ನಾಪೋಕ್ಲು: ಸಮೀಪದ ಮೂರ್ನಾಡಿನ ಜ್ಞಾನ ಜ್ಯೋತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪಮಿತಾ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರತಿಷ್ಠಿತ 'ಪ್ರೇರಣಾ' ಪ್ರಾಯೋಗಿಕ ಕಲಿಕಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಈ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಪಮಿತಾ ಜುಲೈ 9 ರಂದು ತೆರಳಲಿದ್ದಾರೆ.
ದೇಶದ ಯುವ ಪೀಳಿಗೆಯಲ್ಲಿ ನಾಯಕತ್ವದ ಗುಣಗಳು, ದೇಶಭಕ್ತಿ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾರ್ಯಕ್ರಮವು ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದೆ. ಜಿಲ್ಲಾ ಮಟ್ಟದಲ್ಲಿ ನಡೆದ ಪ್ರೇರಣಾ ಉತ್ಸವದ ಸ್ಪರ್ಧೆಗಳು, ವ್ಯಕ್ತಿತ್ವ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಮಿತಾ ಅವಕಾಶ ಪಡೆದಿದ್ದಾಳೆ.
ಗುಜರಾತ್‌ನ ವಾಡ್‌ನಗರದಲ್ಲಿ ನಡೆಯಲಿರುವ ಒಂದು ವಾರದ ತರಬೇತಿ ಶಿಬಿರದಲ್ಲಿ ಪಮಿತಾ ಭಾಗವಹಿಸಲಿದ್ದಾರೆ. ವಿದ್ಯಾರ್ಥಿನಿ ಪಮಿತಾಳೊಂದಿಗೆ ಮಾರ್ಗದರ್ಶಕ ಶಿಕ್ಷಕಿಯಾಗಿ ಬಿಂದು ಅವರು ತೆರಳಲಿದ್ದು, ಅಗತ್ಯ ಸಹಕಾರ ನೀಡಲಿದ್ದಾರೆ.
ಪಮಿತಾ ಕಾಂತೂರು ನಿವಾಸಿ ತಿರುಟೇರ ನಾಣಯ್ಯ ಹಾಗೂ ನೀತು ದಂಪತಿಯ ಪುತ್ರಿ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-51-1316194073

