Dailyhunt Logo
  • Light mode
    Follow system
    Dark mode
    • Play Story
    • App Story
ಪ್ರತಿಭಟನಾ ಸ್ಥಳ ಶಾಶ್ವತವಾಗಿ ಆಕ್ರಮಿಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್‌ ಅಭಿಮತ

ಪ್ರತಿಭಟನಾ ಸ್ಥಳ ಶಾಶ್ವತವಾಗಿ ಆಕ್ರಮಿಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್‌ ಅಭಿಮತ

ನವದೆಹಲಿ: 'ಪ್ರತಿಭಟನೆನಿರತರು ಪ್ರತಿಭಟನಾ ಸ್ಥಳವನ್ನು ಶಾಶ್ವತವಾಗಿ ಆಕ್ರಮಿಸಿಕೊಂಡಿರಲು ಸಾಧ್ಯವಿಲ್ಲ. ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ಇತರರ ಜೀವನೋಪಾಯಕ್ಕೆ ಅಡ್ಡಿಯಾಗುವಂತೆ ಚಲಾಯಿಸುವುದು ಸರಿಯಲ್ಲ' ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಿಂದ ತಮಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ 'ಕಿರಾನಾ ಕಮಿಟಿ ದೆಹಲಿ' ಮತ್ತು ಇತರ ವ್ಯಾಪಾರಿ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ಪೀಠ ನಡೆಸಿತು.

ಪ್ರತಿಭಟನೆ ವೇಳೆ ಸಾಮೂಹಿಕ ಬಂಧನ, ಪೊಲೀಸರ ಕ್ರಮ, ಮೆಟ್ರೊ ನಿಲ್ದಾಣಗಳ ಮುಚ್ಚುವಿಕೆ ಮತ್ತು ಇಂಟರ್‌ನೆಟ್‌ ಸೇವೆ ಸ್ಥಗಿತಕ್ಕೆ ಸಂಬಂಧಿಸಿದ ಅರ್ಜಿಗಳನ್ನೂ ನ್ಯಾಯಪೀಠವು ಪರಿಗಣನೆಗೆ ತೆಗೆದುಕೊಂಡಿದೆ.

ಪ್ರತಿಭಟಿಸುವ ಹಕ್ಕು ಮತ್ತು ವ್ಯಾಪಾರ ನಡೆಸುವ ಹಕ್ಕಿನ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಒತ್ತಿಹೇಳಿದ ಸೂರ್ಯಕಾಂತ್‌, 'ದಿನಗೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ವರ್ತಕರ ಬದುಕು ಸಾಗಿಸುವ ಮಾರ್ಗಗಳಿಗೆ ತೊಂದರೆಯಾಗದಂತೆ ಪ್ರತಿಭಟನಾ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು' ಎಂದರು.

'ಒಂದು ಸ್ಥಳವನ್ನು ಶಾಶ್ವತವಾಗಿ ಆಕ್ರಮಿಸಿಕೊಂಡಿರಲು ಸಾಧ್ಯವಿಲ್ಲ. ಅಲ್ಲಿ ಇತರ ಪ್ರತಿಭಟನಕಾರರೂ ಇರುತ್ತಾರೆ. ರೈತರು, ಪತ್ರಕರ್ತರು, ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳು ಎಲ್ಲಿಗೆ ಹೋಗಬೇಕು? ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ನಿರ್ದಿಷ್ಟ ಅವಧಿಗೆಂದು ನಿಗದಿಪಡಿಸಿದ ಸ್ಥಳವನ್ನೇ ಅವರಿಗೆ ನೀಡಬೇಕು' ಎಂದು ಅವರು ಅಭಿಪ್ರಾಯಪಟ್ಟರು.

ವ್ಯಾಪಾರಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, 'ಇತ್ತೀಚಿನ ಪ್ರತಿಭಟನೆಗಳಿಂದಾಗಿ ವ್ಯಾಪಾರಿಗಳಿಗೆ ₹2,000 ಕೋಟಿ ನಷ್ಟವಾಗಿದೆ' ಎಂದು ಪ್ರತಿಪಾದಿಸಿದರು. 'ಪ್ರತಿಭಟನೆ ನಡೆಸಲು ನಿಗದಿಪಡಿಸಲಾದ ರಾಮಲೀಲಾ ಮೈದಾನವು ಕನಾಟ್‌ ಪ್ಲೇಸ್‌ನಿಂದ ಸುಮಾರು ಒಂದು ಮೈಲಿ ದೂರದಲ್ಲಿದೆ' ಎಂದು ಅವರು ಹೇಳಿದರು.

'ಈ ಮೈದಾನದ ಸಮೀಪ ಲಕ್ಷಾಂತರ ಜನ ವಾಸಿಸುತ್ತಿದ್ದಾರೆ. ಪ್ರತಿಭಟನೆಗಳಿಂದಾಗಿ ಅಂಗಡಿಗಳನ್ನು ಮುಚ್ಚಲಾಗಿದೆ. ಜನರಿಲ್ಲದೆ ಕನಾಟ್‌ ಪ್ಲೇಸ್‌ ಬಿಕೋ ಎನ್ನುತ್ತಿದೆ' ಎಂದರು.

ಹಬ್ಬದ ಋತು ಮತ್ತು ದೀಪಾವಳಿಯನ್ನು ಉಲ್ಲೇಖಿಸಿದ ಅವರು, 'ವ್ಯಾಪಾರಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂದಿನ ಎರಡು ತಿಂಗಳವರೆಗೆ ಮೆರವಣಿಗೆಗಳು ಅಥವಾ ಧರಣಿಗಳಿಗೆ ನಿರ್ಬಂಧ ಹೇರಬೇಕು' ಎಂದು ಕೋರಿದರು.

ವ್ಯಾಪಾರಿಗಳ ಈ ಕೋರಿಕೆ ಕುರಿತು ಕೇಂದ್ರ ಸರ್ಕಾರ ಮತ್ತು ಇತರರಿಂದ ನ್ಯಾಯಪೀಠ ಪ್ರತಿಕ್ರಿಯೆ ಕೇಳಿತು. ಪ್ರಕರಣದಲ್ಲಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸುವಂತೆ ವ್ಯಾಪಾರಿ ಸಂಘಟನೆಗಳಿಗೆ ನಿರ್ದೇಶನ ನೀಡಿತು.

ಹಬ್ಬದ ಅವಧಿಯಲ್ಲಿ ಪ್ರತಿಭಟನೆಗಳನ್ನು ನಿಲ್ಲಿಸಬೇಕೆಂಬ ವ್ಯಾಪಾರಿಗಳ ಕೋರಿಕೆ ಕುರಿತು ಕೇಂದ್ರ ಸರ್ಕಾರ ಮತ್ತು ಇತರರಿಂದ ನ್ಯಾಯಪೀಠ ಪ್ರತಿಕ್ರಿಯೆ ಕೇಳಿತು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, 'ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜುಲೈ ತಿಂಗಳಿನಲ್ಲಿ ನಡೆಸಿದ ಪ್ರತಿಭಟನೆಗೆ ಕೇವಲ ಒಂದು ದಿನಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಪ್ರತಿಭಟನಕಾರರು ಸ್ಥಳದಲ್ಲಿ 17 ದಿನ ಉಳಿದುಕೊಂಡರು' ಎಂದು ಹೇಳಿದರು.

'ನಂತರ, ಯಾವುದೇ ಅನುಮತಿ ಪಡೆಯದೆ ಅವರು ಸಂಸತ್ತಿನತ್ತ ಮೆರವಣಿಗೆ ನಡೆಸಿದರು. ಸಂಸತ್ತು ಕೇವಲ ಒಂದು ರಾಜಕೀಯ ಕಟ್ಟಡವಲ್ಲ; ಅದು ಭಾರತದ ಸಾರ್ವಭೌಮತ್ವದ ಸಂಕೇತ. ಸಂಸತ್ತಿನ ಬಳಿಗೆ ಹೋಗಲು ನಿಮಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹಾಗೆಯೇ, ಅನುಮತಿಯಿಲ್ಲದೆ ಸುಪ್ರೀಂ ಕೋರ್ಟ್ ಬಳಿ ಹೋಗಿ ಪ್ರತಿಭಟಿಸಲು ಕೂಡ ನಿಮಗೆ ಅನುಮತಿ ನೀಡುವುದಿಲ್ಲ' ಎಂದು ಅವರು ಹೇಳಿದರು.

ಪ್ರತಿಭಟನಕಾರರ ಪರ ವಕೀಲರು, 'ರಾಮಲೀಲಾ ಮೈದಾನವು ಪ್ರತಿಭಟನೆ ನಡೆಸಲೆಂದೇ ಮೀಸಲಾದ ಸ್ಥಳವಾಗಿದೆ. ಜಂತರ್ ಮಂತರ್‌ನಲ್ಲಿ ಈ ಹಿಂದೆ ನಡೆದ ಪ್ರತಿಭಟನೆಗಳು ಶಾಂತಿಯುತವಾಗಿದ್ದವು' ಎಂದು ವಾದಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani