ಕಠ್ಮಂಡು: ಭೀಕರ ಪ್ರವಾಹದಿಂದ ನೂರಾರು ಜನರು ಸಾವಿಗೀಡಾಗಿದ್ದು, ಹಲವು ದೇಶಗಳ ನಾಗರಿಕರು ನಾಪತ್ತೆಯಾಗಿರುವ ನಡುವೆಯೂ ವಿದೇಶಿ ರಕ್ಷಣಾ ತಂಡಗಳ ನೆರವನ್ನು ಸ್ವೀಕರಿಸಲು ನೇಪಾಳ ಹಿಂದೇಟು ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಲ್ಲಿ ಭಾರತ, ಚೀನಾ, ಅಮೆರಿಕ, ಬ್ರಿಟನ್, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ನಾಗರಿಕರೂ ಇದ್ದಾರೆ.
ಪ್ರವಾಹದ ಬಳಿಕ ಭಾರತ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಮುಂದಾಗಿದ್ದವು. ಭಾರತ ಈಗಾಗಲೇ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದರೆ, ದಕ್ಷಿಣ ಕೊರಿಯಾ ರಕ್ಷಣಾ ತಂಡವೊಂದನ್ನು ಸಜ್ಜುಗೊಳಿಸಿರುವುದಾಗಿ ತಿಳಿಸಿತ್ತು.
ಆದರೆ, ನೇಪಾಳ ವಿದೇಶಾಂಗ ಸಚಿವಾಲಯವು ಸದ್ಯಕ್ಕೆ ವಿದೇಶಿ ರಕ್ಷಣಾ ತಂಡಗಳ ಅಗತ್ಯವಿಲ್ಲ ಎಂದು ಹೇಳಿದೆ. ದೇಶದ ಭದ್ರತಾ ಸಂಸ್ಥೆಗಳು ಮತ್ತು ತುರ್ತು ಸೇವಾ ಸಿಬ್ಬಂದಿಯೇ ಹುಡುಕಾಟ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದಾಗಿ ಹೇಳಿದೆ.
'ಇಂತಹ ದುರಂತದ ಸಂದರ್ಭದಲ್ಲಿ ಇತರ ರಾಷ್ಟ್ರಗಳು ಸಹಾಯ ಹಸ್ತ ಚಾಚುವುದು ಸಹಜ. ಆದರೆ ನಮ್ಮ ಭದ್ರತಾ ಸಂಸ್ಥೆಗಳು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿವೆ. ಸದ್ಯಕ್ಕೆ ವಿದೇಶಿ ರಕ್ಷಣಾ ತಂಡಗಳ ಅಗತ್ಯವಿಲ್ಲ' ಎಂದು ನೇಪಾಳ ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಛೆತ್ರಿ ತಿಳಿಸಿದ್ದಾರೆ.
'ರಕ್ಷಣೆ ಸೇರಿದಂತೆ ಯಾವುದೇ ರೀತಿಯ ನೆರವಿನ ಅಗತ್ಯವಿಲ್ಲ ಎಂದು ನೇಪಾಳ ತಿಳಿಸಿದೆ. ಈ ಕುರಿತು ಮಾತುಕತೆ ಮುಂದುವರಿದಿದೆ' ಎಂದು ದಕ್ಷಿಣ ಕೊರಿಯಾ ವಿದೇಶಾಂಗ ಸಚಿವಾಲಯ ಹೇಳಿದೆ.
ಈ ನಡುವೆ, ಭಾರತ, ಅಮೆರಿಕ, ಬ್ರಿಟನ್, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ತಮ್ಮ ರಕ್ಷಣಾ ತಂಡಗಳಿಗೆ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ನೇಪಾಳ ಸರ್ಕಾರವನ್ನು ಕೋರಿವೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಚೀನಾದ ಭಯ?
ನೇಪಾಳದ ಈ ನಿಲುವಿನ ಹಿಂದೆ ಭದ್ರತಾ ಹಾಗೂ ಭೌಗೋಳಿಕ ಕಾರಣಗಳಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರವಾಹ ಪೀಡಿತ ರಸುವಾ ಜಿಲ್ಲೆಯು ಟಿಬೆಟ್‌ನ ಚೀನಾ ಆಕ್ರಮಿತ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಸೂಕ್ಷ್ಮ ಪ್ರದೇಶವಾಗಿದೆ. ವಿದೇಶಿ ರಕ್ಷಣಾ ಸಿಬ್ಬಂದಿಯ ಪ್ರವೇಶಕ್ಕೆ ಅನುಮತಿ ನೀಡುವುದರಿಂದ ಭದ್ರತಾ ಹಾಗೂ ರಾಜತಾಂತ್ರಿಕ ಸವಾಲುಗಳು ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ನೇಪಾಳದ ಮಾಜಿ ರಾಯಭಾರಿ ದಿನೇಶ್ ಭಟ್ಟರಾಯ್ ಮಾತನಾಡಿ, ರಸುವಾ ಜಿಲ್ಲೆಯ ಭೌಗೋಳಿಕ ಮತ್ತು ಭದ್ರತಾ ಸೂಕ್ಷ್ಮತೆಯೇ ಸರ್ಕಾರದ ಎಚ್ಚರಿಕೆಯ ನಿಲುವಿಗೆ ಪ್ರಮುಖ ಕಾರಣವಾಗಿರಬಹುದು ಎಂದಿದ್ದಾರೆ.

