ಟ ಕರೆಯಾಗಿದೆ. ನಗರದ ನೈಸರ್ಗಿಕ ಸೌಂದರ್ಯವನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿರುವ ಸಸಿ ನೆಡುವ ಅಭಿಯಾನಗಳು ಮತ್ತು ಇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಹ ಅವರ ಬೆಂಬಲಕ್ಕೆ ನಿಂತು ಕೈಜೋಡಿಸಿದ್ದಾರೆ.
'ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುವ ಬದಲು, ನಮ್ಮ ಶಕ್ತಿಯನ್ನು ಸ್ವಯಂಸೇವಕ ವೃತ್ತಿ, ಗಿಡಗಳನ್ನು ನೆಡುವುದು ಮತ್ತು ಸ್ವಚ್ಛ ನಗರವನ್ನು ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಳಸೋಣ' ಎಂಬುದು ಬಾಲಿ ಅವರ ಸ್ಫೂರ್ತಿದಾಯಕ ಮಾತುಗಳು.
ಬಾಲಾಜಿ ರಘೋತ್ತಮ್ ಬಾಲಿ ಅವರ ಸಂಪರ್ಕ: 74118 66797

