ಲಂಡನ್ (ಎಎಫ್‌ಪಿ): ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ನೇರ ಸೆಟ್‌ಗಳ ಗೆಲುವಿನೊಂದಿಗೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಕ್ರವಾರ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಅಗ್ರ ಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಹಾಗೂ ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಅವರೂ 16ರ ಘಟ್ಟಕ್ಕೆ ಮುನ್ನಡೆದರು.
ಅಗ್ರ ಶ್ರೇಯಾಂಕ ಪಡೆದಿರುವ ಸಿನ್ನರ್ ಅವರು ಆಲ್ ಇಂಗ್ಲೆಂಡ್ ಕ್ಲಬ್‌ನ ಒಂದನೇ ಕೋರ್ಟ್‌ನಲ್ಲಿ ನಡೆದ ಮೂರನೇ ಸುತ್ತಿನ ಹಣಾಹಣಿಯಲ್ಲಿ 6-4, 6-3, 6-4ರಿಂದ ಅಮೆರಿಕದ ಜೆನ್ಸನ್ ಬ್ರೂಕ್ಸ್‌ಬಿ ಅವರನ್ನು ನಿರಾಯಾಸವಾಗಿ ಸೋಲಿಸಿದರು. ಸಬಲೆಂಕಾ 6-4, 6-4ರಲ್ಲಿ ಲಾಟ್ವಿಯಾದ ಯೆಲೆನಾ ಒಸ್ತಪೆಂಕೊ ಅವರನ್ನು ನಿರಾಯಾಸವಾಗಿ ಮಣಿಸಿದರು.
ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಪ್ರಯತ್ನ ದಲ್ಲಿರುವ ಜೊಕೊವಿಚ್ ಅವರು 7-5, 6-4, 1-6, 7-6 (7-4)ರಿಂದ ಫ್ರಾನ್ಸ್‌ನ ಅರ್ಥರ್ ರಿಂಡೆಕ್‌ನೆಶ್ ಅವರನ್ನು ಹಿಮ್ಮೆಟ್ಟಿಸುವ ಮೊದಲು ಪ್ರತಿರೋಧವನ್ನೂ ಎದುರಿಸಬೇಕಾಯಿತು. 39 ವರ್ಷ ವಯಸ್ಸಿನ 'ಜೊಕೊ' ಇಲ್ಲಿ ಏಳು ಬಾರಿ ಚಾಂಪಿಯನ್ ಆಗಿದ್ದಾರೆ.
ನಾಲ್ಕನೇ ಶ್ರೇಯಾಂಕದ ಜೆಸಿಕಾ ಪೆಗುಲಾ (ಅಮೆರಿಕ) ಸಹ ಗೆಲುವಿನ ಓಟ ಮುಂದುವರಿಸಿದರು. 6-1, 6-3ರಿಂದ ನೇರ ಸೆಟ್‌ಗಳಲ್ಲಿ ಸ್ಪೇನ್‌ನ ಜೆಸಿಕಾ ಬೌಝಸ್ ಮನೈರೊ ವಿರುದ್ಧ ಗೆದ್ದು ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿರುವ 32 ವರ್ಷ ವಯಸ್ಸಿನ ಆಟಗಾರ್ತಿ 16ರ ಘಟ್ಟದಲ್ಲಿ 16ನೇ ಶ್ರೇಯಾಂಕದ ಇವಾ ಜೋವಿಕ್ (ಅಮೆರಿಕ) ಅವರನ್ನು ಎದುರಿಸಲಿದ್ದಾರೆ.
ವಿಭಿನ್ನ ಧಿರಿಸುಗಳೊಂದಿಗೆ ಅಂಕಣಕ್ಕಿಳಿದು ಗಮನ ಸೆಳೆಯುವ ಜಪಾನ್‌ನ ನವೊಮಿ ಒಸಾಕಾ ಅವರೂ 16ರ ಘಟ್ಟ ಪ್ರವೇಶಿಸಿದರು. ನಾಲ್ಕು ಗ್ರ್ಯಾನ್‌ಸ್ಲಾಮ್ ಕಿರೀಟ ಜಯಿಸಿರುವ ಅವರು 6-1, 6-3ರಿಂದ ಆಸ್ಟ್ರೇಲಿಯಾದ ಡರಿಯಾ ಕಸಟ್ಕಿನಾ ವಿರುದ್ಧ ನಿರಾಯಾಸವಾಗಿ ಗೆದ್ದರು. 28 ವರ್ಷ ವಯಸ್ಸಿನ ಒಸಾಕಾ ಇಲ್ಲಿ ಮೊದಲ ಬಾರಿಗೆ ಮೂರನೇ ಸುತ್ತು ದಾಟಿದ್ದಾರೆ.
ಕಳೆದ ಬಾರಿ ಸೆಮಿಫೈನಲ್ ತಲುಪಿದ್ದ ಸ್ವಿಟ್ಜರ್ಲೆಂಡ್‌ನಅನುಭವಿ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ಅವರು 6-4, 4-6, 7-6 (10-6)ರಿಂದ ರಷ್ಯಾದ ಆಯನ್ನಾ ಕಲಿನ್‌ಸ್ಕಾಯಾ ಎದುರು ಪ್ರಯಾಸದ ಜಯ ಸಾಧಿಸಿದರು. ಜೆಕ್ ಗಣರಾಜ್ಯದ ಕರೊಲಿನಾ ಮುಚೋವಾ 6-2, 7-6 (7-1)ರಿಂದ ಥಾಯ್ಲೆಂಡ್‌ನ ಮನಂಚಾಯಾ ಸವಂಗ್‌ಕಾವ್ ಅವರನ್ನು ಸೋಲಿಸಿದರು.
ಮೆಡ್ವೆಡೇವ್, ಜೊವೊಗೆ ಆಘಾತ: ಎಂಟನೇ ಶ್ರೇಯಾಂಕದ ಆಟಗಾರ ಡೇನಿಯಲ್ ಮೆಡ್ವೆಡೇವ್ ಹಾಗೂ 'ಫ್ರೆಂಚ್ ಓಪನ್'ನಲ್ಲಿ ಜೊಕೊವಿಚ್ ಅವರಿಗೆ ಆಘಾತ ನೀಡಿ ಗಮನ ಸೆಳೆದಿದ್ದ ಬ್ರೆಜಿಲ್‌ನ ಯುವ ಆಟಗಾರ ಜೊವೊ ಫೋನ್ಸೆಕಾ ಅವರ ಹೋರಾಟ ಮೂರನೇ ಸುತ್ತಿನಲ್ಲಿಯೇ ಅಂತ್ಯಗೊಂಡಿತು.
ಜರ್ಮನಿಯ ಅನುಭವಿ ಆಟಗಾರ ಯಾನ್ ಲೆನಾರ್ಡ್ ಸ್ಟ್ರೂಫ್ ಅವರು ರೋಚಕ ಹಣಾಹಣಿಯಲ್ಲಿ 7-6 (7-4), 7-6 (7-5), 7-5ರಿಂದ ಮೆಡ್ವೆಡೇವ್‌ಗೆ ಆಘಾತ ನೀಡಿದರು. ಜೊವೊ 3-6, 3-6, 3-6ರಿಂದ ರಷ್ಯಾದ ಶ್ರೇಯಾಂಕ ರಹಿತ ಆಟಗಾರ ರೋಮನ್ ಸಫುಲಿನ್ ಎದುರು ಪರಾಭವಗೊಂಡರು.
ಮೂರನೇ ಸುತ್ತಿಗೆ ರಿಬಾಕಿನಾ: ಎರಡನೇ ಶ್ರೇಯಾಂಕದ ಆಟಗಾರ್ತಿ, ಕಜಾಕಸ್ತಾನದ ಎಲಿನಾ ರಿಬಾಕಿನಾ ಅವರು ನೇರ ಸೆಟ್‌ಗಳ ಗೆಲುವಿನೊಂದಿಗೆ ಮೂರನೇ ಸುತ್ತಿಗೇರಿದರು. 2022ರ ಚಾಂಪಿಯನ್ 6-1, 6-2ರಿಂದ ಅಮೆರಿಕದ ಕ್ಯಾಟಿ ಮೆಕ್‌ನಾಲಿ ಅವರನ್ನು ಹಿಮ್ಮೆಟ್ಟಿಸಿದರು. ಅಮೆರಿಕದ ಆಟಗಾರ್ತಿಯರಾದ ಅಮಾಂಡ ಅನಿಸಿಮೋವಾ ಹಾಗೂ ಮ್ಯಾಡಿಸನ್ ಕೀಸ್ ಅವರೂ 32ರ ಘಟ್ಟ ಪ್ರವೇಶಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-4-1723474345

