Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ 1997ರಲ್ಲೇ ಪ್ರತಿಭಟಿಸಿದ್ದ ಪ್ರಧಾನ್!

ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ 1997ರಲ್ಲೇ ಪ್ರತಿಭಟಿಸಿದ್ದ ಪ್ರಧಾನ್!

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶದಲ್ಲಿ ವಿವಿಧ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ 'ಕಾಕ್ರೋಚ್‌ ಜನತಾ ಪಕ್ಷದ' ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.

ಏತನ್ಮಧ್ಯೆ, ಪ್ರಧಾನ್‌ ಅವರು 29 ವರ್ಷಗಳ ಹಿಂದೆ ಒಡಿಶಾ ಸರ್ಕಾರದ ವಿರುದ್ಧ ಇದೇ (ಪ್ರಶ್ನೆ ಪತ್ರಿಕೆ ಸೋರಿಕೆ) ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು ಎಂಬ ಸುದ್ದಿಗಳು ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಅಂದು ಹೀರೊ; ಇಂದು ವಿಲನ್: ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ 1997ರಲ್ಲೇ ಪ್ರತಿಭಟಿಸಿದ್ದ ಪ್ರಧಾನ್!

ಒಂದು ಸಾಲಿನಲ್ಲಿಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಿಂದೆ ಪ್ರತಿಭಟಿಸಿದ್ದ ಧರ್ಮೇಂದ್ರ ಪ್ರಧಾನ್ ಅವರೇ ಇಂದು ಅದೇ ಆರೋಪಗಳನ್ನು ಎದುರಿಸುತ್ತಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಚರ್ಚೆಗೆ ಗ್ರಾಸವಾಗಿದೆ.

ಏನು? ಏಕೆ? ಹೇಗೆ?


ಧರ್ಮೇಂದ್ರ ಪ್ರಧಾನ್ ಅವರ ಹಿಂದಿನ ಪ್ರತಿಭಟನೆಯ ಹಿನ್ನೆಲೆ ಏನು?

1997ರಲ್ಲಿ ಎಬಿವಿಪಿ ನಾಯಕರಾಗಿದ್ದ ಧರ್ಮೇಂದ್ರ ಪ್ರಧಾನ್, ಒಡಿಶಾದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಅಂದಿನ ರಾಜ್ಯ ಸರ್ಕಾರದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರು.


ಪ್ರಸ್ತುತ ಸಚಿವರ ವಿರುದ್ಧ ಕೇಳಿಬರುತ್ತಿರುವ ಆರೋಪಗಳೇನು?

ನೀಟ್, ಯುಜಿಸಿ ಎನ್‌ಇಟಿ ಮತ್ತು ಜೆಇಇಯಂತಹ ಪ್ರಮುಖ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿರುವುದರಿಂದ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗಿದೆ.


ಪ್ರತಿಭಟನೆಯಲ್ಲಿ ಯಾರ್ಯಾರು ಭಾಗವಹಿಸುತ್ತಿದ್ದಾರೆ?

ದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಕ್ಷ'ದ ನೇತೃತ್ವದಲ್ಲಿ ವಿದ್ಯಾರ್ಥಿಗಳು, ವಿಪಕ್ಷಗಳ ನಾಯಕರು ಮತ್ತು ಪರಿಸರವಾದಿ ಸೊನಮ್ ವಾಂಗ್ಚೂಕ್ ಅವರು ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.


ಪ್ರತಿಭಟನೆಯ ಪರಿಣಾಮವಾಗಿ ಉಂಟಾಗಿರುವ ಪರಿಸ್ಥಿತಿಯೇನು?

ಸಂಸತ್ ಚಲೋ ಚಳವಳಿಯ ವೇಳೆ ನಡೆದ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ, ಓರ್ವ ವಿದ್ಯಾರ್ಥಿನಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಹೇಗೆ ಚರ್ಚೆಯಾಗುತ್ತಿದೆ?

ನೆಟ್ಟಿಗರು ಧರ್ಮೇಂದ್ರ ಪ್ರಧಾನ್ ಅವರ 29 ವರ್ಷಗಳ ಹಿಂದಿನ ಪ್ರತಿಭಟನೆಯ ಚಿತ್ರಗಳನ್ನು ಈಗಿನ ಪರಿಸ್ಥಿತಿಯೊಂದಿಗೆ ಹೋಲಿಸಿ ವ್ಯಂಗ್ಯ ಮಾಡುತ್ತಿದ್ದಾರೆ.

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

1997ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನಾಯಕರಾಗಿದ್ದ ಪ್ರಧಾನ್‌, ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ಜಾನಕಿ ವಲ್ಲಭ ಪಟ್ನಾಯಕ್‌ ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದರು. ಅವರೊಂದಿಗೆ ಸುಮಾರು 1,500 ವಿದ್ಯಾರ್ಥಿಗಳು ಒಡಿಶಾ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಈ ಸುದ್ದಿ ಇನ್ನಷ್ಟೇ ಖಚಿತವಾಗಬೇಕಿದೆ.

ಬಹುತೇಕ ಮೂರು ದಶಕಗಳ ನಂತರ ಇದೀಗ ಅಂತಹದ್ದೇ ಆರೋಪಗಳು ಪ್ರಧಾನ್‌ ವಿರುದ್ಧ ಕೇಳಿ ಬಂದಿವೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗು ಜೋರಾಗಿದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ಆರಂಭವಾದ ಪ್ರತಿಭಟನೆ ಇದೀಗ, ದೇಶವ್ಯಾಪಿಯಾಗುತ್ತಿದೆ. ವಿದ್ಯಾರ್ಥಿಗಳು, 'ಕಾಕ್ರೋಚ್‌'ಗಳೊಂದಿಗೆ ಇದೀಗ ಪ್ರತಿಪಕ್ಷಗಳ ನಾಯಕರೂ ಸೇರಿಕೊಂಡಿದ್ದಾರೆ.

ಇಂತಹ ಹೊತ್ತಿನಲ್ಲೇ, ಪ್ರಧಾನ್‌ ಅವರು ವಿದ್ಯಾರ್ಥಿ ನಾಯಕರಾಗಿದ್ದ ಸಂದರ್ಭದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನೆಟ್ಟಿಗರು ಸಚಿವರ ಬಗ್ಗೆ ವ್ಯಂಗ್ಯ ಮಾಡುತ್ತಿದ್ದಾರೆ.

'ಸೋರಿಕೆ'ಯಿಂದಲೇ ಮೇಲೆದ್ದ ನಾಯಕ
ಪ್ರಧಾನ್‌ ಅವರು ವಿದ್ಯಾರ್ಥಿ ಚಳವಳಿಗಳ ಮೂಲಕವೇ ರಾಜಕೀಯಕ್ಕೆ ಕಾಲಿಟ್ಟವರು.

ಒಡಿಶಾದ ತಾಲ್ಚೇರ್‌ನಲ್ಲಿ ಎಂಬಲ್ಲಿ 1969ರ ಜೂನ್ 26ರಂದು ಜನಿಸಿದ ಪ್ರಧಾನ್, ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಪ್ರಧಾನ್ ಅವರ ಪುತ್ರ.

1983ರಲ್ಲೇ ಎಬಿವಿಪಿಗೆ ಸೇರಿದ ಧರ್ಮೇಂದ್ರ ಪ್ರಧಾನ್‌, ಉತ್ಕಲ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡಿದ್ದರು. ವಿವಿಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದುಕೊಂಡು, 1994ರಿಂದ 1997ರವರೆಗೆ ಎಬಿವಿಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ಪ್ರಧಾನ್‌ ರಾಜಕೀಯ ಜೀವನಕ್ಕೆ ತಿರುವು ದೊರೆತದ್ದು 1997ರಲ್ಲಿ. ಒಡಿಶಾದಲ್ಲಿ ಪರೀಕ್ಷೆಯೊಂದರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರಧಾನ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಒಡಿಶಾ ಸಚಿವಾಲಯದ ಹೊರಗೆ ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿದ್ದರು. ಪೊಲೀಸರ ಲಾಠಿ ಚಾರ್ಜ್‌ ಪ್ರತಿಭಟನೆಯನ್ನು ಅಂತ್ಯಗೊಳಿಸಿತ್ತು. ಪ್ರಧಾನ್‌ ಅವರಿಗೆ ಮೂಳೆ ಮುರಿತದಂತಹ ಭಾರಿ ಪೆಟ್ಟುಗಳಾಗಿದ್ದವು ಎಂದು ವರದಿಯಾಗಿದೆ. ಅಲ್ಲಿಂದಾಚೆಗೆ, ಅವರ ರಾಜಕೀಯ ಪಯಣ ಏರುಗತಿಯಲ್ಲಿ ಸಾಗಿತು.

ಇದೀಗ, ಅವರ ವಿರುದ್ಧವೇ ಆರೋಪ ಕೇಳಿ ಬಂದಿದೆ. ಖಾತೆಯನ್ನು ಸಮರ್ಥವಾಗಿ ನಿಭಾಯಿಸಲಾಗದ ಅವರು, ನೈತಿಕ ಹೊಣೆ ಹೊರಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ದೇಶದ ಶಿಕ್ಷಣ ಸಚಿವನಾಗುವವರೆಗೆ..
ಎಬಿವಿಪಿಯಲ್ಲಿದ್ದಾಗಲೇ ಬಿಜೆಪಿಗೆ ಸೇರಿದ ಪ್ರಧಾನ್‌, 1997ರ ನಂತರ ರಾಜ್ಯದಾದ್ಯಂತ ಗುರುತಿಸಿಕೊಂಡರು. ಒಡಿಶಾ ವಿಧಾನಸಭೆಗೆ 2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಪಲ್ಲಹರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. 2004ರಲ್ಲಿ ದಿಯೋಗಢ ಲೋಕಸಭಾ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದರು. ನಂತರದ ಎರಡು ಚುನಾವಣೆಗಳಲ್ಲಿಯೂ ಗೆದ್ದು, ಒಡಿಶಾದ ಪ್ರಭಾವಿ ನಾಯಕ ಎನಿಸಿದ್ದಾರೆ.

2021ರ ಜುಲೈನಲ್ಲಿ ಕೇಂದ್ರದ ಶಿಕ್ಷಣ ಖಾತೆ ವಹಿಸಿಕೊಳ್ಳುವ ಮುನ್ನ ಅವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕೌಶಲ್ಯಾಭಿವೃದ್ಧಿ ಮತ್ತು ಉಕ್ಕು ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದರು.

ಮಾತುಕತೆಗೆ ಆಹ್ವಾನ ನೀಡಿದ ನಡ್ಡಾಗೆ ತಟಸ್ಥ ಸ್ಥಳಕ್ಕೆ ಬನ್ನಿ ಎಂದ 'ಕಾಕ್ರೋಚ್'ಮೋದಿಯ ವಾರಾಣಸಿಯಲ್ಲಿ 'ಕಾಕ್ರೋಚ್', ವಾಂಗ್ಚೂಕ್‌ಗೆ ಬೆಂಬಲ; ವಿದ್ಯಾರ್ಥಿಗಳ ಧರಣಿ

ಪ್ರಧಾನ್ ಶಿಕ್ಷಣ ಸಚಿವರಾಗಿರುವ ಅವಧಿಯಲ್ಲಿ ನೀಟ್‌, ಯುಜಿಸಿ ಎನ್‌ಇಟಿ, ಜೆಇಇಯಂತಹ ಪ್ರಮುಖ ಪರೀಕ್ಷೆಗಳಲ್ಲಿ ಲೋಪಗಳಾಗಿರುವುದು ವರದಿಯಾಗಿದೆ. ಆಗಾಗ್ಗೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು ಪ್ರಕರಣಗಳು ಜರುಗಿವೆ. ಶಿಕ್ಷಣ ನೀತಿಯಲ್ಲಿನ ಮಾರ್ಪಾಡು, ರಾಷ್ಟ್ರೀಯ ಶಿಕ್ಷಣ ಸಂಶೋದನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪಠ್ಯಕ್ರಮದಲ್ಲಿ ಬದಲಾವಣೆಗಳು, ರಾಷ್ಟ್ರೀಯ ಶಿಕ್ಷಣ ನೀತಿ - 2020 ಕುರಿತ ಕಳವಳ ಸೇರಿದಂತೆ ಹಲವು ವಿಚಾರಗಳು ವಿವಾದದ ಕೇಂದ್ರವಾಗಿವೆ.

ನೀಟ್‌ ಸವಾಲು
ಮೇ 3ರಂದು ನಡೆದಿದ್ದ ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ದೇಶದಾದ್ಯಂತ ಭಾರಿ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಮರುಪರೀಕ್ಷೆ ಜೂನ್‌ 21ರಂದು ನಡೆದಿದೆ. ಆದರೆ, ಮರುಪರೀಕ್ಷೆಯ ಬಳಿಕ ಪ್ರಕಟಿಸಿದ್ದ ಕೀ ಉತ್ತರಗಳಿಗೂ, ಫಲಿತಾಂಶದ ನಂತರ ಬಂದಿರುವ ಅಂಕಗಳಿಗೂ ವ್ಯತ್ಯಾಸವಿದೆ ಎನ್ನಲಾಗುತ್ತಿದೆ.

ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸಿಜೆಪಿ, ಜೂನ್‌ 20ರಿಂದ ಪ್ರತಿಭಟನೆ ನಡೆಸುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು, ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪ್ರಧಾನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದೆ.

ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೊನಮ್‌ ವಾಂಗ್ಚೂಕ್‌ ಅವರು ಜೂನ್‌ 28ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಜೀನಾಮೆಗೆ 'ಕಾಕ್ರೋಚ್' ಪಟ್ಟು: ಅಮಿತ್ ಶಾ ಜತೆ ಮಾತುಕತೆ ನಡೆಸಿದ ಪ್ರಧಾನ್ರಾಷ್ಟ್ರಗೀತೆ ಹಾಡಿ, ಭದ್ರತಾ ಸಿಬ್ಬಂದಿಯೇ ಅಲುಗಾಡದಂತೆ ಮಾಡಿದ ಜೆನ್ ಝೀಗಳು!

ಪ್ರತಿಭಟನೆಯನ್ನು ತೀವ್ರಗೊಳಿಸಿರುವ 'ಕಾಕ್ರೋಚ್‌ಗಳು' ಜುಲೈ 20ರಂದು ಸಾವಿರಾರು ವಿದ್ಯಾರ್ಥಿಗಳು, ಯುವಕರ ಬೆಂಬಲದೊಂದಿಗೆ 'ಸಂಸತ್‌ ಚಲೊ'ಗೆ ಚಾಲನೆ ನೀಡಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ. 80ಕ್ಕೂ ಹೆಚ್ಚು ಪೊಲೀಸರಿಗೂ ಪೆಟ್ಟಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಒಬ್ಬ ವಿದ್ಯಾರ್ಥಿನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೀಗ, ವಿವಿಧ ರಾಜಕೀಯ ಪಕ್ಷಗಳೂ ಪ್ರತಿಭಟನೆಗೆ ಧುಮುಕಿರುವುದರಿಂದ, ಸರ್ಕಾರದ ಮೇಲಿನ ಒತ್ತಡವೂ ಹೆಚ್ಚಾಗಿದೆ. ಏತನ್ಮಧ್ಯೆ, ವಾಂಗ್ಚೂಕ್‌ ಅವರ ಉಪವಾಸ 26 ದಿನಗಳನ್ನು ಪೂರೈಸಿದೆ.

ನೆಟ್ಟಿಗರು, ಸಾಮಾಜಿಕ ಮಾಧ್ಯಮಗಳಲ್ಲಿರುವ ಪ್ರಧಾನ್‌ ಅವರ ಹಳೇ ಚಿತ್ರಗಳನ್ನು ಸದ್ಯದ ಚಳವಳಿಯೊಂದಿಗೆ ಹೋಲಿಸಿ ಹಂಚಿಕೊಳ್ಳುತ್ತಿದ್ದಾರೆ. ಟ್ರೋಲ್‌, ವ್ಯಂಗ್ಯ ಮುಂದುವರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani