Thursday, 04 Mar, 8.55 am ಪ್ರಜಾವಾಣಿ

ಜಿಲ್ಲೆ
ಪ್ರತಿಷ್ಠೆ ಬದಿಗಿಡದಿದ್ದರೆ ಅಧಿಕಾರ ಕನಸು: ಮೈಸೂರು ಪಾಲಿಕೆ ಸದಸ್ಯರ ಎಚ್ಚರಿಕೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್‌-ಉಪ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ, ಶಾಸಕ ತನ್ವೀರ್ ಸೇಠ್‌, ಜೆಡಿಎಸ್‌ ಜೊತೆ ಕೊನೆ ಕ್ಷಣದಲ್ಲಿ ಮಾಡಿಕೊಂಡ 'ಮೈತ್ರಿ'ಯ ವಿವಾದ ಇದೀಗ ಸ್ವರೂಪ ಬದಲಿಸಿದೆ.

'ಮೈತ್ರಿ'ಯ ವಿವಾದಕ್ಕಿಂತಲೂ; ಮೇಯರ್‌ ಆಯ್ಕೆಯ ನಂತರ ನಡೆದ ಘಟನೆಗಳೇ ಮುನ್ನೆಲೆಗೆ ಬಂದಿವೆ.

ಶಾಸಕ ತನ್ವೀರ್‌ ಸೇಠ್‌ ಮನೆ ಮುಂಭಾಗ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ ಹಾಗೂ ರಾಯಚೂರಿನಲ್ಲಿ ಪ್ರತಿಕೃತಿ ದಹಿಸಿದ ಕಾಂಗ್ರೆಸ್‌ ಪದಾಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಇದಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ 'ಕೈ' ಪಾಳೆಯದಲ್ಲಿ ತೀವ್ರಗೊಂಡಿದೆ.

ಮೈತ್ರಿಗೆ ಸಂಬಂಧಿಸಿದ ಬೆಳವಣಿಗೆಯ ವರದಿ ನೀಡಲೆಂದು ಎಐಸಿಸಿ ನೇಮಿಸಿರುವ ವೀಕ್ಷಕ ಮಧು ಯಾಕ್ಷಿಗೌಡ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಈ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್‌ನ ಪಾಲಿಕೆಯ ಕೆಲವು ಸದಸ್ಯರು, ಇದರ ಜೊತೆಗೆ ಮುಖಂಡರ ನಡುವಿನ ಕಿತ್ತಾಟಕ್ಕೂ ಕೊನೆ ಹಾಡಬೇಕೆಂಬುದನ್ನು ವರಿಷ್ಠರ ಗಮನಕ್ಕೆ ತರುವಂತೆಯೂ ಹಾಗೂ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆಯೂ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಜುಗರ ತಪ್ಪಿಸಿ: 'ಪಾಲಿಕೆಯಲ್ಲಿ, ಬದಲಾದ ಸ್ವರೂಪದಲ್ಲಿ ಮೈತ್ರಿ ಏರ್ಪಟ್ಟ ಬಳಿಕ ಕಾಂಗ್ರೆಸ್‌ ಮುಜುಗರಕ್ಕೀಡಾಗಿದೆ. ಹಿರಿಯರ ನಡುವಿನ ಪ್ರತಿಷ್ಠೆಯ ಕಾದಾಟವು ನಮ್ಮ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ' ಎಂದು ಪಾಲಿಕೆಯ ಸದಸ್ಯರೊಬ್ಬರು ಹೆಸರು ಬಹಿರಂಗ ಪಡಿಸಬಾರದು ಎಂಬ ಷರತ್ತಿನೊಂದಿಗೆ 'ಪ್ರಜಾವಾಣಿ'ಗೆ ತಿಳಿಸಿದರು.

'ಜೆಡಿಎಸ್‌ ಬೆಂಬಲಿಸುವ ನಿರ್ಧಾರ ಶಾಸಕ ತನ್ವೀರ್‌ ಸೇಠ್‌ ಅವರದ್ದು. ಶಾಸಕರು ಕೈ ಎತ್ತುತ್ತಿದ್ದಂತೆ ನಾವು ಸಹ ಹಿಂಬಾಲಿಸಿದೆವು. ಇದು ಯಾವೊಬ್ಬ ಕಾರ್ಪೊರೇಟರ್‌ ನಿರ್ಧಾರವಲ್ಲ. ನಾಯಕರ ನಡುವಿನ ಕಿತ್ತಾಟದಲ್ಲಿ ನಾವೀಗ ಬಲಿಪಶುವಾಗಿದ್ದೇವೆ. ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಎಲ್ಲ ರಾಜಕೀಯ ಬೆಳವಣಿಗೆಯನ್ನು ಎಐಸಿಸಿ ವೀಕ್ಷಕ ಮಧು ಯಾಕ್ಷಿಗೌಡರಿಗೆ ತಿಳಿಸಿದ್ದೇವೆ. ನಾಯಕರ ನಡುವಿನ ಕಿತ್ತಾಟಕ್ಕೆ ಮೊದಲು ಇತಿಶ್ರೀ ಹಾಕುವಂತೆ ಮನವಿ ಮಾಡಿಕೊಂಡಿದ್ದೇವೆ' ಎಂದು ಅವರು ಹೇಳಿದರು.

'ಬಣ ರಾಜಕಾರಣ ಬಿಡಿ'
'ಪಕ್ಷ ಸಂಕಷ್ಟದಲ್ಲಿದೆ. ದೊಡ್ಡವರೇ ಬಣ ಮಾಡಿಕೊಂಡರೆ ಹೇಗೆ? 'ನಮ್ಮವರು' ಎಂಬುದನ್ನು ಬಿಟ್ಟು ನಾವೆಲ್ಲರೂ 'ಕಾಂಗ್ರೆಸ್ಸಿಗರು' ಎನ್ನಬೇಕು. ಮೈತ್ರಿ ವಿಷಯವನ್ನೇ ಇಟ್ಟುಕೊಂಡು ರಾಜಕಾರಣ ಮಾಡಿದರೆ, ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಕನಸಾಗಿಯೇ ಉಳಿಯಲಿದೆ' ಎಂದು ಪಾಲಿಕೆಯ ಹಿರಿಯ ಸದಸ್ಯರೊಬ್ಬರು ಎಚ್ಚರಿಸಿದರು.

'ಬೆಲೆ ಏರಿಕೆಯ ಸಮಸ್ಯೆ ಜನ ಸಾಮಾನ್ಯರನ್ನು ಬಾಧಿಸುತ್ತಿದೆ. ಆಡಳಿತ ವಿರೋಧಿ ಅಲೆ ಹೆಪ್ಪುಗಟ್ಟುತ್ತಿದೆ. ಇಂತಹ ಹೊತ್ತಲ್ಲಿ ಜನರೊಟ್ಟಿಗೆ ಬೆರೆಯಬೇಕಿರುವ ನಮ್ಮ ನಾಯಕರೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ದಕ್ಕೆ ಅಸಮಾಧಾನವಿದೆ. ಪ್ರತಿಭಟಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಾಯಕತ್ವಕ್ಕಾಗಿನ ಕಿತ್ತಾಟವನ್ನೂ ಕೊನೆಗೊಳಿಸಬೇಕು. ನಮ್ಮ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯಕಾರ್ಯಕರ್ತನ ಪಾಡೇನು?' ಎಂದು ಅವರು ಅಸಮಾಧಾನ ತೋಡಿಕೊಂಡರು.

'ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು. ಇದರಲ್ಲಿ ಎರಡು ಮಾತಿಲ್ಲ. ಮೈತ್ರಿಗೆ ಸಂಬಂಧಿಸಿದಂತೆ ತನ್ವೀರ್‌ ತಪ್ಪು ಮಾಡಿದ್ದಾರೆ. ಅವರೂ ಪಕ್ಷಕ್ಕಾಗಿ ದುಡಿದಿದ್ದು, ನಾಯಕರು ಕೂಡ ಹಟ ಬಿಟ್ಟು ಎಲ್ಲರನ್ನೂ ತಮ್ಮೊಂದಿಗೆ ಕರೆದೊಯ್ಯಬೇಕು. ಎಐಸಿಸಿ ವೀಕ್ಷಕರಿಗೆ ಇಲ್ಲಿನ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟಿದ್ದೇವೆ. ಆದರೆ ಬಹುತೇಕರು ಸಿದ್ದರಾಮಯ್ಯ ಪರವಾಗಿ, ತನ್ವೀರ್‌ ವಿರುದ್ಧವಾಗಿ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top