Dailyhunt Logo
  • Light mode
    Follow system
    Dark mode
    • Play Story
    • App Story
ಪ್ರೇಯಸಿ ಜೊತೆ ಜಗಳ, ಕಾರಿನಲ್ಲಿ ನಾಡಬಾಂಬ್‌ ಸ್ಫೋಟಿಸಿದ ಯುವಕ: ಸಜೀವ ದಹನ

ಪ್ರೇಯಸಿ ಜೊತೆ ಜಗಳ, ಕಾರಿನಲ್ಲಿ ನಾಡಬಾಂಬ್‌ ಸ್ಫೋಟಿಸಿದ ಯುವಕ: ಸಜೀವ ದಹನ

ಶಿರಾ: ತಾಲ್ಲೂಕಿನ ಜೋಗಿಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಯುವಕನೊಬ್ಬ ನಾಡಬಾಂಬ್‌ನಿಂದ ಕಾರು ಸ್ಫೋಟಿಸಿಕೊಂಡು ಸಜೀವ ದಹನಗೊಂಡಿದ್ದಾನೆ.

ಅಂಕೋಲಾ ಮೂಲದ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನಲ್ಲಿ ನೆಲಸಿದ್ದ ನಾಗೇಂದ್ರ ಹಾಗೂ ಅಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನೀಷಿಯನ್‌ ಆಗಿದ್ದ ರಮ್ಯಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದು, ಈ ಘಟನೆ ನಡೆಯಲು ಕಾರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ವಿವರ:

ಬೆಂಗಳೂರಿನಲ್ಲಿ ರಮ್ಯಾ ಜಯನಗರ ವ್ಯಾಪ್ತಿಯ ಸಿದ್ದಾಪುರದಲ್ಲಿ ಸ್ನೇಹಿತೆ ಜತೆಗೆ ವಾಸವಿದ್ದರು. ಡೆಲಿವರಿ ಬಾಯ್‌ ಆಗಿದ್ದ ನಾಗೇಂದ್ರ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಉಬರ್‌ ಕ್ಯಾಬ್‌ಅನ್ನು ಅಂಕೋಲಾಗೆ ಬುಕ್‌ ಮಾಡಿದ್ದ. ಈ ವೇಳೆ ಸಿದ್ದಾಪುರಕ್ಕೆ ಹೋಗಿ ರಮ್ಯಾ ಅವರನ್ನು ಬಲವಂತದಿಂದ ಕಾರಿನಲ್ಲಿ ಕೂರಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಈ ವಿಷಯವನ್ನು ರಮ್ಯಾ ಸ್ನೇಹಿತೆಯರು ಸಿದ್ದಾಪುರ ಪೊಲೀಸರಿಗೆ ತಿಳಿಸಿ, ದೂರು ದಾಖಲಿಸಿದ್ದರು.

ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಕಾರು ಅಂಕೋಲಾಕ್ಕೆ ತೆರಳುವಾಗ ಸಿದ್ದಾಪುರ ಪೊಲೀಸ್‌ ಠಾಣೆಯಿಂದ ಕಾರಿನ ಚಾಲಕನಿಗೆ ಕರೆ ಬಂದಿದೆ. ಕಾರನ್ನು ಇರುವ ಸ್ಥಳದಲ್ಲೇ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಅನುಮಾನಗೊಂಡ ನಾಗೇಂದ್ರ, ರಮ್ಯಾ ಜತೆಗೆ ಜಗಳ ತೆಗೆದು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ದಿಗಿಲುಗೊಂಡ ಚಾಲಕ ಕಾರನ್ನು ಜೋಗಿಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲೇ ನಿಲ್ಲಿಸಿದ್ದಾರೆ.

ಕಾರಿನಿಂದ ಕೆಳಗಿಳಿಯದ ನಾಗೇಂದ್ರ:

ಚಾಕು ಇರಿತದಿಂದ ಗಾಯಗೊಂಡಿದ್ದ ರಮ್ಯಾ ತಕ್ಷಣವೇ ಕಾರಿನಿಂದ ಇಳಿದು ಓಡಿದ್ದಾರೆ. ಆಗ ಕಾರು ಚಾಲಕ ನಾಗೇಂದ್ರನ ಕೈಯಿಂದ ಚಾಕು ಕಿತ್ತು ಹೊರಕ್ಕೆ ಎಸೆದಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿದ್ದ ನಾಡಬಾಂಬ್‌ ಕೈಗೆತ್ತಿಕೊಂಡು ಲೈಟರ್‌ನಿಂದ ಹೊತ್ತಿಸುವ ಪ್ರಯತ್ನದಲ್ಲಿದ್ದಾಗ ಅದನ್ನೂ ಕಿತ್ತುಕೊಂಡು ಹೊರಕ್ಕೆ ಎಸೆದಿದ್ದಾರೆ. ಕಾರಿನಿಂದ ಇಳಿಯುವಂತೆ ಎಷ್ಟೇ ಒತ್ತಾಯಿಸಿದರೂ ನಾಗೇಂದ್ರ ಕೆಳಕ್ಕೆ ಇಳಿದಿಲ್ಲ.

'ಬಾಂಬ್‌ ತಂದಿದ್ದಾನೆ, ದೂರ ಓಡಿಹೋಗಿ ಅಣ್ಣ' ಎಂದು ಯುವತಿ ಕೂಗಿ ಹೇಳಿದ್ದರಿಂದ ಭಯಗೊಂಡು ಕಾರಿನಿಂದ ದೂರಕ್ಕೆ ಓಡಿದೆ. ಈ ವೇಳೆ ಮತ್ತೊಂದು ನಾಡಬಾಂಬ್‌ಗೆ ಲೈಟರ್‌ನಿಂದ ಹೊತ್ತಿಸಿ, ಸ್ಫೋಟಿಸಿಕೊಂಡ' ಎಂದು ಕಾರಿನ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚಾಕು ಇರಿತದಿಂದ ತಲೆ, ಕೈಗೆ ಗಾಯಗಳಾಗಿದ್ದ ಯುವತಿ ರಮ್ಯಾಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸ್ಫೋಟಗೊಂಡ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕೆ.ವಿ. ಭೇಟಿ ನೀಡಿ ಪರಿಶೀಲಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani