Dailyhunt Logo
  • Light mode
    Follow system
    Dark mode
    • Play Story
    • App Story
ಪ್ರತಿಭಟನೆಗಳಿಗೆ ವಿದೇಶಿ ಹಣಕಾಸಿನ ನೆರವು ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪ

ಪ್ರತಿಭಟನೆಗಳಿಗೆ ವಿದೇಶಿ ಹಣಕಾಸಿನ ನೆರವು ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪ

ಗಜೇಂದ್ರಗಡ: 'ಚುನಾವಣೆ ಮೂಲಕ ಎನ್‌.ಡಿ.ಎ ಸೋಲಿಸಲು ಆಗದ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು ಎಸ್‌.ಐ.ಆರ್‌ ನೆಪ ಮಾಡಿಕೊಂಡು ಸಾರ್ವಜನಿಕ ವಲಯದಲ್ಲಿ ಕಲುಷಿತ ವಾತಾವರಣ ನಿರ್ಮಿಸಿ, ವಾಮ ಮಾರ್ಗಗಳ ಮೂಲಕ ದೇಶದಲ್ಲಿ ನಾಯಕತ್ವ ಬದಲಾಯಿಸಲು ಸಂಚು ರೂಪಿಸಿದೆ' ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಪಟ್ಟಣದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

'ಪ್ರಧಾನಿ ನರೇಂದ್ರ ಮೋದಿ ಅವರ ಜನಪರ, ಪಾರದರ್ಶಕ, ಕಳಂಕ ರಹಿತ ಆಡಳಿತದಿಂದಾಗಿ ದೇಶದ ಜನತೆ ಅವರನ್ನು ಸತತ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ಭಾರತ ಜಗತ್ತಿನ ಬಲಿಷ್ಠ ಆರ್ಥಿಕತೆ ಹೊಂದಿದ ರಾಷ್ಟ್ರಗಳ ಪೈಕಿ 4ನೇ ಸ್ಥಾನದಲ್ಲಿದೆ. ಮುಂದೆ 3ನೇ ಸ್ಥಾನ ಪಡೆಯಲಿದೆ. ಆದರೆ ಕಾಂಗ್ರೆಸ್‌ ಅಪ್ರಬುದ್ಧ ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಪ್ರತಿ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದೆ. ಹೀಗಾಗಿ ಎಸ್‌.ಐ.ಆರ್‌ ಪ್ರಕ್ರಿಯೆ ಕುರಿತು ದೋಷವಿದ್ದರೆ ದೂರು ಸಲ್ಲಿಸುವ ಬದಲು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆದಿರುವ ಎಸ್‌.ಐ.ಆರ್‌ನಲ್ಲಿ ಹೆಸರು ತೆಗೆಯಲಾಗಿದೆ ಎಂದು ಹೇಳುವ 100 ಜನರನ್ನು ಕರೆದುಕೊಂಡು ಬಂದು ನಿಲ್ಲಿಸಲಿ' ಎಂದು ಸವಾಲು ಹಾಕಿದರು.

'ಕಾಂಗ್ರೆಸ್‌ ಮತ್ತು ಸಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೇಶದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಸಿಜೆಪಿ ಪ್ರತಿಭಟನೆಗಳನ್ನು ರೂಪಿಸಿವೆ. ಈ ಎಲ್ಲ ಪ್ರತಿಭಟನೆಗಳ ಹಿಂದೆ ವಿದೇಶಿ ಹಣಕಾಸಿನ ನೆರವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬಲಿಷ್ಠವಾಗಿದ್ದು, ದೇಶದ ಸುರಕ್ಷತೆ, ಕಾನೂನು-ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ದೇಶ ರಕ್ಷಿಸುವ ಶಕ್ತಿಯಿದೆ' ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಕೆ.ಚವ್ಹಾಣ, ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪುರ, ಮುಖಂಡರಾದ ಶಿವರಾಜ ಬಂಡಿ, ಅಶೋಕ ವನ್ನಾಲ ಇದ್ದರು.

261104-23-428568379

Dailyhunt
Disclaimer: This content has not been generated, created or edited by Dailyhunt. Publisher: Prajavani