ಕೋಲಾರ: ಕೋಲ್ಕತ್ತದ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆಯು ಪ್ರವಾದಿ ಮುಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹವಾಗಿ ಮಾತನಾಡಿದ್ದು, ಆಕೆಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೋಲಾರ ಮುಸ್ಲಿಂ ಯೂತ್ ಫೋರಂ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ಮುಸ್ಲಿಮರು ನಗರದ ಮೆಕ್ಕೆ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾರದ ನಮಾಜ್ ಬಳಿಕ ಸಾವಿರಾರು ಮುಸ್ಲಿಮರು ಸೇರಿ ತ್ರಿವರ್ಣ ಧ್ವಜ ಹಿಡಿದು ಧಿಕ್ಕಾರ ಕೂಗಿದರು. ನಾಜಿಯಾ ಹೇಳಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಎಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರ ಹಾಗೂ ರಾಜ್ಯಪಾಲರ ಗಮನಕ್ಕೆ ತರುವಂತೆ ಆಗ್ರಹಿಸಿದರು.
ಮುಸ್ಲಿಂ ಮುಖಂಡರು ಮಾತನಾಡಿ, 'ನಾಜಿಯಾ ಮುಸ್ಲಿಂ ಸಮುದಾಯದವರ ಧಾರ್ಮಿಕ ನಂಬಿಕೆ, ವಿಶ್ವಾಸಗಳಿಗೆ ಧಕ್ಕೆ ತಂದಿದ್ದಾರೆ. ಈ ಹೇಳಿಕೆಯಿಂದಾಗಿ ಸಮುದಾಯದವರಲ್ಲಿ ಅಸಹನೆ ಮೂಡಿದೆ. ಶಾಂತಿ, ಸೌಹಾರ್ದಕ್ಕೆ ಭಂಗ ಉಂಟು ಮಾಡುವ ಹುನ್ನಾರವಿದ್ದು, ಕೂಡಲೇ ಆಕೆಯನ್ನು ಗಡಿಪಾರು ಮಾಡಬೇಕು' ಎಂದು ಒತ್ತಾಯಿಸಿದರು.
ಫೋರಂ ಮುಖಂಡ ಸಾದಿಕ್ ಅಹ್ಮದ್ ಮಾತನಾಡಿ, 'ಪ್ರವಾದಿ ವಿರುದ್ಧ ಮಹಿಳೆಯು ಕೀಳುಮಟ್ಟದ ಭಾಷೆ ಬಳಸಿ ಮಾತನಾಡಿದ್ದಾಳೆ. ಆಕೆಗೆ ಜಾತಿ ಧರ್ಮ ಏನೆಂದು ಗೊತ್ತಿಲ್ಲ. ಪದೇಪದೇ ಹೇಳಿಕೆ ನೀಡಿ ಕೋಮುಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ದೇಶದ 25 ಕೋಟಿ ಮುಸ್ಲಿಮರು ಮಾತ್ರವಲ್ಲ; ಅಕ್ಕಪಕ್ಕದ ದೇಶದ ಮುಸ್ಲಿಮರಿಗೂ ನೋವುಂಟಾಗಿದೆ. ಪ್ರವಾದಿ ಎಲ್ಲರಿಗಿಂತ ಮೇಲು. ಅವರ ಬಗೆಗಿನ ಯಾವುದೇ ಅವಹೇಳನವನ್ನು ನಾವು ಸಹಿಸುವುದಿಲ್ಲ. ಈ ರೀತಿಯ ಅವಹೇಳನ, ನಿಂದನೆಗೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಮಸೂದೆ ತಂದು ಕಠಿಣ ಕಾನೂನು ಜಾರಿ ಮಾಡಬೇಕು' ಎಂದು ಆಗ್ರಹಿಸಿದರು.
ಮುಖಂಡ ಇಮ್ರಾನ್ ಪಾಷಾ ಮಾತನಾಡಿ, 'ನಾಜಿಯಾ ಕೀಳು ಮಟ್ಟಕ್ಕೆ ಇಳಿದು ಮಾತನಾಡಿದ್ದಾರೆ. ಅದನ್ನು ನಾವೆಲ್ಲಾ ಒಕ್ಕೊರಲಿನಿಂದ ಖಂಡಿಸುತ್ತೇವೆ. ಪ್ರವಾದಿ ಹಾಗೂ ಸೂಫಿಗಳ ವಿರುದ್ಧ ಕೀಳು ಮಾತುಗಳನ್ನು ಸಹಿಸಲ್ಲ. ಈ ವರ್ತನೆ ಎಲ್ಲಾ ವರ್ಗದವರಿಗೆ ನೋವು ಉಂಟು ಮಾಡಿದೆ. ಸೂಫಿ ಸಂತರ ಸಂಸ್ಕೃತಿಗೆ ಧಕ್ಕೆಯಾಗಿದೆ. ಪ್ರಚೋದನೆ ನೀಡಿದ ಮಹಿಳೆಯನ್ನು ಗಡಿಪಾರು ಮಾಡಬೇಕು, ಗಲ್ಲು ಶಿಕ್ಷೆ ವಿಧಿಸಬೇಕು. ಈ ರೀತಿ ಹೇಳಿಕೆ ಮತ್ತೆ ಬಂದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಸಿದರು.
ಮುಖಂಡ ಮನ್ಸೂರು ಅಲಿ ಮಾತನಾಡಿ, 'ಅವಹೇಳನ ಖಂಡಿಸಿ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಒಳ್ಳೆಯ ಕೆಲಸಕ್ಕೆ ಎಲ್ಲರ ಜೊತೆಗೂಡಿದ್ದಾರೆ. ಪ್ರವಾದಿ ಮೇಲೆ ಎಲ್ಲರಿಗೂ ಪ್ರೀತಿ ಇದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಮಹಿಳೆ ವಿರುದ್ಧ ಕಾನೂನು ಕ್ರಮವಾಗಬೇಕು' ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಧರ್ಮಗುರುಗಳು, ಮಸೀದಿ ಸಮಿತಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ನಾಯಕರು, ವಿವಿಧ ತಾಲ್ಲೂಕುಗಳ ಮುಸ್ಲಿಮರು ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-18-215392861

