ಕಾಪು (ಪಡುಬಿದ್ರಿ): 'ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದಾಗಿ ಜನರಿಗೆ ಸಮಸ್ಯೆಗಳು ಉಂಟಾದರೆ ಕೂಡಲೇ ಸ್ಪಂದಿಸಿ ಪರಿಹಾರದ ಮೊತ್ತವನ್ನು ಶೀಘ್ರ ನೀಡಬೇಕು. ಪರಿಹಾರ ಹಣ ನೀಡುವಾಗ ಅಧಿಕಾರಿಗಳು ಹೃದಯವಂತಿಕೆ, ಪ್ರಜ್ಞಾವಂತಿಕೆ, ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಂಡು ಜನರ ಕಷ್ಟಕ್ಕೆ ಸ್ಪಂದಿಸಬೇಕು' ಎಂದು ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.
ಖಾದರ್ ಸೂಚನೆ ನೀಡಿದರು.
ತಾಲ್ಲೂಕು ಕಚೇರಿಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪದಿಂದ ಪ್ರಾಣಹಾನಿ, ಮನೆ ಹಾನಿ ಸೇರಿದಂತೆ ಮತ್ತಿತರ ಹಾನಿ ಉಂಟಾದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೆರವು ಒದಗಿಸಬೇಕು. ಮಳೆಯಿಂದ ಪರಿಕರ, ಹೊದಿಕೆ, ಆಹಾರ ದಾಸ್ತಾನು ಹಾಳಾದಲ್ಲಿ ತಕ್ಷಣ ₹5.5 ಸಾವಿರ ಪರಿಹಾರ ಧನ ವಿತರಿಸಬೇಕು ಎಂದು ಸೂಚಿಸಿದರು.
ತಾಲ್ಲೂಕಿನಲ್ಲಿ 200 ಶಾಲೆಗಳ 660 ಕೊಠಡಿಗಳಲ್ಲಿ 91 ಕೊಠಡಿಗಳ ದುರಸ್ತಿ ಕಾರ್ಯಗಳನ್ನು ಶೀಘ್ರ ಹಮ್ಮಿಕೊಳ್ಳಬೇಕು. ಅಪಾಯಕಾರಿ ಕೊಠಡಿಗಳಿದ್ದಲ್ಲಿ ಪಾಠ-ಪ್ರವಚನಗಳಿಗೆ ಬಳಸಬಾರದು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಕಾಂಪೌಂಡ್‌ಗಳು ಶಾಲೆಯ ಸಮೀಪವಿದ್ದಲ್ಲಿ ವಿದ್ಯಾರ್ಥಿಗಳು ಹತ್ತಿರ ಹೋಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೂ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಂದ ಸರಬರಾಜಾದಾಗ ಶೂ, ಸಾಕ್ಸ್‌ಗಳ ಗುಣಮಟ್ಟ ಪರೀಕ್ಷಿಸಿ, ಉತ್ತಮ ಗುಣಮಟ್ಟವಿದ್ದರೆ ಮಾತ್ರ ವಿತರಿಸಬೇಕು. ಕಳಪೆಯಾದಲ್ಲಿ ತಡೆಹಿಡಿಯಬೇಕು ಎಂದು ಸೂಚನೆ ನೀಡಿದರು.
ಮಳೆಯಿಂದಾಗಿ ಜಿಲ್ಲೆಯ ಕೆಲವು ರಸ್ತೆಗಳು ಹಾಳಾಗಿ ಸಾರ್ವಜನಿಕರು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಆದ್ಯತೆಯ ಮೇಲೆ ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಪಂಚಾಯತ್, ಎಂಜಿನಿಯರಿಂಗ್, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
ಮಳೆ- ಗಾಳಿಯಿಂದ 193 ವಿದ್ಯುತ್ ಕಂಬಗಳು ಉರುಳಿ ಹೋಗಿ, ₹31.71 ಲಕ್ಷ ಹಾನಿ ಉಂಟಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಾಗ ಕೂಡಲೇ ಸ್ಪಂದಿಸಬೇಕು. ಲೈನ್‌ಮ್ಯಾನ್‌ಗಳ ಕೊರತೆ ಇದ್ದಲ್ಲಿ ಹೊರಗುತ್ತಿಗೆ ಮೇಲೆ ಪಡೆಯಬೇಕು. ಆದ್ಯತೆ ಮೇಲೆ ಅಪಾಯಕಾರಿ ಮರಗಳ ತೆರವು ಕೈಗೊಳ್ಳಬೇಕು. ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ತಹಶೀಲ್ದಾರ್ ಅವರ ಪಿ.ಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವಿದ್ಯುತ್ ನಿರಂತರ ಸರಬರಾಜಿಗೆ ಸಮಸ್ಯೆಗಳು ಉಂಟಾಗುತ್ತಿವೆ. ರಸ್ತೆ ದುರಸ್ತಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮುಖಂಡ ವಿನಯ್ ಕುಮಾರ್ ಸೊರಕೆ, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಬೆಳೆ ವಿಮೆ ನೋಂದಣಿ: ಅರಿವು ಮೂಡಿಸಿ
ತಾಲ್ಲೂಕಿನಲ್ಲಿ 2,020 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಅನಾವೃಷ್ಟಿಯಿಂದ ಭತ್ತದ ಬೆಳೆ ಹಾನಿಯುಂಟಾಗಿದೆ. ಹಾನಿ ಉಂಟಾದ ಜಮೀನುಗಳಲ್ಲಿ ಪುನಃ ಬಿತ್ತನೆ ಕಾರ್ಯ ಮುಂಬರುವ ಆಗಸ್ಟ್ 20ರ ವರೆಗೆ ನಡೆಯಲಿದೆ. ಮಳೆಯಿಂದಾದ ಬೆಳೆ ಹಾನಿಯ ಬಗ್ಗೆ ನಿಖರ ಸಮೀಕ್ಷೆ ಕ್ರೋಡೀಕರಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಜಿಲ್ಲೆಯಲ್ಲಿ 19,236 ರೈತರು ತೋಟಗಾರಿಕೆ ಬೆಳೆ ವಿಮೆ ಮಾಡಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ 7690ಕ್ಕೂ ಹೆಚ್ಚು ರೈತರು ಒಳಪಟ್ಟಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಲು ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಸಚಿವ ಖಾದರ್ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-28-1709336215
